ಇಪ್ಪತ್ತೊಂದನೇ ಶತಮಾನವು ಸ್ಪರ್ಧಾತ್ಮಕ ಯುಗವಾಗಿದೆ. ಇದರೊಂದಿಗಿನ ಜೀವನವು ಸುಖ ದುಃಖಗಳು ಸಮ್ಮಿಳಿತವಾಗಿದೆ. ಜೀವನದ ಜಂಜಾಟಗಳ ನಡುವೆಯೂ ಮನುಷ್ಯ ನಗು, ಸಂತೋಷ, ಸಡಗರ ಸಂಭ್ರಮದ ಆಚರಣೆಗಳನ್ನು ಅಪೇಕ್ಷಿಸುತ್ತ ಹೊಸ ಭರವಸೆಗಳ ಈಡೇರಿಕೆಯ ನಿರೀಕ್ಷೆಯಲ್ಲಿ ತನ್ನನ್ನು ತಾನು ತೊಡಗಿಸಿಕೊಳ್ಳುತ್ತಾನೆ.
ನಮ್ಮ ಬದುಕಿನಲ್ಲಿ ಕಳೆದು ಹೋದ 2024 ರ ದಿನಗಳು ಮತ್ತೆಂದೂ ಸಿಗವು ಎಂಬ ಸಂಗತಿ ನಮಗೆಲ್ಲ ತಿಳಿದೇ ಇದೆ. ಹಳೆಯ ವರ್ಷವೊಂದರ ಕೊನೆಯ ದಿನದ ಕೊನೆಯ ಕ್ಷಣವು ಮುಕ್ತಾಯವಾಗುವ ಸಮಯ ಹಾಗೆಯೆ ಹೊಸ ವರ್ಷವೊಂದರ ಮೊದಲ ದಿನದ ಮೊದಲ ಕ್ಷಣ ಪ್ರಾರಂಭವಾಗುವ ಸಮಯ ಇವೆರಡೂ ಬಹಳಷ್ಟು ಮಹತ್ವವನ್ನು ಪಡೆದುಕೊಳ್ಳುತ್ತವೆ.
ಹೊಸ ವರ್ಷದ ಆರಂಭದ ಕ್ಷಣವನ್ನು ಮನುಷ್ಯ ವೈವಿಧ್ಯಮಯವಾಗಿ, ವೈಶಿಷ್ಠ್ಯಪೂರ್ಣವಾಗಿ, ವಿಭಿನ್ನವಾಗಿ ಸಡಗರ ಸಂಭ್ರಮದಿಂದ ಸ್ವೀಕರಿಸುತ್ತಾನೆ. ಸಾಮಾನ್ಯವಾಗಿ ಜಗತ್ತಿನ ಪ್ರತಿಯೊಬ್ಬರಿಗೂ ಜನವರಿ 1 ನೇ ತಾರೀಕು ವರ್ಷಾರಂಭದ ಮೊದಲ ದಿನವಾಗಿರುತ್ತದೆ.
ಈ ದಿನದಂದು ಅನುಭವಿಸಬೇಕಾದ ಸುಖ ಸಂತೋಷದ ಕ್ಷಣವನ್ನು ಯಾರೂ ಕಳೆದುಕೊಳ್ಳಲು ಇಚ್ಚಿಸುವುದಿಲ್ಲ. ಡಿಸೆಂಬರ್ 31 ರ ರಾತ್ರಿ 12:00 ಗಂಟೆಗೆ ಹಳೆಯ ವರ್ಷದ ಕೊನೆಯ ಕ್ಷಣಕ್ಕೆ ವಿದಾಯ ಹೇಳುವ ಮೂಲಕ ಹೊಸ ವರ್ಷದ ಮೊದಲ ಕ್ಷಣವನ್ನು ಸಂಭ್ರಮಿಸುತ್ತಾರೆ. ಗೆಳೆಯರ ಬಳಗಗಳು ಈ ಕ್ಷಣಕ್ಕಾಗಿ ಕಾಯುತ್ತಾ ಇರುತ್ತವೆ. ನವ ಚೈತನ್ಯದ ನವೋಲ್ಲಾಸ ಸರ್ವರ ಮನದಲ್ಲೂ ತುಂಬಿರುತ್ತದೆ.
