ಬಳ್ಳಾರಿ: ಸಂಡೂರು ಕ್ಷೇತ್ರದ ಉಪ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿ ಅನ್ನಪೂರ್ಣ ತುಕರಾಂ ಅವರು ಭರ್ಜರಿ ಜಯ ಸಾಧಿಸಿದ ಹಿನ್ನಲೆಯಲ್ಲಿ ಭಾನುವಾರ ಸಂಡೂರು ಪಟ್ಟಣದ ವಿಶ್ವಾಸ್ ಲಾಡ್ ಅವರ ಮೈದಾನದಲ್ಲಿ ಕಾಂಗ್ರೆಸ್ ಪಕ್ಷದಿಂದ ಮತದಾರರಿಗೆ ಅಭಿನಂದನಾ ಸಮಾವೇಶನ್ನು ಹಮ್ಮಿಕೊಂಡಿತ್ತು. ಸಮಾವೇಶವನ್ನು ಮುಖ್ಯ ಮಂತ್ರಿ ಸಿದ್ದರಾಮಯ್ಯ ಉದ್ಘಾಟನೆ ಮಾಡಿ. ನಾನು ಇಲ್ಲಿ ಮೂರು ದಿನ ಪ್ರಚಾರ ಮಾಡಿದಾಗ ಚುನಾವಣೆ ಸಮಯದಲ್ಲಿಯೇ ಹೇಳಿದ್ದೆ. ಅನ್ನಪೂರ್ಣ ಅವರ ಗೆಲುವು ನಿಶ್ಚಿತ ನಿಮಗೆಲ್ಲ ಅಭಿನಂದನೆ ಸಲ್ಲಿಸಲು ಮತ್ತೆ ಬರುವೆನೆಂದು. ನೀವೆಲ್ಲ ಕೋಮುವಾದಿ ಬಿಜೆಪಿಯನ್ನು ತಿರಸ್ಕರಿಸಿ ಈ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷದ ನಾಗಾಲೋಟವನ್ನು ಮುನ್ನಡೆಸಿದ್ದೀರಿ ಕ್ಷೇತ್ರದ ಮತದಾರರಿಗೆಲ್ಲ ನನ್ನ ಅಭಿನಂದನೆಗಳು ಎಂದರು.
ಮೊದಲ ಬಾರಿಗೆ ಈ ಕ್ಷೇತ್ರದಿಂದ ಮಹಿಳಾ ಶಾಸಕಿಯನ್ನು ಆಯ್ಕೆ ಮಾಡಿ ಹೊಸ ಇತಿಹಾಸ ಬರೆದಿದ್ದೀರಿ. ಅವರು ಕ್ಷೇತ್ರದ ಅಭಿವೃದ್ಧಿಗೆ ಪತಿ ಸಂಸದ ತುಕರಾಂ ಅವರೊಂದಿಗೆ ಜೋಡೆತ್ತುಗಳಾಗಿ ಶ್ರಮಿಸಲಿದ್ದಾರೆಂದರು.ಸಂವಿಧಾನದ ರಕ್ಷಣೆ, ಪ್ರಜಾಪ್ರಭುತ್ವ ಉಳಿಯಬೇಕೆಂದರೆ ಕಾಂಗ್ರೆಸ್ ನಿಂದ ಮಾತ್ರ ಸಾಧ್ಯ, ಬಿಜೆಪಿ ಸಂವಿಧಾನ ಪರ ಅಲ್ಲ ಎಂದು ಮನವಿ ಮಾಡಿದ್ದೆ ಅದನ್ನು ನೀವು ಪುರಸ್ಕಾರ ಮಾಡಿದ್ದೀರೆಂದರು.
