ಉಜಿರೆ ಎಸ್‌ಡಿಎಂ ಸ್ನಾತಕೋತ್ತರ ಕೇಂದ್ರದಲ್ಲಿ ಎಐ ಕುರಿತ ಕಾರ್ಯಾಗಾರ

Upayuktha
0


ಉಜಿರೆ: ಉಜಿರೆ ಎಸ್‌ಡಿಎಂ ಸ್ನಾತಕೋತ್ತರ ಕೇಂದ್ರದಲ್ಲಿ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದಿಂದ ಮಾಧ್ಯಮ ಕ್ಷೇತ್ರದಲ್ಲಿ ಕೃತಕ ಬುದ್ಧಿಮತ್ತೆ ಎಂಬ ವಿಷಯಾಧಾರಿತ ಒಂದು ದಿನದ ಕಾರ್ಯಾಗಾರವನ್ನು ಹಮ್ಮಿಕೊಳ್ಳಲಾಯಿತು.


ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡಿದ ಯುಎಸ್‌ಎಯ ಥೆಟಾ ಡೈನಾಮಿಕ್ಸ್‌ನಲ್ಲಿ ಎಐ ಮತ್ತು ಸೈಬರ್‌ ಸೆಕ್ಯೂರಿಟಿ ವಿಭಾಗದ ನಿರ್ದೇಶಕ ಡಾ. ಉದಯಶಂಕರ ಪುರಾಣಿಕ್‌, ಮಾಧ್ಯಮ ಕ್ಷೇತ್ರದಲ್ಲಿ ಆರ್ಟಿಫಿಶಿಯಲ್‌ ಇಂಟಲಿಜೆನ್ಸ್‌ (ಎಐ) ಕಲ್ಪನೆಯಾಗಿ ಉಳಿಯದೇ ವರ್ತಮಾನದ ಸತ್ಯವಾಗಿದೆ. ಸೃಜನಾತ್ಮಕ ಕೆಲಸಗಳಲ್ಲಿ, ತಂತ್ರಜ್ಞಾನ ಆಧಾರಿತ ಕೆಲಸಗಳು ಮತ್ತು ಮಹತ್ವದ ನಿರ್ಧಾರ ತೆಗೆದುಕೊಳ್ಳುವಲ್ಲಿ ಎಐಯ ವ್ಯಾಪಕ ಬಳಕೆಯಾಗುತ್ತಿದೆ. 


ಎಐ ನೇರವಾಗಿ ಮಾಧ್ಯಮಗಳ ಕಾರ್ಯನಿರ್ವಹಣೆಯಲ್ಲಿ ಬಳಕೆಯಾಗದೆ ಇದ್ದರೂ ಎಐ ಬೆಂಬಲಿತ ತಾಂತ್ರಿಕತೆಗಳು ಬಳಕೆಯಲ್ಲಿವೆ. ಪತ್ರಕರ್ತರು ತಮ್ಮ ಕೆಲಸಗಳನ್ನು ಸರಳೀಕೃತಗೊಳಿಸಲು ಇವುಗಳು ಸಹಾಯಕವಾಗಿವೆ. ಮಾಹಿತಿ ಮತ್ತು ದತ್ತಾಂಶ ಸಂಗ್ರಹಣೆಯಲ್ಲಿ ಎಐ ಉಪಯುಕ್ತವಾಗಿದೆ. ಹೆಚ್ಚಿನ ಬಳಕೆಗಾಗಿ ಎಐ ಅನ್ನು ಅಳವಡಿಸಬಹುದಾದ ಸಾಧ್ಯತೆಗಳನ್ನು ಅವಲೋಕಿಸಬೇಕಿದೆ ಎಂದರು.


