ವಿಶ್ವ ಹವ್ಯಕ ಸಮ್ಮೇಳನ ಸಮಾರೋಪ: ಗಣ್ಯರ ನುಡಿಗಳು

Upayuktha
0


ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳು, ಶ್ರೀರಾಮಚಂದ್ರಾಪುರಮಠ


ಉತ್ತರ ಪ್ರದೇಶದ ಅಹಿಚ್ಛತ್ರದಿಂದ ಈ ನಾಡಿಗೆ ಬಂದದ್ದು ದೀಪ ಹೊರತು ಕತ್ತಲಲ್ಲ. ಹಾಗೆ ಅಲ್ಲಿಂದ ಇಲ್ಲಿಗೆ ಆಗಮಿಸಿದ ಹವ್ಯಕರು ದೀಪವಾಗಿ ನಾಡನ್ನು ಬೆಳಗುತ್ತಿದ್ದಾರೆ.


ನಾವು ಯಾರು? ನಾವೆಲ್ಲಿಂದ ಬಂದವರು? ನಮ್ಮ ಕರ್ತವ್ಯಗಳೇನು? ಎಂಬುದಾಗಿ ಆತ್ಮಾವಲೋಕನ ಮಾಡಿಕೊಳ್ಳಲು ಸಮ್ಮೇಳನಗಳು ಅವಕಾಶಗಳಾಗಿದ್ದು, ನಾವು ನಮ್ಮೊಳಗೆ ಆಲೋಚಿಸಬೇಕಿದೆ. 


ಸಮಾಜ ಅಳಿವು ಉಳಿವಿನ ಪ್ರಶ್ನೆ ಎದುರಿಸುತ್ತಿದ್ದು, ಹವ್ಯಕ ಸಮಾಜದ ಜನಸಂಖ್ಯೆ ಕ್ಷಿಪ್ರಗತಿಯಲ್ಲಿ ಇಳಿಯುತ್ತಿದ್ದು, ಇದು ಆಘಾತಕಾರಿಯಾಗಿದೆ.


ಮಕ್ಕಳನ್ನು ಮಾಡಿಕೊಳ್ಳದೇ ಇದ್ದರೆ ಆದಾಯ ದ್ವಿಗುಣವಾಗುತ್ತದೆ ಎಂಬ ಸಿದ್ಧಾಂತವನ್ನು ಯುವಜನತೆ ಆಲೋಚಿಸುತ್ತಿದೆ. ತಾಯಿಗಿಂತ ದೊಡ್ಡದಾದ ಪದವಿ ಪ್ರಪಂಚದಲ್ಲಿ ಯಾವುದೂ ಇಲ್ಲ ಎಂಬುದನ್ನು ಮಾತೆಯರು ಗಮನಿಸಬೇಕು. ಮೂರು ಮಕ್ಕಳನ್ನು ಪಡೆಯುವುದು ನಾಚಿಕೆ ಸಂಗತಿ ಎಂಬಂತೆ ಭಾವಿಸುತ್ತಾರೆ. ಆದರೆ ಮಕ್ಕಳೆಂದರೆ ನಿಜವಾದ ಸಂಪತ್ತಾಗಿದ್ದು, ನಮ್ಮ ಪರಂಪರೆಯನ್ನು ಮುಂದುವರಿಸುವವರಾಗಿದ್ದಾರೆ. ಮಿತಸಂತಾನವೇ ವಿವಾಹ ವಿಚ್ಛೇದನಕ್ಕೆ ಮೂಲ ಕಾರಣವಾಗಿದ್ದು, ಸಹಬಾಳ್ವೆಯ ಕೊರತೆಯೇ ವಿಚ್ಚೇದನಕ್ಕೆ ನಾಂದಿ ಹಾಡುತ್ತಿದೆ.


ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀ ಶಂಕರವಿಜಯೇಂದ್ರ ಸರಸ್ವತೀ ಮಹಾಸ್ವಾಮಿಗಳು, ಕಾಂಚಿ

ಹವ್ಯಕ ಸಮಾಜ ಧರ್ಮಪ್ರಚಾರ ಕಾರ್ಯದಲ್ಲಿ ಪುಮುಖವಾಗಿ ತೊಡಗಿಸಿಕೊಂಡಿದೆ. ಹಲವಾರು ವೈಶಿಷ್ಟ್ಯಗಳನ್ನು ಹೊಂದಿರುವ ಈ ಹವ್ಯಕ ಸಮಾಜ ಸಂಘಟಿತರಾಗಬೇಕು ಹಾಗೂ ಎಲ್ಲಾ ಸಮುದಾಯಗಳು ಒಟ್ಟಾಗಿ ಸೇರಿ ಸಂಸ್ಕೃತಿಯನ್ನು ಉಳಿಸುವಂತಾಗಬೇಕು.



