ಚಿತ್ತ-ಭಿತ್ತಿ: ಕನ್ನಡದ ಖ್ಯಾತ ಚಲನಚಿತ್ರ ನಿರ್ದೇಶಕ ಎಸ್.ಕೆ. ಭಗವಾನ್

Upayuktha
0


ನೀವೆಲ್ಲ ಚಲನಚಿತ್ರ ಮಂದಿರದಲ್ಲೋ ಅಥವಾ ವೀಡಿಯೋದಲ್ಲೋ, ಚಲನಚಿತ್ರಗಳನ್ನ ನೋಡ್ತಿರಬೇಕಾದ್ರೆ, ಕಲಾವಿದರನ್ನ ಗುರುತಿಸಿರ್ತೀರಿ. ಆ ಕಲಾವಿದರ ಹತ್ತಿರ ಪಾತ್ರಗಳನ್ನ, ಚಿತ್ರದ ಸನ್ನಿವೇಶಗಳನ್ನು ಚಿತ್ರಿಸುವಂತಹ ನಿರ್ದೇಶಕರ ಕೈಚಳಕವನ್ನು ಗುರುತಿಸರ‍್ತೀರಾ ಬಹಳ ಹಿಂದೆ ಕಲಾವಿದರಿಗೇ ಒಂದು ಛಾಪು ಇದ್ದಿದ್ದು ಕ್ರಮೇಣವಾಗಿ, ನಿರ್ದೇಶಕರ ಒಂದು ಹಿಡಿತವಿತ್ತು. ಅನೇಕ ನಿರ್ದೇಶಕರು ನಮ್ಮ ಕನ್ನಡ ಚಿತ್ರರಂಗದಲ್ಲಿ, ಒಳ್ಳೆಯ ಹೆಸರನ್ನು ಮಾಡಿದ್ದಾರೆ. ಇಂಥವರ ಹೆಸರಲ್ಲಿ, ಒಂದು ಜೋಡಿ ದೊರೈ - ಭಗವಾನ್. ಅನೇಕ ವರ್ಷಗಳಿಂದ ಚಲನಚಿತ್ರಗಳ ವಿವಿಧ ವಿಭಾಗಗಳಲ್ಲಿ ದುಡಿದು, ಈಗ ನಿರ್ದೇಶಕರಾಗಿ ನಿರ್ಮಾಪಕರಾಗಿದ್ದಾರೆ. ದೊರೈ ಭಗವಾನ್ ಜೋಡಿಯ ಎಸ್.ಕೆ. ಭಗವಾನ್, ಇವರನ್ನು 1994 ರಲ್ಲಿ ಶಿವಮೊಗ್ಗಾದಲ್ಲಿ ಭೇಟಿಯಾಗಿದ್ದೆ.

ರಮೇಶ್: ಭಗವಾನ್ ಅವರೇ, ಎಷ್ಟು ವರ್ಷಗಳಿಂದ ಚಲನಚಿತ್ರ ಕ್ಷೇತ್ರದಲ್ಲಿದ್ದೀರಿ? ಹ್ಯಾಗೆ ಆ ಚಿತ್ರರಂಗಕ್ಕೆ ನಮ್ಮ ಪ್ರವೇಶವಾಯ್ತು?

ಭಗವಾನ್: ಈ ಕ್ಷೇತ್ರಕ್ಕೆ ನಾನು ಸಿನಿಮಾ ರೆಪ್ರಸೆಂಟೀವ್ ಆಗಿ ಸರ‍್ಕೊಂಡೆ. ಅಲ್ಲಿ ಕೆಲಸದಲ್ಲಿದ್ದಾಗ ದಿನಾ ಸಿನಿಮಾಗಳನ್ನು ನೋಡಬೇಕಾಗಿ ಬಂತು. ಆಗ ಸಿನಿಮಾ ಯಾಕೆ ಮಾಡಬಾರದು ಅನ್ನೋ ಒಂದು ಆಸೆ ಬಂತು. ಹೈಸ್ಕೂಲು ಕಾಲೇಜಿನಲ್ಲಿ ಓದ್ತಾ ಇದ್ದಾಗಿಂದ, ನನಗೆ ಸ್ವಲ್ಪ ನಾಟಕ ಸಿನಿಮಾ ಸಂಗೀತ ಇವುಗಳ ಮೇಲೆ ತುಂಬಾ ಆಸೆ ಇತ್ತು. ಅದರಿಂದ ಅನೇಕ ನಾಟಕಗಳಲ್ಲಿ ನಾನು ಭಾಗವಹಿಸಿದ್ದೆ. ಕ್ರಮೇಣ ವೃತ್ತಿ ನಾಟಕ ರಂಗಭೂಮಿಗೆ, ಕಾಲೇಜು ರಂಗಭೂಮಿಯಿಂದ ಹೋದೆ. ಆ ರಂಗಭೂಮೀಲಿ ಮೊದಲನೆಯದಾಗಿ ಪ್ರಭಾಕರ ಶಾಸ್ತ್ರಿಗಳು ಸಿಕ್ಕರು.

ರಮೇಶ್: ಕಣಗಾಲ್ ಪ್ರಭಾಕರ ಶಾಸ್ತ್ರಿಗಳು

ಭಗವಾನ್: ಹೌದು. ಜಿ.ವಿ. ಅಯ್ಯರ್, ಟಿ.ಎನ್. ಬಾಲಕೃಷ್ಣ ಇವರ ಪರಿಚಯವಾಯಿತು. ಅದರಲ್ಲೂ ಅಯ್ಯರ್ ಹಾಗೂ ಬಾಲಕೃಷ್ಣ ಅವರಿಗೆ ಜೊತೆಯಾಗಿ, ಸಹಾಯಕನಾಗಿ ದುಡಿಯುವ ಒಂದು ಸಂದರ್ಭ ನನಗೆ 1951-52 ರಲ್ಲೇ ಲಭಿಸಿತು. 

ರಮೇಶ್: ಯಾವ ಚಿತ್ರ?

ಭಗವಾನ್: ಅವರು ನಾಟಕಗಳನ್ನು ಬರೀತಿದ್ರು. ಕರ್ನಾಟಕ ನಾಟಕ ಸಭಾ ಅಂತ ಒಂದು ಕಂಪನಿ. ಅಲ್ಲಿ ಅವರಿಗೆ ಬೇಡರ ಕಣ್ಣಪ್ಪ, ಸಾಹುಕಾರ, ವಿಶ್ವಾಮಿತ್ರ, ಮುಂತಾದ ನಾಟಕಗಳನ್ನು ಬರೆಯೋಕೆ ಇವರಿಬ್ಬರನ್ನೂ ನೇಮಿಸಿದ್ರು. ನಾನೂ ಕಾಲೇಜಿಂದ ಹೋಗಿದ್ರಿಂದ, ಇವರ ಕೈ ಕೆಳಗೆ ಕೆಲಸ ಮಾಡಲು ನನ್ನ ಅವರು ಆರಿಸ್ಕೊಂಡ್ರು.

