ವೃತ್ತಿಯಲ್ಲಿ ಸಾಫ್ಟ್ ವೇರ್ ಇಂಜಿನಿಯರ್, ಪ್ರವೃತ್ತಿಯಲ್ಲಿ ಯಕ್ಷಗಾನ ಕಲಾವಿದರಾಗಿ ಇರುವೈಲು ಮೇಳದ ಸಂಘಟನೆಯ ಮಾಡಿ ಯಕ್ಷಗಾನ ರಂಗದಲ್ಲಿ ತಮ್ಮದೇ ಛಾಪು ಮೂಡಿಸುತ್ತಿರುವ ಕಲಾವಿದ ಪ್ರಜ್ವಲ್ ಪೆಜತ್ತಾಯ ಇರುವೈಲು. ದಕ್ಷಿಣ ಕನ್ನಡ ಜಿಲ್ಲೆಯ ಇರುವೈಲಿನ ರಾಮಕೃಷ್ಣ ಪೆಜತ್ತಾಯ ಹಾಗೂ ಶ್ರೀಮತಿ ರಾಮಕೃಷ್ಣ ಪೆಜತ್ತಾಯ ಇವರ ಮಗನಾಗಿ 25 ಜೂನ್ 1990ರಂದು ಜನನ. ಮಂಗಳೂರಿನ Everi India Pvt Ltd ಎಂಬ ಸಂಸ್ಥೆಯಲ್ಲಿ ಉದ್ಯೋಗವನ್ನು ಮಾಡುತ್ತಿದ್ದಾರೆ.
ಯಕ್ಷಗಾನ ಗುರುಗಳು:- ಗಣೇಶ್ ಕೊಲೆಕಾಡಿ ಭಾಗವತಿಕೆ, ಛಂದಸ್ಸು, ಅರ್ಥಗಾರಿಕೆಯ ಗುರುಗಳು. ಶೇಖರ್ ಶೆಟ್ಟಿಗಾರ್ ಕಿನ್ನಿಗೋಳಿ, ಹರೀಶ್ ಕುಲಾಲ್ ಇರುವೈಲು ನಾಟ್ಯ ಗುರುಗಳು.ಉಮೇಶ್ ಕುಪ್ಪೆಪದವು ಬಣ್ಣಗಾರಿಕೆಯ ಗುರುಗಳು.ಇರುವೈಲು, ಕಟೀಲು, ಸುಂಕದಕಟ್ಟೆ, ಮುಂಡ್ಕೂರು, ಸೂಡ, ಬಪ್ಪನಾಡು ಮೇಳದಲ್ಲಿ ತಿರುಗಾಟ ಮಾಡಿದ ಅನುಭವ. ಯಕ್ಷಗಾನ ಕ್ಷೇತ್ರದಲ್ಲಿ ಒಟ್ಟು 24 ವರ್ಷಗಳಿಂದ ಸೇವೆಯನ್ನು ಸಲ್ಲಿಸುತ್ತಿದ್ದಾರೆ ಪ್ರಜ್ವಲ್. ವಿಜಯ ವಿಭೂತಿ ಎಂಬ ಯಕ್ಷಗಾನ ಪ್ರಸಂಗವನ್ನು ಬರೆದಿರುತ್ತಾರೆ ಪ್ರಜ್ವಲ್.
