ಮೂರು ದಶಕಗಳ ಹಿಂದಿನ ಘಟನೆಯಿದು. ಮೊನ್ನೆ ನೆನಪಾಯಿತು. ಈ ನೆನಪಿಗೆ ಕಾರಣರಾದ ನನ್ನ ಚಿಕ್ಕಪ್ಪ ಗತಿಸಿ ಹಲವು ವರ್ಷಗಳಾಗಿವೆ. ನಮ್ಮ ಚಿಕ್ಕಪ್ಪನಿಗೆ ಸಿನಿಮಾ ಎಂದರೆ ಭಾರೀ ಸಿಟ್ಟು. ಎಷ್ಟೆಂದರೆ, ಸಿನಿಮಾ ಪತ್ರಿಕೆಗಳು ಕೂಡ ಮನೆಯಲ್ಲಿ ಕಣ್ಣಿಗೆ ಬೀಳಬಾರದು. ಎಳೆಯ ಜನಾಂಗದ ಮನಸ್ಸು ಸಿನಿಮಾದಿಂದ ಭ್ರಷ್ಟಗೊಳ್ಳುತ್ತದೆ. ವಿದ್ಯಾರ್ಥಿಗಳು ಸಿನಿಮಾ ಮತ್ತು ಸಿನಿಮಾ ತಾರೆಯರ ಹುಚ್ಚಿನಲ್ಲಿ ಉಳಿದೆಲ್ಲ ಹೊಣೆ ಮರೆತು ಬೇಜವಾಬ್ದಾರಿ ಬೆಳೆಸಿಕೊಳ್ಳುತ್ತಾರೆಂಬುದು ಅವರ ಸಿನಿಮಾ ಮೇಲಿನ ಸಿಟ್ಟಿಗೆ ಮೂಲ.
ಮನೆಯಲ್ಲಿ ಅವರಿಲ್ಲದಿದ್ದಾಗ ಯಾರಿಗೂ ಚಲನಚಿತ್ರಗಳ, ಚಲನಚಿತ್ರ ತಾರೆಯರ ಹೆಸರು ಕೂಡ ಎತ್ತಲು ಉಸಿರು ಇರುತ್ತಿರಲಿಲ್ಲ.
ಒಮ್ಮೆ ಅವರು ಊರಿನಿಂದ ಬೆಂಗಳೂರಿಗೆ ಬಂದಿದ್ದರು. ಆಗ ಅವರಿಗೆ ಐವತ್ತೋ ಐವತ್ತೈದೋ ವರ್ಷ ಇದ್ದಿರಬೇಕು. ಮಗಳು ಒಪ್ಪಕ್ಕ ಮತ್ತು ಅಳಿಯ ಕೃಷ್ಣನ ಬನಶಂಕರಿ ಮನೆಯಲ್ಲಿ ಅವರ ವಾಸ್ತವ್ಯ. ಪುಟ್ಟ ಸರ್ಕ್ಯುಲೇಟಿಂಗ್ ಲೈಬ್ರರಿಯೊಂದನ್ನು ಮನೆಯಿಂದಲೇ ನಡೆಸುತ್ತಿದ್ದ ಒಪ್ಪಕ್ಕ ಅವರ ಕಣ್ಣಿಗೆ ಸಿನಿಮಾ ಸಂಬಂಧಿತ ಪುಸ್ತಕ, ಪತ್ರಿಕೆಗಳಾವುವೂ ಬೀಳದಂತೆ ಮುಂಜಾಗರೂಕತೆ ವಹಿಸುತ್ತಿದ್ದಳು.
ಅಳಿಯನ ದ್ರಾಕ್ಷಿತೋಟ ಕನಕಪುರ ರಸ್ತೆಯಲ್ಲಿ ಸುಮಾರು 12 ಕಿ.ಮೀ ದೂರದ ಸಾಲುಣ್ಸೆ ಎಂಬ ಹಳ್ಳಿಯಲ್ಲಿತ್ತು. ಒಂದು ಭಾನುವಾರ ಕುಟುಂಬದವರನ್ನು ದ್ರಾಕ್ಷಿ ತೋಟಕ್ಕೆ ಕರೆದುಕೊಂಡು ಹೋಗಿ ಪಿಕ್‌ನಿಕ್ ಮಾಡಿಬರುವುದೆಂದು ನಿರ್ಧಾರವಾಯಿತು. ಯೋಜಿಸಿದಂತೆ ಎಲ್ಲವೂ ಸುಗಮವಾಗಿ ನಡೆಯಿತು.
ಹಿಂತಿರುಗಲು ನಿರ್ಧರಿಸಿ ಸಂಜೆ ಕನಕಪುರದಿಂದ ಬರುತ್ತಿದ್ದ ಓವರ್‍ಲೋಡೆಡ್ ಬಸ್‌ನಲ್ಲಿ ಎಲ್ಲರೂ ಹೇಗೋ ತೂರಿಕೊಂಡಿದ್ದಾಯಿತು. ಜಯನಗರದ ಏಳನೇ ಬ್ಲಾಕ್ ನ ಎಡಿಯೂರಿನ ಬಳಿ ಎಲ್ಲರೂ ಬಸ್‌ನಿಂದ ಇಳಿದಾಗ ಚಿಕ್ಕಪ್ಪ ಇರಲಿಲ್ಲ. ಬಸ್ಸಿನೊಳಗೂ ಅವರ ಸುಳಿವಿರಲಿಲ್ಲ.
