ಬದುಕೆಂಬ ಪಯಣದಿ ಪ್ರತೀ ಮನುಷ್ಯನಿಗೂ ವಿಭಿನ್ನ ಅನುಭವಗಳು ಎದುರಾಗುತ್ತಿರುತ್ತವೆ. ಮನುಷ್ಯ ಮನುಷ್ಯನ ಬದುಕಿನ ಹಾದಿ ವಿಭಿನ್ನ. ಜೀವನದಲ್ಲಿ ಕಷ್ಟನಷ್ಟಗಳು ಸಾಮಾನ್ಯವಾಗಿದ್ದರೂ ಸಂತೋಷವನ್ನು ಕಂಡುಕೊಳ್ಳಲು ಆತ ಅನುಸರಿಸುವ ಮಾರ್ಗಗಳು ಭಿನ್ನವಾಗಿರುತ್ತವೆ. ಈ ಮಾರ್ಗಗಳು ಒಂದಿಲೊಂದು ಸಂದೇಶ ನೀಡುತ್ತ ಇಡೀ ಮನುಕುಲಕ್ಕೆ ಮಾರ್ಗದರ್ಶಿಯಾಗಿರುವದಂತೂ ಬೆಳಕಿನಷ್ಟೇ ಸತ್ಯ. ಈ ನಿಟ್ಟಿನಲ್ಲಿ ಪ್ರತಿಯೊಬ್ಬರ ಜೀವನದ ಸಂತೋಷ, ಕಷ್ಟಸುಖ, ಎದುರಾಗುವ ಸವಾಲುಗಳು ಮತ್ತು ಅವುಗಳನ್ನು ಸಮರ್ಥವಾಗಿ ಎದುರಿಸುವ ಪರಿ, ಮೊದಲಾದವು ದಾಖಲಾಗಿರುವ ವಿಷಯಗಳೇ ಆಗಿರುತ್ತವೆ. ಅನೇಕ ಬಾರಿ ಖುಷಿಗಿಂತ ನೋವಿನ ವಿಷಯಗಳೆ ಹೆಚ್ಚು ಎದುರಾಗುತ್ತವೆ. ಈ ನೋವು ಭವಿಷ್ಯದಲ್ಲಿ ಸುಖಜೀವನಕ್ಕೆ ಮಾರ್ಗವೂ ಆಗಬಲ್ಲದು.
ಬಾಳಿನ ಈ ಸುದೀರ್ಘ ಪಯಣದ ಮಧ್ಯದಲ್ಲಿ ಇಲ್ಲವೇ ತುಟ್ಟತುದಿಯಲ್ಲಿ ನಿಂತು ಹಿಂತಿರುಗಿ ನೋಡಿದಾಗ ನೆನಪಿನಂಗಳದಲ್ಲಿ ಮೂಡಿಬರುವ ಅನೇಕ ಘಟನೆಗಳು, ತಪ್ಪುಒಪ್ಪುಗಳು, ಸಿಹಿಕಹಿ ಅನುಭವಗಳು, ಜನರ ಮೋಸ ವಂಚನೆಗಳು, ಕಿರುಕುಳಗಳು, ಔದಾರ್ಯ, ಕರುಣೆ, ಸಹಾನುಭೂತಿ, ಸಹಾಯ, ಸಹಕಾರಗಳು ಎಲ್ಲವೂ ಮನಪಟಲದಲ್ಲಿ ಮೂಡಿ ಕೆಲವೊಂದು ಬಾರಿ ಮರೆಯಾಗುತ್ತವೆ. ಈ ಮರೆಯಲಾಗದ ಘಟನೆಗಳನ್ನು ದಾಖಲು ಮಾಡದಿದ್ದರೆ ಅವು ಇತಿಹಾಸದ ಗರ್ಭದಲ್ಲಿ ಸಂಪೂರ್ಣ ವಾಗಿ ಮರೆಯಾಗಿ ಹೂತುಹೋಗುವ ಸಾಧ್ಯತೆಗಳು ಇಲ್ಲದಿಲ್ಲ. ನಾಳಿನ ಜನಾಂಗಕ್ಕೆ ಅವು ಅಗತ್ಯವಾಗಿರುವದರಿಂದಲೇ ಅವುಗಳನ್ನು ದಾಖಲಿಸುವದು ಅಗತ್ಯ.
