ಮಂಗಳೂರು: ಕಾಸ್ಮೋಪಾಲಿಟನ್ ಕ್ಲಬ್‌ನಿಂದ ಅಂತರ್ ಜಿಲ್ಲಾ ಸ್ನೂಕರ್-ಬಿಲಿಯರ್ಡ್ಸ್‌ ಪಂದ್ಯಾಟ; ಜಿಲ್ಲಾಧಿಕಾರಿ ಉದ್ಘಾಟನೆ

Upayuktha
0

ಮಂಗಳೂರು: ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಅತ್ಯಂತ ಹಳೆಯದಾದ, ಶತಮಾನ ದಾಟಿರುವ ಕಾಸ್ಮೋಪಾಲಿಟನ್ ಕ್ಲಬ್ ಆಯೋಜಿಸಿರುವ ಅಂತರ್‍‌ ಜಿಲ್ಲಾ ಸ್ನೂಕರ್ ಮತ್ತು ಬಿಲಿಯರ್ಡ್ಸ್‌ ಚಾಂಪಿಯನ್‌ಶಿಪ್ ಪಂದ್ಯಾಟವನ್ನು ದ.ಕ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಅವರು ಇಂದು (ಡಿ.7) ಉದ್ಘಾಟಿಸಿದರು.


1091ರಲ್ಲಿ ಸ್ಥಾಪನೆಗೊಂಡಿರುವ ಮಂಗಳೂರಿನ ಕಾಸ್ಮೋಪಾಲಿಟನ್ ಕ್ಲಬ್‌ ಹಲವಾರು ದಾಖಲೆಗಳನ್ನು ಮಾಡಿದೆ. ರಾಷ್ಟ್ರೀಯ, ಅಂತಾರಾಷ್ಟ್ರೀಯ ಮಟ್ಟದ ಸ್ನೂಕರ್ ಚಾಂಪಿಯನ್‌ಗಳು ಈ ಕ್ಲಬ್‌ನಲ್ಲಿ ಆಟವಾಡಿದ್ದಾರೆ. ಮಾಜಿ ಸಚಿವರು, ಶಾಸಕರು ಸೇರಿದಂತೆ  ಸಮಾಜದ ಅತಿ ಗಣ್ಯರು ಈ ಕ್ಲಬ್‌ನ ಸದಸ್ಯರಾಗಿ ಇದನ್ನು ಕಟ್ಟಿ ಬೆಳೆಸಿದ್ದಾರೆ ಎಂದು ಕ್ಲಬ್‌ನ ಟೂರ್ನಮೆಂಟ್ ಚೇರ್ಮನ್ ಆಗಿರುವ ರಾಜಗೋಪಾಲ್ ರೈ ಪ್ರಾಸ್ತಾವಿಕವಾಗಿ ಮಾತನಾಡುತ್ತ ತಿಳಿಸಿದರು.


ಸ್ನೂಕರ್ ಮತ್ತು ಬಿಲಿಯರ್ಡ್ಸ್‌ ಪ್ರಸಿದ್ಧ ಕ್ರೀಡೆ. 1978ರಲ್ಲಿ ಬಿ.ಆರ್ ರಮಾನಂದ ಅಡ್ಯಂತಾಯರು ಇಲ್ಲಿ ಆಟವಾಡಿ ರಾಜ್ಯಮಟ್ಟದ ಚಾಂಪಿಯನ್ ಆಗಿದ್ದಾರೆ. ಅಂತಾರಾಷ್ಟ್ರೀಯ ಆಟಗಾರ ಮೈಕೆಲ್ ಪಿರೇರಾ 1966ರಲ್ಲಿ ಇದೇ ಟೇಬಲ್ ನಲ್ಲಿ ಆಟವಾಡಿ ಚಾಂಪಿಯನ್ ಆಗಿದ್ದಾರೆ. ಲಂಡನ್‌ನಲ್ಲಿ ತಯಾರಾದ ಈ ಟೇಬಲ್ ಕೂಡ ಶತಮಾನದ ಇತಿಹಾಸ ಹೊಂದಿದೆ. ಅಂತಹ ಒಂದು ಇತಿಹಾಸವಿರುವ ಈ ಕ್ಲಬ್ ಪ್ರತಿ ವರ್ಷ ಹಲವು ಕ್ರೀಡಾ ಚಟುವಟಿಕೆಗಳನ್ನು ಆಯೋಜಿಸುತ್ತ ಬಂದಿದೆ. ಈ ವರ್ಷ ಡಿಸೆಂಬರ್ 14ರಂದು  ಕ್ಲಬ್‌ನ 123ನೇ ವರ್ಷಾಚರಣೆ ಹಿನ್ನೆಲೆಯಲ್ಲಿ ಅಂತರ್ ಜಿಲ್ಲಾ ಸ್ನೂಕರ್- ಬಿಲಿಯರ್ಡ್ಸ್‌ ಚಾಂಪಿಯನ್‌ಶಿಪ್ ಪಂದ್ಯವನ್ನು ಆಯೋಜಿಸಲಾಗಿದೆ ಎಂದು ರಾಜಗೋಪಾಲ್ ರೈ ಮಾಹಿತಿ ನೀಡಿದರು.


