ಆನಂದಮಯ ಈ ಜಗ ಹೃದಯ

Upayuktha
0




ನ್ನಡ ಸಾಹಿತ್ಯ ಲೋಕದ ದೈತ್ಯ ಪ್ರತಿಭೆ ಕುವೆಂಪುರವರ ಸಾಹಿತ್ಯದ ಮೇಲೆ ಅವರು ಹುಟ್ಟಿ ಬೆಳೆದ ಕುಪ್ಪಳ್ಳಿ, ಮಲೆನಾಡಿನ ಪ್ರಕೃತಿ ಸೌಂದರ್ಯ ಬೀರಿದ ಪ್ರಭಾವ ಅಪಾರವಾದುದು.ಅಂತೆಯೇ ತಮ್ಮ ಮನೆ(ಕವಿಮನೆ)ಕವಿಶೈಲ,ಮಲೆನಾಡನ್ನು ಕುರಿತು ಹೇರಳವಾಗಿ ಮನದುಂಬಿ ಕಾವ್ಯ ಸಾಲುಗಳನ್ನು ಹೊಸೆದಿರುವುದನ್ನು ಕಾಣಬಹುದು.ಪ್ರಕೃತಿ ಅವರ ಕಾವ್ಯ ರಸಧಾರೆಯ ಅವಿಭಾಜ್ಯ ಅಂಗವೇ ಹೌದು.ಹಾಗಾಗಿಯೇ ಅವರು ಕನ್ನಡದ ವರ್ಡ್ಸ್ ವರ್ತ್.


ಪ್ರಕೃತಿ ಸೌಂದರ್ಯ ಮತ್ತು ಪ್ರಕೃತಿಯ ಕುರಿತ ಕಾಳಜಿ ಅವರ ಕವಿತೆಗಳಲ್ಲಿ ಎದ್ದು ಕಾಣುವ ಅಂಶ.ಪ್ರಕೃತಿಯಲ್ಲೇ ದೇವರನ್ನು ಕಾಣುವ ಕುವೆಂಪುರವರಿಗೆ ಇಡೀ ವಿಶ್ವವೇ ಪ್ರಕೃತಿ ದೇವಿಯ ದೇಗುಲ.ಅವರ ಸಾಲುಗಳಲ್ಲೇ ಹೇಳುವುದಾದರೆ


ಪ್ರಕೃತಿ ದೇವಿಯ

ಸೊಬಗು ದೇಗುಲದಿ

ಆನಂದವೇ ಪೂಜೆ

ಮೌನವೇ ಮಹಾಸ್ತೋತ್ರ


ರಸ ಋಷಿಯ ದೃಷ್ಟಿಯಲ್ಲಿ ಪ್ರಕೃತಿ ದೇವರು ಮಾತ್ರವಲ್ಲ,ಗುರು ಕೂಡ.


ಹುಟ್ಟಿದ ಶಿಶುವಿಗೆ ಮೊದಲನೆಯ ವಾತಾವರಣವೇ ಪ್ರಕೃತಿ

ಆಕೆಯೇ ಪ್ರತಿಯೊಂದು

ಮಗುವಿಗೂ ಮುಗ್ಧವಾದ ಗುರು


ಎಲ್ಲೆಡೆ ದೇವರನ್ನು ಕಾಣುವ ಉದಾತ್ತ ಚಿಂತನೆಯನ್ನೊಳಗೊಂಡ ಕವಿಮನದಲ್ಲಿ ಮೂಡಿದ ಸಾಲುಗಳೇ ದಿವ್ಯ


ಯಾರಾಗಿರು ನೀ ಏನಾಗಿರು ನೀ

ಎಲ್ಲಿದ್ದೀಯೇ ಅಲ್ಲೇ ನಿಲ್ಲು!

ನಿನಗಿದ್ದರೆ ಮನಸಿದ್ದರೆ ಕಣ್ಣು

ಮೇಲೆ ಕೆಳಗೆ ಸುತ್ತಲೂ ನೋಡು

ನೀ ನೋಡುವ ಆ ಹುಲ್ಲು

ನೀ ನಿಂತಿಹ ಈ ಕಲ್ಲು

ಎಲ್ಲವೂ ಈ ಸ್ವರ್ಗದ ನೆಲೆವೀಡು

ದೇವರ ಸನ್ನಿಧಿ ಎಲ್ಲೆಲ್ಲು!


