ಬೆಳಗಾವಿ: ರಾಜ್ಯ ಸರ್ಕಾರದ ಸಿವಿಲ್ ಸೇವೆಯಲ್ಲಿನ ನೇರ ನೇಮಕಾತಿಯಲ್ಲಿ ಕ್ರೀಡಾ ಸಾಧಕರಿಗೆ ಶೇ.2ರಷ್ಟು ಹುದ್ದೆಗಳನ್ನು ಮೀಸಲಿರಿಸುವ ನಿಯಮಕ್ಕೆ ಸರ್ಕಾರ ತಡೆಯೊಡ್ಡಿದ ವಿಚಾರವನ್ನು ವಿಧಾನ ಪರಿಷತ್ ಶಾಸಕ ಹಾಗೂ ರಾಜ್ಯ ಬಿಜೆಪಿ ಕಾರ್ಯದರ್ಶಿ ಡಿ.ಎಸ್. ಅರುಣ್ ಅವರು ಶೂನ್ಯ ವೇಳೆಯಲ್ಲಿ ಪ್ರಸ್ತಾಪಿಸಿದರು.
ಸಿವಿಲ್ ಸೇವೆಯಲ್ಲಿನ ನೇರ ನೇಮಕಾತಿಯಲ್ಲಿ ಸಾಮಾನ್ಯವರ್ಗ, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮತ್ತು ಇತರೆ ಹಿಂದುಳಿದ ವರ್ಗಗಳ ಪ್ರತಿಯೊಂದು ಪ್ರವರ್ಗದಿಂದಲೂ ಎಲ್ಲ ಇಲಾಖೆಗಳ ಮಂಜೂರಾದ ವೃಂದ ಬಲದಲ್ಲಿ ಶೇ.2ರಷ್ಟು ಹುದ್ದೆಗಳನ್ನು ಕ್ರೀಡಾ ಸಾಧಕರಿಗೆ ಮೀಸಲಿರಿಸಿ ಸೆಪ್ಟೆಂಬರ್ 9ರಂದು ರಾಜ್ಯ ಸರ್ಕಾರ ಅಧಿಸೂಚನೆ ಹೊರಡಿಸಿರುವುದು ತಿಳಿದು ಬಂದಿರುವ ಕುರಿತು ಮಾಹಿತಿ ನೀಡಿ, ಯಾವ್ಯಾವ ಕ್ರೀಡೆಯಿಂದ ಸಾಧಕರನ್ನು ಆಯ್ಕೆ ಮಾಡಿಕೊಳ್ಳಬೇಕು ಎಂಬ ವಿಚಾರದಲ್ಲಿ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ ಹಾಗೂ ಕ್ರೀಡಾ ಇಲಾಖೆ ನಡುವೆ ಗೊಂದಲ ಸೃಷ್ಟಿಯಾಗಿದ್ದು, ಕರ್ನಾಟಕ ನಾಗರಿಕ ಸೇವಾ (ಸಾಮಾನ್ಯ ನೇಮಕಾತಿ) ನಿಯಮಗಳು 1977ರ ನಿಯಮ 9ಕ್ಕೆ ಮಾಡಿರುವ ತಿದ್ದುಪಡಿಯನ್ನು ಪುನರ್ ಪರಿಶೀಲಿಸಲು ಮುಂದಾಗಿರುವ ವಿಚಾರವನ್ನು ಮಾನ್ಯ ಶಾಸಕರು ಪ್ರಸ್ತಾಪಿಸಿದರು.
ಕಾಮನ್‌ವೆಲ್ತ್ ಏಷಿಯನ್ ಗೇಮ್ಸ್, ಒಲಂಪಿಕ್ಸ್ ಸೇರಿದಂತೆ ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ನಡೆಯುವ ಕ್ರೀಡಾಕೂಟಗಳ ಯಾವ್ಯಾವ ಕ್ರೀಡೆಯಲ್ಲಿ ಎಷ್ಟೆಷ್ಟು ಅಂಕ ಗಳಿಸುತ್ತಾರೆ ಇದನ್ನು ಯಾವ ರೀತಿ ಅಂದಾಜಿಸಬೇಕು ಎಂಬ ಗೊಂದಲಗಳು ಸರ್ಕಾರದ ಮಟ್ಟದಲ್ಲಿದ್ದು, ಶೀಘ್ರದಲ್ಲಿ ಪ್ರಮುಖ ವಿಚಾರವಾಗಿರುವ ಸದರಿ ವಿಷಯವನ್ನು ಬಗೆಹರಿಸಿ ಕ್ರೀಡಾ ಸಾಧಕರಿಗೆ ಅನ್ಯಾಯವಾಗದಂತೆ, ನಿರ್ದಿಷ್ಟ ಕಾಲಮಿತಿಯೊಳಗೆ ಸರ್ಕಾರ ನೇರ ನೇಮಕಾತಿಯಲ್ಲಿ ಕ್ರೀಡಾ ಸಾಧಕರಿಗೆ ನೀಡಬೇಕಿದ್ದ ಶೇ 2ರ ಮೀಸಲಾತಿಯನ್ನು ನೀಡಿ, ಕ್ರೀಡಾ ಸಾಧಕರಿಗೆ ಪ್ರೋತ್ಸಾಹಿಸಬೇಕೆಂದು ಮುಖ್ಯಮಂತ್ರಿಗಳನ್ನು, ಡಿ.ಎಸ್ ಅರುಣ್ ಅವರು ಶೂನ್ಯ ವೇಳೆಯಲ್ಲಿ ಒತ್ತಾಯಿಸಿದರು.
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