ಈ ಬಾರಿ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ 10 ಕ್ಲಬ್‌ಗಳಿಂದ 35 ಜನ ಆಟಗಾರರು ಈ ಚಾಂಪಿಯನ್‌ಶಿಪ್‌ ನಲ್ಲಿ ಭಾಗವಹಿಸುತ್ತಿದ್ದಾರೆ. ಆಯಾ ಕ್ಲಬ್‌ಗಳಲ್ಲಿ ವಿಜೇತರಾದ ಕ್ರೀಡಾಪಟುಗಳನ್ನು ಮಾತ್ರ ಆಹ್ವಾನಿಸಿ ಈ ಟೂರ್ನಮೆಂಟ್‌ ನಡೆಸಲಾಗುತ್ತಿದೆ.  ಒಂದು ವಾರದ ಹಿಂದಿನಿಂದಲೇ ಆಯ್ಕೆ ಹಂತದ ಸ್ಪರ್ಧೆಗಳು ನಡೆದಿದ್ದು, ಪ್ರಸ್ತುತ ಕ್ವಾರ್ಟರ್ ಫೈನಲ್, ಸೆಮಿ ಫೈನಲ್ ಮತ್ತು ಫೈನಲ್ ಹಂತದ ಸ್ಫರ್ಧೆಗಳು ನಡೆಯುತ್ತಿವೆ. ಫೈನಲ್ ಪಂದ್ಯಾಟ ನಾಳೆ (ಡಿ.8) ನಡೆಯಲಿದೆ ಎಂದು ಅವರು ಮಾಧ್ಯಮಗಳಿಗೆ ವಿವರಿಸಿದರು.


ಟೂರ್ನಮೆಂಟ್ ಉದ್ಘಾಟಿಸಿ ಮಾತನಾಡಿದ ಜಿಲ್ಲಾಧಿಕಾರಿಗಳು, ದಕ್ಷಿಣ ಭಾರತದ ಐತಿಹಾಸಿಕ ಹಿನ್ನೆಲೆ ಇರುವ ಕ್ಲಬ್. ಇಂತಹ ಕ್ಲಬ್ ದೇಶದಲ್ಲಿ ಬೆರಳೆಣಿಕೆಯಷ್ಟು ಮಾತ್ರ ಇರಬಹುದು. ಅಧ್ಯಕ್ಷ ಡಾ. ಸದಾನಂದ ಶೆಟ್ಟಿ, ಕಾರ್ಯದರ್ಶಿ ಯೋಗೀಶ್‌ ಕುಮಾರ್, ಟೂರ್ನಮೆಂಟ್‌ ಚೇರ್ಮನ್ ರಾಜಗೋಪಾಲ್ ರೈ ಅವರಂತಹ ಕ್ರೀಡಾಪ್ರೇಮಿಗಳು ಈ ಕ್ಲಬ್‌ನಲ್ಲಿ ಸಾಕಷ್ಟು ಕ್ರೀಡಾ ಚಟುವಟಿಕೆಗಳಿಗೆ ಪ್ರೋತ್ಸಾಹ ನೀಡುತ್ತಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.