ಪ್ರಪಂಚವು ವಿಭಿನ್ನ, ವಿಶಿಷ್ಟ ಮತ್ತು ವೈವಿಧ್ಯಮಯವಾಗಿದೆ. ಪ್ರಪಂಚದಲ್ಲಿ ಬದಲಾವಣೆ ಸಹಜವಾದುದರಿಂದ ಜನರ ದೃಷ್ಟಿಕೋನದಲ್ಲಿ ವಿಭಿನ್ನತೆ, ವೈಶಿಷ್ಟ್ಯತೆ ಹಾಗೂ ವೈವಿಧ್ಯತೆಗಳನ್ನು ಕಾಣುವುದು ಸಹಜವೇ ಸರಿ.
ಇಷ್ಟೆಲ್ಲಾ ಮುಂದುವರಿದ ಪ್ರಪಂಚದಲ್ಲಿ ಮಾನವನು ಅತ್ಯಂತ ಸೂಕ್ಷ್ಮ ಮನಸ್ಸಿನ ಜೀವಿಯಾಗಿದ್ದಾನೆ. ತನ್ನ ಸುಖ ಸಂತೋಷಗಳಿಗೆ ಯಾವುದೇ ಕಾರಣಕ್ಕೂ ಧಕ್ಕೆ ಬಾರದಂತೆ ನೋಡಿಕೊಳ್ಳುಲು ಹರಸಾಹಸದ ಪ್ರಯತ್ನವನ್ನು ನಿರಂತರವಾಗಿ ಮಾಡುತ್ತಲೇ ಇರುತ್ತಾನೆ. ಹಾಗೆಯೇ ವರ್ಷಾರಂಭದ ಮೊದಲ ದಿನವನ್ನು ನವೋಲ್ಲಾಸದಿಂದ ಕಳೆಯಲು ಇಚ್ಚಿಸುತ್ತಾನೆ.
ಲೋಕೋಭಿನ್ನರುಚಿ ಎಂಬಂತೆ ಒಂದೊಂದು ಧರ್ಮದವರು ತಮ್ಮ ದೇವಾಲಯ, ಪ್ರಾರ್ಥನಾ ಮಂದಿರ, ಚರ್ಚ್, ಮಸೀದಿ, ಗುರುದ್ವಾರ ಮುಂತಾದ ಪವಿತ್ರ ಸ್ಥಳಗಳಿಗೆ ಹೋಗಿ ತಮ್ಮ ಇಷ್ಟದೇವತಾ ಪ್ರಾರ್ಥನೆಯನ್ನು ಸಲ್ಲಿಸುವರು.
ವರ್ಷ ಪೂರ್ತಿ ಹರ್ಷವಿರಲಿ ಎಂದು ದೇವರನ್ನು ಭಕ್ತಿಯಿಂದ ಭಜಿಸುವರು. 2024 ಅಂದರೆ ಕಳೆದ ವರ್ಷದಲ್ಲುಂಟಾದ ನೋವನ್ನು ಮರೆಯುವಂತೆ, ಸಿಹಿ ನೆನಪುಗಳು ಸದಾ ಉಳಿಯುವಂತೆ ತಮ್ಮ ತಮ್ಮ ಇಷ್ಟ ದೇವತೆಗಳನ್ನು ಬೇಡಿಕೊಳ್ಳುವರು. ಹಳೆಯ ವರ್ಷ ಮುಗಿಯುವ ಮೊದಲು, ನಾವು ಇನ್ನೊಂದು ವರ್ಷವನ್ನು ಪ್ರವೇಶಿಸುವ ಮೊದಲು ದೇವರು ನಮಗೆ ನೀಡಿದ ಎಲ್ಲಾ ಆಶೀರ್ವಾದಗಳನ್ನು ಪಡೆದುಕೊಳ್ಳೋಣ.