ಪ್ರತಿಯೊಬ್ಬರ ಜೀವನವೂ ಒಂದು ಕಾದಂಬರಿಯೇ. ಹರಿಗೋಲಿಗೆ ಸ್ವಾತಂತ್ರ್ಯವಿಲ್ಲ. ಕಾಲಪ್ರವಾಹ ನಡೆಸಿದಂತೆ ಸಾಗಲೇಬೇಕು. ಹರಿಗೋಲು ಎತ್ತಸಾಗುತ್ತದೆ ಎಂದು ಹೇಳಲಾಗದು. ಮುಂದಿನ ಕ್ಷಣ ಏನಾಗುತ್ತದೆಯಂದು ಊಹಿಸಲು ಸಾಧ್ಯವಿಲ್ಲ. ಜೀವನವೆಂಬುದು ಆಟದ ಗೊಂಬೆ, ಸೂತ್ರದಂತೆ ಯಾವುದೋ ಶಕ್ತಿ ಆಡಿಸುತ್ತಲೇ ಇರುವದು. ನಮ್ಮ ಬದುಕು ಹಾಯಿ ಕಟ್ಟಿದ ದೋಣಿಯಲ್ಲ! ಹರಿಗೋಲು. ಒಂದು ಕಡೆ ವಿದ್ಯೆ ಕಲಿತವರು ಬದುಕಿಗಾಗಿ ಚದುರಿ ಹೋಗುವದು ಸಹಜ. ಜೀವನದಲ್ಲಿ ಮತ್ತೆ ಸಿಗುತ್ತಾರಿಲ್ಲವೋ, ಅವರ ಸುಖದುಃಖಗಳು ನಮಗೆ ತಿಳಿಯುವವೋ ಇಲ್ಲವೋ, ಆದರೂ ಕೂಡಿ ಕಲಿತ ವಿದ್ಯೆ ಆ ನೆನಪು ಮಾಸದು. ಅಲ್ಲೇ ಪ್ರೀತಿ ಬೆಳೆದು ವಿವಾಹವಾದವರೂ ಇದ್ದಾರೆ! ಕಾಲದ ಪ್ರಯಾಣ ಸಾಗುತ್ತಲೇ ಇರುತ್ತದೆ. ಕೂಡುವದು, ಬೇರಾಗುವದು ಸಹಜ. ಅದಕ್ಕೆ ಕಾರಣವಾಗಿ ಕಾಲವೆನ್ನಿ, ಅದೃಷ್ಟವೆನ್ನಿ, ಹಣೆಯಬರಹವೆನ್ನಿ. ಆದರೆ ಪ್ರಯಾಣ ಮುಗಿದ ತಕ್ಷಣ ಬದುಕೂ ನಿಂತು ಹೋಗಬಹುದು. ಆದರೆ ಜೊತೆಗೆ ಓದಿದ ಸಹಪಾಠಿಗಳು, ಗೆಳೆಯ, ಗೆಳತಿಯರು ಎದುರು ಬಂದಾಗ ಕರುಳು ಹಿಂಡುವದು, ಮಾತು ಮೌನ ತಳೆಯುವದು. ಸ್ನೇಹವೆಂಬುದು ಜೀವನದಲ್ಲಿ ಮರೆಯಲಾರದ ಕೊಂಡಿ ಎಂದು ಹೇಳಬಹುದು.