ರಮೇಶ್: ಬರವಣಿಗೆ ಹಂತದಲ್ಲಾ?

ಭಗವಾನ್: ಹೌದು.

ಭಗವಾನ್: ನನಗೆ ಸಾಹಿತ್ಯದಲ್ಲಿ ತುಂಬಾ ಆಸಕ್ತಿ ಇತ್ತು. ಆ ಕಾಲದಲ್ಲಿ ಕನ್ನಡ, ಹಾಗೂ ಇಂಗ್ಲಿಷ್ ಕಾದಂಬರಿಗಳನ್ನು ಓದ್ತಾ ಇದ್ದೆ. ಅದರಿಂದಾಗಿ ನನ್ನ ಸಾಹಿತ್ಯಾಭಿರುಚಿ, ಗಮನಿಸಿ, ಗುರುತಿಸಿ, ನನ್ನನ್ನ ಅಸಿಸ್ಟೆಂಟ್ ಆಗಿ ತಗೊಂಡ್ರು ಅದರಲ್ಲಿ ಬೇಡರ ಕಣ್ಣಪ್ಪ ನಾಟಕವನ್ನು ನನ್ನ ಹಸ್ತಾಕ್ಷರದಲ್ಲೇ ಬರೆದದ್ದು ಇನ್ನೂ ಇದೆ ಅದನ್ನೇ ರಾಜಕುಮಾರ್ ಅವರು ಗುಬ್ಬೀ ಕಂಪನಿಗೆ ತಗೊಂಡು ಹೋಗಿ, ಬೇಡರ ಕಣ್ಣಪ್ಪ ಚಿತ್ರ ಮಾಡಿದ್ರು. ಹೀಗೆ ಬೆಳೆದ ಕಾಲದಲ್ಲಿ ಪ್ರಭಾಕರ ಶಾಸ್ತ್ರಿಗಳು ನಿಜಗುಣ ಶಿವಯೋಗಿ ಸ್ಕ್ರಿಪ್ಟ್ ಮಾಡಿದ್ರು. ಅದಕ್ಕೆ ನನ್ನ ಸಹಾಯಕನಾಗಿ ತಗೊಂಡ್ರು. ನಿಜಗುಣ ಶಿವಯೋಗಿ ಯಾಕೋ ಆರಂಭವಾಗಲಿಲ್ಲ. ಆಮೇಲೆ ಭಾಗ್ಯೋದಯ ಒಂದು ಸಾಮಾಜಿಕ ಚಿತ್ರವನ್ನ ಬರೆಯೋದಕ್ಕೆ ಮೊದಲಾದರು. ಅದರಲ್ಲಿ ನನಗೆ ಅಸಿಸ್ಟೆಂಟ್ ಡೈರೆಕ್ಟರ್ ಕೆಲಸ ಪ್ರೊಡೆಕ್ಷನ್ ಮ್ಯಾನೇಜರ್ ಹಾಗೂ ಆ್ಯಕ್ಟರ್ ಹೀಗೆ 3 ಕೆಲಸ ಸಿಗ್ತು.

ರಮೇಶ್: ಅದರಲ್ಲಿ ಯಾವ ಪಾತ್ರ ಮಾಡಿದ್ದೀರಿ?

ಭಗವಾನ್: ಅದರಲ್ಲಿ ಲಲಿತಾರಾವ್ ಅಂತ ಪಾತ್ರ ಮಾಡಿದ್ದಾರೆ. ಕೌಶಿಕ್ ಹೀರೋ. ಅವರ ಭಾವ ಮೈದುನನ ಪಾತ್ರ ಮಾಡಿದೆ. ಚಿತ್ರ ತೆಗೆಯೋದರಲ್ಲಿ ಮೊದಲ ಅನುಭವ ನನಗೆ ದಿಗ್ದರ್ಶನದಲ್ಲೇ ಆಸಕ್ತಿ, ಮನಸ್ಸು ಹೋಯಿತೇ ಹೊರತು ಆ್ಯಕ್ಟಿಂಗ್‌ನತ್ತ ಹೋಗಲಿಲ್ಲ.

ರಮೇಶ್: ಆವಾಂಗಿಂದಾನೋ?

ಭಗವಾನ್: ಹೌದು ಆಗ 1955ರ ಸಮಯ ನಮ್ಮ ದೊರೈ ಅವರು ನಮ್ಮ ಕ್ಯಾಮರಾಮನ್. 1954ರಲ್ಲಿ ರಾಜಕುಮಾರ್ ಬೇಡರ ಕಣ್ಣಪ್ಪ ಚಿತ್ರ ಮಾಡಿದ್ದರು. ರಾಜಕುಮಾರ್ ಅವರ 2ನೇ ಚಿತ್ರ ಸೋದರಿ. ಆ ಚಿತ್ರಕ್ಕೆ ದೊರೈ ಕ್ಯಾಮರಾಮನ್. ಹೀಗಾಗಿ ನಾವು ಮೂರು ಜನ ಒಟ್ಟಾಗಿ ಆವಾಗ ಸೆಟ್‌ಗೆ ಹೋಗೋದು, ಸೇರೋದು, ಮಾತಾಡೋದು, ಹೀಗೆ ಆತ್ಮೀಯತೆ ಸ್ನೇಹ ಮೊಳಕೆ ಒಡೀತು.

ರಮೇಶ್: ದೀರ್ಘ ಕಾಲ ಉಳಿದು ಬಂತದು ಅಲ್ವಾ!

