ಧನುರ್ಮಾಸ ಎನ್ನುವದು ಎರಡು ಪದಗಳ ಸಂಯೋಜನೆಯಾಗಿದೆ. 'ಧನು' ಇದು ಸೂರ್ಯನ ರಾಶಿಯ 'ಧನು' ಮಾಸ ಎಂದರೆ ತಿಂಗಳು.ಸೂರ್ಯನು ಧನುರಾಶಿ ಪ್ರವೇಶಿಸುವ ಮತ್ತು ಅವನೊಂದಿಗೆ ಇರುವ ಮಾಸವನ್ನು ಧನುರ್ಮಾಸ ಎಂದು ಪರಿಗಣಿಸಲಾಗಿದೆ. ಸಂಪ್ರದಾಯದ ಪ್ರಕಾರ ದೇವಾನುದೇವತೆಗಳು ಬ್ರಾಹ್ಮಿಮುಹೂರ್ತದಲ್ಲಿ ಏಳುತ್ತಾರೆ ಎನ್ನುವ ನಂಬಿಕೆಯಿದೆ.ಈ ದಿನದಲ್ಲಿ ಒಂದು ದಿನ ಭಗವಾನ್ ವಿಷ್ಣುವನ್ನು ಪೂಜಿಸಿದರೆ 1000 ವರ್ಷದವರೆಗೆ ವಿಷ್ಣುದೇವನನ್ನು ಪೂಜಿಸಿದ ಪುಣ್ಯ ಫಲ ದೊರೆಯುವದೆಂಬ ನಂಬಿಕೆಯಿದೆ. ಧಾರ್ಮಿಕ ಸೇವೆಗಳಿಗೆ ವಿಶೇಷ ತಿಂಗಳೆಂದು ಪರಿಗಣಿಸಲಾಗಿದೆ. ಭಗವಾನ್ ಶ್ರೀಕೃಷ್ಣನು ಹೀಗೆ ಹೇಳಿದ್ದಾನೆ ."ನಾನು ವರ್ಷದ ತಿಂಗಳುಗಳಲ್ಲಿ ಮಾರ್ಗಶಿರ ಮಾಸದಲ್ಲಿ ಅಂದರೆ ಧನುರ್ಮಾಸದಲ್ಲಿ ಪ್ರಕಟಗೊಳ್ಳುತ್ತೇನೆ." ಈ ಕಾರಣಕ್ಕಾಗಿ ಋಷಿಗಳು ಈ ಮಾಸವನ್ನು ಭಕ್ತಿಚಟುವಟಿಕೆಗಳ ಮೇಲೆ ಕೇಂದ್ರೀಕರಿಸಲು ಮೀಸಲಿಟ್ಟಿದ್ದಾರೆ. ಬ್ರಹ್ಮಮೂಹೂರ್ತದ ಮಂಗಳಕರ ಅವಧಿಯಲ್ಲಿ ಶ್ರೀ ಮಹಾವಿಷ್ಣುವಿಗೆ ವಿಶೇಷ ಪ್ರಾರ್ಥನೆ ಸಲ್ಲಿಸುತ್ತಾರೆ.
ಧನುರ್ಮಾಸದ ಮಹತ್ವ
ಸೂರ್ಯನು ಪ್ರತೀತಿಂಗಳು ಒಂದೊಂದು ರಾಶಿಯ ಚಿಹ್ನೆಯ ಮೇಲೆ ಇರುತ್ತಾನೆ. ಈ ತಿಂಗಳು ಸಂಕ್ರಾಂತಿ ಅಥವಾ ಭೋಗಿ ದಿನದಂದು ಕೊನೆಗೊಳ್ಳುತ್ತದೆ. 30 ದಿನಗಳವರೆಗೆ ಧನುರ್ಮಾಸ ಇರುತ್ತದೆ. ಬ್ರಹ್ಮ ಮೂಹೂರ್ತದ ಸಮಯದಲ್ಲಿ ಸೂರ್ಯೋದಯಕ್ಕೆ ಮುಂಚಿತವಾಗಿ ದೇವರಿಗೆ ಸಲ್ಲಿಸುವ ಪ್ರಾರ್ಥನೆಯು ಹೆಚ್ಚಿನ ಪುಣ್ಯ ನೀಡುತ್ತದೆ. ಇದು ಹಿಂದೂ ಸಂಪ್ರದಾಯದ ನಂಬಿಕೆಯಾಗಿದೆ. ಈ ಸಮಯವನ್ನು ಬ್ರಹ್ಮೀಮುಹೂರ್ತವೆಂದು ಹೇಳುತ್ತಾರೆ.
