ಆ ಪುಟ್ಟ ಯುವತಿ ತನ್ನ ತಾಯಿಯೊಂದಿಗೆ ನಾವು ನಿಜವಾಗಿಯೂ ಜೀವನದಲ್ಲಿ ಸ್ನೇಹಿತರನ್ನು ಹೊಂದಿರಬೇಕೇ? ಎಂದು ಕೇಳಿದಳು.
ಅದಕ್ಕೆ ಉತ್ತರವಾಗಿ ಆಕೆಯ ತಾಯಿ ಖಂಡಿತವಾಗಿಯೂ ಬೇಕು. ಜೀವನ ನಾವು ತಿಳಿದುಕೊಂಡಿದ್ದಕ್ಕಿಂತ ಹೆಚ್ಚು ಕಠಿಣವಾಗಿದೆ. ನಮ್ಮ ನೋವಿಗೆ ಸಾಂತ್ವನದ ಮುಲಾಮು ಸವರುವ,ನಮ್ಮ ಆರ್ತನಾದಕ್ಕೆ ಕಿವಿಯಾಗುವ, ನಮ್ಮ ಕಷ್ಟಗಳಿಗೆ ಹೆಗಲು ಕೊಡುವ ಸ್ನೇಹಿತರು ಖಂಡಿತವಾಗಿಯೂ ಜೀವನದಲ್ಲಿ ನಮ್ಮೊಂದಿಗೆ ಇರಬೇಕು. ಅವರು ನಮ್ಮೊಂದಿಗೆ ಅತ್ಯಂತ ಸರಳವಾಗಿ ವರ್ತಿಸಬೇಕು. ಯಾವುದೇ ರೀತಿಯಲ್ಲಿಯೂ ನಮ್ಮನ್ನು ಜಡ್ಜ್ ಮಾಡದೆ ನಮ್ಮ ಕಷ್ಟ ಸುಖಗಳಲ್ಲಿ ಜೊತೆಗಿರಬೇಕು. ಎಂದು ತಾಯಿ ಉತ್ತರಿಸಿದಳು.
ಮಗಳು "ಹಾಗಾದರೆ ಬದುಕಿನಲ್ಲಿ ಸ್ನೇಹದ ನಟನೆ ಮಾಡುವವರು ವೈರಿಗಿಂತ ಹೆಚ್ಚು ಅಪಾಯಕಾರಿ ಎಂದು ನೀನು ಹೇಳುವುದು ಏಕೆ? " ಎಂದು ಕೇಳಿದಳು.
ಮುಖದಲ್ಲಿ ನಸುನಗು ಮೂಡಿಸಿದ ತಾಯಿ "ನಿನ್ನ ಶತ್ರುಗಳನ್ನು ನೀನೆಂದೂ ಹತ್ತಿರಕ್ಕೆ ಬಿಟ್ಟುಕೊಳ್ಳುವುದಿಲ್ಲ, ಅವರಿಗೆ ನಿನ್ನ ಕುರಿತ ರಹಸ್ಯಗಳು ಗೊತ್ತಾಗುವುದಿಲ್ಲ. ನೀನು ಹೀಗೆಯೇ ಎಂದು ಅವರು ನಿನ್ನನ್ನು ಅರ್ಥೈಸಿಕೊಳ್ಳಲು ಸಾಧ್ಯವಾಗುವುದಿಲ್ಲ... ಆದರೆ ಸ್ನೇಹದ ನಟನೆ ಮಾಡುವವರು ನಿನ್ನ ಜೊತೆಗಿದ್ದು ಕೂಡ ನಿನ್ನ ನಂಬಿಕೆಯನ್ನು ಮುರಿಯಬಲ್ಲರು. ನಿನ್ನೆಲ್ಲಾ ರಹಸ್ಯಗಳ ಅರಿವು ಅವರಿಗಿರುತ್ತದೆ. ನಿನ್ನ ಕನಸುಗಳು ಕೂಡ ಅವರಿಗೆ ಗೊತ್ತು. ಮನಸ್ಸು ಮಾಡಿದರೆ ನಿನ್ನಂತರಂಗದ ಯಾವ ಭಾವವನ್ನು ಕಲಕಬಲ್ಲೆ, ಮನಸ್ಸಿಗೆ ಘಾಸಿ ಮಾಡಬಲ್ಲೆ ಎಂಬ ಅರಿವಿರುವ ಕಪಟಿ ಸ್ನೇಹಿತರು ನಿನ್ನ ಬೆನ್ನಿಗೆ ಯಾವತ್ತೋ ಒಂದು ದಿನ ಚೂರಿ ಹಾಕಬಲ್ಲರು" ಎಂದು ಉತ್ತರಿಸಿದಳು.
