ಜ.2 ರಿಂದ ನಿರಂತರಂ- ರಾಷ್ಟ್ರೀಯ ಸಂಗೀತ ಮತ್ತು ನೃತ್ಯ ಮಹೋತ್ಸವ

Upayuktha
0

  • ‘ಸೇವಾ ಸದನ’ ದಲ್ಲಿ ಸಾಂಸ್ಕೃತಿಕ ರಸದೌತಣ
  • ವಿದುಷಿ ಪುಸ್ತಕಂ ರಮಾ ಸಾರಥ್ಯ




ಬೆಂಗಳೂರು: ಉದ್ಯಾನ ನಗರಿಯ ಪ್ರತಿಷ್ಠಿತ ‘ಸಂಗೀತ ಸಂಭ್ರಮ’- ಇನ್‌ಸ್ಟಿಟ್ಯೂಷನ್ ಆಫ್ ಮ್ಯೂಸಿಕ್ ಆ್ಯಂಡ್ ಡಾನ್ಸ್ ಸಂಸ್ಥೆ ಜನವರಿ 2ರಿಂದ 5 ರವರೆಗೆ ಮಲ್ಲೇಶ್ವರದ ‘ಸೇವಾ ಸದನ’ದಲ್ಲಿ 14ನೇ ವರ್ಷದ ನಿರಂತರಂ- ರಾಷ್ಟ್ರೀಯ ಸಂಗೀತ ಮತ್ತು ನೃತ್ಯ ಮಹೋತ್ಸವ ಹಮ್ಮಿಕೊಂಡಿದೆ. ಬೆಂಗಳೂರು ಸೇರಿದಂತೆ ದೇಶ- ವಿದೇಶದ ಸಂಗೀತ- ನೃತ್ಯ ವಿದ್ವಾಂಸರು, ಪರಿಣತರು, ವಿವಿಧ ರಂಗದ ಸಾಧಕರು, ಉದಯೋನ್ಮುಖ ಪ್ರತಿಭೆಗಳು ಭಾಗವಹಿಸುತ್ತಿರುವುದು ವಿಶೇಷ.


ಜ. 2ರ ಸಂಜೆ 5ಕ್ಕೆ ನಿವೃತ್ತ ಸಹಾಯಕ ಪೊಲೀಸ್ ಕಮಿಷನರ್ ಬಿ.ಕೆ. ಶಿವರಾಂ ‘ನಿರಂತರಂ’ ಉತ್ಸವಕ್ಕೆ ಚಾಲನೆ ನೀಡಲಿದ್ದಾರೆ. ಸಂಗೀತ- ನೃತ್ಯ ಅಕಾಡೆಮಿ ಅಧ್ಯಕ್ಷೆ ಶುಭಾ ಧನಂಜಯ, ನಿರಂತರಂ ಉತ್ಸವದ ರೂವಾರಿ ವಿದುಷಿ ಪುಸ್ತಕಂ ರಮಾ ಸಾಕ್ಷಿಯಾಗಲಿದ್ದಾರೆ. ಸಂಗೀತ ಸಂಭ್ರಮ ತಂಡದ ಕಲಾವಿದರ ಭಕ್ತಿ ಸಂಗೀತ ಗಾಯನವು ಉತ್ಸವಕ್ಕೆ ಮುನ್ನುಡಿ ಬರೆಯಲಿದೆ. ನವ ಪ್ರತಿಭೆಗಳಾದ ಕಿರಣ್ ಜೋಶ್ಯರ್- ನಂದನ್ ಜೋಶ್ಯರ್ ದ್ವಂದ್ವ ಗಾಯನದ ನಂತರ ಖ್ಯಾತ ಕಲಾವಿದೆ ಅಂಜಲಿ ಶ್ರೀರಾಮ್ ಕರ್ನಾಟಕ ಶಾಸ್ತ್ರೀಯ ಸಂಗೀತ ಕಛೇರಿ  ಪ್ರಸ್ತುತಪಡಿಸಲಿದ್ದಾರೆ. ನಾಟ್ಯಾಲಯ ಸ್ಕೂಲ್ ಆಫ್ ಡಾನ್ಸ್ ಕಲಾವಿದರಿಂದ ‘ನೃತ್ಯ ಪ್ರವೇಶಂ’ ರೂಪಕವಿದೆ. 