ಕುವೆಂಪುರವರ ಈ ಕೆಳಗಿನ ಕವಿತೆ ಸಾಲುಗಳೇ ಸಾಕು ಕುವೆಂಪು ಪ್ರಕೃತಿಯ ಅಮರ ಪ್ರೇಮಿ ಎನ್ನಲು!


ಹಕ್ಕಿ ಹೂವು ಮಕ್ಕಳು

ಇರದೆ ಇದ್ದರೆ

ಆಗುತ್ತಿತ್ತು ನಮ್ಮ 

ಪೃಥ್ವಿ ಬರಡು

ಮರುಧರೆ


ಪ್ರಕೃತಿಯೊಂದಿಗೆ ಒಡನಾಟವಿಲ್ಲದ ಓದಿಗೆ ಕವಿಯ ದೃಷ್ಟಿಯಲ್ಲಿ ಯಾವ ಬೆಲೆಯೂ ಇಲ್ಲ. ಹಾಗಾಗಿಯೇ ಕವಿ ಕುವೆಂಪು ಘಂಟಾಘೋಷವಾಗಿ ಸಾರುತ್ತಾರೆ:


ಗಾಳಿ ಬೆಳಕು ಅರಣ್ಯ

ಆಕಾಶ ಸೂರ್ಯ ಚಂದ್ರ ಹಕ್ಕಿ

ಚುಕ್ಕೆ ಮೊದಲಾದವುಗಳ 

ಸಂಗ ಸಹವಾಸವಿಲ್ಲದವನ

ಓದಿನ ಮೊಟ್ಟೆಯಿಂದ ಗೂಬೆ

ಮೂಡಬಹುದು;ಕೋಗಿಲೆ

ಎಂದಿಗೂ ಹಾಡಲಾರದು.


ಹಾರುವ ಬಣ್ಣ ಬಣ್ಣದ ಹಕ್ಕಿಗಳನ್ನು ಕಂಡು ಪರವಶವಾದ ಕುವೆಂಪು ಅವರ ಕವಿ ಹೃದಯದಿ ಮೂಡುವ ಸಾಲುಗಳೆಂದರೆ


ಹಕ್ಕಿಗಳ ಸಂಗದಲಿ ರೆಕ್ಕೆ ಮೂಡುವುದೆನಗೆ

ಹಾರುವುದು ಹೃತ್ಪಕ್ಷಿ ಲೋಕಗಳ ಕೊನೆಗೆ


ನಿಸರ್ಗ ಪರಮಾತ್ಮನ ಸ್ವರೂಪವೆಂದು ಕಾಣುವ ಕವಿಕಣ್ಣಿಗೆ ಸೂರ್ಯೋದಯ,ಚಂದ್ರೋದಯ ಮೊದಲಾದ ಪ್ರಕೃತಿಯ ಎಲ್ಲಾ ಚಟುವಟಿಕೆಗಳೂ ದೈವ‌ಕರುಣೆಯ ಅಭಿವ್ಯಕ್ತಿಯೇ ಆಗಿದೆ.ಕುವೆಂಪು ಅವರ ಈ ಭಾವನೆ ಅವರ ಆನಂದಮಯ ಈ ಜಗ ಹೃದಯ ಕವಿತೆಯಲ್ಲಿ ಘನೀಭವಿಸಿದೆ.ಕವಿತೆಯ ನಾಲ್ಕನೇಯ ಚರಣವಾದ


ಉದಯದೊಳೇನ್ ಹೃದಯವ ಕಾಣ್,

ಅದೇ ಅಮೃತದ ಹಣ್ಣೋ

ಶಿವ ಕಾಣದೆ ಕವಿ ಕುರುಡನೋ

ಶಿವ ಕಾವ್ಯದ ಕಣ್ಣೋ 


 ಎಂಬೀ ಸಾಲುಗಳು ಕುವೆಂಪು ಅವರ ದಾರ್ಶನಿಕತೆಯ ಹೊಸ ಒಳನೋಟವನ್ನು ನಮ್ಮ ಮುಂದೆ ತೆರೆದಿಡುತ್ತದೆ.