ಭಗವಾನ್: ಹೌದು. ಅದಕ್ಕೆ ಮುಂಚೆ ನಾವು ರಾಜಕುಮಾರ್, ಎಲ್ಲ ಹಾಸನದಲ್ಲಿ ನಾಟಕ ಆಡೋ ಕಾಲದಲ್ಲಿ, ಒಂದು ಕಡೆ ಗುಬ್ಬಿ ಕಂಪನಿ ಸ್ಟೇಜು ಆದ್ರೆ, ಕರ್ನಾಟಕ ನಾಟಕ ಸಭಾ ಸ್ಟೇಜು ಪಕ್ಕದಲ್ಲೇ. ಸೋ ಅಲ್ಲಿ ರಾಜಕುಮಾರ್ ಪರಿಚಯ ಆಗಿತ್ತು. ನನಗೆ ಅಲ್ಲೇ ಅವರನ್ನು ಕಂಡರೆ ಆಗಲೇ ತುಂಬಾ ಇಷ್ಟ. ಜೊತೆಗೆ ಅವರ ತಮ್ಮ ವರದರಾಜ, ನನಗೆ ಆಪ್ತ ಸ್ನೇಹಿತರಾದ್ರು. ಆ ಕಾಲದಲ್ಲಿ ರೂಪುಗೊಂಡ ನಮ್ಮ ಸ್ನೇಹ ಮದ್ರಾಸಲ್ಲಿ, ಗಟ್ಟಿಯಾಯಿತು. 1955 ರವರೆಗೆ ಅಲ್ಲೇ ನಾವು ಒಟ್ಟಿಗೆ ಇದ್ವಿ. ಆಮೇಲೆ ಇವರ 4ನೇ ಚಿತ್ರ ಜಗಜ್ಯೋತಿ ಬಸವೇಶ್ವರ. ಅದಕ್ಕೆ ನಾನು ಅಸಿಸ್ಟೆಂಟ್ ಡೈರೆಕ್ಟರ್. ಆಗ ಡಯಲಿ ಮೀಟ್ ಮಾಡೋದು, ಸೇರೋದು, ಎಲ್ಲದರಲ್ಲೂ ಸೇರೋದು ಆರಂಭವಾಗಿದ್ದು, ಇವತ್ತಿನವರೆಗೆ ನಡ್ಕೊಂಡು ಬಂದಿದೆ. ರಾಜಕುಮಾರ ಅವರ ಪ್ರತಿ ಚಿತ್ರದಲ್ಲೂ, ಸಹಾಯಕ ದಿಗ್ಗರ್ಶಕ ಆಗಿದ್ದು, ಮಂತ್ರಾಲಯ ಮಹಾತ್ಮೆ ಚಿತ್ರದಿಂದ ದಿಗ್ಗರ್ಶಕರಾದ್ವಿ. ಜಗಜ್ಯೋತಿ ಬಸವೇಶ್ವರ ಆದ ಮೇಲು, 1958 ರಿಂದ ನಾನು ರಾಜಕುಮಾರ ಜೋಡಿ ನಾಟಕಗಳನ್ನು ಆಡ್ತಾ ಇದ್ವಿ. ನಮಗೇನು ಜಾಸ್ತಿ ಕೆಲಸಗಳಿರಲಿಲ್ಲ. ನಾವೆಲ್ಲ ಕನ್ನಡ ಚಲನಚಿತ್ರ ಕಲಾವಿದರ ಸಂಘ ಮಾಡ್ಕೊಂಡ್ವಿ ಅದರ ವತಿಯಿಂದ ನಾಟಕಗಳನ್ನು ಆಡಿದ್ವಿ.

ರಮೇಶ್: ಎಲ್ಲ ಊರುಗಳಲ್ಲಿ ನಾಟಕ ಆಡ್ತಾ ಹೋದ್ರಿ.

ಭಗವಾನ್: ಹೌದು ಹಾಗೇ ಧಾರವಾಡಕ್ಕೆ ಬಂದ್ವಿ.

ರಮೇಶ್: ಅಲ್ಲಿ 3 ನಾಟಕಗಳನ್ನ ಆಡಿದ್ರಿ ಅಲ್ವಾ?

ಭಗವಾನ್: ನಿಮ್ಮ ತಂದೆಯವರಾದ ಎನ್.ಎಸ್. ವಾಮನರಾಯರ ದಿಗ್ಗರ್ಶನದಲ್ಲೇ ನಾಟಕಗಳನ್ನ ಆಡಿದ್ರಿ. 

ರಮೇಶ್: ಆಗ ಸಾಹುಕಾರ, ಬೇಡರ ಕಣ್ಣಪ್ಪ, ಎಚ್ಚಮನಾಯಕ ನಾಟಕಗಳನ್ನು ಆಡಿದ್ರಿ. ಒಂದು ಸಾಮಾಜಿಕ ಒಂದು ಪೌರಾಣಿಕ ಒಂದು ಐತಿಹಾಸಿಕ.

ಭಗವಾನ್: ಇದರಲ್ಲಿ ನಮಗೆ ಕೊಂಚ ದುಡ್ಡು ಬಂತು. ಅದರಿಂದ ರಣಧೀರ ಕಂಠೀರವ ಅಂತ ಚಿತ್ರ ತೆಗೆದ್ವಿ. ಆ ಚಿತ್ರಕ್ಕೆ ನಾಲ್ಕು ಜನ ಪಾರ್ಟಿರ‍್ಸ್. ರಾಜಕುಮಾರ್, ಬಾಲಕೃಷ್ಣ, ಜಿ.ವಿ ಅಯ್ಯರ್ ಹಾಗೂ ನರಸಿಂಹರಾಜು ಅವರು. ಅದಕ್ಕೆ ನಾನು ಸಹಾಯಕ ನಿರ್ದೇಶಕನಾದೆ. ಆದಾದ ಮೇಲೆ ನಮಗೆ ಕಣ್ತೆರೆದು ನೋಡು ಚಿತ್ರ ಮಾಡೋ ಅವಕಾಶ ಸಿಕ್ತು. ಕೈವಾರ ಮಾಹತ್ಮೆ, ದಶಾವತಾರ, ಚಿತ್ರಗಳ ಅವಕಾಶ ಸಿಗ್ತು. ಇದಾಗೋಷ್ಟರಲ್ಲಿ ನಮಗೆ ಒಂದು ಕಾದಂಬರಿ ಚಿತ್ರಕ್ಕೆ ತರಬೇಕು ಅಂದ್ಕೊಂಡ್ವಿ. ದೊರೈ ಅವರಿಗೂ ಸಾಹಿತ್ಯದಲ್ಲಿ ಬಹಳ ಆಸಕ್ತಿ. ಆತ ಸಿತಾರ್ ನುಡಿಸ್ತಿದ್ರು. ಒಳ್ಳೇ ಸಂಗೀತಗಾರರು. ಆಗ ದೊಡ್ಡ ಮೀಸೆ ಬಿಟ್ಟು, ನಮಗೆಲ್ಲ ಹೆದರಿಕೆ ತರಿಸ್ತಿದ್ದ ಸಿಂಗ್ ಠಾಕೂರ್ ಅವರು ನಮಗೆ ಗುರುಗಳ ತರಹ, ಲೀಡರ್. ಅವರೇ ಜಗಜ್ಯೋತಿ ಬಸವೇಶ್ವರ ಡೈರೆಕ್ಟರ್. ಅವರ ಮುಂದಾಳುತನದಲ್ಲೇ, ಒಂದು ಕಾದಂಬರಿ ಆಧಿರಿಸಿದ ಚಿತ್ರ ಅಂತ ಧರ್ಮದೇವತೆ ಕಾದಂಬರಿ ತಗೊಂಡ್ವಿ. ಕೃಷ್ಣಮೂರ್ತಿ ಪುರಾಣಿಕರು ಬರೆದಿದ್ದು.

