ಬಸ್ರೂರು ಹೆಗ್ಡೆಯವರು ಅಂದರೆ ಅದು ಅಪ್ಪಣ್ಣ ಹೆಗ್ಡೆ. ನಮ್ಮ ಬಸ್ರೂರು ಹೆಗ್ಡೆಯವರಿಗೂ ಉಡುಪಿ ಮಣಿಪಾಲ್ ಎಂಜಿಎಂ ಕಾಲೇಜಿಗೂ ಅವಿನಾಭಾವ ಸಂಬಂಧವಿದೆ ಅನ್ನುವ ವಿಷಯ ಎಷ್ಟು ಜನರಿಗೆ ತಿಳಿದಿದೆಯೊ ಗೊತ್ತಿಲ್ಲ. ಅದನ್ನು ಮತ್ತೆ ನಮ್ಮ ಹೆಗ್ಡೆ ಅವರ ನೆನಪಿನ ಬುತ್ತಿಯಿಂದ ತೆಗೆದು ಬಿಚ್ಚಿಡುವ ಪ್ರಯತ್ನ ಇಲ್ಲಿದೆ.
ನಮ್ಮ ಹೆಗ್ಡೆ ಅವರ ಅಮ್ಮನ ಮನೆ ಬಸ್ರೂರು. ಇದು ಎಲ್ಲರಿಗೂ ಗೊತ್ತಿದೆ. ಆದರೆ ಅಪ್ಪಯ್ಯನ ಮನೆ ಮಣಿಪಾಲ ಸಮೀಪದ ಪರ್ಕಳ ಹಿರೇಬೆಟ್ಟು ಕಬಿಯಾಡಿ. ತಂದೆ ರಾಮಣ್ಣ ಹೆಗ್ಡೆ. ಬಾಲ್ಯದ ಆಟ ಪಾಠಗಳನ್ನು ಅಮ್ಮನ ಮನೆಯಲ್ಲಿ ಪೂರೈಸಿದ ಅಪ್ಪಣ್ಣ ಹೆಗ್ಡೆ ಅವರು ತನ್ನ 8ನೇ ತರಗತಿಗೆ ಬಂದಿದ್ದು ತಂದೆಯ ಮನೆಯ ಕಡೆಗೆ. ಇಲ್ಲಿ ಕಳೆದ ಬಾಲ್ಯದ ಸವಿ ಸವಿ ನೆನಪುಗಳು ಅತ್ಯಂತ ರೇೂಚಕ ಪ್ರಸಂಗಳು. ಮಣಿಪಾಲ್ ಹೈಸ್ಕೂಲ್‌ಗೆ 8ನೇ ತರಗತಿಗೆ ಪ್ರವೇಶ. ದಿನ ನಿತ್ಯವೂ ನಡೆದು ಕೊಂಡು ಶಾಲೆಗೆ ಬರುವುದು. ಸುಮಾರು 80 ವರುಷಗಳ ಹಿಂದೆ ಪರ್ಕಳ ಮಣಿಪಾಲ್ ಉಡುಪಿ ಕಡೆಯ ದಾರಿಗಳು ಹೇಗಿರಬಹುದು ನೀವೇ ಊಹಿಸಿ. ಎಂಜಿಎಂ ಕಾಲೇಜಿನ್ನು ಧಾಟಿ ಮಣಿಪಾಲದ ದಾರಿಯಲ್ಲಿ ನಡೆದು ಬರುವುದೆಂದರೆ ಕಾಡಿನ ಮಧ್ಯದಲ್ಲಿ ನಡೆದು ಬರುವ ಅನುಭವ. ಪ್ರಾಣಿ ಪಕ್ಷಿಗಳ ಕಿರುಚಾಟ. ಮಧ್ಯದಲ್ಲಿ ಒಂದು ಸ್ಮಶಾನ ಭೂಮಿ. ಇಲ್ಲಿ ಅದೆಷ್ಟೋ ಕೂಗು ಅಪಸ್ವರಗಳನ್ನು ಕೇಳಿ ನಮ್ಮ ಹೆಗ್ಡೆಯವರು ಬಾಲ್ಯದಲ್ಲಿ ಹೆದರಿ ಬೆಚ್ಚಿ ಬಿದ್ದ ಪ್ರಸಂಗವನ್ನೂ ಇಂದಿಗೂ ನೆನಪಿಸಿಕೊಳ್ಳುತ್ತಾರೆ.