ಪ್ರಕೃತಿಯನ್ನು ಅಪಾರವಾಗಿ ಪ್ರೀತಿಸುತಿದ್ದ ಅವರು ತಮ್ಮ ಸಾಹಿತ್ಯ ಪಯಣದ ಅವಿಭಾಜ್ಯ ಅಂಗವೇ ಆದ ಪ್ರಕೃತಿಯ ಸಂರಕ್ಷಣೆಗೆ ಕರೆನೀಡುತ್ತಾರೆ.ಪ್ರಕೃತಿ ನಾಶದಿಂದೊದಗುವ ವಿಪತ್ತುಗಳನ್ನು ಮನಗಂಡಿದ್ದ  ಕುವೆಂಪು 'ಪ್ರಕೃತಿ ತನ್ನನ್ನು ವಂಚಿಸಲೆಳಸುವವರ ಮೇಲೆ ಮುಯ್ಯಿ ತೀರಿಸಿಕೊಳ್ಳದೆ ಬಿಡುವುದಿಲ್ಲ'ಎಂಬ ಎಚ್ಚರಿಕೆಯನ್ನೂ ನೀಡುತ್ತಾರೆ.


ತಾವು ಹುಟ್ಟಿ ಬೆಳೆದ ಮಲೆನಾಡು ಪ್ರದೇಶ ಅವರಿಗೆ ಸ್ವರ್ಗಕ್ಕಿಂತಲೂ ಹೆಚ್ಚಾಗಿತ್ತು.ಅವರ ಪಾಲಿಗೆ


ಮಲೆನಾಡೆಂದರೆ 

ಕರ್ನಾಟಕದ ಕಾಶ್ಮೀರ

ಪ್ರಕೃತಿಯ ವರ್ಣಶಾಲೆ

ಅರಣ್ಯ ರಮಣೀಯ ವಿಲಾಸ ಕ್ಷೇತ್ರ


ಮಲೆನಾಡಿನ ಸೌಂದರ್ಯದ ಕುರಿತು


ಸೌಂದರ್ಯವಿಹುದಿಲ್ಲಿ

ಸ್ವಾತಂತ್ರ್ಯವಿಹುದಿಲ್ಲಿ

ಏಕಾಂತವಿಹುದಿಲ್ಲಿ

ಸಂಗೀತವಿಹುದಿಲ್ಲಿ

ಮಲೆನಾಡಿನಲ್ಲಿ ಎಂದು ಬಣ್ಣಿಸುತ್ತಾರೆ.


ಕರ್ಮುಗಿಲೊಡಲಿನಲಿ

ಮನೆಮಾಡಿರುವೆನು ಸಿಡಿಲಿನಲಿ

ಮಿಂಚಿನ ಕಡಲಿನಲಿ

ಬನಗಳ ಬೀಡು

ಚೆಲ್ವಿನ ನಾಡು

ಮೋಹನ ಭೀಷಣ ಮಲೆನಾಡು


ಹೋಗುವೆನು ನಾ ಹೋಗುವೆನು ನಾ ಒಲುಮೆಯ ಗೂಡಿಗೆ

ಮಲೆಯ ನಾಡಿಗೆ ಮಳೆಯ ಬೀಡಿಗೆ ಸಿರಿಯ ಚೆಲುವಿನ ರೂಢಿಗೆ


ಮೇಲಿನ ಕಾವ್ಯ ಸಾಲುಗಳು ರಸ ಋಷಿ ಕುವೆಂಪು ಅವರ ಪ್ರಕೃತಿ ಹಾಗೂ ಮಲೆನಾಡಿನ ಸೌಂದರ್ಯ ಕುರಿತ ಸಾಹಿತ್ಯ ಸಿಂಧುವಿನಲ್ಲಿ ಆಯ್ದ ಕೆಲ ಬಿಂದುಗಳಷ್ಟೇ!.


ಕುವೆಂಪು ತಮ್ಮ ಅಪಾರ ಮಾನವ ಪ್ರೇಮ ಹಾಗೂ ನಿಸರ್ಗ ಪ್ರೇಮಗಳಿಂದ ವಿಶ್ವಮಾನವನಾಗಿ ಬೆಳೆದ ಅದಮ್ಯ ಅಸೀಮ ಸಾಹಿತ್ಯ ಚೇತನ.ಹಾಗಾಗಿಯೇ ಅವರು 'ಯುಗದ ಕವಿ ಜಗದ ಕವಿ'


✍️

ಎಸ್.ಎಲ್.ವರಲಕ್ಷ್ಮೀಮಂಜುನಾಥ್.

ನಂಜನಗೂಡು.​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

إرسال تعليق

0 تعليقات
إرسال تعليق (0)
Maruti Suzuki Festival of Colours
Maruti Suzuki Festival of Colours
To Top