ಭರತನಾಟ್ಯ ಪ್ರಸ್ತುತಿ:

ವಿದ್ವಾನ್ ಯೋಗೇಶ ಕುಮಾರ್- ಸ್ನೇಹಾ ನಾರಾಯಣರ ದ್ವಂದ್ವ ಭರತ ನಾಟ್ಯ, ನಂತರ ಲಲಿತಾ ಕಲಾ ನಿಕೇತನ ತಂಡದಿಂದ ಭರತನಾಟ್ಯ ಪ್ರೇಕ್ಷಕರನ್ನು ರಂಜಿಸಲಿದೆ.


ಜ. 3ರಂದು ಸಂಜೆ 5ಕ್ಕೆ ಕಾರ್ಯಕ್ರಮಕ್ಕೆ ಹಿರಿಯ ರಂಗಕರ್ಮಿ ಶ್ರೀನಿವಾಸ ಕಪ್ಪಣ್ಣ, ಅನನ್ಯ- ರಾಘವೇಂದ್ರ ಚಾಲನೆ ನೀಡಲಿದ್ದಾರೆ.

ಸಂಗೀತ ಸಂಭ್ರಮ- ತಂಡದಿಂದ ಭಕ್ತಿ ಸಂಗೀತ, ನಂತರ ಪೂರ್ವಿ ಸಂಗೀತ ಅಕಾಡೆಮಿ ಕಲಾವಿದರಿಂದ ಗಾಯನವಿದೆ. ನಂತರ ವಿದುಷಿ ಲಾವಣ್ಯಾ ಕೃಷ್ಣಮೂರ್ತಿ ತಂಡದಿಂದ ಕಚೇರಿ ಸಂಪನ್ನಗೊಳ್ಳಲಿದೆ. ಭರತನಾಟ್ಯ ಸರಣಿಯಲ್ಲಿ ಅಮೆರಿಕದ ಡಲ್ಲಾಸ್‌ನ ಶಶಾಂಕ ಈಶ್ವರ್, ಆಸ್ಟಿನ್‌ನ ಅಕ್ಷೈನಿ ಕಮ್ಮ ಹಾಗೂ ಚಿಕಾಗೋನ ಅದಿತಿ ರಾಂ ನರ್ತನ ಪ್ರೌಢಿಮೆ ಅನಾವರಣಗೊಳ್ಳಲಿದೆ.


ಜ. 4ರಂದು ದಿನಪೂರ್ಣ ಸಂಗೀತ- ನೃತ್ಯ ಸಮಾರಾಧನೆ ನೆರವೇರಲಿದೆ. ಬೆಳಗ್ಗೆ 10ಕ್ಕೆ ನಾಟ್ಯಾಲಯ ಸ್ಕೂಲ್ ಆಫ್ ಡಾನ್ಸ್ (ಆಸ್ಟಿನ್) ಗುರು ವಿನಿತಾ  ದೀಪ ಬೆಳಗಲಿದ್ದಾರೆ. ನರ್ತನ ಸರಣಿಯಲ್ಲಿ ಸ್ವರಾ ಕೃಷ್ಣರಾವ್- ಅಕ್ಷಾ ಶ್ರೀವತ್ಸಂ- ರಾವಳಿ, ಸ್ನೇಹಾ ಭಾಗವತ್ ಭರತನಾಟ್ಯ ಮುದ ನೀಡಲಿದೆ.



ರಾಮಪ್ರಿಯ ತುಳಸಿದಾಸ ರೂಪಕ: 

ಕೌಸಲ್ಯಾ ನಿವಾಸ್ ತಂಡದಿಂದ ರಾಮಪ್ರಿಯ ತುಳಸಿದಾಸ- ವಿಶೇಷ ನೃತ್ಯರೂಪ ಪಡಿಮೂಡಲಿದೆ.


ಎಂದರೋ ಮಹಾನುಭಾವುಲು....

ವಿಶ್ವ ಸಂಗೀತ ವಾಗ್ಗೇಯಕಾರರಿಗೆ ಮತ್ತು ಸಂಯೋಜಕರಿಗೆ ನಮನ ಸಲ್ಲಿಸುವ ದಿಸೆಯಲ್ಲಿ ಸಿದ್ಧಪಡಿಸಿರುವ ‘ಎಂದರೋ ಮಹಾನುಭಾವುಲು’  ಪ್ರೇಕ್ಷಕರ ಮನದಂಗಳದಲ್ಲಿ ಹೊಸ ಪಲ್ಲವಗಳನ್ನೇ ಸೃಷ್ಟಿ ಮಾಡಲಿದೆ. 


