ಬೆಂಗಳೂರು: ಅರಮನೆ ಮೈದಾನದಲ್ಲಿ ನಡೆಯುತ್ತಿರುವ ತೃತೀಯ ವಿಶ್ವ ಹವ್ಯಕ ಸಮ್ಮೇಳನದ ಎರಡನೇ ದಿನವಾದ ಇಂದು (ಡಿ.28) ಭಕ್ತಿಯ ಭಜನೆ, ಶ್ರದ್ಧೆಯ ದೇವತಾರ್ಚನೆಯೊಂದಿಗೆ ಕಾರ್ಯಕ್ರಮಗಳು ಆರಂಭವಾದವು. ಬಳಿಕ ಮೊದಲನೆಯ ಅಧಿವೇಶನ- ಸಾಕ್ಷಾತ್ಕಾರ ಸಭಾ ನೆರವೇರಿತು. ಹಲವು ಅತಿಥಿ ಗಣ್ಯರು ಅಭ್ಯಾಗತರಾಗಿ ಮಾತನಾಡಿದರು.
ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ:
ಅಡಿಕೆ ಬೆಳೆಗೆ ಬೆಲೆ ತಂದಿರುವವರು ಹವ್ಯಕ ಸಮಾಜ. ಚಿಕ್ಕ ಸಮಾಜ ಕೂಡ ದೊಡ್ಡದಾಗಿ ಯೋಚಿಸಬಹುದು ಹಾಗೂ ದೊಡ್ಡ ಕಾರ್ಯಗಳನ್ನು ಮಾಡಬಹುದು ಎಂಬುದಕ್ಕೆ ಹವ್ಯಕರು ಉದಾಹರಣೆ.
ಎಲ್ಲಾ ಸಮಾಜಗಳನ್ನು ಒಟ್ಟಿಗೆ ಕರೆದುಕೊಂಡು ಹೋಗುವ ಕಾರ್ಯವನ್ನು ಹವ್ಯಕ ಸಮುದಾಯ ಮಾಡುತ್ತಿದೆ. ನನ್ನ ಹುಟ್ಟೂರಾದ ಪುತ್ತೂರಿನಲ್ಲಿ ಹವ್ಯಕರು ಬಹು ಸಂಖ್ಯಾತರು. ನನ್ನ ಬೆಳವಣಿಗೆಯಲ್ಲಿ ಹವ್ಯಕ ಸಮುದಾಯದ ಪಾತ್ರ ಬಹುದೊಡ್ಡದಿದೆ. ಸಮುದಾಯಗಳ ಮಧ್ಯೆ ಭೇದಭಾವ ಮಾಡದೇ ನನಗೆ ಮಾರ್ಗದರ್ಶನ ಮಾಡಿದವರು ಹವ್ಯಕರು.
ರಾಮಚಂದ್ರಾಪುರ ಮಠ, ಸ್ವರ್ಣವಲ್ಲೀ ಮಠ, ನೆಲಮಾವು ಮಠಗಳ ಮಾರ್ಗದರ್ಶನದಲ್ಲಿ ಹವ್ಯಕ ಸಮುದಾಯ ಉತ್ತಮ ಕಾರ್ಯಗಳನ್ನು ಮಾಡುತ್ತಿದೆ.
ಅಡಕೆ ಕಲಬೆರಕೆಯಿಂದಾಗಿ ಅಡಕೆಗೆ ಕೆಟ್ಟ ಹೆಸರು ಅಂಟುಕೊಂಡಿದೆ. ಕೇಂದ್ರ ಸರ್ಕಾರ ಅಡಿಕೆ ಕೃಷಿಕರ ಪರವಾಗಿದ್ದು, ಅಡಿಕೆಯ ಹಿತ ಕಾಯಲು ಬದ್ಧವಾಗಿದೆ.