ಬಡವರ ಅದರಲ್ಲೂ ಮಹಿಳೆಯರ ಅಭಿವೃದ್ದಿಗೆ ಬದ್ದವಾಗಿ ನಮ್ಮ ಸರ್ಕಾರ ಪಂಚ ಗ್ಯಾರೆಂಟಿ ಯೋಜನೆಗಳನ್ನು ಜಾರಿಗೆ ತಂದು ನಿಮ್ಮೆಲ್ಲರ ಪ್ರೀತಿಗೆ ಪಾತ್ರವಾಗಿದೆ ನಾವು ನುಡಿದೆಂತೆ ನಡೆದಿದ್ದೇವೆ ಎಂದರು. ದೇಶದಲ್ಲಿನ ಯಾವ ರಾಜ್ಯ ಸರ್ಕಾರ ಸಹ ಬಡವರ, ಹಿಂದುಳಿದ, ದಲಿತರ, ರೈತರಿಗೆ ಆರ್ಥಿಕ ಸಾಮಾಜಿಕ ಶಕ್ತಿಕೊಡುವ ಪ್ರಯತ್ನ ಮಾಡಿರಲಿಲ್ಲ ನಮ್ಮ ಪಕ್ಷ ಮಾಡಿದೆಂದರು.ಮೋದಿ ವಿರುದ್ದ ವಾಗ್ದಾಳಿ ನಡೆಸಿ ಅವರು ಕೊಟ್ಟ ಮಾತನ್ನು ಈಡೇರಿಸಿಲ್ಲ ಎಂದ ಅವರು ಜನಾರ್ಧನ ರೆಡ್ಡಿ ಇಲ್ಲಿ ತಮ್ಮ ಅಭ್ಯರ್ಥಿಯನ್ನು ಗೆಲ್ಲಿಸುತ್ತೇನೆಂದು ಬಂದಿದ್ದ. ಇವತ್ತು ಈ ಜಿಲ್ಲೆಗೆ ಕಳಂಕತಂದಿದ್ದವರು ರೆಡ್ಡಿ ಅವರ ಆಟೋಟಾಪಕ್ಕೆ ಬಲಿಯಾಗಲಿಲ್ಲ. ಅವರ ಸುಳ್ಳಿಗೆ ಮರುಳಾಗಲಿಲ್ಲ. ನಿಮ್ಮ ಋಣ ನಮ್ಮ ಮೇಲಿದೆ ಎಂದರು.
ಸಿದ್ದರಾಮಯ್ಯ ಸರ್ಕಾರ ಬಿದ್ದುಹೋಗುತ್ತೆ ಎಂದು ಬಿಜೆಪಿಯವರು, ಕುಮಾರಸ್ವಾಮಿ ಕಾಯುತ್ತಿದ್ದಾರೆ. ಸಿದ್ದರಾಮಯ್ಯ ನ ಇಮೇಜ್ ಗೆ ಮಸಿ ಬಳಿಯಲು ಸಾಧ್ಯವಿಲ್ಲ. ಐದು ವರ್ಷ ನಮ್ಮ ಸರ್ಕಾರ ಇರುತ್ತೆ. ಯಾರಿಂದಲೂ ನಮ್ಮನ್ನು ಅಲ್ಲಾಡಿಸಲು ಆಗಲ್ಲ. ನಮ್ಮ ವಿರೋಧಿಗಳು ಲೋಕ ಸಭಾ ಚುನಾವಣೆ ನಂತರ ಗ್ಯಾರೆಂಟಿ ಯೋಜನೆ ನಿಂತು ಹೋಗುತ್ತೆ ಎಂದು ಸುಳ್ಳು ಹೇಳುತ್ತಿದ್ದರು. ಯಾವುದೇ ಕಾರಣಕ್ಕೂ ಗ್ಯಾರೆಂಟಿ ಯೋಜನೆಗಳು ನಿಲ್ಲಲ್ಲ. ಇದು ಸರ್ಕಾರದ ಗಟ್ಟಿ ನಿರ್ಧಾರ ನಮ್ಮನ್ನು ನೋಡಿಯೇ ಬಿಜೆಪಿ ಇತರೇ ರಾಜ್ಯಗಳಲ್ಲಿ ಭಿನ್ನವಾದ ಗ್ಯಾರೆಂಟಿ ಯೋಜನೆ ತಂದಿದ್ದಾರೆ. ರಾಜ್ಯ ಸರಕಾರ ಆರ್ಥಿಕವಾಗಿ ಸದೃಡವಾಗಿದೆ. ಅಭಿವೃದ್ಧಿ ಕಾರ್ಯಗಳು ನಿರಂತರವಾಗಿ ಸಾಗಲಿವೆಂದರು.ಮುಂಬರುವ ಜಿಲ್ಲಾ ಪಂಚಾಯ್ತಿ, ತಾಲೂಕು ಪಂಚಾಯ್ತಿ ಚುನಾವಣೆಗಳಲ್ಲಿಯೂ, ಈ ಉಪ ಚುನಾವಣೆಗಳಲ್ಲಿಯಂತೆ ಕಾಂಗ್ರೆಸ್ ಪಕ್ಷಕ್ಕೆ ಅಭೂತಪೂರ್ವ ಗೆಲುವು ತಂದುಕೊಡಬೇಕು ಎಂದರು.