ಯಕ್ಷಗಾನ/ತಾಳಮದ್ದಲೆ ಕ್ಷೇತ್ರದಲ್ಲಿ ಇನ್ನೂ ಅಂಬೆಕಾಲಿಡುವ ಕಲಾವಿದ ನಾನು. ಹಿರಿಯರು ಕೂಡ ವೇಷವನ್ನು ಮಾಡುತ್ತಾ ಮೇಳವನ್ನು ನಡೆಸುತ್ತ ಯಕ್ಷಮಾತೆಯ ಸೇವೆಯನ್ನು ಮಾಡುತ್ತಾ ಬಂದವರು.ನನಗೆ ಗೊತ್ತಿದ್ದ ಹಾಗೆ ನನ್ನ ತಂದೆ, ಅವರ ತಂದೆ (ರಾಜ ನಾರಾಯಣ ಪೆಜತ್ತಾಯ) ಇವರು ಯಕ್ಷಗಾನದಲ್ಲಿ ವೇಷವನ್ನು ಮಾಡುತ್ತಿದ್ದರು. ನನ್ನ ಅಜ್ಜನ ತಂದೆ (ರಾಮಕೃಷ್ಣ ಪೆಜತ್ತಾಯ) ಇವರು ಇರುವೈಲು ಮೇಳವನ್ನು ನಡೆಸುತ್ತಿದ್ದರು. ನಾನೂ ಕೂಡ ಎಳವೆಯಿಂದ ಇರುವೈಲು ದುರ್ಗಾಪರಮೇಶ್ವರಿ ಯಕ್ಷಗಾನ ಮಂಡಳಿಯಲ್ಲಿ ವೇಷಗಳನ್ನು ಮಾಡುತ್ತಾ, ದೇವರ ಸೇವೆಯನ್ನು ಮಾಡುತ್ತಾ ಬಂದಿದ್ದೇನೆ. ನಂತರ ಆಳ್ವಾಸ್ ಶಿಕ್ಷಣ ಸಂಸ್ಥೆಯಲ್ಲಿ ಪಿ.ಯು.ಸಿ ಮಾಡಲು ಬಂದು ಸೇರಿಕೊಂಡಾಗ ಯಕ್ಷಗಾನ ಲೋಕದ ಬಾಗಿಲು ಸಂಪೂರ್ಣವಾಗಿ ತೆರೆದುಕೊಂಡಿತು. ಗುರುಗಳಾದ ಶೇಖರ ಶೆಟ್ಟಿಗಾರರು ಕಟೀಲು ೩ನೇ ಗುಂಪಿನಲ್ಲಿದ್ದ ಕಾರಣ , ಅವರ ಮುಖೇನ ಕಟೀಲು ಮೇಳದಲ್ಲಿ ಭಾಗವತರಾದ ಕುರಿಯ ಗಣಪತಿ ಶಾಸ್ತ್ರೀಯವರ ನಿರ್ದೇಶನದಲ್ಲಿ ವೇಷ ಮಾಡುವ ಸೌಭಾಗ್ಯ ದೊರಕಿತು. ಪ್ರಸಕ್ತ ಮಯೂರ ವಾಹನ ಯಕ್ಷಗಾನ ನಾಟಕ ಸಭಾ, ಸೂಡ ಇದರ ಸದಸ್ಯನಾಗಿದ್ದೇನೆ.
ಬಣ್ಣದ ವೇಷ, ಕಿರೀಟ ವೇಷ, ನಾಟಕೀಯ ವೇಷಗಳಲ್ಲಿ ಪರಿಣತಿ ಹೊಂದಿದ್ದೇನೆ. ಕನ್ನಡ ಹಾಗೂ ತುಳು ಯಕ್ಷಗಾನ ಎರಡರಲ್ಲೂ ಪರಿಣತಿ ಹೊಂದಿದ್ದೇನೆ.ನಂತರದಲ್ಲಿ ಗುರುಗಳಾದ ಗಣೇಶ ಕೊಲೆಕಾಡಿಯವರಿಂದ ಭಾಗವತಿಗೆ, ಅರ್ಥಗಾರಿಕೆ ಹಾಗೂ ಛಂದಸ್ಸನ್ನು ಕಲಿತಿರುತ್ತೇನೆ. ವಿಜಯ ವಿಭೂತಿ ಎನ್ನುವ ಕಾಲ್ಪನಿಕ ಕನ್ನಡ ಪ್ರಸಂಗವನ್ನು ಬರೆದಿದ್ದೇನೆ. ಮುಂದಿನ ಪ್ರಸಂಗಗಳನ್ನು ಬರೆಯುತ್ತಿದ್ದೇನೆ.ಸಂಘಟಕನಾಗಿ ನಾನು, ಇರುವೈಲು ಮೇಳ ಒಂದು ಕಾಲದಲ್ಲಿ ಪೂರ್ಣ ಪ್ರಮಾಣದ ಮೇಳವಾಗಿದ್ದು , 6 ತಿಂಗಳು ನಿರಂತರ ತಿರುಗಾಟವಾಗುತ್ತಿದ್ದ ಮೇಳ. ಆದರೆ ಈಗ ಬಹಳ ಸೀಮಿತವಾಗಿ ಆಟಗಳು ಸಿಗುವುದರಿಂದ ಅಂದಿನ ಆಟಕ್ಕೆ ಬೇಕಾದ ಹಾಗೆ ಜನರನ್ನು ಸಂಘಟಿಸಿ ಆಟಗಳು ನಡೆಯುತ್ತಿದೆ. ಈಗ ಕೆಲವು ವರ್ಷಗಳಿಂದ ಮೇಳದ ಈ ಸಂಘಟನೆಯ ಹೊಣೆಗಾರಿಕೆಯನ್ನೂ ನಿರ್ವಹಿಸುತ್ತಿದ್ದೇನೆ.
