ಸ್ವಾತಂತ್ರ್ಯದ ಕಹಳೆಯ ಸದ್ದು ಮೊಳಗಿಸಲು ಆಬಾಲ ವೃದ್ಧರೆಂಬಂತೆ ಭಾರತೀಯ ನೆಲದಲ್ಲಿ ಪ್ರಾಣ ಕೊಟ್ಟವರು ಅಸಂಖ್ಯರು. ಅದರಲ್ಲಿ ಹದಿಹರೆಯದ ಬಾಲಕ ಖುದಿರಾಮ್ ಬೋಸ್ ಮಹತ್ವದ ಪಾತ್ರವಹಿಸಿದ್ದಾರೆ.
1889 ರ ಡಿಸೆಂಬರ್ 3 ರಂದು ಜನ್ಮ ತಾಳಿದ ಇವರು ಮಾತೃ ಯೋಗದಿಂದ ಬಳಲಿ ಅಕ್ಕ ಭಾವರ ವಾತ್ಸಲ್ಯಕ್ಕೆ ಭಾಜನರಾದರು. ಕ್ರಾಂತಿಕಾರಿ ಪಥದಲ್ಲಿ ಬಾಲ್ಯದಲ್ಲೇ ತೊಡಗಿಸಿಕೊಂಡ ಇವರು "ವಂದೇ ಮಾತರಂ" ಗೀತೆಯನ್ನು ತಮ್ಮ ಉಸಿರ ಒಳಗೆ ಅಂತರ್ಗತ ಮಾಡಿಕೊಂಡ ದೇಶಭಕ್ತರು. ಸುಮಾರು 15 ರ ಹರೆಯದಲ್ಲಿಯೇ ಕ್ರಾಂತಿಕಾರಿ ಚಳವಳಿಗೆ ಸಂಬಂಧಿಸಿದ ಕರಪತ್ರವನ್ನು ಹಂಚುತ್ತಾ ಅದರ ಫಲವಾಗಿ ಜೈಲುವಾಸವನ್ನು ಅನುಭವಿಸಿದ್ದರು.
ಸ್ವಾತಂತ್ರ್ಯ ಸಮರದ ಜ್ಯೋತಿ ರಾಷ್ಟ್ರ ವ್ಯಾಪ್ತಿ ವ್ಯಾಪಿಸಿದ್ದು ಮನೆ ಮನೆಯಲ್ಲಿಯೂ ಸ್ವಾತಂತ್ರ್ಯ ಹೋರಾಟದ ಕಹಳೆ ಮೊಳಗುತ್ತಿದ್ದ ಕಾಲವದು. ಅಂದಿನ ಹತ್ತು ಹಲವು ಪತ್ರಿಕೆಗಳು ಅದೆಷ್ಟೇ ನಿರ್ಬಂಧಗಳು ಬ್ರಿಟಿಷ್ ಸರ್ಕಾರದಿಂದ ಬಂದರೂ ಸದಾ ಸ್ವಾತಂತ್ರ್ಯ ಲಕ್ಷ್ಮಿಯ ಆರಾಧಕರಾಗಿಯೇ ಸಾಗುತ್ತಿದ್ದರು. ಹೀಗಿರಲು ಒಂದೊಮ್ಮೆ ಅರವಿಂದ ಘೋಷರ "ವಂದೇ ಮಾತರಂ" ಪತ್ರಿಕೆಯ ಮೇಲೆ ಆಂಗ್ಲರ ಕೆಂಗಣ್ಣು ಬಿತ್ತು. ಈ ಪತ್ರಿಕೆಯ ವಿರುದ್ಧ ವಿಚಾರಣೆಗೆ ಆಂಗ್ಲರು ಮುಂದಾದರು. ಕೆಚ್ಚೆದೆಯ ದೇಶ ಭಕ್ತ ಗುಂಪೊಂದು ಇದನ್ನು ವಿರೋಧಿಸಿ ನಿರಾಯುಧರಾಗಿ ಪ್ರತಿಭಟಿಸುತ್ತಿದ್ದರು. ಆದರೆ ಆಂಗ್ಲ ಪೊಲೀಸರು ಲಾಠಿ ಚಾರ್ಜ್ ನಿಂದ ಇದನ್ನು ಶಮನಗೊಳಿಸುವತ್ತ ಪ್ರವೃತ್ತರಾಗಿದ್ದರು.
ಇದರಿಂದ ಕೆರಳಿದ 15 ರ ಹರೆಯದ ಸುಶೀಲ್ ಸೇನ್ ಎಂಬ ಬಾಲಕ ಬ್ರಿಟಿಷ್ ಅಧಿಕಾರಿಗೆ ತಿರುಗಿಸಿ ಹೊಡೆದ. ಇದರಿಂದ ಕುಪಿತಗೊಂಡ ಕಿಂಗ್ ಫೋರ್ಡ್ ಆ ಬಾಲಕನನ್ನು ಮ್ಯಾಜಿಸ್ಟ್ರೇಟ್ ಮುಂದೆ ನಿಲ್ಲಿಸಿ ಅವನ ವಯಸ್ಸನ್ನು ಗಮನಿಸದೆ 15 ಚಡಿ ಏಟುಗಳ ಘೋರ ಶಿಕ್ಷೆಯನ್ನು ವಿಧಿಸಿ ಕುಖ್ಯಾತಿಯನ್ನು ಗಳಿಸಿದ.
ಆ ಬಾಲಕನಂತೂ ತಾಯಿ ಭಾರತಿಯ ಸ್ವಾತಂತ್ರ್ಯ ಸಮರದಲ್ಲಿ ತನ್ನ ಅಳಿಲು ಸೇವೆಯನ್ನು ಹೆಮ್ಮೆಪಡುತ್ತಾ ಏಟನ್ನು ಅನುಭವಿಸಿದ. ಆದರೆ ಉಳಿದ ಕ್ರಾಂತಿಕಾರಿಗಳು ಈ ವಿಕೃತಿಯನ್ನು ಸಹಿಸದೆ ಕಿಂಗ್ ಫೋರ್ಡ್ ನನ್ನು ಬಂಧಿಸಲು ನಿರ್ಧರಿಸಿ ಕಾರ್ಯೋನ್ಮುಖರಾದರು. ಇದನ್ನರಿತ ಆಂಗ್ಲರು ಈತನನ್ನು ಮುಜಾಫರ್ಪುರಕ್ಕೆ ವರ್ಗಾಯಿಸಿದರು.
ಹೇಗಾದರಾಗಲಿ ಕಿಂಗ್ ಫೋರ್ಡನನ್ನು ಕೊಲ್ಲಲೇಬೇಕು ಎನ್ನುವ ದೃಢ ನಿರ್ಧಾರ ಮಾಡಿದ್ದ ಕ್ರಾಂತಿಕಾರಿಗಳು, ಈ ಕಾರ್ಯವನ್ನು ಯುಗಾಂತರ ಗುಂಪಿನ ನಾಯಕರಾದ ಸತ್ಯೇಂದ್ರನಾಥ ಬೋಸ್, ಖುದಿರಾಮ್ ಬೋಸ್ ಮತ್ತು ಆತನ ಸಹ ಕ್ರಾಂತಿಕಾರಿ ಪ್ರಫುಲ್ ಚಾಕಿಗೆ ವಹಿಸಿದರು. ಆಜ್ಞೆಯಂತೆ ತೆರಳಿದ ಈ ಕ್ರಾಂತಿಕಾರಿಗಳು ಕಿಂಗ್ ಫೋರ್ಡನ ಚಲನವಲನಗಳನ್ನು ಗಮನಿಸತೊಡಗಿದರು.