ಇಂಟರ್ ಮಿಡಿಯೇಟ್ ಕಲಿಕೆಗಾಗಿ ಎಂಜಿಎಂ.ಕಾಲೇಜಿಗೆ ಸೇರಿದ ಸಿಹಿ ಕಹಿ ಅನುಭವ ಇನ್ನೂ ಚೆನ್ನಾಗಿದೆ. 10ನೇ ತರಗತಿಯಲ್ಲಿ ಎರಡು ಪ್ರಶ್ನೆ ಪತ್ರಿಕೆಗಳು ಪರೀಕ್ಷೆಗೆ ಮೊದಲೇ ಸಿಕ್ಕಿದ ವಿಜ್ಞಾನ ಲೆಕ್ಕದಲ್ಲಿ ಎಣಿದಷ್ಟು ಅಂಕಳು ಬಂದವು. ಅದನ್ನೆ ನಂಬಿಕೊಂಡು ಎಂಜಿಎಂ ಕಾಲೇಜಿನಲ್ಲಿ ಪ್ರವೇಶ ಬಯಸಿ ಬಂದ ನಮ್ಮ ಹೆಗ್ಡೆಯವರು ತನಗೆ ಸೈನ್ಸ್ ಬೇಕೇ ಬೇಕು ಎಂದು ಹಠ ಹಿಡಿದರು. ಆದರೆ ಅಂದಿನ ಪ್ರಾಂಶುಪಾಲರಾದ ಪ್ರೊ. ಸುಂದರರಾಯರು ನಿನಗೆ ಸೈನ್ಸ್ ಬೇಡ ಎಂದು ಹೇಳಿದರೂ ಕೇಳದ ಅಪ್ಪಣ್ಣ ಹೆಗ್ಡೆಯವರು ಅಂತೂ ಕೊನೆಗೂ ಸೈನ್ಸ್ ಸೇರಿಯೇ ಬಿಟ್ಟರು. ಆದರೆ ಒಂದೇ ತಿಂಗಳಲ್ಲಿ ಈ ವಿದ್ಯಾರ್ಥಿಗೆ ಅರ್ಥವಾಯಿತು, ತನಗೆ ಸೈನ್ಸ್ ಹಿಡಿಸುವುದಿಲ್ಲ ಅನ್ನುವ ಸತ್ಯ ಸಂಗತಿ. ಮತ್ತೆ ಸುಂದರರಾಯರಲ್ಲಿ ಇದೇ ವಿದ್ಯಾರ್ಥಿ ನಿವೇದಿಸಿಕೊಳ್ಳುತ್ತಾನೆ. ಸರ್ ನನಗೆ ಸೈನ್ಸ್ ಬೇಡ. ಆಗ ಕಾಲ ಮಿಂಚಿಹೇೂಗಿತ್ತು. ಅಂತೂ ಇಂತೂ ಈ ಸುಖ ಕಷ್ಟಗಳ ಜಂಜಾಟದಲ್ಲಿ ಕಾಲೇಜಿಗೆ ಗುಡ್ ಬೈ ಹೇಳಿ. 1956ರಲ್ಲಿ ಮದ್ರಾಸ್ ಹೇೂಗಿ ಮಿನೆರ್ವಾ ಟ್ಯೂಟೇೂರಿಯಲ್ ಕಾಲೇಜಿನಲ್ಲಿ ಇಂಗ್ಲಿಷ್ ಮತ್ತು ಸೈನ್ಸ್ ನಲ್ಲಿ ಪರೀಕ್ಷೆ ತೆಗೆದುಕೊಂಡು ಬರೇ ಇಂಗ್ಲಿಷ್‌ನಲ್ಲಿ ಪಾಸಾಗಿ ಹೊರಗೆ ಬಂದರು.
ಇವರು 9ನೇ ಕ್ಲಾಸ್ ನಲ್ಲಿ ಕಲಿಯುವಾಗ ಡಾ. ಮಾಧವ ಪೈಗಳು ತರಗತಿಗೆ ಬಂದು ಹೇಳಿದ ಉಪದೇಶದ ಮಾತು ಇಂದಿಗೂ ಹೆಗ್ಡೆ ಅವರ ಸ್ಮೃತಿ ಪಟ್ಟಲದಲ್ಲಿ ಅಚ್ಚಳಿಯದೆ ಉಳಿದಿದೆ. ಮಾಧವ ಪೈಯವರು ಹೆಗ್ಡೆ ಅವರಿಗೆ ಕೇಳುತ್ತಾರೆ "ಕಳೆದ ವರುಷ ಓದಿದ ಪುಸ್ತಕಗಳನ್ನು ಏನು ಮಾಡಿದ್ದಿಯಾ? ಅದಕ್ಕೆ ವಿದ್ಯಾರ್ಥಿ ಹೆಗ್ಡೆ ಹೇಳುತ್ತಾರೆ. "ಅದನ್ನು ನನ್ನ ಸ್ನೇಹಿತ ಚಂದ್ರ ಮರಕಾಲನಿಗೆ ಕೊಟ್ಟಿದ್ದೇನೆ ಸರ್. ಪೈಗಳು ತಕ್ಷಣವೇ ಕೇಳಿದ್ದರು- ಹಣ ತೆಗೆದುಕೊಂಡು ಕೊಟ್ಟಿಯಾ? ಧರ್ಮಕ್ಕೆ ಕೊಟ್ಟಿಯಾ? ಇಲ್ಲ ಸರ್ ಧರ್ಮಕ್ಕೆ ಕೊಟ್ಟೆ. "ಇದೇ ನೀನು ಮಾಡಿದ ತಪ್ಪು. ಯಾವುದೇ ವಸ್ತುವನ್ನು ಪುಕ್ಕಟೆಯಾಗಿ ಕೊಟ್ಟರೆ ಅದನ್ನು ತೆಗೆದುಕೊಂಡವನಿಗೆ ಬಿಡಿಕಾಸು ಆ ವಸ್ತುವಿನ ಮೇಲೆ ಪ್ರೀತಿ ಬರುವುದಿಲ್ಲ. ಸ್ವಲ್ಪ ಹಣ ಕೊಟ್ಟು ತೆಗೆದುಕೊಂಡವನಿಗೆ ಅದರ ಮೇಲೆ ಪ್ರೀತಿ ಜವಾಬ್ದಾರಿ ಬರುತ್ತದೆ ಕಣೊ". ನಮ್ಮ ಮಾಧವ ಪೈಗಳ ಈ ಮಾತುಗಳನ್ನು ನಮ್ಮ ಹೆಗ್ಡೆ ಇಂದಿಗೂ ಗೌರವಿಸುತ್ತಾರೆ. ಇದು ಸತ್ಯ ಅನ್ನುವುದು ಅವರ ಅನುಭಕ್ಕೂ ಬಂದಿದೆ ಅನ್ನುತ್ತಾರೆ ನಮ್ಮ ಹೆಗ್ಡೆಯವರು.
1952ನೇ ಇಸವಿ ಮೊದಲ ಚುನಾವಣಾ ಕಾಲ. ಇದೇ ಹೊತ್ತಿನಲ್ಲಿ ಹೆಗ್ಡೆಯವರು 5ನೇ ಫಾಮ೯ನಲ್ಲಿ ಕಲಿಯುತ್ತಿದ್ದರು.ಉಡುಪಿ ವಿಧಾನ ಸಭೆಯ ಅಭ್ಯರ್ಥಿಯಾಗಿ ಟಿ.ಎ. ಪೈ ಚುನಾವಣೆಗೆ ನಿಂತಿದ್ದರು. ನಮ್ಮ ವಿದ್ಯಾರ್ಥಿ ಹೆಗ್ಡೆ ಶಾಲೆಗೆ ಒಂದು ತಿಂಗಳು ರಜೆ ಹಾಕಿ ಟಿ.ಎ. ಪೈಗಳ ಚುನಾವಣಾ ಪ್ರಚಾರದಲ್ಲಿ ಅಂದು ಅಳಿಲು ಸೇವೆ ನೀಡಿದ್ದನ್ನು ಇಂದಿಗೂ ಸ್ಮರಿಸಿಕೊಳ್ಳುತ್ತಾರೆ. ಅಂದಿನಿಂದ ಇಂದಿನ ತನಕವೂ ಮಣಿಪಾಲದ ಪೈ ಬಂಧುಗಳ ಕುಟುಂಬದ ಜೊತೆ ಅನ್ಯೇೂನ್ಯವಾದ ಅವಿನಾಭಾವ ಸಂಬಂಧ ಬೆಸೆದುಕೊಂಡಿದೆ.
ಇಂದು ತಮ್ಮ 90ರ ಹುಟ್ಟು ಹಬ್ಬ ಸಂಭ್ರಮದಲ್ಲಿರುವ ಅಪ್ಪಣ್ಣ ಹೆಗ್ಡೆ ನಮ್ಮ ಎಂಜಿಎಂ ಕಾಲೇಜಿನ ಪ್ರಾಕ್ತನ ವಿದ್ಯಾರ್ಥಿ ಅನ್ನುವುದು ನಮ್ಮೆಲ್ಲರಿಗೂ ಅಭಿಮಾನ ಮತ್ತು ಹೆಮ್ಮೆ. ಕಾಲೇಜಿನ ಅಮೃತ ವರುಷದ ಸಂಭ್ರಮದಲ್ಲಿ ಹೆಗ್ಡೆ ಅವರ 90 ಸಂವತ್ಸರಗಳ ಹುಟ್ಟು ಶುಭ ಸಮಾರಂಭಕ್ಕೆ ನಮ್ಮೆಲ್ಲ ಹಳೆ ವಿದ್ಯಾರ್ಥಿಗಳ ಪರವಾಗಿ ಅಭಿನಂದನೆಗಳು.
- ಪ್ರೊ. ಕೊಕ್ಕರ್ಣೆ ಸುರೇಂದ್ರನಾಥ ಶೆಟ್ಟಿ ಉಡುಪಿ
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