ಧನುರ್ಮಾಸದ ಪೂಜೆಯ ವಿಧಾನ
ಸೂರ್ಯೋದಯಕ್ಕೆ ಮೊದಲು ಎದ್ದು ಸ್ನಾನ ಮಾಡಿ ಸೂರ್ಯೋದಯದ ಅರ್ಧಗಂಟೆ ಮೊದಲು ಪೂಜೆ ಮಾಡಲಾಗುತ್ತದೆ. ಇದನ್ನು ಬ್ರಾಹ್ಮೀ ಮುಹೂರ್ತದ ಪೂಜೆಯಂದು ಕರೆಯಲಾಗುತ್ತದೆ. ಈ ದಿನದಲ್ಲಿ ಹೆಚ್ಚಾಗಿ ವಿಷ್ಣುವಿನ ಶ್ಲೋಕ ಹೇಳಲಾಗುತ್ತದೆ. ಬಡವರಿಗೆ ಕೈಲಾದಷ್ಟು ದಾನಮಾಡಲಾಗುತ್ತದೆ. ವೆಂಕಟೇಶ್ವರನ ಧ್ಯಾನ ಮಾಡಲಾಗುತ್ತದೆ.
ವ್ರತಗಳು:
ಕಾತ್ಯಾಯಿನೀ ವೃತ ಈ ಮಾಸದ ಶ್ರೇಷ್ಟ ವ್ರತವಾಗಿದೆ. ಇದನ್ನು ಅವಿವಾಹಿತ ಮಹಿಳೆಯರು ಆಚರಿಸುತ್ತಾರೆ.
ಪ್ರಯೋಜನಗಳು:
ಈ ವೃತದಿಂದ ಗೋದಾದೇವಿಯು ವಿಷ್ಣುವನ್ನು ತನ್ನ ಪತಿಯಾಗಿ ಪಡೆಯಲು ಸಾಧ್ಯವಾಯಿತು ಎನ್ನುವ ನಂಬಿಕೆಯಿದೆ. ಧನುರ್ಮಾಸದ ವೃತ ಆಚರಿಸುವ ಮಹಿಳೆಗೆ ಉತ್ತಮ ಪತಿಸಿಗುತ್ತಾನೆ ಎನ್ನುವ ನಂಬಿಕೆಯಿದೆ. ಧನುರ್ಮಾಸ ಡಿಸೆಂಬರ್ 16ಕ್ಕೆ ಪ್ರಾರಂಭವಾಗಿ ಜನವರಿ 14 ರಂದು ಕೊನೆಗೊಳ್ಳುತ್ತದೆ. ಗೀತೋಪದೇಶ ಸಂದರ್ಭದಲ್ಲಿ ಭಗವಾನ್ ಶ್ರೀಕೃಷ್ಣ ಮಾಸಗಳನ್ನು ಉಲ್ಲೇಖಿಸುತ್ತ "ಮಾಸಾನಾಮ್ ಮಾರ್ಗಶೀರ್ಷಃ" ಎಂಬುದನ್ನು ಉಲ್ಲೇಖಿಸಿದ್ದಾನೆ. ತಿರುಪತಿ ತಿಮ್ಮಪ್ಪ ಸೇರಿದಂತೆ ಹಲವಾರು ದೇವಸ್ಥಾನದಲ್ಲಿ ಬ್ರಾಹ್ಮೀಮುಹೂರ್ತದಲ್ಲಿ ವಿಶೇಷ ಪೂಜೆ ಅರ್ಚನೆಗಳು ನಡೆಯುತ್ತವೆ. ದೇವತಾ ಕಾರ್ಯಗಳಿಂದ ಜನರು ವಿಮುಖರಾಗಬಾರದೆಂದು ಮದುವೆ, ಮುಂಜಿ, ಗೃಹಪ್ರವೇಶದಂತಹ ಸಂಭ್ರಮ ಸಡಗರ ನಿಷಿದ್ಧ. ಆದ್ದರಿಂದ ಇದನ್ನು ಶೂನ್ಯಮಾಸವೆಂದು ಕರೆದು ದೇವಮಾಸವಾಗಿ ಅನುಸರಿಸಲಾಗುತ್ತಿದೆ.