ಜ. 5ರ ಸಂಜೆ 5.30ಕ್ಕೆ ಶ್ರೀ ಯದುಗಿರಿ ಯತಿರಾಜ ಮಠದ ಶ್ರೀ ನಾರಾಯಣ ರಾಮಾನುಜ ಜೀಯುರ್ ಸಾನಿಧ್ಯದಲ್ಲಿ ಉತ್ಸವದ ಪ್ರಮುಖ ಘಟ್ಟ ಕಳೆಗಟ್ಟಲಿದೆ. ಇತ್ತೀಚೆಗೆ ನಿಧನರಾದ ವಿದುಷಿ ಆರ್. ಚಂದ್ರಿಕಾ ಅವರಿಗೆ ವಿಶೇಷ ನಮನ ಸಲ್ಲಿಸಲು ಸಂಗೀತ ಸಂಭ್ರಮ ತಂಡ ‘ನಾದ ಚಂದ್ರಿಕಾ’ ರೂಪಕ ಸಿದ್ಧಪಡಿಸಿದೆ. ವಿದುಷಿ ಡಾ. ನಾಗಮಣಿ ಶ್ರೀನಾಥ್ ನಿರ್ದೇಶನದ ಈ ಕಾರ್ಯಕ್ರಮಕ್ಕೆ ಕಲಾಪೋಷಕ ಡಿ.ಎಸ್. ಉಮೇಶ್ ಸಾಕ್ಷಿಯಾಗಲಿದ್ದಾರೆ.


14 ಕಲಾವಿದರಿಗೆ ಸನ್ಮಾನ:

ಹಿರಿಯ ವಿದುಷಿ ಪುಸ್ತಕಂ ರಮಾ ನೇತೃತ್ವದಲ್ಲಿ ಜ. 5ರ ಸಂಜೆ 7ಕ್ಕೆ ನಾಡಿನ ಪ್ರಖ್ಯಾತ 14 ವಿದ್ವಾಂಸರು- ಕಲಾರಾಧಕರನ್ನು ಗೌರವಿಸಲಾಗುತ್ತಿದೆ.


ನಿರಂತರಂ ರಾಷ್ಟ್ರೀಯ ಸಂಗೀತ ಮತ್ತು ನೃತ್ಯ ಹಬ್ಬ- 14ನೇ ವರ್ಷಾಚರಣೆಯಲ್ಲಿ ದೇಶ -ವಿದೇಶದ ವಿದ್ವನ್ಮಣಿಗಳು ಸಂಗಮ ಗೊಳ್ಳಲಿದ್ದಾರೆ. ಹಿರಿಯ ವಿದ್ವಾಂಸರಿಗೆ ಗೌರವ, ನುರಿತ ಕಲಾವಿದರಿಗೆ ಕಚೇರಿ, ಅರಳು ಪ್ರತಿಭೆಗಳಿಗೆ ವೇದಿಕೆ ಮತ್ತು ಕಲಾರಸಿಕರಿಗೆ ರಸದೌತಣ ದೊರಕಿಸಿಕೊಡಲಿದೆ. ಸಾಗರದಾಚೆಯ ಕಲಾವಿದರು ಈ ಉತ್ಸವದಲ್ಲಿ ಪಾಂಡಿತ್ಯವನ್ನು ಒರೆಗೆ ಹಚ್ಚಲಿದ್ದಾರೆ. ಎಲ್ಲದಕ್ಕೂ ಶ್ರೀ ನಾರಾಯಣ ರಾಮಾಜುನ ಜೀಯರ್ ವಿಶೇಷ ಕೃಪೆ- ಅನುಗ್ರಹ ನಿರಂತರವಾಗಿರುವುದೇ ನಮಗೆ ಶಕ್ತಿ.

- ಪುಸ್ತಕಂ ರಮಾ

ಹಿರಿಯ ವಿದುಷಿ


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 


إرسال تعليق

0 تعليقات
إرسال تعليق (0)
Maruti Suzuki Festival of Colours
Maruti Suzuki Festival of Colours
To Top