
ಪೇಪರ್ ಕಪ್‌ಗಳಿಂದ ನೀರು, ಚಹಾ ಅಥವಾ ಕಾಫಿಯನ್ನು ಸೇವಿಸುವ ಅಭ್ಯಾಸ ನಿಧಾನವಾಗಿ ಕಡಿಮೆ ಆಗುತ್ತಿದ್ದರೂ, ಅನೇಕ ಕಡೆ ಅದು ಇರುವುದಂತೂ ಸತ್ಯ. ಮದುವೆ ಅಥವಾ ರಸ್ತೆ ಬದಿಯ ಟೀ ಅಂಗಡಿಗಳಿರಲಿ ಎಲ್ಲೆಂದರಲ್ಲಿ ಡಿಸ್ಪೋಸೇಬಲ್ ಕಪ್‌ಗಳು ಅಥವಾ ಲೋಟಗಳನ್ನು ವಿವೇಚನೆಯಿಲ್ಲದೆ ಬಳಸಲಾಗುತ್ತದೆ. ಪರಿಣಾಮ ಜೀವಿಗಳ ಮತ್ತು ಪರಿಸರದ ಆರೋಗ್ಯ ಹಾಳಾಗುತ್ತಿದೆ.
ಇತ್ತೀಚೆಗೆ, ನಿರ್ಮಲ ತುಂಗಭದ್ರಾ ಅಭಿಯಾನದ ಒಂದು ಪೂರ್ವಭಾವಿ ಸಭೆ. ಅಲ್ಲಿ ಕಾಫಿ ಹಂಚಲು ಒಂದಿಷ್ಟು ಪೇಪರ್ ಕಪ್‌ನ್ನು ಬಳಸಲಾಗಿತ್ತು. ಇನ್ನೇನು, ಹಂಚಬೇಕು... ಅಷ್ಟು ಹೊತ್ತಿಗೆ ಸಭೆಯ ಸದಸ್ಯರೊಬ್ಬರು ಜಾಗೃತರಾಗಿ "ಏ ಪೇಪರ್ ಕಪ್ ಬೇಡ, ಇರಿ, ಸ್ಟೀಲ್ ಲೋಟ ತರಿಸುತ್ತೀವಿ" ಅಂತ ಹೇಳಿ, ಸಭಾಭವನದ ಹತ್ತಿರ ಇದ್ದ ಮನೆಯಿಂದ ಸ್ಟೀಲ್ ಲೋಟ ತರಿಸಿದರು. ಸ್ಟೀಲ್ ಲೋಟ ತೆಗೆದುಕೊಂಡು ಬರುವ ನಡುವಿನ ಸಣ್ಣ ಸಮಯದಲ್ಲಿ, ಸಭೆಯಲ್ಲಿದ್ದ ಸಚಿವರೊಬ್ಬರು ಪೇಪರ್ ಕಪ್‌ನ್ನು ಎತ್ತಿಕೊಂಡು "ಈ ಪೇಪರ್ ಕಪ್‌ನಲ್ಲಿ ಏನು ಸಮಸ್ಯೆ ಇದೇರಿ? ಇದು ಒಳ್ಳೇದಲ್ವಾ?" ಎಂದರು. ಸಭೆಯಲ್ಲಿದ್ದ ಸದಸ್ಯರೊಬ್ಬರು "ಪೇಪರ್ ಕಪ್‌ಗಳಿಂದಲೂ ಕಾಫಿ ಅಥವಾ ಟೀ ಕುಡಿಯುವುದರಿಂದ ಆರೋಗ್ಯಕ್ಕೆ ತುಂಬಾ ಹಾನಿಕಾರಕ ಸರ್. ಪೇಪರ್ ಕಪ್ ಬಳಕೆಗೂ ಪ್ಲಾಸ್ಟಿಕ್ ಅನ್ನು ಬಳಸಲಾಗುತ್ತದೆ. ಜೊತೆಗೆ ಅದರಲ್ಲಿರುವ ಮಾರಣಾಂತಿಕ ರಾಸಾಯನಿಕಗಳನ್ನು ಹೊಂದಿರುವ ವ್ಯಾಕ್ಸ್ ನಮ್ಮ ಆರೋಗ್ಯಕ್ಕೆ ಗಂಭೀರ ಹಾನಿಯನ್ನುಂಟು ಮಾಡುತ್ತದೆ.
