ಭಾರತದ ಬಹು ಜನಪ್ರಿಯ ಪ್ರಧಾನಿಯಾಗಿದ್ದ ಅಟಲ್ ಬಿಹಾರಿ ವಾಜಪೇಯಿ ಕೇವಲ ರಾಜಕೀಯ ಪಾಂಡಿತ್ಯಕ್ಕೆ ಮಾತ್ರವಲ್ಲದೆ ತಮ್ಮ ಅಮೋಘ ಕಾವ್ಯ ಪ್ರತಿಭೆ ಹಾಗೂ ವಿಶಿಷ್ಟ ಹಾಸ್ಯಪ್ರಜ್ಞೆಗೂ ಹೆಸರುವಾಸಿಯಾದವರು.
ಹಲವು ಪ್ರಥಮಗಳಿಗೆ ಕಾರಣೀಭೂತರಾಗಿ ಭಾರತದ ಶಕ್ತಿಯನ್ನು ವಿಶ್ವಕ್ಕೇ ಪರಿಚಯಿಸಿಕೊಟ್ಟ ಈ ಮಹಾನ್ ಮುತ್ಸದಿ ಅಜಾತ ಶತ್ರು ಮಾತ್ರವಲ್ಲದೆ ಬಹುಮುಖ ಪ್ರತಿಭೆಯ ಖನಿಯೂ ಹೌದು.ಭಾಷಣಕ್ಕೆ ನಿಂತಾಗ ಅವರಲ್ಲಿನ ಅಮೋಘ ಕವಿತ್ವ ಹಾಗೂ ಹಾಸ್ಯಪ್ರಜ್ಞೆ,ಮಾತುಗಳೊಂದಿಗೆ ಬೆರೆತು ಕೇಳುಗರನ್ನು ಸೂಜಿಗಲ್ಲಿನಂತೆ ಸೆಳೆಯುತ್ತಿತ್ತು.ಅಗಾಧ ಜನ ಸಮೂಹದ ಮೇಲೆ ಅವರ ಭಾಷಣಗಳು ಗಾಢ ಪ್ರಭಾವ ಬೀರುತ್ತಿದ್ದವು.
ಭಾಷಣದ ನಡುವೆ ಅವರು ಹಾರಿಸುತ್ತಿದ್ದ ಹಾಸ್ಯ ಚಟಾಕಿಗಳು ಸದನದಲ್ಲಿ ಉಂಟಾಗುತ್ತಿದ್ದ ಕಾವಿನ ವಾತಾವರಣವನ್ನೇ ಬದಲಾಯಿಸಿ ಎಲ್ಲರ ಮೊಗದಲ್ಲೊಂದು ನಗೆಯ ಸಿಂಚವನ್ನು ಸಿಂಪಡಿಸುತ್ತಿತ್ತು.ಕಾವ್ಯಮಯವೂ ಹಾಸ್ಯಮಯವೂ ಆಗಿರುತ್ತಿದ್ದ ಅವರ ಮಾತುಗಳಲ್ಲಿ ಮಾನವೀಯತೆ, ದೇಶಭಕ್ತಿ, ಅಂತಃಕರಣ, ಸಮಾನತೆ, ತಾತ್ವಿಕ, ಸಾಮಾಜಿಕ ಉದಾತ್ತ ಚಿಂತನೆಗಳು ಮೇಳೈಸಿರುತ್ತಿತ್ತು.