"ಧನುಷಿ ಧನುರಾಕಾರಃ ಮಕರೇ ಕುಂಡಲಾಕೃತೀಃ" ಎಂಬ ಉಕ್ತಿಗನುಸಾರವಾಗಿ ಚಳಿಯಿಂದ ತಪ್ಪಿಸಿಕೊಳ್ಳಲು ಮನುಷ್ಯ ಬಿಲ್ಲಿನಂತೆ ಬಾಗಿ ಕೈಕಾಲು ಮುದುಡಿಕೊಳ್ಳಲು ಇಷ್ಟ ಪಡುತ್ತಾನೆ. ಇದನ್ನೇ ಸಾಮಾಜಿಕ ಬಾಧೆ (ಸೀಸನಲ್ ಅಲರ್ಜಿ) ಎನ್ನಬಹುದು. ಇದರ ನಿವಾರಣೆಗಾಗಿ ಪ್ರಾಚೀನರು ಅರಣೋದಯದ ಮೊದಲು ಸ್ನಾನಮಾಡುವ ವಾಡಿಕೆಯಿದೆ. ಈ ಸಮಯದಲ್ಲಿ ಆಹಾರ ಹುಗ್ಗಿ. ಇದರ ಸಿದ್ಧತೆಗೆ ಬಳಸುವ ಕಡಲೇಬೀಜ, ಅವರೇಕಾಳು, ಜೀರಿಗೆ, ಮೆಣಸು, ಲವಂಗಗಳು ದೇಹದಲ್ಲಿ ಅಂತರಿಕವಾಗಿ ಉಷ್ಣತೆ ಹೆಚ್ಚಿಸುವದರೊಂದಿಗೆ ನಿಮಿತ್ತಿಕ ಬಾಧೆ ತಡೆಯುತ್ತದೆ. ಹುಗ್ಗಿಗೆ ಉಪಯೋಗಿಸುವ ಹೆಸರು ಬೇಳೆ ಹೊಟ್ಟೆಗೆ ಹಿತವಾದರೆ ಬಳಸುವ ಇತರ ಸಾಮಗ್ರಿಗಳಾದ ಶುಂಠಿ, ಹಸಿಮೆಣಸು ಲವಂಗ ಚಳಿಯಲ್ಲಿ ಹೊಟ್ಟೆ ಬೆಚ್ಚಗಿಟ್ಟು ಜೀರ್ಣಶಕ್ತಿ ಉದ್ದೀಪನಗೊಳಿಸಿದರೆ ತೆಂಗಿನಕಾಯಿ ತುಪ್ಪಗಳು ಚರ್ಮ ಬಿರುಕು ಬಿಡುವ ಕಾಲದಲ್ಲಿ ಚರ್ಮದ ಜೀವಕೋಶಗಳನ್ನು ಪುನರರಚಿಸಲು ಸಹಾಯ ಮಾಡುತ್ತವೆ. ಹೀಗಾಗಿ ಆಚಾರ ಆಹಾರ ನಮ್ಮ ಜೀವನ ಸುಖದಿಂದ ಇರುವಂತೆ ಮಾಡುವದಕ್ಕಾಗಿ ಈ ಧನುರ್ಮಾಸದ ವಿಧಿಯಂಬುದನ್ನು ಅರಿತು ಆಚರಿಸೋಣ.
- ಗಿರಿಜಾ ಎಸ್ ದೇಶಪಾಂಡೆ, ಬೆಂಗಳೂರು
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