ಮಾಧ್ಯಮಗಳು ಓದುಗ ಸ್ನೇಹಿ ಕಾರ್ಯವಿಧಾನಗಳನ್ನು ರೂಪಿಸುವಲ್ಲಿ ಎಐ ಪಾತ್ರ ದೊಡ್ಡದಿದೆ. ಉದ್ಯೋಗ ನಷ್ಟವಾಗುವ ಆತಂಕದ, ಖಾಸಗಿ ಮಾಹಿತಿಗಳು ಮತ್ತು ದತ್ತಾಂಶಗಳ ಸೋರಿಕೆಯಂತಹ ಗಂಭೀರ ವಿಷಯಗಳು ಎಐ ಬಳಕೆಗೆ ಸಂಬಂಧಿಸಿ ಚರ್ಚೆಯಲ್ಲಿದೆ. ಯೋಜಿತ ಕಾರ್ಯವಿಧಾನಗಳ ಮೂಲಕ ಎಐ ಅನ್ನು ವೃತ್ತಕ್ಷೇತ್ರದಲ್ಲಿ ಅಳವಡಿಕೊಂಡಾಗ ಈ ಭಯವನ್ನು ಮೀರಬಹುದು ಎಂದು ಅಭಿಪ್ರಾಯಪಟ್ಟರು.


ಕಾರ್ಯಾಗಾರವನ್ನು ಉದ್ದೇಶಿಸಿ ಮಾತನಾಡಿದ ಕಾಲೇಜಿನ ಪ್ರಾಂಶುಪಾಲ ಡಾ. ಬಿ.ಎ ಕುಮಾರ ಹೆಗ್ಡೆ, ಮಾಧ್ಯಮಗಳ ಕಾರ್ಯವಿಧಾನದಲ್ಲಿ ತೀವ್ರತರವಾದ ಬದಲಾವಣೆಗಳು ಘಟಿಸುತ್ತಿರುತ್ತವೆ. ಇತ್ತೀಚಿನ ಬೆಳವಣಿಗೆಗಳು ಹೊಸ ಅರಿವಿಗೆ ತೆರೆದುಕೊಳ್ಳಬೇಕಾದ ಅವಶ್ಯಕತೆಯನ್ನು ಉಂಟುಮಾಡಿದೆ. ಎಐ ಎಲ್ಲ ರಂಗದಲ್ಲಿ ತನ್ನ ಪ್ರಭಾವ ಬೀರುವ ಸಂದರ್ಭದಲ್ಲಿ ಅದು ಮನುಷ್ಯನ ಸಂವೇದನೆಗಳ ವ್ಯಾಪ್ತಿಯಲ್ಲಿ ಇರುವಂತೆ ನೋಡಿಕೊಂಡಾಗ ಮಾತ್ರ ಆರೋಗ್ಯಕರ ಸಮಾಜ ನಿರ್ಮಾಣ ಸಾಧ್ಯ ಎಂದು ಹೇಳಿದರು.


ವಿದ್ಯಾರ್ಥಿಗಳಿಗೆ ಮಾಧ್ಯಮದಲ್ಲಿ ಬಳಕೆಯಾಗುತ್ತಿರುವ ಎಐ ತಂತ್ರಾಂಶಗಳ ಕುರಿತ ಪ್ರಾಯೋಗಿಕ ತರಬೇತಿಯನ್ನು ಸುವರ್ಣ ನ್ಯೂಸ್‌ ವಾಹಿನಿಯ ಹಿರಿಯ ಉಪಸಂಪಾದಕ ಚೇತನ್‌ ಕುಮಾರ್‌ ನೀಡಿದರು. ಪ್ರಸ್ತುತ ಕನ್ನಡ ಸುದ್ದಿ ವಾಹಿನಿಗಳು ತಮ್ಮ ಕಾರ್ಯನಿರ್ವಹಣೆಯಲ್ಲಿ ಉಪಯೋಗಿಸುತ್ತಿರುವ ಎಐ ಆಧಾರಿತ ತಂತ್ರಾಂಶಗಳನ್ನು ಪರಿಚಯಿಸಿ ಅವುಗಳ ಬಳಕೆಯ ವಿಧಾನವನ್ನು ವಿದ್ಯಾರ್ಥಿಗಳಿಗೆ ವಿವರಿಸಿದರು.


ಕಾರ್ಯಕ್ರಮದಲ್ಲಿ ಸ್ನಾತಕೋತ್ತರ ಕೇಂದ್ರದ ಡೀನ್‌ ಡಾ. ವಿಶ್ವನಾಥ ಪಿ, ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗ ಮುಖ್ಯಸ್ಥ ಡಾ. ಭಾಸ್ಕರ ಹೆಗಡೆ ಉಪಸ್ಥಿತರಿದ್ದರು. 



Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top