ರಮೇಶ್: ಕನ್ನಡದಲ್ಲಿ ಕಾದಂಬರಿ ಆಧರಿಸಿದ ಚಿತ್ರಗಳು ಶುರು ಆದದ್ದೇ, ಕರುಣೆಯೇ ಕುಟುಂಬದ ಕಣ್ಣು ಚಿತ್ರದಿಂದ. ಧರ್ಮದೇವತೆ ಕಾದಂಬರಿಯಲ್ಲಿ, ಹಲವಾರು ಬದಲಾವಣೆ ಮಾಡಿಕೊಂಡಿದ್ರೆ ಆದರೂ ಸಹ ಈ ಪಾತ್ರ ಪೋಷಣೆ, ಹಾಸ್ಯ ಸೇರಿ ಬೇರೆ ಬೇರೆ ರಸಗಳ ಪೋಷಣೆಯಿಂದ, ಆ ಒಂದು ಕಾದಂಬರಿ, ಪರಿಣಾಮಕಾರಿ ಚಲನಚಿತ್ರವಾಗಿ ಬಂತು ಅಂತ, ಎಲ್ಲ ಜನರ ಅಭಿಪ್ರಾಯ.

ಭಗವಾನ್: ಅದಕ್ಕೆ ನಾವು ಧನ್ಯರಾಗಿದೀವಿ. ಇದಕ್ಕೂ ಮುಂಚೆ ಕಣ್ತೆರೆದು ನೋಡು ಚಿತ್ರಕ್ಕಾಗಿ ಕವನ ತಗೋಂಡಾಗ, ಕನ್ನಡದ ಮಕ್ಕಳೆಲ್ಲ ಒಂದಾಗಿ ಬನ್ನಿ ಅನ್ನೋ ಪಂಜೆ ಮಂಗೇಶರಾಯರ ಹಾಡು ಆರಿಸಿಕೊಂಡಿದ್ವಿ.

ರಮೇಶ್: ಜಿ.ಕೆ. ವೆಂಕಟೇಶ್ ಹಾಡಿದ್ದಾರಲ್ವ?

ಭಗವಾನ್: ಹೀಗೆ ಕನ್ನಡದಲ್ಲಿ ಕಾದಂಬರಿ, ಕವನ, ಚಲನ ಚಿತ್ರಗಳಿಗೆ ಅಳವಡಿಸಿದವರು ನಾವೇ.

ರಮೇಶ್: ಪ್ರಖ್ಯಾತ ಕವಿಗಳ ಕವನಗಳನ್ನ ತಗೊಂಡ್ರಿ. 

ಭಗವಾನ್: ಹೀಗೆ ಈ ಕೆಲಸಗಳಲ್ಲಿ ನಾವೇ ಕಾರಣೀಭೂತರು ಅಂದ್ರೆ, ನಮ್ಮನ್ನ ನಾವೇ ಹೊಗಳಿಕೊಂಡಂತಾಗುತ್ತೆ.

ರಮೇಶ್: ಕಾದಂಬರಿ ಆಧಾರಿತ ಚಿತ್ರ ಆರಂಭಿಸಿದ್ರಲ್ಲ, ಕರುಣೆಯೇ ಕುಟುಂಬದ ಕಣ್ಣು ಚಿತ್ರ, ವ್ಯಾಪಾರದ ದೃಷ್ಟಿಯಿಂದ ಹೇಗಾಯ್ತು?

ಭಗವಾನ್: ತುಂಬಾ ಚೆನ್ನಾಗಿತ್ತು. ಮೊದಲ ಕಾದಂಬರಿ ಆಧರಿಸಿದ ಚಿತ್ರ ಅಂತ ಬಹಳ ಜನರ ಒಳ್ಳೆಯ ಪ್ರತಿಕ್ರಿಯೆ ಬಂತು. ಅಂತಲೇ ಸ್ಫೂರ್ತಿ ಹೊಂದಿ 2ನೇ ಚಿತ್ರ ಕುಲವಧು ಚಿತ್ರಾನ ತೆಗೆದ್ವಿ.

ರಮೇಶ್: ಅದೂ ಕೃಷ್ಣಮೂರ್ತಿ ಪೌರಾಣಿಕರ ಕಾದಂಬರೀನೇ.

ಭಗವಾನ್: ಹೌದು. ಅದಕ್ಕೆ ಡೈಲಾಗ್ಸ್ ನಾನೇ ಬರೆದೆ. ಅದರಲ್ಲೂ ಕವಿಗಳ ಕವನಗಳನ್ನು ಅಳವಡಿಸಿದೀವಿ. ಬೇಂದ್ರೆ ಅವರ ಯುಗ ಯುಗಾದಿ ಕಳೆದರೂ, ಕುವೆಂಪು ಅವರ ಒಡನಾಡಿ ಬೇಕೆಂದು, ಕುಹೂಕುಹೂ ಕವಿತೆಗಳು. 

ರಮೇಶ್: ವೀ.ಸಿ. ಅವರ ಎಮ್ಮ ಮನೆ ಅಂಗಳದಿ. 

ಭಗವಾನ್: ಸ್ಫೂರ್ತಿ ಬಂತಲ್ಲ. ಜನರು ನಮ್ಮನ್ನ ಆಧರಿಸ್ತಾರೆ ಅಂತ ಗೊತ್ತಾಯ್ತಲ್ಲ. ಹೀಗಾಗಿ ಕಾದಂಬರಿಗಳನ್ನ, ಕವಿಗಳ ಗೀತೆಗಳನ್ನ ತಗೊಂಡ್ವಿ.

ರಮೇಶ್: ಅದಕ್ಕೆ ಹ್ಯಾಗೆ ಬಂತು ಪ್ರತಿಕ್ರಿಯೆ?