ಉಪ ಮುಖ್ಯ ಮಂತ್ರಿ ಡಿ.ಕೆ.ಶಿವಕುಮಾರ್ ಮಾತನಾಡಿ, ಅಧಿಕಾರ ನಶ್ವರ ಮತದಾರರೇ ಈಶ್ವರ, ಸಂಡೂರನ್ನು ಕರ್ನಾಟಕದ ಕಾಶ್ಮೀರ ಎಂದು ಮಹಾತ್ಮಾ ಗಾಂಧಿ ಅವರು ಕರೆದಿದ್ದರು. ಮಲ್ಲಿ ಕಾರ್ಜುನ ಖರ್ಗೆ ಅವರ ಮಾರ್ಗದರ್ಶನದಲ್ಲಿ ಬೆಳಗಾವಿಯ ಕಾಂಗ್ರೆಸ್ ಅಧಿವೇಶನದ ಶತಮಾನೋತ್ಸವವನ್ನು ವರ್ಷ ಪೂರ್ತಿ ಆಚರಿಸಲಿದೆ.ರಾಜ್ಯದಲ್ಲಿ 149 ಪ್ಲಸ್ ಶಾಸಕರನ್ನು ಹೊಂದಿರುವ ಕಾಂಗ್ರೆಸ್ ಸರ್ಕಾರ ಕಿತ್ತೆಸೆಯಲು ಸಾಧ್ಯವಿಲ್ಲ ಎಂದು ದೇವೆಗೌಡರ ಮಾತಿಗೆ ಠಕ್ಕರ್ ನೀಡಿದರು. ಗ್ಯಾರೆಂಟಿಗಳಿಗೆ ಮತದಾರ ಮನ್ನಣೆ ನೀಡಿದ್ದಾರೆಂದರು. ಹಸ್ತದ ಸಹಾಯ ಎಂದೂ ಮರೆಯಬೇಡಿ ಎಂದರು.
ಕಾರ್ಮಿಕ ಸಚಿವ ಸಂತೋಷ್ ಲಾಡ್ ಮಾತನಾಡಿ, ಸಂಡೂರು ಕಾಂಗ್ರೆಸ್ ನ ಭದ್ರಕೋಟೆ ಎಂಬುದನ್ನು ಸಂಡೂರಿನ ಮತದಾರರಾದ ನೀವು ಮತ್ತೊಮ್ಮೆ ಸಾಬೀತು ಮಾಡಿದ್ದೀರಿ, ಈ ವರೆಗೆ ತುಕರಾಂ ಅವರು ಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸಿದಂತೆ ಅನ್ನಪೂರ್ಣ ಅವರೂ ದುಡಿಯಲಿದ್ದಾರೆ. ಇದಕ್ಕೆ ನಿಮ್ಮೆಲ್ಲರ ಸಹಕಾರ ಸದಾ ಇರಬೇಕು. ಚುನಾವಣೆಯಲ್ಲಿ ಹೇಳಿದಂತೆ ನಿಮ್ಮ ಬಳಿ ಬಂದ ಬಿಜೆಪಿಯವರ ಸುಳ್ಳಿನ ಮಾತುಗಳನ್ನು ನಂಬದೆ ಅವರ ಅಭ್ಯರ್ಥಿಗೆ ಸರಿಯಾದ ಪಾಠ ಕಲಿಸಿದ್ದೀರಿ. ಅವರೊಂದಿಗೆ ನಾನು ಇದ್ದು ಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸಲಿದೆಂದರು.
ಸಂಸದ ತುಕರಾಂ ಅವರು ಸ್ವಾಗತಿಸಿ ಮಾತನಾಡುತ್ತ. ಕಳೆದ ನಾಲ್ಕು ವಿಧಾನ ಸಭಾ ಚುನಾವಣೆಯಲ್ಲಿ ನಿಮ್ಮ ಸೇವೆ ಮಾಡಲು ಅವಕಾಶ ಮಾಡಿಕೊಟ್ಟಂತೆ ಈ ಉಪ ಚುನಾವಣೆಯಲ್ಲಿ ಪತ್ನಿ ಅನ್ನಪೂರ್ಣಗೆ ಮತ ನೀಡಿ ಗೆಲಿಸಿದ್ದೀರಿ. ನಾವಿಬ್ಬರೂ ಎಂದೇ ಎಂದಿಗೂ ಋಣಿಗಳು ಎಂದ ಅವರು. ಸಂವಿಧಾನದ 371 (ಜೆ) ಕಾಯ್ದೆಯಿಂದ ಈ ಭಾಗದ ಜನತೆಗೆ ಹೆಚ್ಚು ಸಹಕಾರಿಯಾಗಿದೆಂದರು. ಮತದಾರರು ಬಿಜೆಪಿಯವರ ಸುಳ್ಳುಗಳನ್ನು ನಂಬದೇ ಮತ ನೀಡಿದ್ದು ಹರ್ಷ ತಂದಿದೆ ಎಂದರು.