ಸದ್ಯ ನಾವು 2024 ಕ್ಕೆ ಅಂತಿಮ ನಮನಗಳನ್ನು ಹೇಳಲೇಬೇಕಾಗಿದೆ. ಆದರೆ, ಈ ಒಂದು ವರ್ಷದಲ್ಲಿ ನಮ್ಮ ಜೀವನಲ್ಲಿ ನಡೆದ ಘಟನೆಗಳನ್ನು , ಪಡೆದ ಅನುಭವಗಳನ್ನು ನಾವು ವಿಮರ್ಶೆ ಮಾಡಿಕೊಂಡು ಒಳ್ಳೆಯದು ಮತ್ತು ಕೆಟ್ಟದ್ದನ್ನು ವಿಭಾಗಿಸಬೇಕಾಗಿದೆ. ಕೆಟ್ಟದ್ದನ್ನು ಅಲ್ಲೇ ಬಿಟ್ಟು, ಒಳ್ಳೆಯದನ್ನು ಬದುಕಿನಲ್ಲಿ ಅಳವಡಿಸಿಕೊಂಡು ಅನುಸರಿಸಿಕೊಂಡು ಹೋಗಬೇಕಾಗಿದೆ.
ಈಗ ನಮ್ಮಲ್ಲಿ ತುಂಬಾ ಸಮಯವಿಲ್ಲ. ಏಕೆಂದರೆ ಸಮಯ ಕಣ್ಣ ರೆಪ್ಪೆ ಮುಚ್ಚಿ ತೆರೆಯುವಷ್ಟರಲ್ಲಿ ಸರಿದಿರುತ್ತದೆ. ನಮ್ಮ ಬದುಕಿನಲ್ಲಿ ಪ್ರತಿಕ್ಷಣವೂ ಅಮೂಲ್ಯ. ಅದಕ್ಕೇ ಹೇಳುವುದು ಮುತ್ತು ಕಳೆದರೆ ಸಿಕ್ಕೀತು ಹೊತ್ತು ಕಳೆದರೆ ಸಿಕ್ಕೀತೆ ? ಇಲ್ಲ , ಕಳೆದು ಹೋದ ಸಮಯ ಮತ್ತೆಂದೂ ಬಾರದು. ಏನೋ ಒಂದು ತರಹದ ಭಾವುಕ, ಭಾವನಾತ್ಮಕ ಕ್ಷಣವಿದು.
ಏಕೆಂದರೆ, ಸಮಯ ಎಂಬುದು ಅದ್ಭುತ ಮತ್ತು ಅಮೂಲ್ಯ. ಈ ದೃಷ್ಟಿಯಿಂದ ನೋಡಿದರೆ ಪ್ರತೀ ವರ್ಷವೂ ಸರಿಯುವ ಕ್ಷಣ ಮನಸಿನಲ್ಲೇನೋ ನೋವು ತರುತ್ತವೆ. ಅದಕ್ಕಾಗಿ ನೊಂದು ಕುಳಿತುಕೊಳ್ಳಬೇಕಾಗಿಲ್ಲ. ಏಕೆಂದರೆ, ಮಳೆ ಬಂದಾಗ ಹಳೆ ನೀರು ಕೊಚ್ಚಿ ಹೋಗಿ ಹೊಸ ನೀರು ಬರುವಂತೆ 2024 ರ ಕೊನೆಯ ಕ್ಷಣವನ್ನು ಕಳೆಯುವ ಬೆನ್ನಲೇ 2025ರ ಮೊದಲ ಕ್ಷಣವನ್ನು ಪಡೆದುಕೊಳ್ಳುತ್ತೇವೆ.