ಭಗವಾನ್: ಅದಕ್ಕೂ ಬಹಳ ಚೆನ್ನಾಗಿ ಬಂತು. ಲೀಲಾವತಿ, ರಾಜಕುಮಾರ್, ಅಭಿನಯ ಬಹಳ ಚೆನ್ನಾಗಿತ್ತು. ಅಲ್ಲಿಂದ ಕಾದಂಬರಿಗಳ ಚಿತ್ರಯುಗ ಸ್ಟಾರ್ಟ್ ಆಯ್ತು ಅಂತ ಹೇಳಬಹುದು. ಈ ಎಲ್ಲಾ ಚಿತ್ರ ಮಾಡಬೇಕಾದರೆ ನಾವೇ ಯಾಕೆ ನಿರ್ಮಿಸಬಾರದು? ಇನ್ನೊಬ್ಬರಿಗೆ ಹೋಗಿ ನಿರ್ಮಿಸಿಕೊಡ್ತಿದೀವಿ ಅನಿಸ್ತು. ನಮ್ಮ ದುಡಿಮೆ, ಇನ್ನೊಬ್ಬರು ಓಲ ಅನುಭವಿಸ್ತಾರೆ. ನಾವೇ ಯಾಕೆ ದುಡಿದು, ಫಲ ಉಣ್ಣಬಾರದು ಅಂತನಿಸ್ತು. ರಾಘವೇಂದ್ರ ಸ್ವಾಮಿಗಳ ಪ್ರೇರಣೆ ಕಾಣಿಸುತ್ತೆ. ಮನಸಿಗೆ ಬಂತು.


ಅದನ್ನ ರಾಜಕುಮಾರ್ ಅವರೆದುರು ಇಟ್ವಿ, ಅವರು ಹೇಳಿದ್ರು, ನಿಮ್ಮ ಯಾವುದೇ ಪ್ರಯತ್ನಕ್ಕೂ ನನ್ನ ಬೆಂಬಲವಿದೆ ನೀವು ಜಡೀರಿ ಅಂದ್ರು, ನಾವು ಜಡಿದ್ವಿ ಅಷ್ಟೇ.


ರಮೇಶ್: ಸಾಮಾಜಿಕ ಚಿತ್ರ ನಿರ್ದೇಶನ, ನಿರ್ಮಾಣ, ಹೇಗೆ ಬೇಕಾದ್ರೂ ಮಾಡಬಹುದು. ಆದರೆ ಜನರ ಮನಸ್ಸಿನಲ್ಲಿ ನಿಂತಿರುವ ಸಂತರು, ಧಾರ್ಮಿಕ ಪುರುಷರು, ಯಾವುದಾರೂ ಒಂದು ಧರ್ಮದ ಪ್ರಚಾರ್ಯರ ಬಗ್ಗೆ ಚಿತ್ರ ಮಾಡೋದು, ಬಹಳ ಕಷ್ಟ ಆಗುತ್ತೆ. ಅದಕ್ಕೆ ಬಹಳ ಸಿದ್ಧತೆ ಬೇಕಾಗುತ್ತೆ. ಸ್ವಲ್ಪ ತಪ್ಪಾದ್ರೂ ಎಡರು ತೊಡರು ಬಂದಾಗ, ಆ ಸಂಬಂಧಿಸಿದವರಿಂದ, ಬಹಳ ಜನರಿಂದ, ಟೀಕೆ, ಕಟು ವಿಮರ್ಶೆ ಟಿಪ್ಪಣಿ ಎಲ್ಲ ಬರುತ್ತೆ. ತೀರ ನೈಜತೆ ದೃಷ್ಟಿಯಿಂದ ಹೋದರೆ, ಜನರ ಮನಸ್ಸಿನಲ್ಲಿ, ಕಲ್ಪಿಸಿಕೊಂಡ ದೈವೀಕತೆಗೆ ಸ್ವಲಫ ಭಂಗ ಬರಬಹುದು ಅನ್ನೋ ಹೆದರಿಕೆ ಒಂದು ಕಡೆ ಇರುತ್ತೆ. ಹೀಗಾಗಿ ಯಾವ ರಿತಿ ಸಿದ್ಧತೆ ಮಾಡಿದ್ರಿ?

ಭಗವಾನ್: ಅದಕ್ಕೆ ನಾವು ಕೂತ್ಕೊಂಡು ಯೋಜಿಸಿದ್ವಿ. ಅಲ್ಲೀತನಕ ಬೇಕಾದಷ್ಟು ಸಾಮಾಜಿಕ ಚಿತ್ರ ಕೊಟ್ಟಿದ್ವಿ. ಈಗ ಒಂದು ಈ ತರಹದ ಚಿತ್ರ ಮಾಡಬಂದ್ವಿ. ಆಗ ನಮ್ಮ ನಿರ್ಮಾಣ ಸಂಸ್ಥೆ ಹೆಸರು, ಜಗಜ್ಯೋತಿ ಫಿಲಂಸ್ ಅಂತ ಆಗಿತ್ತು.


ರಮೇಶ್: ಮುಂದೆ ಅನುಪಮ ಮೂವೀಸ್ ಆಯ್ತಲ್ವ?


ಭಗವಾನ್: ಅದು ಜೇಡರ ಬಲೆಯಿಂದ ಆರಂಭವಾಯ್ತು

ರಮೇಶ್: ಕನ್ನಡದಲ್ಲಿ ಮೊಟ್ಟ ಮೊದಲಿಗೆ ನೀವು, ಬಾಂಡ್ ರೀತಿಯ ಚಿತ್ರಗಳನ್ನ ಮಾಡಿ ಅದುವರೆಗೆ ಪೌರಾಣಿಕ, ಐತಿಹಾಸಿಕ ಹಾಗೂ ಸಾಮಾಜಿಕ ಚಿತ್ರಗಳಲ್ಲಿ ಮಿಂಚ್ತಿದ್ದ ಡಾ.ರಾಜಕುಮಾರ್ ಅವರನ್ನ, ಬಾಂಡ್ ರೀತಿಯ ಚಿತ್ರಕ್ಕೆ ಅಳವಡಿಸೋ ಪ್ರಯತ್ನ ಮಾಡಿದ್ರಿ.

ಭಗವಾನ್: ಅದಕ್ಕೆ ಒಂದು ಸ್ಫೂರ್ತಿಯಿದೆ. ಅದಕ್ಕೊಂದು ಕಾರಣವಿದೆ. ಆಗ ತಾನೆ ಇಂಗ್ಲಿಷ್‌ನಲ್ಲಿ. ಬಾಂಡ್ ಚಿತ್ರಗಳ ಯುಗ ಆರಂಭವಾಗಿ, ಡಾಕ್ಟರ್ ನೋ ಅನ್ನೋ ಚಿತ್ರ ಬಂದಿತ್ತು. ಅದನ್ನ ನಾವು ರಾಜಕುಮಾರ್ ಅವರು ದೊರೈ, ಎಲ್ಲ ಮದ್ರಾಸಲ್ಲಿ ಕೂತು ನೋಡಿದ್ವಿ. ನೋಡಿದಾಗ, ನಾವ್ಯಾಕೆ ಈ ತರಹ ಚಿತ್ರ ತೆಗೀಬಾರದು ಅಂತ ಆಸೆಯಾಯ್ತು. ಅದನ್ನ ಕಾರ್ಯರೂಪಕ್ಕೆ ತರಬೇಕೂಂತ ಯೋಜೆನ ಮಾಡ್ರಿದ್ದಾಗ, ಅದಕ್ಕೆ ತಣ್ಣೀರೆರಚಿದವರು ಬಹಳ ಜನ. ಅದಕ್ಕೆ ಉತ್ತೇಜನ ಕೊಟ್ಟವರು ಯಾರು ರ‍್ಲಿಲ್ಲ. ಏನು ಹೇಳಿದ್ರು “ನೀವೆಲ್ಲ ಹುಚ್ಚರು ಕಣಯ್ಯ. ಇಂಗ್ಲೀಷ್ ಪಿಕ್ಚರ್ ತೆಗೀತೀರ ನೀವು. ಎಲ್ಲಯ್ಯ ನಡೆಯುತ್ತೆ? ಇದು ಸಾಧ್ಯಾನ!