ನೂತನ ಶಾಸಕಿ ಅನ್ನಪೂರ್ಣ ಮಾತನಾಡಿ, ಮನೆಯಲ್ಲಿ ಗೃಹಿಣಿಯಾಗಿದ್ದ ನನ್ನನ್ನು ಈ ಕ್ಷೇತ್ರದಿಂದ ಶಾಸಕಿಯಾಗಿ ಆಯ್ಕೆ ಮಾಡಿದ ನಿಮಗೆಲ್ಲ ಧನ್ಯವಾದಗಳು ನಿಮ್ಮ ನಿರೀಕ್ಷೆಯಂತೆ ನಮ್ಮ ಕಾಂಗ್ರೆಸ್ ಸರ್ಕಾರ, ಸಚಿವ ಸಂತೋಷ್ ಲಾಡ್ ಅವರ ಮಾರ್ಗದರ್ಶನದಲ್ಲಿ ಕೆಲಸ ಮಾಡುವುದಾಗಿ, ದ್ವೇಷದ ರಾಜಕಾರಣಕ್ಕೆ ಇತಿಶ್ರೀ ಹಾಡಿ ತುಕರಾಂ ಮತ್ತು ನಾನು ಜೋಡೆತ್ತುಗಳಾಗಿ ಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸುವುದಾಗಿ ಹೇಳಿದರು.
ಜಿಲ್ಲಾ ಉಸ್ತುವಾರಿ ಸಚಿವ ಜಮೀರ್ ಅಹಮ್ಮದ್ ಮಾತನಾಡಿ, 20 ಸಾವಿರ ಮತಗಳ ಅಂತರದಿಂದ ಗೆಲ್ಲುತ್ತಾರೆಂಬ ವಿಶ್ವಾಸ ಇತ್ತು. ಆದರೂ 9400 ಮತದಿಂದ ಆಯ್ಕೆಯಾಗಿದ್ದು ಸಂತೋಷ, ತುಕರಾಂ ಅವರು 1600 ಕೋಟಿ ಅನುದಾನ ತಂದಿದ್ದಾರೆ.ನೂತನ ಶಾಸಕಿ ನನಗೆ ಕರೆ ಮಾಡಿ ಮನೆ ಕೇಳಿದ್ದಾರೆ. ಕ್ಷೇತ್ರಕ್ಕೆ ಎರೆಡು ಸಾವಿರ ಮನೆ ಮಂಜೂರು ಮಾಡಿಕೊಂಡು ಬಂದಿರುವೆ, ಸಂಡೂರು ಪಟ್ಟಣಕ್ಕೆ ಒಂದು ಸಾವಿರ ಮನೆ ನೀಡಲಿದೆ ಎಂದರು. ಅಭಿವೃದ್ಧಿ ವಿಷಯದಲ್ಲಿ ಅನ್ನಪೂರ್ಣ ಅವರು ಮೀರಿಸಲಿದ್ದಾರೆಂದರು.
ರಾಜ್ಯದಲ್ಲಿ ಈ ವರ್ಷ ಆಶ್ರಯ ಯೋಜನೆಯಲ್ಲಿ 36780 ಮನೆಗಳನ್ನು ನಿರ್ಮಾಣ ಮಾಡುತ್ತಿದೆ, ಇನ್ನು 42 ಸಾವಿರ ಮನೆಗಳ ನಿರ್ಮಾಣದ ಗುರಿ ಹೊಂದಿದೆ. ಬೆಂಗಳೂರಿನಲ್ಲಿನ ಬಡ ಜನರಿಗಾಗಿ ಮನೆಗಳನ್ನು ನಿರ್ಮಿಸುತ್ತಿದೆಂದು ತಿಳಿಸಿದರು.
ಸಮಾರಂಭದಲ್ಲಿ ಶಾಸಕ ಗಣೇಶ್, ನಾಗರಾಜ್, ಡಾ.ಶ್ರಿನಿವಾಸ್, ಲಿಡ್ಕರ್ ಅಧ್ಯಕ್ಷ ಮುಂಡ್ರಿಗಿ ನಾಗರಾಜ್, ಕೆ.ಎಂ.ಎಫ್ ಅಧ್ಯಕ್ಷ ಭೀಮಾನಾಯ್ಕ, ಮಾಜಿ ಸಚಿವ ಪಿಟಿ. ಪರಮೇಶ್ವರ ನಾಯ್ಕ್, ವಿಧಾನ ಪರಿಷತ್ ಮಾಜಿ ಸದಸ್ಯ ಕೆ.ಎಸ್.ಎಲ್.ಸ್ವಾಮಿ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರುಗಳಾದ ಅಲ್ಲಂ ಪ್ರಶಾಂತ್, ಸಿರಾಜ್ ಶೇಕ್, ಬಿ.ವಿ.ಶಿವಯೋಗಿ ಮತ್ತು ವಿಶ್ವಾಸ್ ಲಾಡ್ ಮೊದಲಾದವರು ಉಪಸ್ಥಿತರಿದ್ದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