ಹೊಸ ವರ್ಷದ ಆಚರಣೆಯ ಸಂಭ್ರಮವು ಪ್ರಾರಂಭವಾಗುತ್ತದೆ. ಹಾಡುಗಳನ್ನು ಹೇಳುವುದು, ನೃತ್ಯಮಾಡುವುದು, ಪಾನೀಯಗಳನ್ನು ಸೇವಿಸುವುದು, ಪಟಾಕಿಗಳನ್ನು ಸಿಡಿಸಿ ಸಂಭ್ರಮಿಸುವುದು, ಹೊಸ ಬಟ್ಟೆಗಳನ್ನು ತೊಡುವುದು, ಸವಿನೆನಪಿಗಾಗಿ ಹೊಸ ವಸ್ತುವೊಂದನ್ನು ಖರೀದಿಸುವುದು ಹೀಗೆ ತಮಗನಿಸಿದ ಪ್ರಿಯವಾದ, ಸಂತಸದಾಯಕ ಕೆಲಸಗಳನ್ನು ಮಾಡುತ್ತಾ ಇಡೀ ದಿನ ತಮ್ಮ ಮನಸ್ಸನ್ನು ಸಂತೋಷದಿಂದ ಇಟ್ಟುಕೊಳ್ಳಲು ಮಾನವರು ಬಯಸುವರು.
ಹೊಸ ವರ್ಷದ ಆರಂಭಿಕ ದಿನಾಚರಣೆಯು ಕೆಲವರಿಗೆ ಒಂದು ಸುಸಂದರ್ಭವಿದ್ದಂತೆ. ( IT'S AN UNFORGETTABLE MOMENT IN EVERYONE'S LIFE ) ನಮ್ಮ ಬದುಕಿನ ಅಧ್ಯಾಯದ ಹೊಸ ಪುಟ ತೆರೆಯಲು, ಹೊಸ ಉಲ್ಲಾಸ, ಹೊಸ ಚೈತನ್ಯ, ಹೊಸ ವಿಶ್ವಾಸ ತುಂಬಲು ಹೊಸ ವರ್ಷ ಕಾದಿರುತ್ತದೆ.
ಈಗ ನಾವು ಹೊಸ ವರ್ಷದ ಸ್ವಾಗತದ ಸಂಭ್ರಮದಲ್ಲಿದ್ದೇವೆ. ಹೊಸ ವರ್ಷದ ಮೊದಲ ದಿನ 01 - 01 - 2025 ಬಂದೇ ಬಿಟ್ಟಿದೆ. ಹೊಸ ಕ್ಯಾಲೆಂಡರ್ ದಿನಗಳನ್ನು ಸದುಪಯೋಗ ಮಾಡಿಕೊಳ್ಳುವ ಕ್ಷಣವೂ ನಮ್ಮ ಮುಂದಿದೆ.
ಹೊಸ ವರ್ಷವನ್ನು ಮೊದಲು ಓಷಿಯಾನಿಯಾದಲ್ಲಿ ಆಚರಿಸಲಾಗುತ್ತದೆ. ಈ ಘಟನೆಯನ್ನು ಮೊದಲು ಸಣ್ಣ ಪೆಸಿಫಿಕ್ ದ್ವೀಪ ರಾಷ್ಟ್ರಗಳಾದ ಟೊಂಗಾ, ಸಮೋವಾ ಮತ್ತು ಕಿರಿಬಾತಿಯಲ್ಲಿ ಆಚರಿಸಲಾಗುತ್ತದೆ. ಹೊಸ ವರ್ಷವನ್ನು ಆಚರಿಸುವಲ್ಲಿ ನ್ಯೂಜಿಲೆಂಡ್ ನಂತರದ ಸ್ಥಾನದಲ್ಲಿದೆ, ನಂತರ ಆಸ್ಟ್ರೇಲಿಯಾ, ಜಪಾನ್ ಮತ್ತು ದಕ್ಷಿಣ ಕೊರಿಯಾ ದೇಶಗಳಾಗಿವೆ. ಹೊಸ ವರ್ಷವನ್ನು ಆಚರಿಸುವ ಕೊನೆಯ ಸ್ಥಳವೆಂದರೆ ಮಧ್ಯ ಪೆಸಿಫಿಕ್ ಮಹಾಸಾಗರದಲ್ಲಿರುವ ಬೇಕರ್ಸ್ ದ್ವೀಪ.
