ಪತ್ರಿಕಾ ಸಂಪಾದಕರಾಗಿ, ಅತ್ಯುತ್ತಮ ಸಂಘಟಕರಾಗಿ, ಕನ್ನಡ ಸಾಹಿತ್ಯದಲ್ಲೇ, ವಿಶಿಷ್ಟವೆನಿಸುವ ಸಾಹಿತ್ಯ ರಚಿಸಿದ ಕವಿ, ನಾಟಕಕಾರ, ಚಂದ್ರಶೇಖರ ಪಾಟೀಲ ಅವರು, ಆಧುನಿಕ ಸಾಹಿತ್ಯ ರಚಿಸಿದ ಬರಹಗಾರರಲ್ಲೊಬ್ಬರು. ವೈಯಕ್ತಿಕ ಮತ್ತು ಸಮಕಾಲೀನ ಅನುಭವ ಓರೆಗಲ್ಲಿಗೆ ಹಚ್ಚಿ ನೋಡುವ ಸ್ವಭಾವ ಚಂಪಾ ಅವರದು. ಕಂಡದ್ದನ್ನಾಡುವ ಗಂಡು ಕವಿಗಳು, ಒಳ್ಳೆಯದನ್ನು ಎತ್ತಿ ಹಿಡಿಯುವ, ಕೆಟ್ಟದ್ದನ್ನು ತೆಗಳುವ ಜಾಯಮಾನ ಇವರದಾಗಿತ್ತು. ಕೆಟ್ಟದ್ದನ್ನು ಬೇರು ಸಹಿತ ಕಿತ್ತು ಹಾಕುವ ಪಣತೊಟ್ಟು, ಕಾರ್ಯ ಪ್ರವೃತ್ತರಾಗುವುದು ಇವರ ವೈಶಿಷ್ಟ್ಯ. ಕನ್ನಡ ನಾಡಿನ ತುಂಬಾ ಪ್ರವಾಸ ಮಾಡಿ, ತಮ್ಮ ವ್ಯಂಗ್ಯ ನುಡಿಗಳಿಂದ ಅನಿಷ್ಟಕ್ಕೆ ಕೊಳ್ಳಿ ಇಡುತ್ತಾ ಜನಜೀವನಕ್ಕೆ ಒಳಿತನ್ನು ಹಿತವನ್ನೇ ಬಯಸಿ, ಹತ್ತು ಹಲವಾರು ಹೋರಾಟ ಮಾಡಿದ ಬಂಡಾಯ ಸಾಹಿತಿ.
ಚಂಪಾ ಅವರು ತಮ್ಮ ನಾಟಕಗಳಲ್ಲಿ ನವ್ಯತೆ ತಂದು, ಅನೇಕ ಪ್ರಯೋಗಗಳನ್ನು ಪ್ರದಶಿ೯ಸಿದ ನಾಟಕಕಾರ! ನಾಟಕ ಬರೆಯಲು, ತಮ್ಮ ಅನುಭವದ ತುಡಿತ, ಹಲವಾರು ಸಮಸ್ಯೆಗಳ ಮಿಡಿತ ಮತ್ತು ಕಾವ್ಯ ಮಾಧ್ಯಮದಿಂದ ಎಂದು "ನಾನು ಮತ್ತು ಅಸಂಗತ" ಹಿನ್ನುಡಿಯಲ್ಲಿ ಬರೆದಿದ್ದಾರೆ. ಕನ್ನಡ ಭಾಷೆ ಕನ್ನಡ ನಾಡಿನ ಸಾರ್ವಭೌಮ ಭಾಷೆಯ ಸ್ಥಾನದಲ್ಲಿರಬೇಕು, ಪ್ರಾಥಮಿಕ ಶಿಕ್ಷಣ ಕನ್ನಡದಲ್ಲೇ ಬೋಧನಾ ಮಾಧ್ಯಮವಾಗಬೇಕೆಂಬ ಆಗ್ರಹ ಇವರದಾಗಿತ್ತು. ಕರ್ನಾಟಕದಲ್ಲಿ ಪರಮತ ಸಹಿಷ್ಣುತೆ ಬಯಸುವ ವ್ಯಕ್ತಿ ಅಸಹನೆಯ ಮೂರ್ತಿ ಆಗಬಾರದು. ಇದು ಅಪಾಯಕಾರಿ ಎಂದು ಯಾವುದೇ ಚಳುವಳಿ ಜನರನ್ನು ಒಟ್ಟುಗೂಡಿಸಬೇಕೆ ಹೊರತು ಪರಸ್ಪರ ದ್ವೇಷಿಸುವ ಚಳುವಳಿ ಆಗಬಾರದು ಎಂಬ ಕಳಕಳಿ ಇವರದಾಗಿತ್ತು.