ಪತ್ರಕರ್ತ ರವಿಶಂಕರ್ ಕೆ. ಭಟ್
ಹವ್ಯಕ ಸಮುದಾಯ ಹಲವಾರು ವೈಶಿಷ್ಟ್ಯವನ್ನು ಹೊಂದಿದ್ದರೂ, ಹವ್ಯಕರ ಭಾಷೆ ಹಾಗೂ ಆಹಾರ ವಿಶೇಷವಾಗಿದೆ. ಉತ್ತರಕನ್ನಡ, ದಕ್ಷಿಣಕನ್ನಡ ಹಾಗೂ ಶಿವಮೊಗ್ಗ ಭಾಗಗಳಲ್ಲಿ ಪ್ರಮುಖವಾಗಿ ನೆಲಸಿರುವ ಹವ್ಯಕರು ಪ್ರಾಂತ್ಯವಾರು ವೈವಿಧ್ಯಮಯ ಭಾಷಾ ಸೊಗಡನ್ನು ಹೊಂದಿದ್ದಾರೆ. ರಾಜ್ಯದ ಹಲವಾರು ಅಲ್ಪಸಂಖ್ಯಾತ ಭಾಷೆಗಳಿಗೆ ಸರ್ಕಾರ ಅನುದಾನ ನೀಡುತ್ತಿದ್ದು ಅಕಾಡೆಮಿಗಳನ್ನು ಸ್ಥಾಪಿಸಿದೆ. ಇದೇರೀತಿ ಹವಿಗನ್ನಡಕ್ಕೂ ಅಕಾಡೆಮಿಯನ್ನು ಸ್ಥಾಪಿಸುವ ಮೂಲಕ ಸರ್ಕಾರ ಭಾಷಾ ಸಂರಕ್ಷಣೆಗೆ ಮುಂದಾಗಬೇಕು. ಹವ್ಯಕ ಭಾಷೆಯ ವೈವಿಧ್ಯಮಯ ಶಬ್ದಭಂಡಾರ ಕರಗುತ್ತಿದ್ದು, ಹವ್ಯಕ ಮಹಾಸಭೆಯು ಹವಿಗನ್ನಡ ನಿಘಂಟನ್ನು ಮಾಡುವ ಮೂಲಕ ಭಾಷಾ ಸೊಗಡನ್ನು ದಾಖಲಿಸಬೇಕು ಎಂದು ಸಲಹೆ ನೀಡಿದರು.
ಪಿ.ಜಿ.ಆರ್ ಸಿಂಧ್ಯಾ
ನಾನು ಹವ್ಯಕ ಸಮಾಜದ ಫಲಾನುಭವಿಯಾಗಿದ್ದು, ಹವ್ಯಕ ಸಮಾಜ ನನಗೆ ಶಕ್ತಿತುಂಬಿದೆ. ಹವ್ಯಕ ಸಮಾಜದವರಾಗಿದ್ದ ರಾಮಕೃಷ್ಣ ಹೆಗಡೆಯವರು ಮಾದರಿ ಆಡಳಿತ ನೀಡಿದ್ದು, ಕರ್ನಾಟಕದ ಪಾಲಿಗೆ ಅವರು ಶಾಶ್ವತ ಮುಖ್ಯಮಂತ್ರಿಯಾಗಿದ್ದಾರೆ.
ನಾನು ಗೃಹಮಂತ್ರಿಯಾಗಿದ್ದಾಗ ಸಮರ್ಥ ಪೋಲಿಸ್ ಅಧಿಕಾರಿ ನನಗೆ ಸಿಕ್ಕಿದ್ದರು. ರಾಜ್ಯ ಪೋಲಿಸ್ ಮಹಾನಿರ್ದೇಶಕರಾಗಿದ್ದ ತಿಮ್ಮಪ್ಪಯ್ಯ ಮಡಿಯಾಲ್ ಅವರು ಈ ಸಮಾಜದವರು ಎಂಬುದು ಹೆಮ್ಮೆಪಡಬೇಕಾದ ಸಂಗತಿ.
ಸಮ್ಮೇಳನಗಳು ಹೇಗೆ ಇರಬೇಕು ಎಂಬುದಕ್ಕೆ ವಿಶ್ವ ಹವ್ಯಕ ಸಮ್ಮೇಳನ ಮಾದರಿಯಾಗಿದೆ.
ಹವ್ಯಕರ ಜನಸಂಖ್ಯೆ ಕ್ಷೀಣಿಸುತ್ತಿರುವುದು ಆಘಾತಕಾರಿ ವಿಚಾರ. ಶ್ರೀರಾಮಚಂದ್ರಾಪುರಮಠದ ಶ್ರೀಗಳು ಕರೆನೀಡಿರುವಂತೆ ಸಮಾಜ ಆಲೋಚಿಸಬೇಕಿದ್ದು, ಮಕ್ಕಳೆಂಬ ಸಂಪತ್ತನ್ನು ಪಡೆದು ಜನಸಂಖ್ಯೆಯನ್ನು ಉಳಿಸಬೇಕು ಹಾಗೂ ವಿಶಿಷ್ಟ ಸಂಸ್ಕ್ರತಿಯನ್ನು ಬೆಳೆಸಬೇಕು.