ಶ್ರೀಶ್ರೀ ವಚನಾನಂದ ಮಹಾಸ್ವಾಮಿಗಳು, ಪಂಚಮಸಾಲಿ ಜಗದ್ಗುರು ಪೀಠ


ಹವ್ಯಕರು ನಿತ್ಯ ಕಾಯಕ ಮಾಡುವವರು. ಕೃಷಿಯ ಕಾಯಕದಲ್ಲಿ ನಿರತರಾಗಿರುವುದು ಹವ್ಯಕ ಸಮಾಜದ ವಿಶೇಷತೆ. ಪಂಚಮಸಾಲಿಗಳೂ ಕೂಡ ಕೃಷಿಗೆ ಪ್ರಾಧಾನ್ಯತೆ ಕೊಟ್ಟವರು. ನಾವೆಲ್ಲ ಒಟ್ಟಾಗಿ ಸೇರಿ ದೇಶವನ್ನು ಮುನ್ನಡೆಸಬೇಕಿದೆ.


ಇದು ನಾವೆಲ್ಲ ಒಂದಾಗುವ ಹೊತ್ತಾಗಿದ್ದು, ಎಲ್ಲಾ ಮಠಗಳು ಒಟ್ಟಾಗಿ ಧರ್ಮ ಸಂರಕ್ಷಣೆಗೆ ಮುಂದಾಗಬೇಕು.


ಜಗದ್ಗುರು ಶಂಕರಾಚಾರ್ಯ ಶ್ರೀ ಶ್ರೀ ಅಭಿನವ ಶಂಕರ ಭಾರತೀ ಮಹಾಸ್ವಾಮಿಗಳು, ಕೂಡ್ಲಿ ಶೃಂಗೇರಿ


ತಮ್ಮ ಅಳಿವು ಉಳಿವಿನ ಕುರಿತು ನಾವು ಚರ್ಚಿಸಿತ್ತಿದ್ದೇವೆ ಎಂದರೆ ಹಲವಾರು ಬದಲಾವಣೆಗಳಾಗಿವೆ ಎಂದರ್ಥ. ನಾವು ಕಾಲ ಕೆಟ್ಟಿದೆ ಎನ್ನುತ್ತಾರೆ. ಆದರೆ ನಿಜವಾಗಿ ಕಾಲ ಕೆಡುವುದಲ್ಲ, ಆಡಳಿತಗಾರರ ಕಾರಣದಿಂದಾಗಿ ಕೆಡುಕಿನ ಕಾಲ ಬರುತ್ತದೆ. ಸಂಭ್ರಮದ ಜೊತೆಗೆ ಚಿಂತನೆಗಳೂ ಸೇರಿ ಸಮ್ಮೇಳನ ನಡೆದಿರುವುದು ಅಭಿನಂದನಾರ್ಹ.


ಡಾ.ಗಿರಿಧರ ಕಜೆ

ಕಾರ್ಯಕರ್ತರ ಪಡೆಯ ಕಾರಣದಿಂದಾಗಿ ಇಂತಹ ಯಶಸ್ವಿ ಸಮ್ಮೇಳನ ಸಾಧ್ಯವಾಗಿದೆ. ಶ್ರೀರಾಮಚಂದ್ರಾಪುರಮಠದ ಶ್ರೀಗಳ ಗುರುವಾಕ್ಯದಂತೆ ಈ ಸಮ್ಮೇಳನ ನಡೆದಿದೆ. ಹಾಗಾಗಿ ಈ ತೃತೀಯ ಸಮ್ಮೇಳನದ ಕಾರಣಕರ್ತರು ಜಗದ್ಗುರು ಶಂಕರಾಚಾರ್ಯ ಶ್ರೀ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳು.


ಜಗತ್ತು ಕೃತಕ ಬುದ್ಧಿಮತ್ತೆಯ(AI) ಕುರಿತಾಗಿ ಮಾತನಾಡುತ್ತಿದೆ. ಆದರೆ ನಾವು ನೈಸರ್ಗಿಕ ಬುದ್ದಿಮತ್ತೆ (NI) ಯನ್ನು ಹೊಂದಿದ್ದೇವೆ. ಇದು ಹವ್ಯಕ ಶ್ರೇಷ್ಠತೆಯ ದ್ಯೋತಕ.