ತುಳು ಕಲಿತರೆ ಅಂತಾರಾಷ್ಟ್ರೀಯ ಮಟ್ಟಕ್ಕೆ ತಲುಪಬಹುದು ಎಂಬ ವಿಚಾರವನ್ನು ಉದಾಹರಣೆಗಳ ಸಹಿತ ಪ್ರಸ್ತಾಪಿಸಿದ ಅವರು, ಈ ಕ್ಲಬ್‌ ಬರೀ ಇತಿಹಾಸದಲ್ಲಿ ಮಾತ್ರ ಉಳಿದುಕೊಳ್ಳದೆ, ಈಗಿನ ಕಾಲಕ್ಕೂ ಸಲ್ಲುವಂತೆ ಬೆಳೆದು ಬಂದಿದೆ. ಶತಮಾನ ಕಂಡ ಕ್ಲಬ್ ಆಗಿದ್ದರೂ ಎಳೆಯ ವಯಸ್ಸಿನ ಪ್ರತಿಭೆಗಳಿಗೂ ಪ್ರೋತ್ಸಾಹ ನೀಡುತ್ತ ಮುಂದುವರಿಯುತ್ತಿರುವುದು ಖುಷಿಯ ವಿಚಾರ ಎಂದು ಹೇಳಿದರು.


ಕ್ಲಬ್‌ನ ಅಧ್ಯಕ್ಷರಾದ ಡಾ. ಸದಾನಂದ ಶೆಟ್ಟಿ ಅವರು ಮಾತನಾಡಿ, ಕಾಸ್ಮೋಪಾಲಿಟನ್ ಕ್ಲಬ್‌ ಬಹಳಷ್ಟು ಕ್ರೀಡಾ ಚಟುವಟಿಕೆಗಳಿಗೆ ಪ್ರೋತ್ಸಾಹ ನೀಡುತ್ತ ಬಂದಿದೆ. ಶತಮಾನದ ಇತಿಹಾಸವಿರುವ ಈ ಕ್ಲಬ್‌ ತನ್ನ 123ನೇ ವರ್ಷಾಚರಣೆ ಸಂದರ್ಭದಲ್ಲಿ ಆಯೋಜಿಸಿದ ಅಂತರ್ ಜಿಲ್ಲಾ ಸ್ನೂಕರ್-ಬಿಲಿಯರ್ಡ್ಸ್‌ ಟೂರ್ನಮೆಂಟ್ ಅನ್ನು ಯುವ ಉತ್ಸಾಹಿ ಜಿಲ್ಲಾಧಿಕಾರಿಗಳು ಉದ್ಘಾಟಿಸಿರುವುದು ಸಂತಸದ ವಿಷಯ ಎಂದು ಹೇಳಿದರು.


ಕ್ಲಬ್‌ನ ಕಾರ್ಯದರ್ಶಿ ಎಂ.ಸಿ ಶೆಟ್ಟಿ, ಕೋಶಾಧ್ಯಕ್ಷ ದೇವಿಚರಣ್ ಶೆಟ್ಟಿ, ಕ್ರೀಡಾ ಕಾರ್ಯದರ್ಶಿ ಯೋಗೀಶ್ ಕುಮಾರ್, ಉದಯಶಂಕರ್‌ ರೈ, ಮನೋಜ್ ಕುಮಾರ್, ರಘುರಾಂ ಶೆಟ್ಟಿ, ಪ್ರದೀಪ್ ರೈ, ಪುಷ್ಪರಾಜ್ ಶೆಟ್ಟಿ,  ಸತೀಶ್ ಚಂದ್ರ ಭಂಡಾರಿ ಹಾಗೂ ಕ್ಲಬ್‌ನ ಇತರ ಸಮಿತಿಗಳ ಸದಸ್ಯರು ಉಪಸ್ಥಿತರಿದ್ದರು.




Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top