ಸುಮಾರು 4000 ವರ್ಷಗಳ ಹಿಂದೆ, ಪ್ರಾಚೀನ ಮೆಸೊಪೊಟೇಮಿಯಾದ ಬ್ಯಾಬಿಲೋನ್ ನಗರದಲ್ಲಿ ಮೊದಲ ಹೊಸ ವರ್ಷದ ಆಚರಣೆಗಳನ್ನು ಗುರುತಿಸಲಾಯಿತು ಎಂದು ಅಧ್ಯಯನಗಳಿಂದ ತಿಳಿದು ಬರುತ್ತದೆ.
ಪ್ರತಿ ವರ್ಷವೂ ಹೊಸ ವರ್ಷವನ್ನು ಆಚರಿಸಲು ಪ್ರತಿಯೊಂದು ರಾಷ್ಟ್ರವೂ ತನ್ನದೇ ಆದ ಮತ್ತು ವಿಶಿಷ್ಟವಾದ ಪರಂಪರೆಯನ್ನು ಹೊಂದಿದೆ. ಇದೇ ಸಂದರ್ಭದಲ್ಲಿ ಭಾರತವು ಹೊಸ ವರ್ಷವನ್ನು ಆಚರಿಸುವ ವಿಶಿಷ್ಟ ಶೈಲಿಯನ್ನು ಹೊಂದಿದೆ. ಭಾರತದ ಎಲ್ಲಾ ರಾಜ್ಯಗಳು ತಮ್ಮದೇ ಆದ ಹೊಸ ವರ್ಷದ ಸಂಪ್ರದಾಯಗಳನ್ನು ಹೊಂದಿವೆ.
ತಮ್ಮ ಅತ್ಯಂತ ಹಳೆಯ ಪರಂಪರೆಯ ಪ್ರಕಾರ, ಭಾರತದ ಅನೇಕ ರಾಜ್ಯಗಳು ಹೊಸ ವರ್ಷವನ್ನು ಯುಗಾದಿ, ಪೊಹೆಲಾ ಬೋಯಿಶಾಖ್, ನವ್ರೆಹ್, ಪುತ್ಥಂಡು, ಬೈಸಾಖಿ, ಬೋಹಾಗ್ ಬಿಹು, ಗುಡಿ ಪಾಡ್ವಾ ಮುಂತಾದವುಗಳೊಂದಿಗೆ ಆಚರಿಸುತ್ತವೆ.
ಶಾಲೆ, ಕಾಲೇಜು, ಕಛೇರಿ, ಕೈಗಾರಿಕೆ ಮುಂತಾದ ಸ್ಥಳಗಳಲ್ಲಿ ಪರಸ್ಪರ ಒಬ್ಬರಿಗೊಬ್ಬರು ಹೊಸ ವರ್ಷದ ಹಾರ್ದಿಕ ಶುಭಾಶಯಗಳನ್ನು ವಿನಿಮಯ ಮಾಡಿಕೊಳ್ಳುವರು. ಸಿಹಿ ತಿನಿಸುಗಳನ್ನು ಹಂಚಿ ತಿನ್ನುವರು. ಆನಂದಿಸುವರು. ಸಂಭ್ರಮಿಸುವರು.
