ವಿರಾಸತ್: ರಥ ಸ್ವಸ್ಥಾನಾಗಮನ, ಭಾನುವಾರವೂ ಇರಲಿದೆ ಮೇಳ

Upayuktha
0

ವಿದ್ಯಾಗಿರಿ (ಮೂಡುಬಿದಿರೆ): ಬಾನಂಗಳದಲ್ಲಿ ಸಿಡಿಮದ್ದುಗಳ ಚಿತ್ತಾರ, ವೇದಘೋಷಗಳ ನಿನಾದ, ಭಜನೆಗಳು, ಪುಷ್ಪ ಪಲ್ಲಕ್ಕಿಗಳು, ಪ್ರೇಕ್ಷಕರ ಜಯ ಘೋಷ ಹಾಗೂ ಮಂಗಳವಾದ್ಯಗಳೊಂದಿಗೆ ಸಾಂಸ್ಕೃತಿಕ ರಥ ಎಡದಿಂದ ಬಲಕ್ಕೆ ಸಂಚರಿಸಿ ಸ್ವಸ್ಥಾನಕ್ಕೆ ಮರಳಿ, ಧ್ವಜ ಅವರೋಹಣದೊಂದಿಗೆ  ರಾಷ್ಟ್ರೀಯ ಸಾಂಸ್ಕೃತಿಕ ಉತ್ಸವ '30ನೇ ವಿರಾಸತ್‌' ನ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಶನಿವಾರ ರಾತ್ರಿ ತೆರೆ ಬಿತ್ತು.


ಲೋಕ ಮಾರ್ಗದರ್ಶಕರಾದ ರಾಮ-ಕೃಷ್ಣರ ಮೂರ್ತಿ ಪ್ರತಿಷ್ಠಾಪಿಸಿದ ಸಾಂಸ್ಕೃತಿಕ ರಥವನ್ನು ಮುಖ್ಯ ವೇದಿಕೆಯ ಮುಂಭಾಗದಲ್ಲಿ ಎಡದಿಂದ ಬಲಕ್ಕೆ ಎಳೆಯಲಾಯಿತು.


ಇದಕ್ಕೂ ಮೊದಲು ಸಣ್ಣ ರಥದಲ್ಲಿ ಗಣಪತಿ, ಪಲ್ಲಕ್ಕಿಯಲ್ಲಿ ಶಕ್ತಿ ಮತ್ತು ಭಕ್ತಿಯ ಪ್ರತೀಕವಾಗಿ ಹನುಮಂತ, ಸಂಪತ್ತಿನ ಧ್ಯೋತಕವಾದ ಮಹಾಲಕ್ಷ್ಮಿ ಹಾಗೂ ವಿದ್ಯಾಮಾತೆ ಮಹಾ ಸರಸ್ವತಿ ಮೂರ್ತಿಗಳನ್ನು ಕರೆ ತರಲಾಯಿತು.


ರಥಯಾತ್ರೆಯಲ್ಲಿ ಮೈಸೂರು, ಪಂಡರಾಪುರ ಹಾಗೂ ಮಂಗಳೂರು ಹರೇಕೃಷ್ಣ ಪಂಥದ ಭಜನಾ ತಂಡಗಳ ಭಜನೆ ಹಾಡಿನ ಮೂಲಕ ಭಕ್ತಿ ಪ್ರಭಾವಳಿ ಮೂಡಿಸಿದರು. ಅರ್ಚಕರು ಮಂತ್ರ ಘೋಷ ಮಾಡಿದರು. ತಟ್ಟಿರಾಯ, ಅಪ್ಸರೆಯರು, ಕಳಶ ಹಿಡಿದ ಯುವತಿಯರು, ಹುಲಿರಾಯ, ಕೊಂಬು, ಕಹಳೆ ನಾದ ಮೊಳಗಿದವು. ಛತ್ರಿ, ಬಿರುದಾವಳಿ, ಚಾಮರಗಳೊಂದಿಗೆ ದೊಂದಿಗಳು ಬೆಳಗಿದವು. ಮಂಗಳ ವಾದ್ಯ ನಿನಾದ ಮೂಡಿಸಿತು.


ಹರಿದ್ವಾರದಿಂದ ಬಂದ ವಿಪುಲ್ ಶರ್ಮಾ ನೇತೃತ್ವದ ಗಂಗಾರತಿ ತಂಡವು ಮಂತ್ರ ಘೋಷಗಳೊಂದಿಗೆ ಆರತಿ ಬೆಳಗಿದಾಗ ಶ್ರದ್ಧೆ ಭಕ್ತಿಯ ಪ್ರಜ್ವಲನವಾಯಿತು. ಭಕ್ತರು ಜಯಕಾರ ಹಾಕಿದರು. ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ.ಮೋಹನ ಆಳ್ವ, ವ್ಯವಸ್ಥಾಪಕ ಟ್ರಸ್ಟಿ ವಿವೇಕ್ ಆಳ್ವ ಹಾಗೂ ಗಣ್ಯರು ರಥಕ್ಕೆ ಪುಷ್ಪಾರ್ಚನೆ ಮಾಡಿದರು. 


ನಾಳೆಯೂ ಮಹಾಮೇಳ:

ಡಿಸೆಂಬರ್ 15ರಂದು ಆಳ್ವಾಸ್ ವಿರಾಸತ್‌ನಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ಹೊರತು ಪಡಿಸಿ, ಉಳಿದೆಲ್ಲವೂ ಇರಲಿವೆ. ಬೆಳಿಗ್ಗೆ 9ರಿಂದ ರಾತ್ರಿ 10 ವರೆಗೆ ತೆರೆದಿರಲಿವೆ. 7 ಮೇಳಗಳ 750ಕ್ಕೂ ಮಳಿಗೆಗಳಿವೆ. ರಜಾದಿನವನ್ನು ಕುಟುಂಬದ ಜೊತೆ ಆನಂದಿಸಲು ಸಂಪೂರ್ಣ ಅವಕಾಶ ಕಲ್ಪಿಸಲಾಗಿದೆ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top