ಜಾತಿ ಸಮ್ಮೇಳನಗಳ ಇತಿಹಾಸದಲ್ಲಿ ಪ್ರಪ್ರಥಮ ಬಾರಿಗೆ ಇಲ್ಲಿ ಸೌಹಾರ್ದ ಸನ್ಮಾನವನ್ನು ಏರ್ಪಡಿಸುವ ಮೂಲಕ ಹೊಸ ಇತಿಹಾಸವನ್ನು ನಿರ್ಮಿಸಲಾಗಿದೆ. 60 ಜಾತಿ ಉಪಜಾತಿಗಳ ಸಂಘಸಂಸ್ಥೆಗಳ ನ್ನು ಇಲ್ಲಿ ಗೌರವಿಸಿರುವುದು ಇಲ್ಲಿ ಉಲ್ಲೇಖಾರ್ಹ.



ರವಿ ಹೆಗಡೆ:

ಹವ್ಯಕರ ಕ್ರಿಯಾಶೀಲತೆ ಹಾಗೂ ಕಲ್ಪನೆ ವಿಭಿನ್ನವಾಗಿದ್ದು, ಚಿಕ್ಕ ಸಮುದಾಯ ಎಂಬ ಕೊರತೆಯನ್ನು ಇದು ನೀಗಿಸುತ್ತದೆ. ಇಲ್ಲಿನ ಕಾರ್ಯಕ್ರಮಗಳನ್ನು ಗಮನಿಸಿದರೆ ಇದು ಕೇವಲ ಸಮ್ಮೇಳನವಾಗಿರದೇ ಸಮಾಜದ ದೊಡ್ಡ ಹಬ್ಬವಾಗಿದೆ ಎನಿಸುತ್ತದೆ. ಸಾಮಾನ್ಯವಾಗಿ ಇಂತಹ ಸಮ್ಮೇಳನಗಳಲ್ಲಿ ಹಿರಿಯ ನಾಗರೀಕರನ್ನು ಕಾಣುತ್ತೇವೆ. ಆದರೆ ಇಲ್ಲಿ ಅದಕ್ಕೆ ವಿರುದ್ಧವಾಗಿ ಯುವಜನರೇ ಹೆಚ್ಚಿನ ಸಂಖ್ಯೆಯಲ್ಲಿ ಕಾಣುತ್ತಿರುವುದು ಇದು ಸಮಾಜದ ಭವಿಷ್ಯವನ್ನು ಸೂಚಿಸುತ್ತದೆ.



ವಿಶ್ವೇಶ್ವರ ಭಟ್

ಇಸ್ರೇಲಿನ ಯಹೂದಿಗಳಿಗೆ ಹಾಗೂ ಹವ್ಯಕರಿಗೆ ಅನೇಕ ಸಾಮ್ಯತೆಗಳಿವೆ. ಸುಮಾರು 4 ಲಕ್ಷದಷ್ಟೇ ಹವ್ಯಕರ ಜನಸಂಖ್ಯೆ ಇರುವುದು. ಆದರೆ ತಮ್ಮ ಪ್ರತಿಭೆಯಿಂದ ಜಗತ್ತಿಗೆ ಪರಿಣಾಮಕಾರಿಯಾದ ಕೊಡುಗೆಗಳನ್ನು ನೀಡುತ್ತಿರುವುದು ಈ ಸಮಾಜದ ಹೆಮ್ಮೆ.

ಹವ್ಯಕ ಸಮಾಜದ ರಾಮಚಂದ್ರಾಪುರ ಮಠದ ಶ್ರೀಗಳು ಹಾಗೂ ಸ್ವರ್ಣವಲ್ಲೀ ಸ್ವಾಮಿಗಳು ಹವ್ಯಕ ಜನಸಂಖ್ಯೆಯ ಪುನರುಜ್ಜೀವನಕ್ಕೆ ಕರೆನೀಡಿದ್ದಾರೆ. ಈ ಬಗ್ಗೆ ಸಮಾಜ ಎಚ್ಚೆತ್ತುಕೊಳ್ಳಬೇಕು. ಜನಸಂಖ್ಯಾ ದೃಷ್ಟಿಯಿಂದ ಮಾಡು ಇಲ್ಲವೇ ಮಡಿ ಎಂಬ ಪರಿಸ್ಥಿತಿ ಇದೆ. ಜಗತ್ತು ಈ ಬಗ್ಗೆ ನಗೆಚಟಾಕಿ ಹಾರಿಸಬಹುದು. ಆದರೆ ಇದು ಈ ಕಾಲದ ಅಗತ್ಯ.


