ಲೇಖಾ ಲೋಕ-25: ಶ್ರೇಷ್ಠ ಸಾಹಿತಿ, ಸಮಾಜ ಸೇವಕರು ಬೆಳಗೆರೆ ಕೃಷ್ಣ ಶಾಸ್ತ್ರಿ

Upayuktha
0


ಗ್ರಾಮೀಣ, ಸರಳ ಸುಂದರ ವ್ಯಕ್ತಿ ಯಾರೆಂದು ಗುರುತಿಸಲು ಪ್ರಯತ್ನಿಸಿದರೆ, ಮೊದಲು ದೊರಕುವ ಮಹನೀಯರು ಬೆಳಗೆರೆ ಕೃಷ್ಣಶಾಸ್ತ್ರಿಗಳು. ಇವರ ಬದುಕೇ ನಿಶ್ಕಲ್ಮಶ, ಶಿಕ್ಷಕ ವಗ೯ದಲ್ಲಿ ಅಪಾರ ಪಾಂಡಿತ್ಯ, ಇಡಿ ಸಮಾಜವೇ ನನ್ನದು ಎಂಬ ಹೃದಯ ವೈಶಾಲ್ಯತೆ, ಮಾನವೀಯ ಗುಣಗಳ ವ್ಯಕ್ತಿ. ಅಧ್ಯಾತ್ಮ ಎಂದರೆ ಅಂಧ ತಪಸ್ಸು ಎಂದು ಭಾವಿಸದೆ ಯೋಗಿಗಳಂತೆ ಬದುಕಿದ್ದ ಮಹಾನುಭಾವರು.


ಜಾತಿ, ಮತ, ಧರ್ಮಗಳನ್ನು ಮೀರಿ, ಅಂತರಂಗದಲ್ಲಿ ಒಂದಾಗಿರಬೇಕೆಂಬ ಕಳಕಳಿ, ಹೀಗೆ ಬದುಕಬೇಕೆಂಬ ನಿದರ್ಶನ ತೋರಿಸಿ, ಕನ್ನಡ ನಾಡಿನಲ್ಲಿ ಖ್ಯಾತರಾದ ಅಪರೂಪದ ಸಾಹಿತಿ. ಆಶುಕವಿಯಾಗಿದ್ದ ಚಂದ್ರಶೇಖರ ಶಾಸ್ತ್ರಿ ಮತ್ತು ಮೋಕ್ಷ ಗುಂಡಂ ಅನ್ನಪೂರ್ಣಮ್ಮನವರ ಪುತ್ರನಾಗಿ, ಕೋಟೆ ನಾಡಾದ ಚಿತ್ರದುರ್ಗ ಜಿಲ್ಲೆಯ ಬೆಳಗೆರೆಯಲ್ಲಿ ತಾ॥ 22-5-1916 ರಂದು ಜನಿಸಿದರು. ಇವರ ಹಿರಿಯ ಸೋದರ ಕ್ಷೀರಸಾಗರ ಸಹ ಪ್ರಾಧ್ಯಾಪಕರಾಗಿ,  ಲೇಖಕರಾಗಿ ಹಲವಾರು ನಾಟಕಗಳನ್ನು, ಕಾದಂಬರಿಗಳನ್ನು ರಚಿಸಿದ ಖ್ಯಾತ ಬರಹಗಾರರು. ಇವರ ಅಕ್ಕ ಬೆಳಗೆರೆ ಜಾನಕಮ್ಮ ಮತ್ತು ತಂಗಿ ಬೆಳಗೆರೆ ಪಾವ೯ತಮ್ಮ ಸಹ ಸಂಗೀತ, ಗಮಕ ಕಲಾವಿದರಾಗಿದ್ದರು.


ಬೆಳಗೆರೆ ಕೃಷಶಾಸ್ತ್ರಿಗಳು ಬಾಲ್ಯದಲ್ಲಿ ತಮ್ಮ ಗ್ರಾಮದಲ್ಲಿ ವಿದ್ಯಾಭ್ಯಾಸ ಮಾಡಿ, ಎಸ್‌ಎಸ್‌ಎಲ್‌ಸಿ ಪಾಸು ಮಾಡಿಕೊಂಡು, ಸ್ವಲ್ಪ ಕೆಲಕಾಲ ತಮ್ಮ ಗ್ರಾಮದಲ್ಲಿ ಶಾನುಭೋಗ ವೃತ್ತಿ ಮಾಡಿ, ನಂತರ ಚಳ್ಳಕೆರೆಯಲ್ಲಿ ಶಿಕ್ಷಕರಾಗಿ ಹೊಸ ಬದುಕನ್ನು ಕಟ್ಟಿಕೊಂಡರು. ಸಂಸಾರದಲ್ಲಿ ದುರಂತ ಸಂಭವಿಸಿದ ಕಾರಣ,ಉತ್ತರದ ಹಿಮಾಲಯದತ್ತ ನಡೆದರು. ದೇಶ ಸುತ್ತಿ, ದಕ್ಷಿಣೇಶ್ವರ, ತಿರುವಣ್ಣಾಮಲೈ ಪ್ರವಾಸ ಮಾಡಿ ಮಹಾತ್ಮಾ ಗಾಂಧೀಜಿಯವರನ್ನು ಭೇಟಿ ಮಾಡಿದರು.