ನೀವು ಬಿಸಿ ಚಹಾ ಅಥವಾ ಕಾಫಿಯನ್ನು ಸೇವಿಸಿದಾಗ, ಕಪ್‌ನಲ್ಲಿನ ಮೈಕ್ರೋಪ್ಲಾಸ್ಟಿಕ್ ಕಣಗಳು ಕರಗಲು ಪ್ರಾರಂಭಿಸುತ್ತವೆ ಮತ್ತು ಚಹಾದೊಂದಿಗೆ ನಮ್ಮ ದೇಹವನ್ನು ಸೇರುತ್ತವೆ. ನಾವು ತಿಳಿಯದೆ ಪ್ಲಾಸ್ಟಿಕ್ ಅನ್ನು ತಿನ್ನುತ್ತಿದ್ದೀವಿ ಎಂದರ್ಥ. ಈ ಪ್ಲಾಸ್ಟಿಕ್ ಕಣಗಳು ಕರುಳಿನಲ್ಲಿ ಸಂಗ್ರಹಗೊಂಡು ಜೀರ್ಣಾಂಗ ವ್ಯವಸ್ಥೆಯನ್ನು ಹಾನಿಗೊಳಿಸುತ್ತವೆ. ಇದು ಅತಿಸಾರದಂತಹ ಕಾಯಿಲೆಗಳಿಗೆ ಕಾರಣವಾಗಬಹುದು ಮತ್ತು ಮೂತ್ರಪಿಂಡದ ಸಮಸ್ಯೆಗಳಿಗೂ ಕಾರಣವಾಗಬಹುದು" ಎಂದು ತಮ್ಮ ಮೊಬೈಲ್‌ನಲ್ಲಿ ಸಂಗ್ರಹ ಮಾಡಿದ್ದ ಮೆಸೇಜ್ ಓದಿ ಹೇಳಿದರು. ಶಾಸಕರು "ಹಾಗಾದರೆ ಇನ್ಮೇಲೆ ನಾನೂ ಪೇಪರ್ ಕಪ್ ಲೋಟಗಳನ್ನು ಬಳಸುವುದಿಲ್ಲ" ಎಂದು ಹೇಳಿ ಸ್ಟೀಲ್ ಕಪ್‌ನಲ್ಲಿ ಕಾಫಿ ಕುಡಿದರು. ಆ ಶಾಸಕರ ಹೆಸರು ಅರಗ ಜ್ಞಾನೇಂದ್ರ. ಮಾಜಿ ಗೃಹ ಮಂತ್ರಿಗಳು.
ಅಲ್ಲಿಂದ ಮುಂದೆ ನಿರ್ಮಲಾ ತುಂಗಭದ್ರ ಅಭಿಯಾನದ ಅನೇಕ ಸಾರ್ವಜನಿಕ ಸಭೆಗಳಲ್ಲಿ ಅರಗ ಜ್ಞಾನೇಂದ್ರರವರು ಪ್ಲಾಸ್ಟಿಕ್ ಮತ್ತು ಪೇಪರ್ ಕಪ್‌ಗಳನ್ನು ಬಳಸದಂತೆ ಮಾತಾಡಿದರು, ಇತರ ಸಭೆಗಳಲ್ಲಿ ಈಗಲೂ ಮಾತಾಡುತ್ತಿದ್ದಾರೆ.