ರಮೇಶ್: ಸೀಮಿತ ಮಾರುಕಟ್ಟೆ

ಭಗವಾನ್: ಉಂಟೇ? ನವಿಲು ನೋಡಿ ಪುಕ್ಕ ಕಿತ್ಕೊಂಡ ಕೆಂಭೂತದ ತರಹ ಅಂದ್ರು. ಪ್ರಯತ್ನ ಯಾಕೆ ಮಾಡಬಾರದೂಂತ ಯೋಜನೆ ಬಂತು. ನಮ್ಮ ರಾಜಕುಮಾರ್ ಅವರು ನಾವು ಹೂಂ ಅಂದ್ರೆ, ಅವರು ಓ ಅಂತ ಏರಿಸಿಬಿಡ್ತಾರ ನಮ್ಮನ್ನ. ಸರಿ ಅವರು ಉತ್ತೇಜನ ಕೊಟ್ರು. ನೀವು ಮಾಡಿ ನಾನು ಮಾಡ್ತೀನಿ ಅಂದ್ರು ಸರಿ ಅವತ್ತೇ ಅವರಿಗೆ ಕ್ರಾಪ್ ಮಾಡಿಸಿ, ವಿಗ್ ಹಾಕಿಸಿ, ಬನ್ನಿ ಸಾರ್ ನೋಡೋಣ ಅಂತ, ಒಂದು ಸ್ಕ್ರಿಪ್ಟ್ ಮಾಡಿದ್ವಿ ಡಾಕ್ಟರ್ ನೋ ತರಹ, ಇಂಗ್ಲಿಷಿನ ಕ್ರೈಂ ಬುಕ್ ಓದಿ, ಜೇಡರ ಬಲೆ ಸ್ಕ್ರಿಪ್ಟ್ ಮಾಡಿದ್ವಿ ಅದು ಜನಗಳಿಗೆ ತುಂಬ ಹಿಡಿಸ್ತು. ರಾಜಕುಮಾರ್ ಅವರ ಬದಲಾವಣೆ ಜನರಿಗೆ ಹಿಡಿಸ್ತು. ಅದರಿಂದ ಶುರು ಆಯ್ತು. ಬಾಂಡ್ ಯು

ಗೋವಾದಲ್ಲಿ ಸಿಐಡಿ 999. ಮದ್ರಾಸ್‌ನಲ್ಲಿ ಹುಡುಕಿ ಹುಡುಕಿ, ಲಕ್ಷ್ಮಿನ ಹುಡುಕಿದ್ವಿ, ಅದೂ ಜೇಡರ ಬಲೆಗಿಂತ ಎರಡರಷ್ಟು ಚೆನ್ನಾಗಿ ಹೋಯ್ತು. ಪರಂಪರೆ ಶುರು ಆಯ್ತು. ಆಪರೇಷನ್ ಜಾಕ್ ಪಾಟ್‌ನಲ್ಲಿ ಸಿಐಡಿ 999 ಅದರಲ್ಲಿ ಈಗ ಬಾಂಬೇಲಿ ಖ್ಯಾತಿಯಾಗಿರೋ, ರೇಖಾನ Introduce ಮಾಡಿದ್ವಿ. ಅದು ಅವಳ ಮೊದಲ ಚಿತ್ರ. ಮೇಕಪ್ ಟೆಸ್ಟ್ ಮಾಡಿ, ತುಂಬಾ ಚೆನ್ನಾಗಿ ಮಾಡ್ತೀಯಮ್ಮ ಅಂತ ಹೇಳಿ, ನಾವು ಆ ಪಿಚ್ಚರ್ ಮುಗಿಸೋ ಅಷ್ಟರಲ್ಲಿ, ಅವಳು ಬಾಂಬೆಗೆ ಹಾರಿ, ಅಲ್ಲಿ ಖ್ಯಾತ ನಟಿ ಆಗಿಬಿಟ್ಟದ್ಳು. ಅವಳ ಕೊನೇ Schedule ಗೆ, Flight ನಲ್ಲಿ ಹೋಗಿ ಆ Flight Charges, ನಮ್ಮ ಹತ್ರ ಇಸ್ಕೊಳ್ಳಲಿಲ್ಲ. ನೀವು ಕನ್ನಡದವರು ಬಹಳ ಬಡವರು (ಇಬ್ಬರ ನಗು) ಆದ್ರಿಂದ ನಿಮ್ಮ ಹತ್ರ ಇಸ್ಕೊಳ್ಳೋದಿಲ್ಲ. ಪರವಾಗಿಲ್ಲ ನಾನು ಬಂದು ಆಕ್ಟ್ ಮಾಡಿ ಪೂರೈಸಿ ಹೋಗ್ತೀನಿ ಅಂದಳು. ಆಕೆ ತೆಲುಗು ಪುಲ್ಲಯ್ಯನವರ ಮಗಳು. ಅವರು ಖ್ಯಾತ ನಿರ್ದೇಶಕರು. ಆಮೇಲೆ ಜನ ಅಂದ್ರು. ನಿಮಗೆ ನರೀ ಹೊಡೆದಾಟದ ಚಿತ್ರ ಮಾಡೋಕೆ ಬರುತ್ತೆ. ಒಳ್ಳೇ ಚಿತ್ರ ಮಾಡೋಕೆ ಬರೋಲ್ಲ, ಸೆಂಟಿಮೆಂಟಲ್ ಬರೋಲ್ಲ.

ರಮೇಶ್: ಅಂದ್ರೆ ಜನ ನಿಮಗೆ ರೇಗಿಸಿದ್ರು, ಬೇರೆ ತರಹದ ಚಿತ್ರ ಮಾಡಲು ಪ್ರಚೋದಿಸಿದ್ರು.


ಭಗವಾನ್: ಅದರ ಫಲವೇ ಕಸ್ತೂರಿ ನಿವಾಸ.

