ಸಿದ್ದರಾಮಯ್ಯ ಸರಕಾರ ವಜಾಗೊಳಿಸಿ ರಾಷ್ಟ್ರಪತಿ ಆಡಳಿತ ಹೇರಿ: ಬಿಜೆಪಿ ವಕ್ತಾರ ರಾಜಗೋಪಾಲ್ ರೈ ಆಗ್ರಹ

Upayuktha
0






ಮಂಗಳೂರು: ಸಚಿವ ಲಕ್ಷ್ಮೀ ಹೆಬ್ಬಾಳ್ಕರ್ ಅವರ ಕುರಿತು ನೀಡಿದ ಹೇಳಿಕೆ ಹಿನ್ನೆಲೆಯಲ್ಲಿ ವಿಧಾನ ಪರಿಷತ್ ಸದಸ್ಯ ಸಿ.ಟಿ ರವಿ ಅವರನ್ನು ಸದನದಿಂದಲೇ ಬಂಧಿಸಿದ ಕ್ರಮವನ್ನು ದಕ್ಷಿಣ ಕನ್ನಡ ಜಿಲ್ಲಾ ಬಿಜೆಪಿ ವಕ್ತಾರ ರಾಜಗೋಪಾಲ್ ರೈ ಅವರು ತೀವ್ರವಾಗಿ ಖಂಡಿಸಿದ್ದಾರೆ.



ಜನಪ್ರತಿನಿಧಿಯೊಬ್ಬರನ್ನು ಕ್ರಿಮಿನಲ್‌ಗಳಂತೆ ಬಂಧಿಸಿ ಹೊತ್ತೊಯ್ದಿರುವುದು ಕಾಂಗ್ರೆಸ್ ಸರಕಾರದ ದಬ್ಬಾಳಿಕೆಯನ್ನು ತೋರಿಸುತ್ತದೆ. ಕಾಂಗ್ರೆಸ್ ದುರಾಡಳಿತದಿಂದಾಗಿ ಕರ್ನಾಟಕವೀಗ ಗೂಂಡಾ ರಾಜ್ಯವಾಗಿ ಪರಿವರ್ತನೆಗೊಂಡಿದೆ.  ದಿನೇ ದಿನೇ ಗೂಂಡಾಗಿರಿ ಹೆಚ್ಚುತ್ತಿದ್ದು, ಮಹಿಳೆಯರ ಮೇಲೆ, ಅಮಾಯಕರ ಮೇಲೆ ದಬ್ಬಾಳಿಕೆ ನಡೆಯುತ್ತಿದೆ. ಬೆಳಗಾವಿಯ ಸುವರ್ಣಸೌಧದಲ್ಲಿ ಅಧಿವೇಶನ ನಡೆಯುತ್ತಿರುವ ಸಂದರ್ಭದಲ್ಲೇ ಬಿಜೆಪಿ ಎಂಎಲ್‌ಸಿ  ಸಿ.ಟಿ ರವಿ ಅವರ ಮೇಲೆ ಕಾಂಗ್ರೆಸ್‌ನ ಗೂಂಡಾಗಳು ನುಗ್ಗಿ ಹಲ್ಲೆ ಮಾಡಿದ್ದಾರೆ. ಅವರ ಪಕ್ಕದಲ್ಲಿ ದಕ್ಷಿಣ ಕನ್ನಡದಿಂದ ಆಯ್ಕೆಯಾದ ಎಂಎಲ್‌ಸಿ ಕಿಶೋರ್ ಕುಮಾರ್ ಬೊಟ್ಯಾಡಿ ಅವರು ತಡೆಯದಿದ್ದಲ್ಲಿ ಸಿ.ಟಿ ರವಿ ಅವರ ಮೇಲೆ ಗಂಭೀರ ಹಲ್ಲೆ ನಡೆಯುತ್ತಿತ್ತು ಎಂದು ರಾಜಗೋಪಾಲ್ ರೈ ಹೇಳಿದರು. 



ಕಾಂಗ್ರೆಸ್ ದುರಾಡಳಿತದಲ್ಲಿ ಜನಪ್ರತಿನಿಧಿಗಳಿಗೂ ರಕ್ಷಣೆ ಇಲ್ಲವಾಗಿದೆ. ಸುವರ್ಣ ಸೌಧದ ಒಳಗೆ ಕಾಂಗ್ರೆಸ್ ಗೂಂಡಾಗಳು ನುಗ್ಗಿ ರಾಷ್ಟ್ರೀಯ ನಾಯಕನ ಮೇಲೆ ಹಲ್ಲೆ ನಡೆಸಿರುವುದು ಖಂಡನೀಯ ಎಂದು ಅವರು ಹೇಳಿದರು.



ಗ್ಯಾರಂಟಿ ಹೆಸರಲ್ಲಿ ಸುಳ್ಳು ಭರವಸೆ ನೀಡಿ ಅಧಿಕಾರಕ್ಕೆ ಬಂದ ಕಾಂಗ್ರೆಸ್‌ ರಾಜ್ಯದ ಬೊಕ್ಕಸವನ್ನು ದೋಚಿದ್ದು, ಅಭಿವೃದ್ಧಿ ಕುಂಠಿತವಾಗಿದೆ. ಜನಸಾಮಾನ್ಯರು ಕಷ್ಟ ಅನುವಿಸುತ್ತಿದ್ದಾರೆ. ಶಾಸಕರ ಕ್ಷೇತ್ರಾಭಿವೃದ್ಧಿಗೆ ಅನುದಾನ ಇಲ್ಲ. ನಗರ ಪಾಲಿಕೆಗಳು, ಜಿಲ್ಲಾ ಪಂಚಾಯತ್, ತಾಲೂಕು ಪಂಚಾಯತ್ ಸೇರಿದಂತೆ ಸ್ಥಳೀಯ ಸಂಸ್ಥೆಗಳಿಗೆ ಅನುದಾನ ಹರಿಯುವುದಿಲ್ಲ. ರಾಜ್ಯದ ಎಲ್ಲ ರಸ್ತೆಗಳು ಶೋಚನೀಯ ಸ್ಥಿತಿಯಲ್ಲಿವೆ ಎಂದು ರಾಜಗೋಪಾಲ್ ರೈ ಟೀಕಿಸಿದರು.