ಹಾಗಾದರೆ ನನ್ನ ಸುತ್ತ ಇರುವ ಕಪಟಿ ಸ್ನೇಹಿತರನ್ನು ನಾನು ಹೇಗೆ ದೂರೀಕರಿಸಬಹುದು ಎಂದು ಮಗಳು ಕೇಳಿದಾಗ ತಾಯಿ ಒಂದೆರಡು ನಿಮಿಷಗಳ ಮೌನದ ನಂತರ ದೀರ್ಘವಾದ ನಿಟ್ಟುಸಿರನ್ನು ಬಿಟ್ಟು ನಂತರ
" ಒಂದು ಪುಟ್ಟ ಉದ್ಯಾನವನವನ್ನು ನೀನು ನಿರ್ವಹಿಸುವಾಗ ನಿನಗೆ ಅಲ್ಲಿ ಅತ್ಯಂತ ಕಡಿಮೆ ಪ್ರಮಾಣದಲ್ಲಿ ಹಾವು, ಚೇಳು, ಇಲಿಗಳ ಕಾಟ ಅನುಭವವಾಗುತ್ತದೆ. ಪುಟ್ಟ ಉದ್ಯಾನದ ಕಸವನ್ನು ನಿರ್ವಹಿಸುವುದು,ಗಿಡ ಮರಗಳನ್ನು ಸುಂದರವಾಗಿ, ಕ್ರಮಬದ್ಧವಾಗಿ ಕತ್ತರಿಸುವುದು, ಔಷಧಿ ಗೊಬ್ಬರ ಕೊಡುವುದು ಹೂಗಳನ್ನು ಹಣ್ಣುಗಳನ್ನು ನಾಜೂಕಾಗಿ ಕಿತ್ತು ಬಳಸುವುದು ಸರಳ ಮತ್ತು ಸುಲಭವಾಗಿರುತ್ತದೆ.
ಅಂತೆಯೇ ನಿನ್ನ ಸ್ನೇಹಿತರ ಬಳಗವನ್ನು ಚಿಕ್ಕದಾಗಿ ಇಟ್ಟುಕೊಂಡರೆ ನೀನು ಅತ್ಯಂತ ಕಡಿಮೆ ತೊಂದರೆಗಳನ್ನು ಅನುಭವಿಸುವೆ. ನಿಜವಾದ ಸ್ನೇಹಿತರೊಂದಿಗಿನ ಬಾಂಧವ್ಯ ನಿನ್ನನ್ನು ಸದಾ ಸಂತೋಷ, ನೆಮ್ಮದಿಗೆ ಈಡು ಮಾಡಿದರೆ ಕಪಟಿ ಸ್ನೇಹಿತರು ನಿಮ್ಮ ಒಳ್ಳೆಯತನದ ಲಾಭವನ್ನು ಪಡೆಯಬಹುದು. ನೀವು ಬಳಸಲ್ಪಟ್ಟ ಭಾವವನ್ನು ಹೊಂದಲು ಕಾರಣರಾಗಬಹುದು.