ಅಂತರಂಗದಲ್ಲಿ ಸಮಾಜ ಸೇವೆ ಮಾಡಬೇಕೆಂಬ ತುಡಿತ-ಮಿಡಿತ ಇವರನ್ನು ಕಾಡಿತು. ಮಕ್ಕಳಿಗೆ ವಿದ್ಯೆ ಹೇಳಿಕೊಟ್ಟು ತಮ್ಮ ಜೀವನ ಸಾರ್ಥಕ ಮಾಡಬೇಕೆಂದು ನಿಧ೯ರಿಸಿ, ತಮ್ಮಗ್ರಾಮಮಕ್ಕೆ ಸಮಾಜ ಸೇವೆಗೆ ವಾಪಸ್ ಬಂದರು. ಮೀರಾಸಾಬಿಹಳ್ಳಿ, ಹೆಗ್ಗೆರೆ ಮಂತಾದ ಗ್ರಾಮಗಳಲ್ಲಿ ಜನರನ್ನು ಸಂಘಟಿಸಿ ಪಾಠಶಾಲೆ, ಆಸ್ಪತ್ರೆ ಪ್ರಾರಂಭಿಸಿದರು. ಸಹೋದರನ ಹೆಸರಿನಲ್ಲಿ ಬೆಳಗೆರೆಯಲ್ಲಿ ಶಾಲೆ ಪ್ರಾರಂಭಿಸಿದರು. ಹಲವಾರು ಶಾಲಾ ವಿದ್ಯಾರ್ಥಿಗಳಿಗೆ. ಉಚಿತ ಊಟ, ವಸತಿಯಿರುವ ಶಾಲೆಗಳನ್ನು ಸಹ ಕಟ್ಟಿಸಿದರು. ಇವರು ಸರಳ ಬದುಕನ್ನೇ ನಂಬಿ ಸಮಾಜ ಸೇವೆ ಮಾಡುವ ಹಂಬಲದಿಂದ ತಮ್ಮ ಜೀವನ ಗುಡಿಸಲಿನಲ್ಲಿ ಜೀವಿಸಿದರು! ಪ್ರಾಚೀನ ಕವಿಗಳ ಚರಿತ್ರೆ ಬಿಂಬಿಸುವ ನಾಟಕಗಳು, ಭಾಷಣಗಳು, ಕವಿಗೋಷ್ಠಿ, ಸಾಹಿತ್ಯೋತ್ಸವ, ಜಾನಪದ ಉತ್ಸವ, ಉಪನ್ಯಾಸ, ಗ್ರಾಮೀಣ ಸಾಂಸ್ಕೃತಿಕ ಕಾರ್ಯಕ್ರಮಗಳು, ನಾಟಕ, ಏರ್ಪಡಿಸಿ ಜನರಲ್ಲಿ ಸಾಮರಸ್ಯದ ಜಾಗೃತಿಯನ್ನು ಮಾಡಿ ನವಸಂಚಲನ ಮಾಡಿದರು.

ಇವರ ಅದ್ಭುತ ಕೃತಿ "ಮರೆಯಲಾದೀತೆ?" ಬಿಂಬಿಸುವ ಕೃಷ್ಣ ಶಾಸ್ತ್ರಿಗಳ ಸರಳತೆ, ಸಿರಿಯಜ್ಜಿಯ ವ್ಯಕ್ತಿತ್ವದಲ್ಲಿ ಕಾಣಬಹುದು. ಗ್ರಾಮೀಣ ಬದುಕಿನ ಸಾಂಸ್ಕೃತಿಕ ಮತ್ತು ಕಲೆ ಭಾರತೀಯ ವಿದ್ವಾಂಸರಿಗೆ  ಮತ್ತು ವಿದೇಶದ ವಿದ್ವಾಂಸರಿಗೆ ಪರಿಚಯಿಸುವ ಮಹೋನ್ನತ ಕೃತಿಯಾಗಿದೆ. ಬೆಳಗೆರೆ ಕೃಷಶಾಸ್ತ್ರಿಗಳ ವಿದ್ವತ್ತು, ಪ್ರಾಮಾಣಿಕತೆ ವಿದ್ಯಾರ್ಥಿಗಳಲ್ಲದೆ, ಶಿಕ್ಷಕರಿಗೂ ಮಾದರಿಯೆನಿಸಿದೆ. ಕೃತಿಯಲ್ಲಿ ಸೌಹಾರ್ದತೆ, ಮಾದರಿ ಶಾಲೆಯ ಶಿಕ್ಷಣ, ಆದರ್ಶ, ದಾನ ನೀಡುವ ಹನುಮಣ್ಣನ ತ್ಯಾಗ, ಉದಾರತೆ, ತಿಮ್ಮಪ್ಪಯ್ಯ, ಸಣ್ಣಪ್ಪಯ್ಯನವರ ಸಹಾಯ ಅಮೋಘ. ಹೀಗೆ ಹಲವಾರು ಪ್ರಸಂಗಗಳು ಕೃತಿಯ ಮೆರಗನ್ನು ಹೆಚ್ಚಿಸಿವೆ. ಅನೇಕ ದೇಶಪ್ರೇಮಿ ದಾನಿಗಳು, ಸ್ವಾಮಿಗಳ ಕುರಿತ ಇವರ ಜ್ಞಾನ ಅಪರಿಮಿತ.