ಪ್ರಧಾನಿ ನರೇಂದ್ರ ಮೋದಿಯವರ ಬಲಿಷ್ಠ ಸರಕಾರ ಕೇಂದ್ರದಲ್ಲಿದ್ದ ಕಾರಣ ದೇಶ ಇಷ್ಟು ಬಲಿಷ್ಠವಾಗಿದೆ. ಇಲ್ಲವಾಗಿದ್ದರೆ ಕಾಂಗ್ರೆಸ್‌ನವರು ಭಾರತವನ್ನು ಮತ್ತೊಂದು ಬಾಂಗ್ಲಾದಂತೆ ಮಾಡಿ ಬಿಡುತ್ತಿದ್ದರು. ಹತ್ಯೆಗಳು ವ್ಯಾಪಕವಾಗಿ ನಡೆಯುತ್ತಿವೆ. ಪೊಲೀಸರನ್ನು ದುರ್ಬಳಕೆ ಮಾಡಿಕೊಂಡು ಸುಳ್ಳು ಕೇಸುಗಳನ್ನು ಹಾಕಿಸುತ್ತಿದೆ.



ವಿಧಾನಸೌಧದ ಒಳಗೆ ಪಾಕಿಸ್ತಾನ ಜಿಂದಾಬಾದ್ ಎಂದವರಿಗೆ ಶಿಕ್ಷೆ ಇಲ್ಲ. ರಾಜ್ಯಪಾಲರ ವಿರುದ್ಧ ಪ್ರತಿಭಟನೆ ಮಾಡುತ್ತ, ಬಾಂಗ್ಲಾದೇಶದಲ್ಲಿ ಆದಂತೆ ಅವರನ್ನು ಓಡಿಸುತ್ತೇವೆ ಎಂದು ಬೆದರಿಕೆ ಒಡ್ಡಿದ ಕಾಂಗ್ರೆಸ್ ಎಂಎಲ್‌ಸಿ ಐವನ್ ಡಿಸೋಜ ವಿರುದ್ಧ ಯಾವುದೇ ಕ್ರಮವಿಲ್ಲ. ಆದರೆ ಶಾಸಕ ಡಾ. ಭರತ್ ಶೆಟ್ಟ, ಹರೀಶ್ ಪೂಂಜಾ, ವೇದವ್ಯಾಸ ಕಾಮತ್ ಅವರಂತಹ ಯುವ ನಾಯಕರ ಮೇಲೆ ವಿನಾ ಕಾರಣ ಕೇಸು ಹಾಕಿಸಿ ಜೈಲಿಗೆ ತಳ್ಳುವ ಕೆಲಸವನ್ನು ಕಾಂಗ್ರೆಸ್ ಸರಕಾರ ಮಾಡಿದೆ ಎಂದು ರೈ ಹೇಳಿದರು.




ಸಿ.ಟಿ ರವಿ ಸಂಘದಿಂದ ಬಂದವರು. ಅವರು ಹೇಳದೆ ಇರುವ ಮಾತುಗಳನ್ನು ಅವರಿಗೆ ಆರೋಪಿಸಿ ವಿನಾ ಕಾರಣ ಹಲ್ಲೆ ಮಾಡಲಾಗಿದೆ. ಸಾಮಾನ್ಯ ಕೈದಿಯ ಹಾಗೆ, ಕ್ರಿಮಿನಲ್‌ಗಳ ರೀತಿಯಲ್ಲಿ ರಾತ್ರಿಯಿಡೀ ಜೈಲಿನಲ್ಲಿ ಕೂಡ ಹಾಕಲಾಗಿದೆ. ಇಂತಹ ದುಷ್ಟ ಸರಕಾರ ತೊಲಗಲೇಬೇಕು. ಸಿದ್ದರಾಮಯ್ಯ ಸರಕಾರವನ್ನು ವಜಾಗೊಳಿಸಿ ರಾಷ್ಟ್ರಪತಿ ಆಡಳಿತ ಹೇರಬೇಕು. ಕುಕ್ಕರ್ ಬಾಂಬ್ ಸ್ಫೋಟ, ರಾಮೇಶ್ರಂ ಕೆಫೆ ಸ್ಫೋಟ, ಹನುಮಾನ್ ಚಾಲೀಸಾ ಹೇಳಿದವರ ಮೇಲೆ ಕೇಸು ಹಾಕುವ ಹಿಂದೂ ವಿರೋಧಿ ಕಾಂಗ್ರೆಸ್ ಸರಕಾರವನ್ನು ವಜಾಗೊಳಿಸಬೇಕು ಎಂದು ಅವರು ಆಗ್ರಹಿಸಿದ್ದಾರೆ.



ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

إرسال تعليق

0 تعليقات
إرسال تعليق (0)
Mandovi Motors Presents MONSOON BONANZA
Mandovi Motors Presents MONSOON BONANZA
To Top