ತಿರುಮಲದಲ್ಲಿ ಗೌರವಾದರದೊಂದಿಗೆ ವೆಂಕಟೇಶನ ದರ್ಶನ
ಬೆಂಗಳೂರು: ಕಾಂಚನಬ್ರಹ್ಮನಾದ ಶ್ರೀನಿವಾಸನ ಮೇಲಿರುವ ಚಿನ್ನಾಭರಣ ಅಲಂಕಾರವನ್ನು ಮಾತ್ರ ನೋಡದೇ ಒಳಗಿರುವ ಚಿನ್ಮಯನ ದರ್ಶನ ಮಾಡಿದಾಗ ಮಾತ್ರ ತೀರ್ಥಯಾತ್ರೆ ಸಾರ್ಥಕವಾಗುತ್ತದೆ ಎಂದು ಭಂಡಾರಕೇರಿ ಮಠಾಧೀಶ ಶ್ರೀ ವಿದ್ಯೇಶತೀರ್ಥ ಸ್ವಾಮೀಜಿ ನುಡಿದರು.
ತಿರುಮಲ ಬೆಟ್ಟದಲ್ಲಿ ಟಿಟಿಡಿ ಗೌರವಾದರಗಳೊಡನೆ ಶ್ರೀ ವೆಂಕಟೇಶನ ದರ್ಶನ ಪಡೆದು ಅವರು ಅನುಗ್ರಹ ಸಂದೇಶ ನೀಡಿದರು. ಮೂರ್ತಿ ಮತ್ತು ವಿಗ್ರಹಗಳ ಒಳಗಿನ ಸ್ವರೂಪವನ್ನು ನೋಡುವ ಅನುಸಂಧಾನವನ್ನು ನಾವು ರೂಢಿಸಿಕೊಳ್ಳಬೇಕು. ಆಗ ಧನ್ಯತೆ ಕಾಣಬಹುದು ಎಂದರು.
ದಾಸ ಸಾಹಿತ್ಯದ ಸಂರಕ್ಷಕ: 500 ವರ್ಷದ ಭವ್ಯ ಇತಿಹಾಸವಿರುವ, ಕನ್ನಡ ಸಾಹಿತ್ಯಕ್ಕೆ ಮಹತ್ತರ ಕೊಡುಗೆ ನೀಡಿದ ದಾಸ ಸಾಹಿತ್ಯ ಇಂದು ಇಷ್ಟರ ಮಟ್ಟಿಗೆ ಉಳಿದುಕೊಂಡಿದೆ ಎಂದರೆ ಅದಕ್ಕೆ ತಿರುಮಲದ ಒಡೆಯ ವೆಂಕಟೇಶನ ಕೃಪೆ ಸಾಕಷ್ಟು ಇದೆ ಎಂದು ಶ್ರೀಗಳು ಅಭಿಪ್ರಾಯಿಸಿದರು.
ವಿವಿಧ ಭಜನಾ ಮಂಡಳಿಗಳು, ಧಾರ್ಮಿಕ ಸಂಘ-ಸಂಸ್ಥೆಗಳವರು ಭಜನೆ, ಕೀರ್ತನೆ, ಸುಳಾದಿಗಳನ್ನು ಹಾಡುತ್ತಾ, ಮೆಟ್ಟಿಲೋತ್ಸವ ಸೇವೆ ಮಾಡುತ್ತಲೇ ಸ್ವಾಮಿ ದರ್ಶನಕ್ಕಾಗಿ ದೂರದ ಊರುಗಳಿಂದ ಬರುತ್ತಾರೆ. ಅವರೆಲ್ಲರಿಗೂ ಆತ್ಮಾನಂದ ನೀಡುವ ದಾಸರ ಕೃತಿಗಳನ್ನು ಸನ್ನಿಧಿಗೆ ಸಮರ್ಪಿಸಿ ಧನ್ಯತೆ ಮೆರೆಯುತ್ತಾರೆ. ಈ ನಿಟ್ಟಿನಲ್ಲಿ ವೆಂಕಟೇಶನು ಸಂಗೀತ ಮತ್ತು ಸಾಹಿತ್ಯದ ಮೇರು ಸಂರಕ್ಷಕನಾಗಿದ್ದಾನೆ. ಹರಿದಾಸ ಸಾಹಿತ್ಯವೆಂಬ ಲತೆಗೆ ಶ್ರೀನಿವಾಸ ಕಲ್ಪವೃಕ್ಷದಂತಿದ್ದಾನೆ ಎಂದು ಶ್ರೀ ವಿದ್ಯೇಶತೀರ್ಥ ಸ್ವಾಮೀಜಿ ಬಣ್ಣಿಸಿದರು.
ಪೂಜೆ- ದರ್ಶನ:
ತಿರುಮಲದ ವ್ಯಾಸರಾಜರ ಮಠದಲ್ಲಿ ಸಂಸ್ಥಾನ ಪೂಜೆ ನೆರವೇರಿಸಿದ ಅವರು, ಟಿಟಿಡಿ ಗೌರವದೊಂದಿಗೆ ಶ್ರೀ ವೆಂಕಟೇಶನ ದರ್ಶನ ಪಡೆದರು. ಟಿಟಿಡಿ ಹೆಚ್ಚುವರಿ ಕಾರ್ಯನಿರ್ವಾಹಕ ಅಧಿಕಾರಿ ವೆಂಕಯ್ಯ ಚೌಧರಿ, ಸಹ ಕಾರ್ಯನಿರ್ವಾಹಕ ಲೋಕನಾಥನ್, ಪೇಷ್ಕರ್ ರಾಮಕೃಷ್ಣ, ಡಿ.ಪಿ. ಅನಂತಾಚಾರ್ಯ ಇತರರು ಹಾಜರಿದ್ದು, ಗುರುಗಳಿಗೆ ದರ್ಶನ ಮಾಡಿಸಿ ಮಹಾ ಪ್ರಸಾದ ಪ್ರದಾನ ಮಾಡಿದರು.
ಸಂಕೀರ್ತನೆ:
ಶ್ರೀ ವಿದ್ಯೇಶತೀರ್ಥ ಸ್ವಾಮೀಜಿ ಸಾನ್ನಿಧ್ಯದಲ್ಲಿ ವಿದ್ಯೇಶ ವಿಠಲಾಂಕಿತ ಕೃತಿಗಳ ಸಂಕೀರ್ತನೆ ಭಕ್ತರ ಮನ ಸೆಳೆಯಿತು. ಗಾಯಕಿ ಸಿರಿಸಿಂಚನ ಪಟವರ್ಧನ ಅವರು ಶ್ರೀ ವಿದ್ಯೇಶರ ಕೃತಿಗಳನ್ನು ಹಾಡಿ ರಂಜಿಸಿದರು. ಪಕ್ಕವಾದ್ಯದಲ್ಲಿ ಆದಿತ್ಯ (ಪಿಟೀಲು) ಮತ್ತು ವಿದ್ವಾನ್ ಮಾರುತಿ ರಘುರಾಮ (ಮೃದಂಗ) ಸಹಕಾರ ನೀಡಿದರು. ನೂರಾರು ಭಕ್ತರು ಹಾಜರಿದ್ದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