ಸಚಿವ ದಿನೇಶ್ ಗುಂಡೂರಾವ್
ಹವ್ಯಕ ಸಮುದಾಯದಲ್ಲಿ ಇರುವ ಜ್ಞಾನ ಹಾಗೂ ಜಾಗೃತಿಯ ಕಾರಣದಿಂದಾಗಿ ಈ ಸಮಾಜವನ್ನು ಯಾರೂ ಅಳಿಸಲು ಸಾಧ್ಯವಿಲ್ಲ. ಸಾಮಾನ್ಯವಾಗಿ ಜಾತಿ ಸಮ್ಮೇಳನಗಳಲ್ಲಿ ಆ ಜಾತಿಯವರು ಮಾತ್ರ ಸೇರುತ್ತಾರೆ. ಆದರೆ ಹವ್ಯಕ ಸಮ್ಮೇಳನದಲ್ಲಿ ಎಲ್ಲಾ ಜಾತಿಜನಾಂಗವನ್ನು ಸೇರಿಸಿಕೊಂಡು ಹೋಗುತ್ತಿರುವುದು ಸ್ವಾಗತಾರ್ಹವಾಗಿದೆ. ಇದು ನಿಜವಾಗಿ ವಿಚಾರಶೀಲ ಹಾಗೂ ದೂರದರ್ಶಿ ಕಾರ್ಯವಾಗಿದೆ.
ಹವ್ಯಕ ಸಮುದಾಯ ಸರ್ಕಾರದ ಮುಂದೆ ಯಾವುದೇ ಬೇಡಿಕೆಯನ್ನು ಇಟ್ಟಿಲ್ಲ. ಆದರೆ ಸರ್ಕಾರದ ಯೋಜನೆಗಳಿಗೆ ಅವರು ಕೈಜೋಡಿಸುವುದಿದ್ದರೆ ಅಥವಾ ಹವ್ಯಕ ಸಮಾಜಕ್ಕೆ ಸರ್ಕಾತದಿಂದ ಯಾವುದಾದರೂ ಕಾರ್ಯ ಆಗಬೇಕಿದ್ದರೆ ಅದಕ್ಕೆ ಸರ್ಕಾರ ಬದ್ಧವಾಗಿದ್ದೆ ಎಂದು ಕರ್ನಾಟಕ ಸರ್ಕಾರದ ಪರವಾಗಿ ಹೇಳಿದರು.
ಶಾಸಕ ಶಿವರಾಮ್ ಹೆಬ್ಬಾರ್
ಹವ್ಯಕರ ಜನಸಂಖ್ಯೆ ಕಡಿಮೆಯಿದೆಯಾದರೂ ಬುದ್ಧಿಮತ್ತೆಗೆ ಕಡಿಮೆಯಿಲ್ಲ.
ನಾವೂ ಗಟ್ಟಿಯಾಗಿ ಹೇಳಬೇಕು ನಾವು ಬ್ರಾಹ್ಮಣರು ಎಂದು. ನಾವು ಎಲ್ಲ ಸಮಾಜವನ್ನು ಜತೆಯಲ್ಲಿ ಕೊಂಡೊಯ್ಯುವ, ಪ್ರೀತಿ ಗೌರವದಿಂದ ನೋಡುವ ಸಮಾಜ. ಸಮಾಜದ ಎಲ್ಲ ಆಗು ಹೋಗುಗಳ ಜತೆಯಲ್ಲಿ ಸಮರ್ಪಣಾ ಭಾವ ಬೆಳೆಸಿಕೊಳ್ಳಬೇಕು.
ಸರಕಾರ ಸರ್ವ ಸಮಾಜದ್ದು. ಹಲವು ಹಾಗೂ ಕೆಲವರಿರುವ ಸಮಾಜದ ಮತ್ತು ಸರ್ವ ಸಮಾಜದ ಸರಕಾರ. ಮಾವಿನ ಕಾಯಿ ಹಣ್ಣಿನಲ್ಲಿ ನೂರಾರು ರೀತಿಯ ಪದಾರ್ಥವನ್ನು ಮಾಡುವ ವೈಶಿಷ್ಟ್ಯತೆ ಹವ್ಯಕರದ್ದು, ವಿಶಿಷ್ಟ ಅಹಾರ ಸಂಸ್ಕೃತಿ ನಮ್ಮದು.
ಸಾಕ್ಷಾತ್ಕಾರ' ಪುಸ್ತಕ ಬಿಡುಗಡೆ
ಹವ್ಯಕ ಮಹಾಸಭೆಯ 81 ವರ್ಷಗಳ ಇತಿಹಾಸವನ್ನು ದಾಖಲಿಸಿರುವ 'ಸಾಕ್ಷಾತ್ಕಾರ' ಪುಸ್ತಕವನ್ನು ಲೋಕಾರ್ಪಣೆ ಮಾಡಲಾಯಿತು.
ನಾರಾಯಣ ಭಟ್ ಹುಳೇಗಾರು ಈ ಪುಸ್ತಕವನ್ನು ಬರೆದಿದ್ದು, ಮಹಾಸಭೆಯ ಇತಿಹಾಸದ ಹೆಜ್ಜೆಗಳನ್ನು ಈ ಪುಸ್ತಕದಲ್ಲಿ ದಾಖಲಿಸಲಾಗಿದೆ.