ರಮೇಶ್: ಇವತ್ತಿಗೂ ಕನ್ನಡದಲ್ಲಿ ಪಾತ್ರಪೋಷಣೆ ದೃಷ್ಟಿಯಿಂದ, ರಾಜಕುಮಾರ್, ಜಯಂತಿ, ಅಶ್ವಥ್, ಅವರುಗಳ ಅಭಿನಯ ದೃಷ್ಟಿಯಿಂದ, ಕಥಾಪೋಷಣೆಯಿಂದಾಗಲಿ, ಅಪೂರ್ವವಾದ ಚಿತ್ರ. ಬೇರೆ ಭಾಷೆಗಳಲ್ಲಿ ಈ ಚಿತ್ರ ಬಂದ್ರೂ, ಕನ್ನಡದ ಮಟ್ಟ ಬರಲಿಲ್ಲ ಅಂತ, ಜನ ಗುರ್ತಿಸಿದರು.

ಭಗವಾನ್: ಹೌದು ಇವತ್ತಿಗೂ ಕಸ್ತೂರಿ ನಿವಾಸ ಕನ್ನಡಕ್ಕೆ ಒಂದು ಮೈಲುಗಲ್ಲಾಗಿ ನಿಂತಿದೆ. ಅದಾದ ಮೇಲೆ ಈ ತರಹ ತೆಗೀತೀರಾ ಅಥವಾ ಆ ತರಹ ತೆಗೀತೀರ ಅಂತ, ಮತ್ತೆ ಚುಡಾಯಿಸಿದ್ರು, Stuntimental ತೆಗೆಯೋಕೆ ಬರೊಲ್ಲ ಅಂದ್ರು, ಅಂದ್ರೆ ಸ್ಟಂಟ್ ಹಾಗೂ Stuntimental ಎರಡೂ ಇರಬೇಕು. ಬರುತ್ತೇಂತ ಪ್ರತಿಧ್ವನಿ ತೆಗಿದ್ವಿ. ಅದೇ ಕೊನೆಗೆ ದೀವಾರ್ ಆಯ್ತು. ಇದಾದ ಮೇಲೆ ಪಾರ್ವತಮ್ಮ ರಾಜಕುಮಾರ್ ಒಂದು ಪುಸ್ತಕ ತಂದುಕೊಟ್ಟರು. ಇದರಲ್ಲಿ ಹೀರೋ ಪಾತ್ರ ಅಷ್ಟಿಲ್ಲ, ಹಿರೋಗೆ ಮಹತ್ವ ಕೊಟ್ಟು ಮಾಡ್ತೀರಾ ಅಂದ್ರು, ತೆಗೆದು ನೋಡಿದ್ರೆ ಎರಡು ಕನಸು ಕಾದಂಬರಿ.

ರಮೇಶ್: ವಾಣಿ ಅವರ ಕಾದಂಬರಿ.

ಭಗವಾನ್: ರಾಜಕುಮಾರ್ ನಿಂತರೇನೇ ಹಿರೋ, ಅವರನ್ನ ಇಟ್ಕೊಂಡು, ಹಿರೋ ಮಾಡಿ, ಚಿತ್ರ ತೆಗೆಯೋದು ಕಷ್ಟಾನೇ? ಅಂತ ಚಿತ್ರ ತೆಗೆದ್ವಿ, ಅದು ಅಭೂತಪೂರ್ವ ಯಶಸ್ಸು ಗಳಿಸ್ತು.

ರಮೇಶ್: ಕಲ್ಪನಾ, ಮಂಜುಳಾ ಎಲ್ಲ ಅಭಿನಯಿಸಿದ್ರು. 

ಭಗವಾನ್: ಅದರ ಹಾಡುಗಳು ಚೆನ್ನಾಗಿದ್ದು, ಇವತ್ತಿಗೂ ಮನೆಮನೆಯಲ್ಲೂ ಗುಣಗುಣಸ್ತಾ ಇರ್ತಾರೆ. ನಂತರ ಕನ್ನಡದ ಕಾದಂಬರಿಗಳಿಗೆ ಅಂಟಿಕೊಂಡ್ವಿ. ತರಾಸು ಅವರ ಚಂದನದ ಗೊಂಬೆ, ಗಾಳಿಮಾತು, ಮುನಿಯನ ಮಾದರಿ. ರಾಜಕುಮಾರ್ ಅವರದು ಸಮಯದ ಗೊಂಬೆ. ಮತ್ತೆ ರಾಜಕುಮಾರ್, ಒಂದು ಬಾಂಡ್ ಮಾಡೋಣ ಅಂದ್ರು, ಆಪರೇಷನ್ ಡೈಮಂಡ್ ರಾಕೆಟ್ ಮಾಡಿದ್ರಿ, ನೇಪಾಳದಲ್ಲಿ. ನೇಪಾಳನ್ನ ಪರದೇಶ ಅಂತ ಪರಿಗಣಿಸಿದ್ರೆ, ಪರದೇಶಕೆ ಹೋಗಿ ಚಿತ್ರ ತೆಗೆದ ಮೊದಲಿಗರು ನಾವು. ಆದಾದ ಮೇಲೆ ಸಿಂಗಾಪುರದಲ್ಲಿ ರಾಜಾಕುಳ್ಳ ಬಂತು. ನೇಪಾಳ ಹಿಂದೂ ರಾಷ್ಟ್ರ ಆದ್ರಿಂದ ಹಿಂದುಳಿದವ್ರ ತರಹ. ಸಿಂಗಾಪುರ, ಅಂದ್ರೆ ವಿದೇಶ ಅಂತ ಜನರ ಭಾವನೆ. ಪೇಪರ್‌ನಲ್ಲಿ ತಪ್ಪಾಗಿ, ಸಿಂಗಾಪುರನಲ್ಲಿ ವಿದೇಶದಲ್ಲಿ ಚಿತ್ರೀಕರಿಸಿದ ಮೊದಲ ಚಿತ್ರ ಅಂತಾರೆ. ಅದು ಸರಿ ಅಲ್ಲ. ಆಪರೇಷನ್ ಡೈಮಂಡ್ ರಾಕೆಟ್ ಫಸ್ಟ್. ಈ ಫಸ್ಟ್ಗಳೆಲ್ಲ ನಮ್ಮನ್ನೇ ಹುಡುಕ್ಕೊಂಡು ಬರುತ್ತೆ. ನಾವು ಮಾಡಿದ್ರೆ, ನಮ್ಮನ್ನ ತಪ್ಪಿಸಿ ಹೋಗ್ರವೆ. ಮೊದಲು ಕಾದಂಬರಿ ಆಧರಿಸಿ ಮಾಡಿದದ್ರು. ಪುಟ್ಟಣ್ಣ ಅಂತಾರೆ ಕನ್ನಡದಲ್ಲಿದೀವಿ ಅದೇ ಸಂತೋಷ ಕನ್ನಡದಲ್ಲೇ ಇರಬೇಕು ಅನ್ನೋ ಆಸೆ ಇದೆ. 