ಒಬ್ಬ ವ್ಯಕ್ತಿಯ ಪರಿಚಯಾತ್ಮಕ ಲೇಖನ ಬರೆಯುವಾಗ, ಚಂಪಾ ಅವರು ನಾನು ಕಂಡಂತೆ ಎಂದು ಬರೆಯದೆ, ನನಗೆ ಕಂಡಷ್ಟು ಎಂಬುದನ್ನು ಬರೆಯುತ್ತಿದ್ದರು. ನಮ್ಮ ನಮ್ಮ ನೆಲೆಯಲ್ಲಿ ನಾವು ನೋಡಿದಷ್ಟು, ನಮಗೆ ಕಂಡದ್ದು, ನಮ್ಮ ನಮ್ಮ ಮಟ್ಟಿಗೆ ಮಾತ್ರ ಖರೆ ಎಂದು ಹೇಳುವ,ಬರೆಯುವ ಅರಿವು ಚಂಪಾ ಅವರ ವೈಶಿಷ್ಟ್ಯತೆ.
ಪ್ರೊ. ಚಂದ್ರಶೇಖರ ಪಾಟೀಲರು ಪ್ರಾಧ್ಯಾಪಕರಾಗಿ, ಸಾಹಿತಿಯಾಗಿ, ಪ್ರಚಂಡ ಚಳುವಳಿಗಾರರಾಗಿ, ಪತ್ರಿಕಾ ಸಂಪಾದಕರಾಗಿ, ಕನ್ನಡ ಪರ ಹೋರಾಟಗಾರರಾಗಿದ್ದರು. ಬಹುಶ್ರುತ ಪ್ರತಿಭೆ, ಮೊನಚಾದ ವಿಡಂಬನೆ, ಕಟು ಸತ್ಯ ಇವರ ಸಾಹಿತ್ಯದ ತಿರುಳು. ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾಗಿ ನಾಡಿನ ಉದ್ದಗಲಕ್ಕೂ ಸಂಚರಿಸಿ, ಗಡಿ ಪ್ರದೇಶದಲ್ಲಿನ ಜನರ ಕಷ್ಟ, ಅವರ ಉದ್ಧಾರಕ್ಕಾಗಿ ಅನೇಕ ಕಾರ್ಯಕ್ರಮಗಳನ್ನು ರೂಪಿಸಿ, ಸರಕಾರದ ವತಿಯಿಂದ ಜಾರಿಗೊಳಿಸಿದರು.
ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿ ಅನೇಕ ಚಟುವಟಿಕೆಗಳನ್ನು ಮಾಡಿ ಅದರಲ್ಲೂ ಪರಿಷತ್ತಿನ ಆವರಣದಲ್ಲಿ "ಪುಸ್ತಕ ಸಂತೆ" ಏರ್ಪಡಿಸಿ ಪುಸ್ತಕ ಮಾರಾಟ ಮಾಡಲು ವಿನೂತನ ಕಾರ್ಯಕ್ರಮ ಏರ್ಪಡಿಸಿ ಜನ ಮೆಚ್ಚುಗೆ ಪಡೆದ ಅಧ್ಯಕ್ಷರು.
ಪುಸ್ತಕ ನಿಧಿ ಪ್ರಾರಂಭಿಸಿ, ಕನ್ನಡ ಭಾಷೆಗೂ ಶಾಸ್ತ್ರೀಯ ಸ್ಥಾನಮಾನ ದೊರಕಿಸಿ ಕೊಡಲು ಹೋರಾಟ ನಡೆಸಿದರು. ಕನ್ನಡ ಗಣಕ ಸಮ್ಮೇಳನ ಆಯೊಜಿಸಿದ್ದು ಸ್ತುತ್ಯರ್ಹ. ಪತ್ರಿಕಾ ಕ್ಷೇತ್ರದಲ್ಲಿ "ಸಂಕ್ರಮಣ" ಪತ್ರಿಕೆಯ ಮುಖಾಂತರ ಅನನ್ಯ ಸೇವೆ ಮಾಡಿದ ಅಧ್ಯಕ್ಷರು. ಪತ್ರಿಕೆ ಮೂಲಕ ನವಜಾಗೃತಿ ಮಾಡಿದ ಧೀಮಂತ ಸಾಹಿತಿ.