ಈಗ ಹರಿಹರದಿಂದ ಪ್ರಾರಂಭವಾಗುತ್ತಿರುವ ನಿರ್ಮಲಾ ತುಂಗಭದ್ರಾ ಅಭಿಯಾನದ ಎರಡನೇ ಹಂತದಲ್ಲಿ ಎಲ್ಲೂ ಪ್ಲಾಸ್ಟಿಕ್ ಮತ್ತು ಪೇಪರ್ ಲೋಟ, ಕಪ್, ಪ್ಲೇಟ್, ತಟ್ಟೆ, ಚಮಚ, ಸ್ಟ್ರಾ, ಹಾರ, ಏಕ ಬಳಕೆ ಕ್ಯಾರಿಬ್ಯಾಗ್ ಬಳಸದಂತೆ ಎಲ್ಲಾ ಗ್ರೂಪ್‌ಗಳಿಗೂ ಮಾಹಿತಿ ಹಂಚಲಾಗಿದೆಯಂತೆ. ಅಭಿಯಾನದ ಎಲ್ಲಾ ಊರುಗಳ ಪೂರ್ವಬಾವಿ ಸಭೆಗಳಲ್ಲಿ ಈ ಬಗ್ಗೆ ಚರ್ಚೆಯೂ ಆಗುತ್ತಿದೆಯಂತೆ.
**
ಇವತ್ತು (15.12.2024) ಬಾಳೇಹೊನ್ನೂರಿನಲ್ಲಿ ಅರಣ್ಯ ಮತ್ತು ಪರಿಸರ ಸಚಿವ ಶ್ರೀಯುತ ಈಶ್ವರ ಖಂಡ್ರೆಯವರು ಭಾಗವಹಿಸಿದ್ದ ಸಂವಾದ, ಮನವಿ ಸಲ್ಲಿಕೆ ಕಾರ್ಯಕ್ರಮದಲ್ಲಿ ಕಾಫಿಗೆ ಪೇಪರ್ ಕಪ್ ಮತ್ತು ಪ್ಲಾಸ್ಟಿಕ್ ಚಮಚಗಳನ್ನು ಬಳಸಲಾಗಿತ್ತು(ಮೇಲೆ ಕೊಲಾಜ್ ಮಾಡಿದ ಫೋಟೋ ಗಮನಿಸಿ). ಗೌರವ ಸಮರ್ಪಣೆಗೆ ಪ್ಲಾಸ್ಟಿಕ್ ಹಾರ ಬಳಸಲಾಗಿತ್ತು.
ಕಾರ್ಯಕ್ರಮದ ನಂತರ, ಖಂಡಿತವಾಗಿ ಈ ಪೇಪರ್ ಕಪ್ ಮತ್ತು ಪ್ಲಾಸ್ಟಿಕ್ ಚಮಚಗಳು, ಹಾರಗಳು ಪಶ್ಚಿಮಘಟ್ಟದ ಸೂಕ್ಷ್ಮ ಪ್ರದೇಶವಾದ ಬಾಳೆಹೊನ್ನೂರಿನ ಮಣ್ಣಿನಲ್ಲಿ ಸೇರ್ಪಡೆಯಾಗಿ ಶಾಶ್ವತವಾಗಿ ಉಳಿದುಬಿಡುತ್ತದೆ.
ಇದು ಬರೀ ಬಾಳೆಹೊನ್ನೂರಿನ ಕತೆಯಲ್ಲ. ಕೆಲವರ ಗಮನಕ್ಕೆ ಬಾರದೆ, ಕೆಲವೊಮ್ಮೆ ಅರಿವಿಗೆ ಬಾರದೆ ಇಂತಹ ಸೂಕ್ಷ್ಮ ಪ್ರಕರಣಗಳು ಎಲ್ಲರಿಂದಲೂ ನೆಡೆಯುತ್ತಿರುತ್ತವೆ, ಎಲ್ಲಾ ಕಡೆಯೂ ನೆಡೆಯುತ್ತವೆ.