ಆದರೆ ನಾವಿಲ್ಲಿ ತಿಳಿದುಕೊಳ್ಳಬೇಕಾದುದು ಏನೆಂದರೆ ಯಾವುದರಲ್ಲೂ ಮಿತಿಮೀರಬಾರದು. ಎಲ್ಲವೂ ಒಂದು ಅಂಕೆಯಲ್ಲಿರಬೇಕು. ಕೆಲವೊಂದಷ್ಟು ಯುವ ಜನಾಂಗವು ಹೊಸ ವರ್ಷದ ನೆಪದಲ್ಲಿ ಮಿತಿಮೀರಿದ ಮದ್ಯಪಾನ ಸೇವನೆಯಿಂದಾಗಿ ತಮ್ಮ ಆರೋಗ್ಯವನ್ನು ಹಾಳು ಮಾಡಿಕೊಂಡು, ತಮ್ಮ ಬದುಕನ್ನು ಕಷ್ಟಕ್ಕೀಡುಮಾಡಿಕೊಳ್ಳುತ್ತಿರುವುದನ್ನು ನಾವು ನಿತ್ಯವೂ ಮಾಧ್ಯಮಗಳ ಮೂಲಕ ಕಾಣುತ್ತಿದ್ದೇವೆ. ಆದರೆ ಹೀಗಾಗಬಾರದು.
ಹೊಸ ವರ್ಷವು ಸಂತಸದಿಂದ ಕೂಡಿರಬೇಕು. ಭೂಮಿಯ ಮೇಲೆ ಯಾರೂ ಮತ್ತು ಯಾವುದೂ ಶಾಶ್ವತವಲ್ಲ ಎಂಬ ಸಂಗತಿ ನಮ್ಮೆಲ್ಲರಿಗೂ ತಿಳಿದಿದೆ. ಎಲ್ಲೋ ಹುಡುಕಿದೆ ಇಲ್ಲದ ದೇವರ ಕಲ್ಲುಮಣ್ಣುಗಳ ಗುಡಿಯೊಳಗೆ ಎಂಬಂತಾಗಬಾರದು. ಇಲ್ಲೆ ನಮ್ಮೊಳಗಿರುವ ಪ್ರೀತಿ ಸ್ನೇಹಗಳನ್ನು ಗುರುತಿಸಿ ಅದರಲ್ಲಿ ದೇವರನ್ನು ಕಾಣುವಂತಾಗಬೇಕು.
ಹೊಸ ವರ್ಷವು ಜಗದ ಜನರ ಬಾಳಿಗೆ ಬೆಳಕು ತರಲಿ. ಇಡೀ ಜಗತ್ತು ಶಾಂತಿ, ಸೌಹಾರ್ದತೆ ಮತ್ತು ಸುಭದ್ರತೆಯಿಂದ ಕೂಡಿರಲಿ. ಕಾಲ ಕಾಲಕ್ಕೆ ಮಳೆಯಾಗಿ ಇಳೆಯು ತಂಪಾಗಲಿ. ನಿಸರ್ಗವು ಹಸಿರಾಗಲಿ. ಆ ಇಳೆಯಿಂದ ಬೆಳೆಯು ಚಿಮ್ಮಿ ಬರಲಿ. ಉತ್ತಮ ಆಹಾರ ಮತ್ತು ಉತ್ತಮ ಆರೋಗ್ಯ ಎಲ್ಲರಿಗೂ ದೊರೆಯಲಿ. ಪರಿಸರ ಮಾಲಿನ್ಯ ಕಡಿಮೆಯಾಗಲಿ. ಪ್ರಪಂಚದಲ್ಲಿ ಆರ್ಥಿಕ ಸ್ಥಿರತೆ ಸದಾ ಇರಲಿ.
ದ್ವೇಷ, ಸಿಟ್ಟು, ಅಸೂಯೆ, ಮಾತ್ಸರ್ಯಗಳು ಕೊನೆಯಾಗಲಿ. ಕೋಟಿ ಕೋಟಿ ಹೃದಯಗಳಲ್ಲಿ ಪ್ರೀತಿ , ಸ್ನೇಹ , ನಂಬಿಕೆ ಮತ್ತು ವಿಶ್ವಾಸಗಳು ಒಡಮೂಡಲಿ. ಮಹಾಸಮರಗಳು ಮತ್ತು ಶೀತಲ ಸಮರಗಳು ದೂರವಾಗಲಿ. ಪ್ರಾಕೃತಿಕ ವಿಕೋಪಗಳಾದ ಭೂಕಂಪಗಳು, ಪ್ರವಾಹಗಳು, ಬಿರುಗಾಳಿಗಳು, ಅತಿರೇಖದ ಮಳೆಗಳು, ಪ್ರವಾಹಗಳು, ಚಂಡಮಾರುತಗಳು, ಸುನಾಮಿಯಂತಹ ಅವಘಡಗಳು ಮರುಕಳಿಸದಿರಲಿ.