ರಮೇಶ್: ನೀವು ಶಂಕರ್‌ನಾಗ್ ಚಿತ್ರ, ಮುನಿಯನ ಮಾದರಿ ಒಂದು ಬಿಟ್ರೆ, ಎರಡು ಕನಸು, ಚಂದನದ ಗೊಂಬೆ, ಗಾಳಿಮಾತು, ಇವುಗಳಲ್ಲಿ ಮಹಿಳಾ ಪಾತ್ರಕ್ಕೆ, ಅಂದರೆ ನಾಯಕಿ ಪಾತ್ರಕ್ಕೆ, ಹೆಚ್ಚು ಒತ್ತಿರುವ ಚಿತ್ರಗಳನ್ನ ಸಾಲಾಗಿ ತೆಗೆದ್ರಿ, ಲಕ್ಷ್ಮಿ ಅವರನ್ನ ತಗೊಂಡ್ರಿ ನೀವು ಮೊದಲ ಬಾರಿ, ಲಕ್ಷ್ಮಿ ಅನಂತನಾಗ್ ಜೋಡಿ Interoduce ಮಾಡಿ, ಒಂದು ನವಿರಾದ ಹಾಸ್ಯ ಹಾಗೂ ಭಾವನಾತ್ಮಕ ಚಿತ್ರಗಳನ್ನು ಕೊಟ್ರಿ.


ಭಗವಾನ್: ಅದಕ್ಕೆ ಪ್ರತಿಕ್ರಿಯೆ ತುಂಬಾ ಚೆನ್ನಾಗಿ ಬಂತು. ಬಯಲುದಾರಿ, ಅನಂತನಾಗ್‌ಗೆ ಮೊದಲು ಕೊಟ್ಟೆ.

ರಮೇಶ್: ಈ ಕಾದಂಬರಿ ಭಾರತೀಸುತ ಅವರದು. ಮೊದಲಬಾರಿ ಅನಂತ್‌ನಾಗ್ ಅವರಿಗೆ ಕಲ್ಪನಾ ಕೊಟ್ರಿ. 

ಭಗವಾನ್: ಅನಂತನಾಗ್ ಹಂಸಗೀತೆ ಮಾಡಿದ್ರು. ಅವರಿಂದ ಒಳ್ಳೆ ಹಾಸ್ಯಪಾತ್ರ ಮಾಡಿಸಬಹುದು. ಹೀರೋ ಕಾಮಿಡಿ ಅವರ‍್ನ ಬಿಟ್ರೆ ಯಾರೂ ಇಲ್ಲ ಅಂತ, ಅನಂತನಾಗ್ ಅವರನ್ನ ತಗೊಂಡು, ಅವರಿಗೆ ಬಯಲುದಾರಿ ಮಾಡಿದ್ವಿ. ಆಗ ರಾಜಕುಮಾರ ಅವರ ಕಾಲ್‌ಶೀಟ್ ಇಲ್ಲಾಂದಾಗ, ಬಯಲುದಾರಿ ಮಾಡಲು ತಿರುಗಾ ಕಾರಣೀಕರ್ತರು, ನಮ್ಮ ರಾಜಕುಮಾರ್ ಹಾಗೂ ಪಾರ್ವತಮ್ಮ ರಾಜಕುಮಾರ್ ಅವರು. ಅವರು ಹೇಳಿದ್ರು "ನನ್ನ ಕಾಲ ಶೀಟ್ ಇನ್ನು 2 ವರ್ಷಕ್ಕೆ ಬುಕ್ ಆಗಿದೆ. ನಿಮ್ಮಂತಹ ಒಬ್ಬ ಪ್ರತಿಭಾವಂತ ನಿರ್ದೇಶಕರು, ಸುಮ್ಮನೆ ಕೂತಿರಬಾರದು. ದಯವಿಟ್ಟು ಬೇರೆ ಯಾರನ್ನಾದರೂ ಹಾಕಿ ಮಾಡಿ". ಅವರೇ ತುಂಬಾ ಒತ್ತಾಯ ಮಾಡಿದ್ರು ಅಂತ, ನಾವು ಹೇಳಿದ್ವಿ. ನಿಮ್ಮನ್ನ ಬಿಟ್ಟು ಬೇರೆ ಚಿತ್ರ ಮಾಡೋಲ್ಲಾಂತ. ನಮ್ಮ ಅವರ ಬಂಧ ಅನುಬಂಧ ಅದೆಷ್ಟು ಚೆನ್ನಾಗಿತ್ತು. ಅರ‍್ನ ಬಿಟ್ಟು ನಮಗೆ ಪಿಕ್ಚರ್ ಮಾಡೋಕೇ ಇಷ್ಟ ಇರ್ಲಿಲ್ಲ. ಯಾವುದೋ ಒಂದು ಕಾಲದಲ್ಲಿ ಯಾರೋ ಒಬ್ರು ಬಂದು, ಒಂದು ಪಿಕ್ಚರ್ ಮಾಡಿಕೊಡಿ ಅಂತ ಕೇಳಿದ್ರು, ದುಡ್ಡು ಕೊಟ್ರು. ಆವಾಗ ನಾವು ಹೇಳಿದ್ವಿ, ರಾಜಕುಮಾರ್ ಹಾಕ್ಕೊತೀವೀಂತ. ರಾಜಕುಮಾರ್ ಹಾಕ್ಕೊಂಡ್ರೆ, ಅವರು ಮೇನಲ್ಲಿ ಕಾಲ್ ಶೀಟ್ ಕೊಟ್ಟಿದ್ದಾರೆ ಇಲ್ಲ. ನನಗೆ ಫೆಬ್ರವರಿಲೇ ಬೇಕು ಅಂದ್ರು. ನೀವು ಬೇರೆ ಇನ್ಯಾರನ್ನಾದ್ರೂ ಹಾಕಿ ಮಾಡಿ ಅಂದ್ರು ನಾವು ರಾಜಕುಮಾರ್ ಇಲ್ಲದೇ ಚಿತ್ರ ಮಾಡೋಲ್ಲ ಅಂತ ಹೇಳಿ, ದುಡ್ಡು ವಾಪಸ್ ಕೊಟ್ವಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter ವ

إرسال تعليق

0 تعليقات
إرسال تعليق (0)
Mandovi Motors Presents MONSOON BONANZA
Mandovi Motors Presents MONSOON BONANZA
To Top