ಜಗದೀಶ್ ಶೆಟ್ಟರ್
ಹವ್ಯಕ ಸಮಾಜ ಸಮಸ್ತ ಸಮಾಜಕ್ಕೆ ಆಸ್ತಿಯಾಗಿದೆ. ಪಾರಂಪರಿಕ ಜ್ಞಾನ ಹಾಗೂ ಆಧುನಿಕ ಜ್ಞಾನ ಎರಡರಲ್ಲೂ ಮುಂಚೂಣಿಯಲ್ಲಿ ಹವ್ಯಕ ಸಮಾಜವಿದೆ.ಅಡಿಕೆ ಕೃಷಿಯ ಜೊತೆಗೆ ಸಾಹಿತ್ಯ ಕೃಷಿಯಲ್ಲಿ ಹವ್ಯಕರ ಸಾಧನೆ ಅನುಪಮವಾಗಿದೆ. ಇಂತಹ ಸಮಾಜದ ಜನಸಂಖ್ಯೆ ಕ್ಷೀಣಿಸುತ್ತಿರುವುದು ಆಘಾತಕಾರಿ. ಈ ಬಗ್ಗೆ ಯುವಜನತೆ ಆಲೋಚಿಸಬೇಕಿದ್ದು, ಮಕ್ಕಳನ್ನು ಹೊಂದುವ ಮೂಲಕ ಪರಂಪರೆಯನ್ನು ಮುಂದಿನ ತಲೆಮಾರಿಗೆ ದಾಟಿಸುವ ಕೆಲಸ ಮಾಡಬೇಕು.
ಮಹಾಸಭೆಗೆ ಮಹಾದಾನ
ಬೆಂಗಳೂರಿನ ಕಮರ್ಷಿಯಲ್ ರಸ್ತೆಯ ಸಮೀಪದಲ್ಲಿರುವ ಜಾಗವನ್ನು ಕೆ.ಎಲ್ ಶ್ರೀನಿವಾಸನ್ ಅವರು ಹವ್ಯಕ ಮಹಾಸಭೆಗೆ ದಾನವಾಗಿ ನೀಡಿದರು. ಸುಮಾರು 12 ಕೋಟಿ ಬೆಲೆಬಾಳುವ ಈ ಜಾಗವನ್ನು ಮಹಾಸಭೆಗೆ ದಾನವಾಗಿ ನೀಡುತ್ತಿದ್ದು, ಈ ಜಾಗದಲ್ಲಿ ಹವ್ಯಕ ಮಹಾಸಭೆಯು 'ತರ್ಪಣ ಭವನ' ನಿರ್ಮಿಸಲು ಉದ್ದೇಶಿಸಿದೆ.
ಕಳೆದ ವರ್ಷ ಭಟ್ಕಳ ಸಮೀಪದ ಸುಮಾರು 3 ಕೋಟಿ ಮೌಲ್ಯದ ಜಾಗವನ್ನು ಮಂಜುನಾಥ ಬಿಲ್ಲವ ಅವರು ಶ್ರೀರಾಮಚಂದ್ರಾಪುರಮಠದ ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳ ಮಾರ್ಗದರ್ಶನದಂತೆ ಹವ್ಯಕ ಮಹಾಸಭೆಗೆ ದಾನವಾಗಿ ನೀಡಿದ್ದರು.
ಇದೀಗ ಆಂದ್ರ ಮೂಲದ ಮುಲಕನಾಡು ಬ್ರಾಹ್ಮಣರಾದ ಶ್ರೀನಿವಾಸನ್ ಕೆ.ಎಲ್ ಅವರು ಹವ್ಯಕ ಮಹಾಸಭೆಗೆ ದಾನ ನೀಡಿದ್ದು, ಕಳೆದ ವರ್ಷ ಬಿಲ್ಲವ ಸಮಾಜದವರು ಹವ್ಯಕ ಸಮಾಜಕ್ಕೆ ಜಾಗವನ್ನು ನೀಡಿದ್ದಾರೆ. ಹೀಗೆ ಬೇರೆಬೇರೆ ಸಮಾಜದವರು ಹವ್ಯಕ ಸಮಾಜಕ್ಕೆ ದಾನ ನೀಡುತ್ತಿರುವುದು ಜಗತ್ತಿಗೆ ಒಗ್ಗಟ್ಟಿನ ಸಂದೇಶ ನೀಡುತ್ತಿದ್ದು, ಇದು ಸೌಹಾರ್ದತೆಗೆ ಮಾದರಿ ಎಂದು ಡಾ.ಗಿರಿಧರ ಕಜೆ ಪ್ರಶಂಸಿಸಿದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