ಎಲ್ಲರಿಗೂ ಗಾಬರಿ, ಎದೆ ಧಸಕ್ ಎಂದಿತು. ಎಲ್ಲರೊಂದಿಗೆ ಬಸ್ ಹತ್ತಿದವರು ಇದ್ದಕ್ಕಿದ್ದಂತೆ ಎಲ್ಲಿ ಅದೃಶ್ಯರಾದರು? ತಪ್ಪಿ ದಾರಿ ಮಧ್ಯದ ಯಾವುದೋ ಸ್ಟಾಪ್‌ನಲ್ಲಿ ಇಳಿದಿರಬಹುದೆಂದು ಊಹಿಸಿ, ಮನೆ ದೇವರನ್ನು ಪ್ರಾರ್ಥಿಸುತ್ತಾ ನಂತರದ ಬಸ್‌ಗಳಿಗೆ ಕಾಯುವುದು ಅನಿವಾರ್ಯವಾಯಿತು.
ಆಗ, ಈಗಿನಂತೆ- ಎಲ್ಲಿಂದ ಬೇಕಾದರೂ, ಯಾರನ್ನು ಬೇಕಾದರೂ ತಕ್ಷಣ ಸಂಪರ್ಕಿಸುವ ಜಂಗಮವಾಣಿ ಇಲ್ಲದ ಕಾರಣ ಹೀಗೆಲ್ಲ ಊಹಿಸಿ ಕಾಯುವುದು ಒಂದೇ ದಾರಿಯಾಗಿತ್ತು.
ಮತ್ತೆ ಅರ್ಧ ಗಂಟೆಯಲ್ಲಿ ಇನ್ನೊಂದು ಬಸ್ ಬಂದು ನಿಂತಿತು. ಆಗ ಇಳಿದ ಪ್ರಯಾಣಿಕರು ಒಬ್ಬರೇ, ನಮ್ಮ ಚಿಕ್ಕಪ್ಪ. ಅವರ ಮುಖದಲ್ಲಿ ಆತಂಕ, ಗಾಬರಿಯ ಬದಲು ನಗು ಮಿರುಗುತ್ತಿತ್ತು. ಏನೋ ಎಡವಟ್ಟಾಗಿರಬೇಕೆಂದು ಅಳಿಯ ಕಿಟ್ಟಣ್ಣನಾದಿಯಾಗಿ ಮೊಮ್ಮಗಳು ರಶ್ಮಿಯ ವರೆಗೆ ಎಲ್ಲರೂ ದಿಕ್ಕು ಕಾಣದೆ ಕಾದಿರುವಾಗ ಮುಖವರಳಿಸಿ ಖುಷಿಯಲ್ಲಿ ಬಂದ ಅಪ್ಪನನ್ನು ಕಂಡು ಮಗಳಿಗೆ ಸ್ವಲ್ಪ ತಾಳ್ಮೆಯೇ ತಪ್ಪಿತ್ತು.
"ನೀವೆಲ್ಲಿ ಹೋದದ್ದು" ಎಂಬ ಪ್ರಶ್ನೆಯಲ್ಲಿ ಸಿಡುಕಿತ್ತು. ಆದರೆ, ಚಿಕ್ಕಪ್ಪನ ಮುಖದ ಕಳೆ ಬದಲಾಗಲಿಲ್ಲ.
"ಅದೂ, ಮಗಳೇ ಬಸ್‌ನಲ್ಲಿ ಬರುವಾಗ ದಾರಿಯಲ್ಲಿ ತಾತಗುಣಿ ಎಸ್ಟೇಟ್ ಅಂತ ಬೋರ್ಡ್ ಕಾಣಿಸಿತು. ದೇವಿಕಾರಾಣಿ ರೋರಿಚ್ ಹೆಸರಿತ್ತು. ನಮ್ಮ ಕಾಲದ ಫಿಲ್ಮ್ ಸ್ಟಾರ್ ಅಲ್ವೋ, ಸ್ವಲ್ಪ ನೋಡಿ ಬರುವಾಂತ ಇಳಿದೆ. ನಿಮಗೆ ಹೇಳುವಷ್ಟರಲ್ಲಿ ಬಸ್ ಹೊರಟಿತ್ತು''. ಚಿಕ್ಕಪ್ಪನ ಮಾತು ಕೇಳಿದಾಗ ಎಲ್ಲರಿಗೂ ನಗು ತಡೆಯಲಾಗಲಿಲ್ಲ.
ದೇವಿಕಾರಾಣಿ ಎಸ್ಟೇಟ್ ನಲ್ಲಿಲ್ಲವಂತೆ, ಬೆಂಗ್ಳೂರಿನಲ್ಲಿ ವಿಧಾನಸೌಧದ ಹತ್ತಿರ ಎಲ್ಲೋ ಮನೆಯಿದೆಯಂತೆ'' ಚಿಕ್ಕಪ್ಪನ ಮುಂದಿನ ಮಾತು ಯಾರಿಗೂ ಕೇಳಿಸಲಿಲ್ಲ.
ಮಾರನೇ ದಿನ ಒಬ್ಬರನ್ನು ಬಿಟ್ಟು ಮನೆಯಲ್ಲಿ ಎಲ್ಲರದೂ ಸಿನಿಮಾ ಪ್ರೋಗ್ರಾಂ. ಚಿಕ್ಕಪ್ಪನ ಉಸಿರಿರಲಿಲ್ಲ!
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