ಶೈಶವ ಅವಸ್ಥೆಯಿಂದ ಪದವಿ ಶಿಕ್ಷಣದ ವರೆಗೆ ಮಗುವಿನ ಜ್ಞಾನದ ಪಯಣ. ಮಗುವಿನ ಮನಸು ಮುಗ್ಧ. ಆದರೆ ಅದು ತನ್ನ ಸುತ್ತಲಿನ ಪರಿಸರ ಜಗತ್ತನ್ನು ಕುತೂಹಲದಿಂದ ಗಮನಿಸುತ್ತಲೇ ಇರುತ್ತದೆ. ಮಗುವಿನ ಮಾನಸಿಕ ಪಾತಳಿಯೂ ಸ್ನಿಗ್ಧ ಮಣ್ಣಿನ ಮುದ್ದೆ. ಅದಕ್ಕೆ ನೀವು ಯಾವ ರೂಪ ಯಾವ ಆಕಾರ ಕೊಡುತ್ತೀರೋ ಆಯಾ ಮೂರ್ತ ರೂಪ ತಾಳುತ್ತದೆ. ಶಿಶು ಮನಃಶಾಸ್ತ್ರ. Child psychocology ಪ್ರಕಾರ.ಹುಟ್ಟಿನಿಂದ ಏನೂ ಆಗಿರದ ಮಗುವು ಅದಕ್ಕೆ ನೀವು ಯಾವ ಸಂಸ್ಕೃತಿ ಸಂಸ್ಕಾರಗಳನ್ನು ದಯಪಾಲಿಸುತ್ತೀರೋ ಅದನ್ನು ಮೈಗೂಡಿಸಿಕೊಂಡು ಮಗು ಬೆಳೆಯುತ್ತದೆ. ನೀವು ಕೊಡುವ ಸಂಸ್ಕೃತಿ ಸಂಸ್ಕಾರವನ್ನು ಪಡೆಯುತ್ತದೆ. ಹುಟ್ಟಿನಿಂದ ಯಾರೂ ದಡ್ಡರಲ್ಲ. ಆದರೆ ಮುಗ್ಧತೆ ಮಾತ್ರ ಇರುತ್ತದೆ.
ದೋಷವಿರುವುದು ಮಗುವಿನಲ್ಲಿ ಅಲ್ಲ ನೀವು ಬೆಳೆಸುವ ರೀತಿಯಲ್ಲಿ. ಬಾಲ ಪ್ರತಿಭೆಗಳನ್ನು ಗಮನಿಸಿರಿ. ದೊಡ್ಡವರು ಆಶ್ಚರ್ಯ ಪಡುವ ರೀತಿಯಲ್ಲಿ ತಮ್ಮ ಪ್ರತಿಭೆ ಪ್ರದರ್ಶಿಸುತ್ತವೆ. ಕೆಲವರಲ್ಲಿ ಬಹುಮುಖ ಪ್ರತಿಭೆ ಇರುತ್ತದೆ. ಕಾರಣ ನಮ್ಮ ಕೌಟುಂಬಿಕ ಹೊಣೆಗಾರಿಕೆಯಲ್ಲಿಯ ದೌರ್ಬಲ್ಯಕ್ಕೆ ಮಗುವಿನ ಭವಿಷ್ಯ ಹಾಳು ಗೆಡವಬಾರದು. ಇನ್ನೂ ಹೆಣ್ಣು ಮಗುವಿನ ವಿಷಯದಲ್ಲಿ ಕೂಡ ಈ ತಾತ್ಸಾರ ಅಸಡ್ಡೆ ಸಲ್ಲದು. ವೇದ
ಉಪನಿಷತ್ತುಗಳ ಕಾಲದಿಂದಲೂ ಸ್ತ್ರೀ ಪ್ರಜ್ಞಾವಂತೇ ಮತ್ತು ಪ್ರತಿಭಾವಂತೆ. ಗಾರ್ಗಿ, ಮೈತ್ರೇಯಿ, ಲೋಪಾಮುದ್ರೆ ಮುಂತಾದವರೆಲ್ಲ ವೇದ ಶಾಸ್ತ್ರ ಪಾರಂಗತರು.