10 ಕಾವ್ಯ ಸಂಕಲನಗಳು, 11 ನಾಟಕಗಳು, 12 ಸಂಪಾದಿತ ಕೃತಿಗಳು, ಆಂಗ್ಲ ಭಾಷೆಯಲ್ಲಿ "ಅಟ್ ದಿ ಅದರ್ ಎಂಡ್" ಎಂಬ ಕೃತಿಯನ್ನು ರಚಿಸಿದ ಸಾಹಿತಿ.
2-11-2004 ರಿಂದ 30-4-2008 ರವರೆಗೆ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿ ಇವರ ಅವಧಿಯಲ್ಲಿ ಮೂರು ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಗಳು ಜರುಗಿ ಯಶಸ್ವಿಯಾದವು. ಶಾಂತರಸ, ಪ್ರೊ. ಕೆ.ಎಸ್ ನಿಸಾರ್ ಅಹಮದ್, ಪ್ರೊ ಎಲ್ ಎಸ್ ಶೇಷಗಿರಿ ರಾವ್ ಸಮ್ಮೇಳನದ ಅಧ್ಯಕ್ಷತೆ ವಹಿಸಿದ್ದು ವಿಶೇಷ.
ಹತ್ತಿ ಮತ್ತೂರು ಗ್ರಾಮದಲ್ಲಿ (ಸವಣೂರು ತಾಲೂಕು, ಹಾವೇರಿ ಜಿಲ್ಲೆ) ಬಸವರಾಜ ಹಿರೇಗೌಡ ಮತ್ತು ಮುರಿಗೆವ್ವ ದಂಪತಿಗೆ ಪುತ್ರನಾಗಿ ತಾ॥ 18-6-1939 ರಂದು ಜನಿಸಿದರು. ಎಂಎ ಇಂಗ್ಲೀಷ್, ಎಂಎ ಭಾಷಾಶಾಸ್ತ್ರದಲ್ಲಿ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿ ನಿವೃತ್ತರಾದರು. ನೀಲಾ ಪಾಟೀಲ ಪತ್ನಿ, ಮತ್ತು ಇಬ್ಬರು ಹೆಣ್ಣು ಮಕ್ಕಳು ಇವರ ಕುಟುಂಬದ ವಿವರವಾಗಿದೆ.
ಗೌರವ ಪದವಿ ಮತ್ತು ಪ್ರಶಸ್ತಿ ಪುರಸ್ಕಾರಗಳು:
ಸಂಕ್ರಮಣ ಪತ್ರಿಕೆ ಸಂಪಾದಕ, ಕನಾ೯ಟಕ ರಾಜ್ಯ ಸಾಹಿತ್ಯ ಅಕಾಡೆಮಿ ಬಹುಮಾನಗಳು, ರಾಜ್ಯ ಸಾಹಿತ್ಯ ಅಕಾಡೆಮಿ ಗೌರವ ಪ್ರಶಸ್ತಿ, ರಾಜ್ಯೋತ್ಸವ ಪ್ರಶಸ್ತಿ, ರಾಜ್ಯ ನಾಟಕ ಅಕಾಡೆಮಿ ಗೌರವ ಪ್ರಶಸ್ತಿ, ಸಂದೇಶ ಮಾಧ್ಯಮ ಪ್ರಶಸ್ತಿ, ದಿನಕರ ದೇಸಾಯಿ ಪ್ರತಿಷ್ಠಾನ ಪ್ರಶಸ್ತಿ, ಕೆವಿ ಶಂಕರಗೌಡ ರಂಗಭೂಮಿ ಪ್ರಶಸ್ತಿ, ಆಳ್ವಾಸ್ ನುಡಿಸಿರಿ ಪ್ರಶಸ್ತಿ, ಪಂಪ ಪ್ರಶಸ್ತಿ ಲಭಿಸಿವೆ. 2017 ರಲ್ಲಿ ಮೈಸೂರಿನಲ್ಲಿ ಜರುಗಿದ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಸಮ್ಮೇಳನವನ್ನು ಯಶಸ್ವಿಯಾಗಿ ನೆರವೇರಿಸಿದರು. 2018 ರಲ್ಲಿ ಬಸವಶ್ರೀ ಪ್ರಶಸ್ತಿಗೆ ಪಾತ್ರರಾದರು.
ಕನ್ನಡ ನಾಡಿನಲ್ಲಿ ಸಾಹಿತ್ಯ ಚಳುವಳಿಯಾದ, ಬಂಡಾಯ, ನವೋದಯ ಸಾಹಿತ್ಯದ ಮುಂದಾಳತ್ವ ದಲ್ಲಿ ಹೋರಾಟ ನಡೆಸಿ, ಬೆಂಗಳೂರಿನಲ್ಲಿ ತಾ॥. 10-1-2022 ರಂದು ನಿಧನರಾದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