ಒಂದು ಸಲ ದೇವಿ ಮಹಾತ್ಮ್ಯೇ ಪ್ರಸಂಗ, ನನ್ನದು ಮಧು/ಕೈಟಭರಲ್ಲಿ ಒಂದು ವೇಷ. ಮಹಿಷಾಸುರ ಮಾಡಲು ಈಗಿನ ದೊಡ್ಡ ಹೆಸರಿನ ಕಲಾವಿದರೊಬ್ಬರನ್ನು ಹೇಳಿದ್ದೆ, ಅವರೂ ಬರಲು ಒಪ್ಪಿಕೊಂಡಿದ್ದರು, ಆದರೆ ಸಮಯಕ್ಕಾಗುವಾಗ ಕೈಕೊಟ್ಟರು, ಕೊನೆಯ ನಿಮಿಷದವರೆಗೂ ಬರುತ್ತಿದ್ದೇನೆ ಎಂದು ಹೇಳಿ ಬರಲಿಲ್ಲ. ಕೊನೆಗೆ ಅಷ್ಟರವರೆಗೆ ಮಹಿಷಾಸುರ ಮಾಡಿ ಅಭ್ಯಾಸ ಇಲ್ಲದ ನಾನೇ ಮಹಿಷಾಸುರನೂ ಮಾಡಬೇಕಾಯಿತು. ಆದರೆ ಅದುವೆ ಮುಂದಕ್ಕೆ ಹಲವು ಮಹಿಷಾಸುರನ ಪಾತ್ರಗಳನ್ನು ಮಾಡಿ ಪ್ರಶಂಸೆಗೆ ಪಾತ್ರನಾಗಲು ಬುನಾದಿಯಾಯಿತು. ಹೀಗೆ ಹಲವು ಪಾತ್ರಗಳು ಬೇರೆ ಜನ ಇಲ್ಲ ಎನ್ನುವ ಕಾರಣಕ್ಕಾಗಿ ಮಾಡಿ, ಮುಂದೆ ಪ್ರಶಂಸೆಗೆ ಪಾತ್ರವಾಯಿತು.
ಎಲ್ಲಾ ವೇಷಗಳನ್ನೂ ಇಷ್ಟದಿಂದಲೇ ಮಾಡುವುದಾದರೂ, ಕೆಲವು ವೇಷಗಳು ಮನಸ್ಸಿಗೆ ಬಹಳಷ್ಟು ಮುದವನ್ನು ಕೊಡುತ್ತದೆ. ಅವುಗಳಲ್ಲಿ ಕೆಲವೆಂದರೆ, ದೇವಿ ಮಹಾತ್ಮೆಯ ಮಧು/ಕೈಟಭರು - ಕಾರಣ ಎಳವೆಯಲ್ಲಿ ಗುರುಗಳಾದ ಹರೀಶ ಕುಲಾಲರು, ಇರುವೈಲಿನಲ್ಲಿ ಮಕ್ಕಳ ಮೇಳವನ್ನು ಕಟ್ಟಿದ ನಂತರ ನಮಗೆ ತರಬೇತಿ ನೀಡಿದ ಮೊದಲ ಪ್ರಸಂಗವೇ ಮೇಧಿನಿ ನಿರ್ಮಾಣ, ಅದರಲ್ಲಿ ನಾನು ಕೈಟಭನ ಪಾತ್ರವನ್ನು ನಿರ್ವಹಿಸುತ್ತಿದ್ದೆ. ಹಾಗಾಗಿ ಅದು ಈಗಲೂ ಪ್ರೀತಿಯ ಪಾತ್ರ. ಹಾಗೆಂದ ನಂತರ ದೇವಿ ಮಹಾತ್ಮೆಯಲ್ಲಿ ಸುಪಾರ್ಶ್ವಕ, ದೇವೇಂದ್ರ ಬಲ, ದೇವೇಂದ್ರ, ರಕ್ಕಸ ಬಲ, ವಿದ್ಯುನ್ಮಾಲಿ, ಅನಿವಾರ್ಯ ಕಾರಣಕ್ಕಾಗಿ ಮಾಲಿನಿ ದೂತ, ಧೂಮ್ರಾಕ್ಷ, ರಕ್ತಬೀಜಾಸುರ, ಶುಂಭಾಸುರ, ಮಹಿಷಾಸುರನ ಪಾತ್ರಗಳನ್ನೂ ನಿರ್ವಹಿಸಿದ್ದೇನೆ.