ಕಿಂಗ್ ಫೋರ್ಡ್ ನು ಸಂಜೆ ತನ್ನ ಕಾರ್ಯವನ್ನು ಮುಗಿಸಿ ಹಿಂತಿರುಗುವಾಗ ಆತನ ಕಾರ್ ಮೇಲೆ ಬಾಂಬ್ ಎಸೆದು ಆತನ ಅಂತ್ಯಕ್ಕೆ ಎಣೆಯಾಗಿಸಬೇಕು ಎಂಬ ಪ್ರಯತ್ನದಲ್ಲಿ ಈ ಕ್ರಾಂತಿಕಾರಿಗಳು ಮುನ್ನುಗ್ಗಿದರು. ಕಾರ್ ಬರುವುದೇನೋ ಬಂದಿತು. ಖುದಿರಾಮ್ ಬೋಸ್ ಮತ್ತು ಪ್ರಪುಲ್ಲಾ ಚಾಕಿ ತಮ್ಮ ಯೋಜನೆಯಂತೆ ಬಾಂಬ್ ಎಸೆಯುವುದರಲ್ಲಿ ಸಫಲರಾದರು. ಕಿಂಗ್ ಫೋರ್ಡ್ ಮರಣವನ್ನು ಹೊಂಬಿದ ಎಂದು ಭಾವಿಸಿ ಅವರು ಅಲ್ಲಿಂದ ತಲೆಮರೆಸಿಕೊಂಡರು.
ಆದರೆ ಕಿಂಗ್ ಫೋರ್ಡ್ ಸತ್ತಿರಲಿಲ್ಲ. ಆ ಕಾರಿನಲ್ಲಿ ಈರ್ವರು ಮಹಿಳೆಯರ ಮರಣವಾಗಿತ್ತು. ಇದೊಂದು ವಿಫಲ ಪ್ರಯತ್ನವಾಗಿದ್ದರೂ ಆಂಗ್ಲ ಸರ್ಕಾರಕ್ಕೆ ಈ ಪ್ರಯತ್ನದಿಂದ ನಡುಕ ಹುಟ್ಟಿದ್ದಂತೂ ನಿಜ. ಈ ವೀರ ಯೋಧರು ತಪ್ಪಿಸಿಕೊಂಡಿದ್ದೇನೋ ನಿಜ, ಆದರೆ ಸುಮಾರು 25 ಮೈಲು ದೂರದಲ್ಲಿ ಖುದಿರಾಮ್ ಬೋಸ್ ನ ಬಂಧನವಾಯಿತು. ತಪ್ಪಿಸಿಕೊಳ್ಳಲು ಮಾಡಿದ ಸರ್ವ ಪ್ರಯತ್ನಗಳೂ ನೀರಿನಲ್ಲಿ ಮಾಡಿದ ಹೋಮದಂತೆ ನಿಷ್ಪ್ರಯೋಜಕವೆನಿಸಿತು. 1908 ರ ಆಗಸ್ಟ್ 11ರಂದು ಅವರನ್ನು ಗಲ್ಲಿಗೇರಿಸಲಾಯಿತು.
ಈ ರೀತಿಯಲ್ಲಿ ಸ್ವಾತಂತ್ರ್ಯ ಸಮರದ ಮಹಾನ್ ದೀವಿಗೆ, ಹದಿಹರೆಯದ ಅಪ್ರತಿಮ ದೇಶಭಕ್ತ ಖುದಿರಾಮ್ ಬೋಸ್ ಎಂಬ ಪುಷ್ಪ ಭಾರತ ಮಾತೆಯ ಪಾದವನ್ನು ಅಲಂಕರಿಸಿತು. ಈ ಮಹಾನ್ ಸಾಧಕನ ಕಥೆ ಸಹಸ್ರ ವರ್ಷಗಳು ಸಂದರೂ ಯುವ ಜನತೆಗೆ ಮಾದರಿ, ಹಾಗೂ ಅಪ್ರತಿಮ ದೇಶಪ್ರೇಮಕ್ಕೆ ಹಿಡಿದ ಕೈಗನ್ನಡಿ ಎಂಬುದು ಅಚ್ಚಳಿಯದ ಸತ್ಯ.
- ಅಭಿಜ್ಞಾ ಉಪಾಧ್ಯಾಯ
ಇತಿಹಾಸ ಪ್ರಾಧ್ಯಾಪಕಿ
ಎಸ್.ಡಿ.ಎಂ. ಕಾಲೇಜು (ಸ್ವಾಯತ್ತ), ಉಜಿರೆ
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