ಹವ್ಯಕ ಭಾಷೆ ನಮ್ಮ ಸಂಸ್ಕೃತಿಯ ಬೇರಾಗಿದ್ದು, ನಮ್ಮ ಮಕ್ಕಳ ಜೊತೆ ನಾವು ಹವ್ಯಕ ಭಾಷೆಯಲ್ಲಿ ವ್ಯವಹರಿಸದಿದ್ದರೆ ಅವರು ನಮ್ಮ ಸಂಸ್ಕೃತಿಯಿಂದ ವಿಮುಖರಾದಂತೆಯೇ ಸರಿ.


ಬಿ.ಎಸ್. ಯಡಿಯೂರಪ್ಪ

ಎಲ್ಲಾ ಸಂಸ್ಕೃತಿಯನ್ನು ಪ್ರೀತಿಸು, ನಿನ್ನ ಸಂಸ್ಕೃತಿಯಲ್ಲಿ ಜೀವಿಸು ಎಂಬ ಜ್ಞಾನಿಗಳ ಮಾತಿನಂತೆ ಈ ಹವ್ಯಕ ಸಮಾಜ ಸದಾ ನಡೆದುಕೊಳ್ಳತ್ತಿದೆ. ನಮ್ಮ ನಮ್ಮ ಪರಂಪರೆಯ ಆಚರಣೆಯ ಜೊತೆಜೊತೆಗೆ ನಾವೆಲ್ಲ ಒಂದಾಗಿ ಭಾರತವನ್ನು ಕಟ್ಟೋಣ.

ಹವ್ಯಕ ಸಮಾಜದ ದಕ್ಷತೆ ಹಾಗೂ ಪ್ರಾಮಾಣಿಕತೆಯನ್ನು ನಾನು ಪ್ರತ್ಯಕ್ಷವಾಗಿ ಅನುಭವಿಸಿದ್ದೇನೆ. 

ಅಡಿಕೆ ಕೃಷಿಕರ ಬೆಂಬಲಕ್ಕೆ ನಾನು ಸದಾ ಇದ್ದು, ಅಡಿಕೆ ಕೃಷಿಕರಿಗೆ ಯಾವುದೇ ರೀತಿಯ ಸಮಸ್ಯೆ ಆಗದಂತೆ ಅಗತ್ಯ ಬೆಂಬಲ ನೀಡಲಾಗುವುದು.



ಹೆಚ್. ಡಿ. ಕುಮಾರಸ್ವಾಮಿ

ಇಲ್ಲಿ ನೀವೆಲ್ಲಾ ಮೂರುದಿನಗಳ ಕಾಲ ಹವ್ಯಕ ಸಂಸ್ಕೃತಿಯನ್ನು ಜಗತ್ತಿನ ಮುಂದೆ ತೆರೆದಿಡುವುದರ ಜೊತೆಗೆ ಹವ್ಯಕ ಸಮಾಜದ ಜ್ವಲಂತ ಸಮಸ್ಯೆಗಳ ಹಾಗೂ ಪರಿಹಾರಗಳ ಕುರಿತು ಚರ್ಚಿಸಿರುವುದು ಸ್ವಾಗತಾರ್ಹ. ಸಮಾಜದ ಕುರಿತಾದ ಚಿಂತನ ಮಂಥನಗಳು ಆಗಾಗ ನಡೆದಾಗ ಸರಿದಾರಿಯಲ್ಲಿ ನಡೆಯಲು ಸಾಧ್ಯ. ರಾಮಚಂದ್ರಾಪುರಮಠದ  ಶ್ರೀಗಳು ಸೂಚಿಸಿದಂತೆ ಜನಸಂಖ್ಯಾ ಕುಸಿತದ ಬಗ್ಗೆ ಸಮಾಜ ಆಲೋಚಿಸಬೇಕಿದೆ.


