ಕುವೆಂಪು ಅವರ ಜನ್ಮದಿನ- ಮಂತ್ರ ಮಾಂಗಲ್ಯದ ಅವಲೋಕನ
ಇಂದು (ಡಿ.29) ರಾಷ್ಟ್ರಕವಿ ಕುವೆಂಪು ಅವರ 120ನೇ ಜನ್ಮದಿನೋತ್ಸವ. ಈ ದಿನವನ್ನು ದೇಶದಾದ್ಯಂತ ವಿಶ್ವಮಾನವ ದಿನವನ್ನಾಗಿ ಆಚರಿಸಲಾಗುತ್ತದೆ. ಸಾಹಿತ್ಯ ಕ್ಷೇತ್ರದಲ್ಲಿನ ಅಪೂರ್ವ ಸಾಧನೆಯ ಜೊತೆಗೆ ಸಮಾಜಕ್ಕಾಗಿಯೂ ಕುವೆಂಪು ಅವರು ನೀಡಿದ ಕೊಡುಗೆ ಸ್ಮರಣೀಯ. ಅದರಲ್ಲೊಂದು ವಿಶೇಷವಾಗಿರುವುದು ಮಂತ್ರ ಮಾಂಗಲ್ಯ ವಿವಾಹ.
ಮದುವೆ ಅನ್ನುವುದು ಜೀವನದ ಪ್ರಮುಖ ವಿಷಯಗಳಲ್ಲೊಂದು. ಸ್ವರ್ಗದಲ್ಲಿ ವಿವಾಹ ನಿಶ್ಚಯವಾಗಿರುತ್ತದೆ ಎಂಬ ಮಾತಿದೆ. ಇದೇ ಕಾರಣಕ್ಕೇನೋ ಅನೇಕರು ಸ್ವರ್ಗವೇ ಧರೆಗಿಳಿದಂತೆ ವಿಜ್ರಂಭಣೆಯಿಂದ ಅದ್ದೂರಿಯಾಗಿ ಮದುವೆಯಾಗುತ್ತಾರೆ. ಮದುವೆ ಗೊತ್ತು ಪಡಿಸುತ್ತಿದ್ದಂತೆ ಹೆಂಗಳೆಯರು ಬಟ್ಟೆ, ಅಲಂಕಾರದ ಕನಸಿನಲ್ಲಿ ಮುಳುಗಿದರೆ, ಗಂಡು ಮಕ್ಕಳು ಮುಂದಿನ ಜೀವನದ ಕನಸುಗಳನ್ನು ಆಸೆಯಿಂದ ಕಾಣುತ್ತಿರುತ್ತಾರೆ. ಹೆತ್ತವರಿಗೆ ಅಡುಗೆ, ಮಂಟಪ, ಖರ್ಚು- ವೆಚ್ಚದ ಕುರಿತು ಚಿಂತೆ ಹೀಗೆ ಮದುವೆ ಅಂದರೆ ಒಬ್ಬೊಬ್ಬರಿಗೆ ಒಂದೊಂದು ತೆರನಾದ ಚಿಂತೆ. ಮದುವೆ ಆಡಂಬರವಾಗಿ ನೆರವೇರಬೇಕು ಬಂದ ಪ್ರತಿಯೊಬ್ಬರೂ ಹೊಗಳಬೇಕು ಎಂಬುದು ಕೆಲವರ ಗುರಿ. ಆದರೆ ಕೆಲವರ ಮನೆಯಲ್ಲಿ ಬಡತನ, ಕುಟುಂಬದವರ ವ್ಯಂಗ್ಯ, ಪ್ರೀತಿಗೆ ಅಡ್ಡ ಬರುವ ಅಂತರ್ಜಾತಿ ವಿವಾಹ ಇನ್ನಿತರ ಸಮಸ್ಯೆಗಳು ಮೈದಳೆಯುತ್ತದೆ. ಇವೆಲ್ಲಕ್ಕೂ ಕುವೆಂಪುರವರು ಕಂಡುಕೊಂಡ ಪರಿಹಾರವೇ ಮಂತ್ರ ಮಾಂಗಲ್ಯ ವಿವಾಹ.