ಪರಿಸರ ಕಾಳಜಿಯನ್ನು ಹೊಂದಿರುವ ಸಚಿವರಾದ ಈಶ್ವರ ಖಂಡ್ರೆಯಂತವರು, ಶಾಸಕರಾದ ಅರಗ ಜ್ಞಾನೇಂದ್ರರಂತವರು ತಮ್ಮ ಗಮನಕ್ಕೆ ಬಂದ ಮೇಲೆ ಖಂಡಿತವಾಗಿ ತಾವು ಭಾಗವಹಿಸುವ ಸಭೆಗಳಲ್ಲಿ ಪ್ಲಾಸ್ಟಿಕ್ ಮತ್ತು ಪೇಪರ್ ಕಪ್, ಲೋಟ, ತಟ್ಟೆ, ಪ್ಲೇಟ್, ಸ್ಟ್ರಾ, ಚಮಚ, ಹಾರಗಳನ್ನು ಬಳಸದಂತೆ ತಾಖೀತು ಮಾಡುತ್ತಾರೆ. ಅಷ್ಟೇ ಅಲ್ಲದೆ, ಪರಿಸರ ಖಾತೆಯ ಸಚಿವರಾದ ಈಶ್ವರ ಖಂಡ್ರೆಯವರು (ಮತ್ತು ಅವರ ಆಪ್ತ ಕಾರ್ಯದರ್ಶಿಗಳು) ಮುಂದಿನ 'ಅಗತ್ಯ ಕ್ರಮಕ್ಕಾಗಿ' ಮತ್ತು 'ಮಾಹಿತಿಗಾಗಿ' ಬಿಡುಗಡೆ ಮಾಡುವ ತಮ್ಮ ಪ್ರವಾಸ ಕಾರ್ಯಕ್ರಮದ ಲೆಟರ್‌ಹೆಡ್ ಪಟ್ಟಿಯಲ್ಲಿ ಈ ಪೇಪರ್/ಪ್ಲಾಸ್ಟಿಕ್ ಪರಿಕರಗಳ ಬಳಕೆಯನ್ನು ನಿಷೇಧಿಸುವ ನೋಟ್ ಮುದ್ರಿಸಬಹುದು.
ಶಾಸಕರು, ಸಚಿವರು, ಮಠಾಧೀಶರುಗಳು ಇಂತಹ ವಿಚಾರವನ್ನು ತಮ್ಮ ಮಾತುಗಳಲ್ಲಿ ಹೆಚ್ಚು ಹೆಚ್ಚು ಸೇರಿಸಿದರೆ ಅದಕ್ಕೆ ಹೆಚ್ಚು ಮೌಲ್ಯವೂ ಬರುತ್ತದೆ, ಪ್ರಚಾರ ಪಡೆಯುತ್ತದೆ, ಅನುಷ್ಠಾನಕ್ಕೂ ಬರುತ್ತದೆ.
ಹಾಗಾಗಲಿ.
ಮೊನ್ನೆ ಮೊನ್ನೆ ನೆಡೆದ ಬೆಂಗಳೂರಿನಲ್ಲಿ ಲಕ್ಷಾಂತರ ಜನರು ಭಾಗವಹಿಸಿದ ಕಡ್ಳೆಕಾಯಿ ಪರಿಷೆ ಜಾತ್ರಯನ್ನು ಪ್ಲಾಸ್ಟಿಕ್ ಮುಕ್ತ ಪರಿಷೆಯಾಗಿ ಈ ವರ್ಷ ಮಾಡಲಾಗಿದೆ.
ಬೆಂಗಳೂರು ನಗರದಲ್ಲಿನ ಸರಕಾರಿ ಕಾರ್ಯಕ್ರಮಗಳಲ್ಲಿ ಪ್ಲಾಸ್ಟಿಕ್ ನೀರಿನ ಬಾಟಲಿಯೂ ಸೇರಿದಂತೆ, ಪ್ಲಾಸ್ಟಿಕ್/ಪೇಪರ್ ಲೋಟ, ಕಪ್, ಪ್ಲೇಟ್, ತಟ್ಟೆ, ಚಮಚ, ಏಕ ಬಳಕೆ ಕ್ಯಾರಿ ಬ್ಯಗ್‌ಗಳನ್ನು ಬಳಸದಂತೆ BBMP ಯೇ ಆದೇಶ ಹೊರಡಿಸಿದೆ.
ಎಲ್ಲಾ ಕಡೆಯೂ ಕಾಫಿ ಉಪಹಾರ ಸೇವನೆಗೆ ವಿಷದ ಬಟ್ಟಲು ನಿಷೇಧವಾಗಲಿ.
- ಅರವಿಂದ ಸಿಗದಾಳ್, ಮೇಲುಕೊಪ್ಪ
9449631248
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