ಜ್ಞಾನವು ಸುಜ್ಞಾನವಾಗಲಿ. ಸುಜ್ಞಾನವು ವಿಜ್ಞಾನವಾಗಲಿ. ವಿಜ್ಞಾನದ ಬಳಕೆ ಬಹಳ ಎಚ್ಚರಿಕೆಯಿಂದಾಗಲಿ. ನಿಸರ್ಗವು ಸದಾ ಸನ್ಮಂಗಳವನ್ನುಂಟು ಮಾಡಲಿ. ಪರಸ್ಪರರ ನಂಬಿಕೆಯಿಂದ ಅಭಿವೃದ್ಧಿಯು ಪ್ರಗತಿ ಹೊಂದಲಿ.
2025 ನೇ ವರ್ಷದಲ್ಲಿ ಪ್ರತೀ ಕುಟುಂಬಕ್ಕೆ ಆರೋಗ್ಯ, ಆಯಸ್ಸು, ಯಶಸ್ಸು, ಸಡಗರ ಸಂಭ್ರಮದ ಸಮೃದ್ಧಿಯು ತುಂಬಿರಲಿ. ಈ ಹೊಸ ವರ್ಷವು ಎಲ್ಲರ ಬಾಳಿನಲ್ಲಿ ಹೊಸ ಹರುಷವನ್ನು ತರಲಿ. ಸಮಯ ಅಮೂಲ್ಯವಾದುದು. ಪ್ರತಿದಿನವೂ ಸದ್ಬಳಕೆಯಾಗಲಿ.
ಬದುಕಿನ ಎಲ್ಲಾ ಖುಷಿ ನಮ್ಮದಾಗಲಿ. ನಮ್ಮ ಪ್ರತಿಯೊಂದು ಹೆಜ್ಜೆಯೂ ಸುಖಕರವಾಗಿರಲಿ. ಕನಸುಗಳು ಈಡೇರಲಿ, ಹೊಸ ವರ್ಷ ನಮ್ಮ ಜೀವನದಲ್ಲಿ ನವೋಲ್ಲಾಸ ತುಂಬಲಿ. ನಮ್ಮ ಬದುಕಿನಲ್ಲಿ ಹೊಸ ಬದಲಾವಣೆ ತರಲಿ, ಹೊಸ ಚೈತನ್ಯ ತುಂಬಲಿ.
2025 ನೇ ವರ್ಷದ 12 ತಿಂಗಳು ಸಂತೋಷದಿಂದಲೂ, 52 ವಾರ ಆರೋಗ್ಯದಿಂದಲೂ, 365 ದಿವಸ ಯಶಸ್ವಿಯಿಂದ 8760 ಗಂಟೆ ಸುಖದಿಂದ 52600 ನಿಮಿಷಗಳು ಶಾಂತಿಯಿಂದ 3153600 ಸೆಕೆಂಡುಗಳು ಸರ್ವ ಜನಾಂಗದ ಬಾಳು ನೆಮ್ಮದಿಯಿಂದ ಕೂಡಿರಲಿ ಎನ್ನುತ್ತಾ ವಿಶ್ ಯು ಹ್ಯಾಪಿ ನ್ಯೂ ಇಯರ್. ಸರ್ವೆಜನಾಃ ಸುಖಿನೋ ಭವಂತು.
ಕೆ. ಎನ್. ಚಿದಾನಂದ, ಹಾಸನ
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