ಗಝಲ್,ದೋಹಾ ಅಥವಾ ಮುಕ್ತ ಛಂದಸ್ಸಿನ ರೂಪದಲ್ಲಿ, ಸರಳ ಭಾಷೆಯಲ್ಲಿ ಬರೆಯಲಾದ ಅವರ ಮಾತುಗಳು ದೇಶದ ಮೂಲೆ ಮೂಲೆಯನ್ನು ಮುಟ್ಟಿದ್ದಲ್ಲದೆ ಅವರನ್ನು ಹಿಂದಿ ಸಾಹಿತ್ಯದ ಪ್ರಮುಖ ವ್ಯಕ್ತಿಯನ್ನಾಗಿಸಿತು. 'ಮೇರಿ ಸಂಸದೀಯ್ ಯಾತ್ರಾ', ಮೇತಿ ಎಕ್ಯಾವನ್ ಕವಿತಾಯೇ ', ಕಾದಂಬಿನಿ', 'ಸಫೇರ್ ಬಾದಲ್', 'ರೋತೆ ರೋತೇ ರಾತ್ ಸೋಗಯೇ ' ಅಮರ್ ಆಗ್ ಹೈ', 'ಆವೋ ಫಿರ್ ಸೆ'ಅವರ ಪ್ರಸಿದ್ಧ ಕೃತಿಗಳಾಗಿವೆ.
ಅವರ ಕೆಲವು ಕವಿತೆಗಳನ್ನು ಗಮನಿಸುವುದಾದರೆ
ಮನುಷ್ಯರಾಗಿ
ಕೇವಲ ಹೆಸರಿನಿಂದಲ್ಲ
ರೂಪದಿಂದಲ್ಲ
ಬದಲಾಗಿ ಹೃದಯದಿಂದ
ಬುದ್ಧಿಯಿಂದ
ಸಂಸ್ಕಾರದಿಂದ
ಜ್ಞಾನದಿಂದ
ಅವರ ಈ ಸರಳ ಸಾಲುಗಳೇ ಸಾಕು ಮಾನವೀಯತೆಯ ಬಗ್ಗೆ ಅವರ ಕಾಳಜಿ, ದೃಷ್ಟಿಕೋನವನ್ನು ಸಾರಲು.
ಅವರ ಇನ್ನೊಂದು ಕವಿತೆ
ಕೌರವ ಯಾರು?
ಪಾಂಡವನಾರು?
ಕ್ಲಿಷ್ಟದ ಪ್ರಶ್ನೆ!
ಇಬ್ಬದಿಯಲಿ ಹಬ್ಬಿದೆ
ಶಕುನಿಯ ಮೋಸದ ಜಾಲ
ಧರ್ಮರಾಜನ ಕೈಗೆ ಅಂಟಿದ
ಜೂಜಿನ ವ್ಯಸನ
ಪ್ರತಿಸಭೆಯಲ್ಲಿ ಪಾಂಚಾಲಿಗೆ
ಅಪಮಾನ
ಕೃಷ್ಣನಿಲ್ಲದೆ ನಡೆಯುತಿಹುದು
ಮಹಾಭಾರತ
ಅಧರ್ಮ ಅನ್ಯಾಯ ಸ್ತ್ರೀ ಶೋಷಣೆ ಎಲ್ಲೆಡೆ ತಾಂಡವವಾಡುತ್ತಿದೆ ಎಂಬುದನ್ನು ಈ ಸಾಲುಗಳು ಅತ್ಯಂತ ಪರಿಣಾಮಕಾರಿಯಾಗಿ ಅಭಿವ್ಯಕ್ತಿಗೊಳಿಸಿವೆ.
ಸೋಲೊಪ್ಪಲಾರೆ
ಜಗಳವಾಡಲಾರೆ
ಕಾಲದ ಬರಹವ ಬದಲಾಯಿಸುವೆ
ಹೊಸ ಹಾಡನ್ನು ಹಾಡುವೆ
1999ರಲ್ಲಿ 13ತಿಂಗಳ ಅವರ ಸರ್ಕಾರ ಒಂದೇ ಒಂದು ಮತದ ಅಂತರದಿಂದ ಸೋತು ಅವರು ತಮ್ಮ ಪ್ರಧಾನಮಂತ್ರಿ ಪದವಿ ಬಿಡಬೇಕಾದ ಸಂದರ್ಭದಲ್ಲಿ ಅವರು ಯಾರನ್ನೂ ಹಳಿಯದೆ ಯಾರ ಸಹಾನುಭೂತಿಯನ್ನೂ ಅಪೇಕ್ಷಿಸದೆ ಹೇಳಿದ ಮೇಲಿನ ಕವಿತಾ ಸಾಲುಗಳು ಅವರ ದಿಟ್ಟ ವ್ಯಕ್ತಿತ್ವಕ್ಕೆ ಸಾಕ್ಷಿಯಾಗಿದೆ.