ಕುಶ-ಲವ ಕಾಳಗದ ರಾಮ, ಮಾನಿಷಾದದ ಲಕ್ಷ್ಮಣ, ಕೋಟಿ ಚೆನ್ನಯದ ಪೆರುಮಳ ಬಲ್ಲಾಳ ಇಂತಹ ಭಾವನಾತ್ಮಕ ಪಾತ್ರಗಳು, ರಾವಣ, ಕಂಸರಂತಹ ಛಲಗಾರರ ಪಾತ್ರ, ಭೀಮ, ಮಹಿಷರಂತಹ ಶೂರರ ಪಾತ್ರ, ಶೂರ್ಪನಖ, ತಾಟಕಿ, ಕುಂಭಕರ್ಣ, ಗುಳಿಗ ಇಂತಹ ವಿಭಿನ್ನ ಪಾತ್ರಗಳು ನಾನು ನಿರ್ವಹಿಸಿದ ಪಾತ್ರಗಳಲ್ಲಿ ನನ್ನ ಮೆಚ್ಚಿನ ಪಾತ್ರಗಳು.
ರಂಗಕ್ಕೆ ಹೋಗುವ ಮೊದಲು ಪ್ರಸಂಗದ ಬಗ್ಗೆ ಯಾವ ರೀತಿಯಲ್ಲಿ ತಯಾರಿ ಮಾಡಿಕೊಳ್ಳುತ್ತೀರಿ:-
ಒಂದು ಹೊಸ ಪ್ರಸಂಗದಲ್ಲಿ ಪಾತ್ರ ನಿರ್ವಹಿಸುವುದಾದರೆ ಮೊದಲಾಗಿ ಸಂಪೂರ್ಣ ಕಥಾ ಸಾರಾಂಶವನ್ನು ತಿಳಿದುಕೊಳ್ಳುತ್ತೇನೆ. ಪ್ರಸಂಗದ ನಡೆಯನ್ನು ಸರಿಯಾಗಿ ತಿಳಿದುಕೊಳ್ಳುತ್ತೇನೆ. ಆ ಪಾತ್ರದ ಸಂಪೂರ್ಣ ಪರಿಚಯವನ್ನು ತಿಳಿದುಕೊಳ್ಳಲು ಪ್ರಯತ್ನಿಸುತ್ತೇನೆ. ಆ ಪಾತ್ರದ ಸ್ವಭಾವ, ಬುದ್ಧಿ, ಜ್ಞಾನ ಇದರ ಬಗೆಗೆ ತಿಳಿದುಕೊಳ್ಳುತ್ತೇನೆ. ಆ ಪಾತ್ರದ ಚೌಕಟ್ಟನ್ನು ತಿಳಿದುಕೊಳ್ಳುತ್ತೇನೆ. ಆ ಪಾತ್ರದ ಹಾಗೂ ಎದುರು ಪಾತ್ರದ ಪದ್ಯದ ಅಂತರಾರ್ಥವನ್ನು ತಿಳಿದುಕೊಂಡು ಯಥಾಃ ಸಾಧ್ಯ ಪಾತ್ರಕ್ಕೆ ನ್ಯಾಯ ಒದಗಿಸಲು ಪ್ರಯತ್ನಿಸುತ್ತೇನೆ.