ನಾನು ಕೂಡ ಒಂದೊಮ್ಮೆ ಅತಿಹೆಚ್ಚಿನ ಸ್ನೇಹ ಬಳಗವನ್ನು ಹೊಂದಿದ್ದೆ.. ಸ್ನೇಹಿತರ ಸಂಖ್ಯೆ ಕಡಿಮೆ ಇದ್ದಷ್ಟು ಉತ್ತಮ ಎಂಬುದು ಅರಿವಾಗಿ ನಿಧಾನವಾಗಿ ಆ ಎಲ್ಲ ಬಂಧಗಳು ಕಳಚಿಕೊಂಡು ಇದೀಗ ಕೆಲವೇ ಸ್ನೇಹಿತರ ಸಂಗದಲ್ಲಿ ಆತ್ಮೀಯತೆ, ನೆಮ್ಮದಿ, ತೃಪ್ತಿ ಎಲ್ಲವನ್ನು ಕಂಡುಕೊಂಡಿದ್ದೇನೆ.
ನಾವು ಹೇಳದೆಯೇ ನಮ್ಮ ನೋವನ್ನು ಅರ್ಥ ಮಾಡಿಕೊಳ್ಳುವ, ನಾವು ಕರೆಯುವ ಮುನ್ನವೇ ನಮ್ಮ ಕಷ್ಟಕ್ಕೆ ಹೆಗಲಾಗುವ, ನಮ್ಮ ಮೌನದೊಳಗಿನ ಮಾತನ್ನು ಕೂಡ ಅರಿಯುವ, ನಮ್ಮ ಮುಖಕ್ಕೆ ಹೊಡೆದಂತೆಯೇ ನಮ್ಮ ತಪ್ಪುಗಳನ್ನು ಹೇಳಿ ನಮ್ಮನ್ನು ತಿದ್ದಲು ಬಯಸುವ ಕೆಲವೇ ಕೆಲವು ಸ್ನೇಹಿತರು ಬದುಕನ್ನು ಅತ್ಯಂತ ಸುಂದರವಾಗಿ ಸುವರು. ಸ್ನೇಹಿತರ ಕ್ವಾಂಟಿಟಿಗಿಂತ, ಕ್ವಾಲಿಟಿ ಹೆಚ್ಚಿರಬೇಕು ಎಂಬ ಬದುಕಿನ ಸತ್ಯವನ್ನು ಅರಿತ ನನಗೆ ಕಪಟ ಸ್ನೇಹಿತರ ಜಾಲದಿಂದ ಹೊರಬೀಳಲು ಸಾಧ್ಯವಾಗಿದ್ದು ಇದೀಗ ಧ್ಯಾನಪೂರ್ವಕವಾಗಿ ನಾನು ಸ್ನೇಹಿತರನ್ನು ಆಯ್ದುಕೊಂಡಿದ್ದೇನೆ ಎಂದು ದೀರ್ಘವಾಗಿ ವಿವರಣೆ ಕೊಟ್ಟಳು.
ಒಳ್ಳೆಯ ಸ್ನೇಹಿತರು ನಮಗೆ ಬದುಕನ್ನು ಹೇಗೆ ನಡೆಸಬೇಕು ಎಂಬುದಕ್ಕೆ ಉದಾಹರಣೆಯಾಗಿ ನಿಂತರೆ, ಕಪಟಿಗಳಿಂದ ಹೇಗೆ ದೂರವಿರಬೇಕು ಎಂಬ
ಅರಿವು ಖಂಡಿತವಾಗಿಯೂ ನಮ್ಮ ಬದುಕಿನಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತದೆ.
ಆದ್ದರಿಂದ ಸ್ನೇಹಿತರನ್ನು ಆಯ್ಕೆ ಮಾಡಿಕೊಳ್ಳುವಾಗ ಎಚ್ಚರವಿರಲಿ..... ಚೂಸ್ ವೈಸ್ ಲಿ
-ವೀಣಾ ಹೇಮಂತ್ ಗೌಡ ಪಾಟೀಲ್ ಮುಂಡರಗಿ ಗದಗ್
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