ಸ್ತ್ರೀ ವಿದ್ಯೆ ಲಲಿತ ಕಲೆಗಳ ಅಧೀಕೃತ ಪ್ರತಿನಿಧಿ. ವಿದ್ಯಾಧರೆ. ಪ್ರಜ್ಞಾ ಪ್ರತಿಭಾ ಕೀರ್ತಿಗಳೇ ಸ್ತ್ರೀ ವಾಚಕ. ಹೀಗಿರುವಾಗ ನಾವೇಕೆ ಸ್ತ್ರೀ ಶಿಶುವಿನ ಪ್ರತಿಭೆ ಪ್ರಗತಿಯನ್ನು ಕುಂಠಿತಗೊಳಿಸಬೇಕು. ಅದು ಕೂಡದು. ಆಯಾ ಕಾಲದಲ್ಲೇ ಅತ್ಯಂತ ಸಾಂಪ್ರದಾಯಿಕ ನಿಷ್ಟುರ ಬ್ರಾಹ್ಮಣ ಮನೆತನ ಸ್ತ್ರೀ
ಶ್ರೀಮತಿ ಡಾ. ಆನಂದಿ ಗೋಪಾಲರ ಚರಿತ್ರೆ ಎಲ್ಲರಿಗೂ ಸ್ಪೂರ್ತಿದಾಯಕ. ಆಯಾ ಕಾಲದಲ್ಲಿ ವಿದೇಶಕ್ಕೆ ಹೋಗಿ ವೈದ್ಯಕೀಯ ವ್ಯಾಸಂಗ ಮಾಡಿ ಭಾರತಕ್ಕೆ ಬಂದು ವೈದ್ಯ ವೃತ್ತಿ ಮಾಡಿದ ಮೊದಲ ಭಾರತೀಯ ಮಹಿಳೆ ಡಾ. ಆನಂದಿ ಗೋಪಾಲ್.
ಮೇಡಂ ಕ್ಯೂರಿ ರೇಡಿಯಂ ಸಂಶೋಧನೆಯಿಂದ ನೊಬೆಲ್ ಪುರಸ್ಕಾರ ಪಡೆದದ್ದಲ್ಲದೆ ವೈದ್ಯಕೀಯ ಲೋಕದಲ್ಲಿ ರೇಡಿಯೋಲೋಜಿಗೆ ಸಹಕಾರಿಯಾಗಲು ನೆರವಾಗಿ ಕ್ಯಾನ್ಸರ್ ಟ್ರೀಟ್ಮೆಂಟ್ ಗೆ ಅನುಕೂಲವಾಗಿತ್ತು.
ಇದೀಗ astronomy Engineering science and technology ಯಲ್ಲಿ ತಮ್ಮ ಪ್ರತಿಭೆಯನ್ನು ಸ್ತ್ರೀಯರು ತೋರುತ್ತಿದ್ದಾರೆ. ಕ್ರೀಡೆಗಳಲ್ಲೂ ಅಂತರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿ ಪಡೆದಿದ್ದಾರೆ. ಪ್ರತಿಭೆ ವ್ಯಕ್ತಿಗತ, ವೈಯಕ್ತಿಕ. ಅದನ್ನು ದಮನಿಸಕೂಡದು. ಮೊದಲಿನಂತೆ ಈಗ ಪರಿಸ್ಥಿತಿ ಇಲ್ಲ. ಸ್ತ್ರೀ ಹೊಸ್ತಿಲ ಒಳಗೆ ಕೂಡದೆ ಜಾಗತಿಕ ಮಟ್ಟದಲ್ಲಿ ತನ್ನ ಪ್ರತಿಭೆ ತೋರಿದ್ದಾಳೆ. ಕಾರ್ಯಕ್ಷಮತೆಯಲ್ಲಿ ಅಚ್ಚು ಕಟ್ಟು, ತಾಳ್ಮೆಯಿದೆ. ಸಂಚಿ ಹೊನ್ನಮ್ಮ, ಹೇಳವನ ಕಟ್ಟಿ ಗಿರಿಯಮ್ಮರಂತಹ ಸಾಂಗತ್ಯದ ಕವಿಯಿತ್ರಿಯರು, ಕ್ರಿಸ್ತೀನಾ ರೊಸೆಟ್ಟೀ, ಪರ್ಲ್ ಬಕ್,ಸರೋಜಿನಿ ನಾಯಿಡು ಅವರಂತಹ ಕವಯಿತ್ರಿಯರು ಗಮನ ಸೆಳೆಯುತ್ತಾರೆ.