ಮನುಷ್ಯ
ಸವಾಲುಗಳೊಂದಿಗೆ ಸೆಣಸಬೇಕು
ಕನಸೊಂದು ಮುರಿದರೆ
ಹೊಸ ಕನಸ ಕಟ್ಟಬೇಕು
ವಾಜಪೇಯಿಯವರ ಈ ಸಾಲುಗಳು ಅವರ ಅಸೀಮ ಉತ್ಸಾಹ ಹಾಗೂ ದೃಢ ಸಂಕಲ್ಪಗಳಿಗೆ ಹಿಡಿದ ಕನ್ನಡಿಯೇ ಸರಿ.
ಭಾರತವಿದು ಕೇವಲ ಭೂಮಿಯಲ್ಲ(ಭಾರತ್ ಜಮೀನ್ ಕಾ ಟುಕ್ಡಾ ನಹಿ)ಅವರ ಅಪ್ರತಿಮ ದೇಶಭಕ್ತಿಯನ್ನು ಹೊರಸೂಸುವ ಸಾಲುಗಳು.ದೇಶಭಕ್ತಿ,ಮಾನವೀಯ ಮೌಲ್ಯ,ದೇಶಾಭಿಮಾನ ತುಂಬುವ ಅವರ ಕವಿತೆಗಳು ವಾಜಪೇಯಿಯವರ ಕವಿತಾ ಖಜಾನೆಯಲ್ಲಿ ಹೇರಳ!.
ಅಟಲ್ ಅವರ ಪರಿಪಕ್ವ ವ್ಯಕ್ತಿತ್ವದ ಇನ್ನೊಂದು ರಸಮಯ ಮುಖವೆಂದರೆ ಅವರಲ್ಲಿನ ಹಾಸ್ಯಪ್ರಜ್ಞೆ. ಸಮಯ, ಪರಿಸ್ಥಿತಿ, ಸಂದರ್ಭಕ್ಕನುಗುಣವಾಗಿ ಅವರು ಹಾರಿಸುತ್ತಿದ್ದ ಹಾಸ್ಯ ಚಟಾಕಿಗಳು ಅದೆಷ್ಟೋ ಬಾರಿ ವಿರೋಧ ಪಕ್ಷದವರ ಮುಖದಲ್ಲೂ ನಗೆ ಮೂಡಿಸಿಬಿಡುತ್ತಿತ್ತು. ಸದನದಲ್ಲಿ, ಸಭೆಗಳಲ್ಲಿ ಉಂಟಾಗುತ್ತಿದ್ದ ಉದ್ವೇಗ, ಗದ್ದಲ, ಕೋಲಾಹಲದ ಸಂದರ್ಭಗಳಲ್ಲಿ ಅವರು ಹಾರಿಸುತ್ತಿದ್ದ ನಗೆ ಚಟಾಕಿಗಳು ವಾತಾವರಣವನ್ನು ತಿಳಿಯಾಗಿಸಿಬಿಡುತ್ತಿತ್ತು.
ಅದೆಷ್ಟೋ ಉದಾಹರಣೆಗಳನ್ನು ನೀಡಬಹುದಾದರೂ ಕೆಲವು ಮುಖ್ಯವಾದದ್ದನ್ನು ಇಲ್ಲಿ ಸ್ಮರಿಸಬಹುದು. ವಾಜಪೇಯಿಯವರು ಲಾಹೋರಿಗೆ ಭೇಟಿ ಕೊಟ್ಟ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದಾಗ ಇದ್ದಕ್ಕಿದ್ದಂತೆ ಒಬ್ಬ ಪಾಕಿಸ್ತಾನದ ವರದಿಗಾರ್ತಿಯೊಬ್ಬರು ತಮಾಷೆಗೆಂದು 'ಸರ್ ನಾನು ತಮ್ಮನ್ನು ಮದುವೆಯಾಗಲು ಬಯಸುತ್ತೇನೆ. ಆದರೆ ನೀವು ಕಾಶ್ಮೀರವನ್ನು ಬಿಟ್ಟುಕೊಡಬೇಕು' ಎಂದರು.ಸ್ವಲ್ಪವೂ ವಿಚಲಿತರಾಗದ ವಾಜಪೇಯಿಯವರು ತಕ್ಷಣ. 'ಖಂಡಿತ ನಾನು ತಮ್ಮನ್ನು ಮದುವೆಯಾಗಲು ಸಿದ್ಧನಿದ್ದೇನೆ. ಆದರೆ ವರದಕ್ಷಿಣೆಯಾಗಿ ನೀವು ನಿಮ್ಮ ಇಡೀ ಪಾಕಿಸ್ತಾನವನ್ನು ನಮಗೆ ಕೊಡಬೇಕು'ಎಂದು ನಗೆ ಚಟಾಕಿ ಹಾರಿಸಿದರು.