ಇತ್ತೀಚಿನ ದಿನಗಳಲ್ಲಿ ಮದುವೆ ಸಮಾರಂಭ ವಿವಿಧ ರೀತಿಯಲ್ಲಿ ಮಾರ್ಪಾಡಾಗಿದೆ. ಸರಳ ವಿವಾಹವಾಗಿ ಹನಿಮೂನ್ ಸಲುವಾಗಿ, ಅಥವಾ ಮುಂದಿನ ಜೀವನಕ್ಕಾಗಿಯೋ ಹಣ ಜೋಡಿಸುತ್ತಾರೆ. ಇಲ್ಲ ಆಡಂಬರದ ರಿಸೆಪ್ಶನ್ ಏರ್ಪಡಿಸುತ್ತಾರೆ. ಇದರ ಜೊತೆಗೆ ಪರಿಸರ ಪ್ರೇಮಿಗಳ ಇಕೋ ಫ್ರೆಂಡ್ಲಿ(eco-friendly) ಮದುವೆ ಸದ್ಯ ಟ್ರೆಂಡ್ ನಲ್ಲಿದೆ. ದೇವಸ್ಥಾನದಲ್ಲಿ ಸರಳ ವಿವಾಹ, ರೆಸಾರ್ಟ್ ಗಳಲ್ಲಿ, ಆಶ್ರಮಗಳಲ್ಲಿ ಇಲ್ಲವೇ ಇನ್ನೂ ಸರಳವಾಗಿ ವಿವಾಹ ರಿಜಿಸ್ಟ್ರೇಷನ್ ಕಚೇರಿಗಳಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಡುತ್ತಾರೆ. ಪ್ರಸ್ತುತ ಇನ್ನೂ ಪ್ರಸಿದ್ಧಿ ಪಡೆದಿರುವುದು ಡೆಸ್ಟಿನೆಶನ್ ವೆಡ್ಡಿಂಗ್. ಇವೆಲ್ಲವುಗಳ ಮಧ್ಯೆ ಸದಾ ವಿಶೇಷವಾಗಿ ಗುರುತಿಸಿಕೊಳ್ಳುವುದರ ಜೊತೆಗೆ ಈಗಿನ ಯುವ ಜನತೆಯನ್ನು ಸೆಳೆಯುತ್ತಿರುವುದು ಮಂತ್ರ ಮಾಂಗಲ್ಯ ವಿವಾಹ.
ಮಂತ್ರ ಮಾಂಗಲ್ಯ ಎಂಬ ಯೋಚನೆ ಮೊದಲು ಮಾಡಿದವರು ಕುವೆಂಪು. ಅವರು ತಮ್ಮದೇ ಆದ ಮದುವೆಯ ವಿಶಿಷ್ಟ ಮಾದರಿಯನ್ನು ಈ ಮೂಲಕ ವಿಕಸನಗೊಳಿಸಿದರು. ಇದು ನೈತಿಕ ಆದರ್ಶದ ವಿಸ್ತರಣೆಯಾಗಿದೆ. ಜಾತಿ ಭೇದ, ಶ್ರೀಮಂತ-ಬಡವ, ಜಾತಕ ದೋಷ, ವರದಕ್ಷಿಣೆ ಇಂತಹ ಎಲ್ಲ ಸಾಮಾಜಿಕ ಮೌಲ್ಯಗಳ ಗೋಡೆಮುರಿದು ಮಂತ್ರ ಮಾಂಗಲ್ಯ ವಿವಾಹ ನಿಲ್ಲುತ್ತದೆ. ಸರಳವಾಗಿ ಅತಿ ಕಡಿಮೆ ಖರ್ಚಿನಲ್ಲಿ, ನಿಕಟ ಸಂಬಂಧಿಗಳು ಮತ್ತು ಆಪ್ತ ಸ್ನೇಹಿತರನ್ನು ಮಾತ್ರವೇ ಒಳಗೊಂಡು ಈ ವಿವಾಹ ನಡೆಯುತ್ತದೆ.
ಇಲ್ಲಿ ಪುರೋಹಿತರು ಇರುವುದಿಲ್ಲ ಬದಲಿಗೆ ಹಿರಿಯರೊಬ್ಬರು ಶಾಸ್ತ್ರಗಳ ಉಸ್ತುವಾರಿ ವಹಿಸಿಕೊಳ್ಳುತ್ತಾರೆ. ಸಂಗೀತ, ವಾದ್ಯ ಇನ್ನಿತರ ಆಡಂಬರದ ಮನೋರಂಜನೆಗಳಿಲ್ಲ. ಏಕೆಂದರೆ ಆತ್ಮಾವಲೋಕನ ಮತ್ತು ಸರಳತೆಯನ್ನು ಮಂತ್ರ ಮಾಂಗಲ್ಯ ಪ್ರತಿಪಾದಿಸುತ್ತದೆ. ತುಂಬ ಮನಸ್ಸಿನಿಂದ, ನೈಜ ಸೌಂದರ್ಯ ಅನುಭವಿಸುತ್ತಾ, ಶಾಂತಿಯುತವಾಗಿ ಸಂತೋಷದಿಂದ ವಿವಾಹ ನೆರವೇರಬೇಕು ಎಂಬುದು ಕುವೆಂಪುರವರ ಆಶಯವಾಗಿದೆ.