ಯಕ್ಷಗಾನದ ಇಂದಿನ ಸ್ಥಿತಿ ಗತಿ:-
ಪ್ರಪಂಚ ಯಾವಾಗಲೂ ಬದಲಾವಣೆಯ ಕಡೆಗೆ ನೋಡುತ್ತಿರುತ್ತದೆ. ಬದಲಾವಣೆಯೆಂಬುದು ಕಾಲನ ಒಂದು ಅಂಗ. ಇಂದಿನ ಯಕ್ಷಗಾನ ಪ್ರದರ್ಶನಗಳು ಈ ಕಾಲಕ್ಕೆ ಅನುಗುಣವಾಗಿ ಮಾರ್ಪಾಡಾಗಿ ಇನ್ನೂ ಜೀವಂತಿಕೆಯನ್ನು ಹೊಂದಿದೆ. ಹಲವು ಸಾಧಕರಿಂದಾಗಿ ಇನ್ನೂ ಯುವ ಜನತೆ ಯಕ್ಷಗಾನದೆಡೆಗೆ ತಮ್ಮ ಒಲವನ್ನು ತೋರಿಸುತ್ತಿದ್ದಾರೆ. ಅದೇ ಪಥದಲ್ಲಿ ನಡೆಯುತ್ತಿದ್ದಾರೆ.
ಯಕ್ಷಗಾನದ ಇಂದಿನ ಪ್ರೇಕ್ಷಕರ ಬಗ್ಗೆ ಅಭಿಪ್ರಾಯ:-
ವೇಗವಾಗಿ ಓಡುವ ಕಾಲ, ಕಾಲಕ್ಕನುಗುಣವಾಗಿ ಓಡುವ ಜನರು. ಹಾಗಾಗಿ ಪ್ರದರ್ಶನಗಳು ಕೂಡ ಅದೇ ಗತಿಯಲ್ಲಿ ನಡೆಯಬೇಕಾಗಿದೆ. ಆದರೂ ಪ್ರಾಜ್ಞ ಪ್ರೇಕ್ಷಕರು ಸರಿಯಾದ ತಕ್ಕಡಿಯಲ್ಲಿ ಪ್ರದರ್ಶನವನ್ನು ತೂಗಿ ಕಲಾವಿದನಿಗೆ ಸಲ್ಲಬೇಕಾದ ಗೌರವವನ್ನು ಸಲ್ಲಿಸುತ್ತ ಬಂದಿದ್ದಾರೆ. ಕಷ್ಟದಲ್ಲಿರುವ ಕಲಾವಿದನನ್ನು ಪೋಷಿಸುತ್ತಾ ಬಂದಿದ್ದಾರೆ.
ಯಕ್ಷಗಾನ ರಂಗದಲ್ಲಿ ಮುಂದಿನ ಯೋಜನೆ:-
ಮಾದರಿ ಕಲಾವಿದನಾಗಿ ಬೆಳೆಯಬೇಕೆನ್ನುವುದೆ ಆಸೆ.ಹಾಗೆಯೇ ಸಭ್ಯ ಸಂಘಟಕನಾಗಿ ಕಲಾವಿದರ, ಕಲಾ ಮಾತೆಯ ಸೇವೆ ಮಾಡಬೇಕೆನ್ನುವ ಆಸೆ.ಪ್ರಜ್ವಲ್ ಪೆಜತ್ತಾಯ ಇರುವೈಲು ಅವರು ಅಶ್ವಿನಿ ಪ್ರಜ್ವಲ್ ಪೆಜತ್ತಾಯ ಅವರನ್ನು ಮದುವೆಯಾಗಿ ಮಗ ಆರ್ಯನ್ ಪೆಜತ್ತಾಯ ಜೊತೆಗೆ ಸುಖಿ ಸಂಸಾರ ನಡೆಸುತ್ತಿದ್ದಾರೆ. ತಂದೆ ತಾಯಿ ಪತ್ನಿಯ ಪ್ರೋತ್ಸಾಹ ಹಾಗೂ ಗುರು-ಹಿರಿಯ ಕಲಾವಿದರ ಮಾರ್ಗದರ್ಶನದಿಂದ ಯಕ್ಷಗಾನ ರಂಗದಲ್ಲಿ ಮುನ್ನಡೆಯಲು ಪ್ರಯತ್ನಿಸುತ್ತಿದ್ದೇನೆ ಎಂದು ಹೇಳುತ್ತಾರೆ ಪ್ರಜ್ವಲ್ ಪೆಜತ್ತಾಯ.
- ಶ್ರವಣ್ ಕಾರಂತ, ಶಕ್ತಿನಗರ
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