ಚಾವ್ಲಾ ಸುನೀತಾ ವಿಲಿಯಮ್ಸ್ ರಂತಹ ಗಗನಯಾನಿಗಳ ಧೈರ್ಯ ಮೆಚ್ಚಬೇಕು. ಇಂದು ಸ್ತ್ರೀ ಪುರುಷ ರಿಬ್ಬರಿಗೂ ಪ್ರತಿಭೆ ಅವಕಾಶಗಳಲ್ಲಿ ಸರಿಸಮಾನ ಸ್ಥಾನ ಮಾನವಿದೆ. ಕಾರಣ ಬೆಳೆವ ಸಿರಿ ಮೊಳಕೆಯಲ್ಲಿ ನೋಡು ಎನ್ನುವಂತೆ ಮಗುವಿನ ಶೈಶವ ಶಿಕ್ಷಣ ಪ್ರತಿಭೆಯನ್ನು ಕಡೆಗಣಿಸಬಾರದು. ಪ್ರಬುದ್ಧತೆಯಲ್ಲಿ ಅದಕ್ಕೆ ಮಾರ್ಗದರ್ಶನವೂ ಅಗತ್ಯ ಸ್ವತಂತ್ರ ನಿರ್ಧಾರಗಳು ಅವಶ್ಯ.
ಹೀಗೆ ಮಗುವು ತನ್ನ ಶೈಶವ ಅವಸ್ತೆಯಿಂದ ವಯೋಮಾನ ಪ್ರಬುದ್ಧತೆಯ ವರೆಗಿನ ಶೈಕ್ಷಣಿಕ ಮತ್ತು ಬಾಳಿನ ಪಯಣವನ್ನು ಅತ್ಯಂತ ಯಶಸ್ವಿಯಾಗಿ ನಡೆಸಿಕೊಂಡು ಬರುವ ನಿಟ್ಟಿನಲ್ಲಿ ಅತ್ಯುತ್ತಮ ವಾತಾವರಣ ನಿರ್ಮಿಸಿಕೊಡುವುದು ಪಾಲಕರ ಮತ್ತು ಶಿಕ್ಷಕರ ಹೊಣೆಗಾರಿಕೆಯಾಗಿದೆ. ಈ ನಿಟ್ಟಿನಲ್ಲಿ ಅಲಕ್ಷ್ಯ ಸಲ್ಲ, ಅದು ಅಕ್ಷಮ್ಯ ಅಪರಾಧ.
Not failure but low aim is crime.
ಇನ್ನು ಪ್ರಥಮ ನೋಟದ ಪ್ರೇಮ ಪ್ರಕರಣವು ಪಡ್ಡೆ ವಯಸ್ಸಿನಲ್ಲಿ ಸಾಧುವಲ್ಲ. ಜೀವನದ ಮೌಲ್ಯಗಳನ್ನು ಅರ್ಥೈಸಿಕೊಂಡ ಪ್ರವರ್ಧಮಾನಕ್ಕೆ ಬಂದು ಜವಾಬ್ದಾರಿಯುತ ನೈತಿಕ ನಡವಳಿಕೆಯನ್ನು ಅನುಷ್ಠಾನಗೊಳಿಸಿ ಬಳಿಕವಷ್ಟೇ ತೀರ್ಮಾನಕ್ಕೆ ಬರುವ ನಿರ್ಧರಿಸುವ ಸ್ವಾತಂತ್ರ್ಯ ಖಂಡಿತ ಪ್ರವರ್ಧಮಾನಕ್ಕೆ ಬಂದ ಜವಾಬ್ದಾರಿ ವ್ಯಕ್ತಿಗಳಿಗೆ ಖಂಡಿತಾ ಇದೆ. ಈ ನಿಟ್ಟಿನಲ್ಲಿ ಅವರಿಗೆ ಸ್ವತಂತ್ರ ಯೋಚನೆಯೂ ವಿವೇಕವೂ ಅವಶ್ಯ. ಗಡಿಬಿಡಿ ದುಡುಕಿನ ನಿರ್ಧಾರಗಳು ಪಶ್ಚಾತಾಪಕ್ಕೆ ಕಾರಣವಾಗುತ್ತವೆ.
ವಿಲೋಮ ಪ್ರೇಮ ಪ್ರಕರಣಗಳು ಅಂದರೆ ಸರಿಸಮಾನ ಸ್ಥಾನಮಾನ, ಬೌದ್ಧಿಕ ಸಾಮಾಜಿಕ ಸಾಂಸ್ಕೃತಿಕ ನೆಲೆಗಟ್ಟು ಇಲ್ಲದ ಪ್ರೇಮ ಪ್ರಕರಣಗಳು ದುರಂತವೆನಿಸುತ್ತವೆ.
- ಗಿರಿಜಾ ಎಸ್. ದೇಶಪಾಂಡೆ ಬೆಂಗಳೂರು
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