ಬೆಳಗೆರೆಯವರು ಯಾವುದೇ ತರಹದ ತತ್ವಗಳಾಚೆ ನಿಂತು ತಮ್ಮ ಬದುಕನ್ನು ಆಧ್ಯಾತ್ಮದ ನೆರಳಲ್ಲಿ ಬಾಳಿ, ಸುಂದರ ವ್ಯಕ್ತಿತ್ವದ ಮಜಲನ್ನು ಕಂಡುಕೊಂಡ ಸಾಧಕರು. ದಿಗ್ಗಜ ಸಾಹಿತಿಗಳಾದ ಡಿವಿಜಿ, ಶಿವರಾಮ ಕಾರಂತರು, ವೀ ಸಿ, ಮಾಸ್ತಿ ನಿಟ್ಟೂರು ಶ್ರೀನಿವಾಸರಾಯರು, ಎ.ಕೆ. ರಾಮಾನುಜನ್, ಭೈರಪ್ಪ, ಕಾಳಿಂಗ ಕೃಷ್ಣ, ಹಾ.ಮಾ ನಾಯಕ, ವೆಂಕಟರಾಮಪ್ಪ, ಗಡಿಯಾರಂ ರಾಮಕೃಷ್ಣ ಶರ್ಮ ಮುಂತಾದವರ ಒಡನಾಟ ಪಡೆದ ಮಹನೀಯರು. ಅನೇಕ ಕಾದಂಬರಿಗಳು, ಕವನ ಸಂಕಲನ, ನಾಟಕಗಳು, ಸಾಹಿತಿಗಳ ಸ್ಮೃತಿ, ಬರೆದ ಮಹನೀಯರು.


ಬೆಳಗೆರೆ ಕೃಷ್ಣ ಶಾಸ್ತ್ರಿಗಳಿಗೆ ಕರ್ನಾಟಕ ರಾಜ್ಯ ಮತ್ತು ಕೇಂದ್ರದ ಹಲವಾರು ಪ್ರಶಸ್ತಿ ಪುರಸ್ಕಾರಗಳು ಸಂದಿವೆ. ಕೇಂದ್ರ ನಾಟಕ ಅಕಾಡೆಮಿ ಪ್ರಶಸ್ತಿ, ಆಕಾಶವಾಣಿ ಪುರಸ್ಕಾರ, ಕನಾ೯ಟಕ ರಾಜ್ಯೋತ್ಸವ ಪ್ರಶಸ್ತಿ, ಅಳಸಿಂಗಾಚಾರ್ ಪ್ರಶಸ್ತಿ, ಗೌರವ ಡಾಕ್ಟರೇಟ್ ಕುವೆಂಪು ವಿಶ್ವವಿದ್ಯಾಲಯದಿಂದ ಪಡೆದರು.  ಬೆಳಗೆರೆ ಕೃಷ್ಣ ಶಾಸ್ತ್ರಿಗಳಿಗೆ ಚಿನ್ಮಯ, ಎಂಬ ಸಂಭಾವನ ಗ್ರಂಥ ಸಮರ್ಪಿಸಿ ಧನ್ಯತೆ, ಗೌರವ ನೀಡಿದ ಅಭಿಮಾನಿಗಳು ಕೃತಕೃತ್ಯರು.


ಅನೇಕ ಕೃತಿಗಳನ್ನು ರಚಿಸಿ, ಸಮಾಜ ಸೇವೆ ಮಾಡಿ, ಶಿಕ್ಷಣ ಕ್ಷೇತ್ರದಲ್ಲಿ ಅದ್ಭುತ ಸಂಘಟನೆ ಮಾಡಿ, ನಾಡಿಗೆ ಮಾದರಿಯ ವ್ಯಕ್ತಿಯಾಗಿ, ತಮ್ಮ 97ನೇ ಇಳಿ ವಯಸ್ಸಿನಲ್ಲಿ 23-3-2013 ರಂದು ದೇಹ ತ್ಯಾಗ ಮಾಡಿದ ಮಹನೀಯರು.  



ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

إرسال تعليق

0 تعليقات
إرسال تعليق (0)
Maruti Suzuki Festival of Colours
Maruti Suzuki Festival of Colours
To Top