ಹವ್ಯಕ ಬ್ರಾಹ್ಮಣರಲ್ಲಿ ಕೃಷಿಯನ್ನು ನಂಬಿ ಬದುಕುವವರ ಸಂಖ್ಯೆ ಹೆಚ್ಚಿದೆ. ಕೇಂದ್ರ ಸರ್ಕಾರ ಕೃಷಿಕರ ಜೊತೆಗಿದ್ದು, ಅಡಿಕೆ ಕೃಷಿಕರಿಗೆ ಯಾವುದೇ ರೀತಿಯ ತೊಂದರೆ ಆಗದಂತೆ ನೋಡಿಕೊಳ್ಳುತ್ತೇವೆ. ಹವ್ಯಕ ಸಮಾಜದ ಜೊತೆ ಸದಾ ಇದ್ದು, ಹವ್ಯಕ ಸಮಾಜಕ್ಕೆ ಬೆಂಬಲ ಇರಲಿದೆ.


ಇಂದು ಒಂದು ಕಡೆ ಹಳ್ಳಿಗಳು ವೃದ್ಧಾಶ್ರಮಗಳಾಗುತ್ತಿವೆ, ಇನ್ನೊಂದೆಡೆ ನಾವು ಜಗತ್ತಿನ ಆರ್ಥಿಕ ಶಕ್ತಿಯಾಗುತ್ತಿದ್ದೇವೆ. ನಾವು ಇವುಗಳನ್ನು ಸರಿದೂಗಿಸಿಕೊಂಡು ನಮ್ಮ ಸಂಸ್ಕೃತಿಯನ್ನು ಉಳಿಸಿಕೊಳ್ಳಬೇಕು.



ವಿಶ್ವೇಶ್ವರ ಹೆಗಡೆ ಕಾಗೇರಿ

ಶ್ರೇಷ್ಠವಾದ ಪರಂಪರೆಯ ಭಾಗವಾಗಿ ನಾವು ಇರುವುದು ಎಂಬುದೇ ಹೆಮ್ಮೆಯ ವಿಚಾರವಾಗಿದ್ದು, ನಿತ್ಯಾನುಷ್ಠಾನಗಳ ಮೂಲಕ ನಮ್ಮ ಪರಂಪರೆಯನ್ನು ಉಳಿಸಿಕೊಳ್ಳಬೇಕು. ಪರಕೀಯರ ದಾಳಿಯಿಂದಾಗಿ ನಮ್ಮ ಜ್ಞಾನಪರಂಪರೆ ಬೂದಿ ಮುಚ್ಚಿದ ಕೆಂಡದಂತಾಗಿದ್ದು, ವಸಹಾತುಶಾಯಿ ದ್ಯೋತಕಗಳೆಲ್ಲವೂ ದೂರವಾಗಿ ಎಲ್ಲೆಡೆ ಭಾರತೀಯ ಪರಂಪರೆಯ ಜಾಗೃತವಾಗುವಂತಾಗಬೇಕು.


ಸಮ್ಮೇಳನದಲ್ಲಿ ನಾವು ಆನಂದಿಸುವುದರ ಜೊತೆಗೆ ಇಲ್ಲಿ ಚರ್ಚಿತವಾದ ವಿಷಯಗಳನ್ನು ನಾವು ನಮ್ಮ ಜಾಗೃತಿಗೆ ಬಳಸಿಕೊಳ್ಳಬೇಕು.



ಸಿ.ಟಿ. ರವಿ

ಕೇವಲ ಜ್ಞಾನಕ್ಕಾಗಿ ಮಾತ್ರವಲ್ಲ, ದೇಶಭಕ್ತಿ, ರಾಷ್ಟ್ರೀಯ ವಿಚಾರಧಾರೆ ವಿಚಾರದಲ್ಲೂ ಈ  ಸಮಾಜದ ಕೊಡುಗೆ ಅನುಪಮವಾಗಿದೆ. ಈ ಸಮಾಜದ ಆತಿಥ್ಯಕ್ಕೆ ಹೆಸರುವಾಸಿಯಾಗಿದ್ದು, ಆತಿಥ್ಯ ಪರಂಪರೆಯನ್ನು ಮುನ್ನೆಡೆಸುತ್ತಿದೆ.


ನಾವು ಕಾಶ್ಮೀರ ಹಾಗೂ ಬಾಂಗ್ಲಾಗಳನ್ನು ನೋಡಿದ ನಂತರವೂ ಮಿತಸಂತಾನಕ್ಕೆ ಕಡಿವಾಣ ಹಾಕದಿದ್ದರೆ ಗಂಭೀರವಾದ ಸಮಸ್ಯೆಯನ್ನು ಎದುರಿಸಬೇಕಾದೀತು.

ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 


Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top