ಇನ್ನೊಂದು ಸಂದರ್ಭದಲ್ಲಿ ಸಂಗೀತ ಲೋಕದ ದಂತಕಥೆ ಲತಾ ಮಂಗೇಶ್ಕರ್ ಅವರೊಂದಿಗೆ ಮಾತನಾಡುತ್ತಿರುವಾಗ ನಿಮ್ಮ ಹೆಸರು ಮತ್ತು ನನ್ನ ಹೆಸರು ಒಂದೇ ತೆರನಾಗಿದೆ ಎಂದರಂತೆ.ಇದರಿಂದ ಆಶ್ಚರ್ಯಗೊಂಡ ಲತಾ ಮಂಗೇಶ್ಕರ್ ಅದು ಹೇಗೆ ಎಂದು ಪ್ರಶ್ನಿಸಿದರಂತೆ.ಆಗ ವಾಜಪೇಯಿಯವರು ತಮ್ಮ ಹೆಸರಿನ ಮೊದಲ ಭಾಗವಾದ ATAL ಅಕ್ಷರಗಳನ್ನು ತಿರುಗಿಸಿ ಓದಲು ಅದು lATA ಆಗುತ್ತದೆ ಎಂದರಂತೆ.ಲತಾ ಮಂಗೇಶ್ಕರ್ ಈ ಮಾತಿಗೆ ನಗೆಗಡಲಲ್ಲಿ ಮುಳುಗಿದರಲ್ಲದೆ ವಾಜಪೇಯಿಯವರ ಈ ಸೂಕ್ಷ್ಮ ಬುದ್ಧಿಮತ್ತೆಯನ್ನು ಹಾಡಿಹೊಗಳಿದರಂತೆ.
ವಾಜಪೇಯಿಯವರು ರಾಜಕೀಯ ಮುತ್ಸದಿಯಾಗಿ,ಅತ್ಯುತ್ತಮ ವಾಗ್ಮಿಯಾಗಿ ಗುರುತಿಸಿಕೊಂಡದ್ದು ಮಾತ್ರವಲ್ಲದೆ ತಮ್ಮ ಅತ್ಯುತ್ತಮ ಸಾಹಿತ್ಯಿಕ ಕೊಡುಗೆಗಳು ಹಾಗೂ ಸದಭಿರುಚಿಯ ಹಾಸ್ಯ ಪ್ರಜ್ಞೆಯ ಮೂಲಕವೂ ಭಾರತದ ರಾಜಕಾರಣದಲ್ಲಿ ಗುರುತಿಸಿಕೊಂಡದ್ದು ಬಹಳ ವಿಶೇಷವೇ ಹೌದು.'ಅಜಾತ ಶತ್ರು' ಎಂದೇ ಹೆಸರಾದ ಅವರು ಇಂದಿನ ರಾಜಕಾರಣಿಗಳಿಗೆ ಆದರ್ಶಪ್ರಾಯರಾಗಿ ನಿಲ್ಲುತ್ತಾರೆ.
- ಎಸ್.ಎಲ್.ವರಲಕ್ಷ್ಮೀಮಂಜುನಾಥ್. ನಂಜನಗೂಡು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