ತಂದೆಯ ಆದರ್ಶವನ್ನು ಸ್ವತಃ ಅವರ ಮಗ ಪೂರ್ಣಚಂದ್ರ ತೇಜಸ್ವಿಯವರು ಪಾಲಿಸಿದ್ದಾರೆ. ಪೂಚಂತೇ ಅವರು ಸಹ ಮಂತ್ರ ಮಾಂಗಲ್ಯ ವಿವಾಹವಾಗಿರುವುದು ಗಮನಾರ್ಹ. ಈ ವಿವಾಹ ಸಂದರ್ಭದಲ್ಲಿ ಮಂತ್ರಗಳ ಬದಲು ಕುವೆಂಪುರವರು ರಚಿಸಿದ ‘ಮಂತ್ರ ಮಾಂಗಲ್ಯ’ ಎಂಬ ಸಣ್ಣ ಪುಸ್ತಕದ ವಾಚನವಾಗುತ್ತದೆ. ಇದರಲ್ಲಿ ನಮ್ಮ ಋಷಿಗಳು, ದಾರ್ಶನಿಕರು ಮತ್ತು ಸಂತರು ಬರೆದ ಮಂತ್ರಗಳ ಸಾರವಿದೆ.
ಇತ್ತೀಚಿನ ದಿನಗಳಲ್ಲಿ ಮಂತ್ರ ಮಾಂಗಲ್ಯ ವಿವಾಹ ಹೆಚ್ಚಾಗುತ್ತಿದ್ದು ಒಂದು ಉತ್ತಮ ಕ್ರಾಂತಿಕಾರಿ ಬೆಳವಣಿಗೆಯಾಗಿದೆ. ಅತಿ ಕಡಿಮೆ ಖರ್ಚಿನಲ್ಲಿ ನಡೆಯುವುದರಿಂದ ಹೆತ್ತವರಿಗೂ ನಿರಾಳತೆ ನೀಡುತ್ತದೆ. ಪ್ರೀತಿ ಮಾಡಿ ಅಂತರ್ಜಾತಿ ವಿವಾಹವಾಗುವವರಿಗೆ ಸಮಾಜದ ಹಂಗಿಲ್ಲದೆ ಸಂತೋಷವಾಗಿ ವಿವಾಹವಾಗುವ ಅವಕಾಶ ಮಂತ್ರ ಮಾಂಗಲ್ಯ ನೀಡುತ್ತದೆ. ಹೀಗೆ ತಿಳಿದುಕೊಳ್ಳುತ್ತಾ ಹೋದರೆ ಅದೆಷ್ಟೋ ಪೋಷಕರ ಪಾಲಿಗೆ, ಪ್ರೇಮಿಗಳ ಪಾಲಿಗೆ ಮಂತ್ರ ಮಾಂಗಲ್ಯ ವರವಾಗಿದೆ. ಸಾಮಾನ್ಯವಾಗಿ ಸಮಾಜದಲ್ಲಿ ಮದುವೆ ಕಾರ್ಯಕ್ರಮಗಳಲ್ಲಿ ಕುಟುಂಬದವರ ಕಹಿ ಮಾತುಗಳನ್ನು ಕೇಳಬೇಕಾಗುವ ಸಂದರ್ಭ ಬರಬಹುದು. ಆದರೆ ಮಂತ್ರ ಮಾಂಗಲ್ಯದ ಮೂಲಕ ಅದೆಷ್ಟೋ ಜೋಡಿಗಳು ನೆಮ್ಮದಿಯಿಂದ ದಾಂಪತ್ಯ ಜೀವನಕ್ಕೆ ಕಾಲಿಡುವಂತಾಗಿದೆ. ಎಲ್ಲರಿಗೂ ಹಿತವಾಗುವಂತಹ ಈ ರೀತಿಯ ಯೋಚನೆಗಳನ್ನು ಕುವೆಂಪು ಅವರು ಮಾಡಿದ್ದಕ್ಕಲ್ಲವೇ ಅವರನ್ನು ವಿಶ್ವಮಾನವರೆನ್ನುವುದು?
- ಅರ್ಚನಾ ಎಸ್, ಪ್ರಥಮ ಎಂ ಸಿಜೆ, ಉಜಿರೆ.
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