ತುಳಸಿ ವಿವಾಹದ ಹಿನ್ನೆಲೆ

Upayuktha
0


ತುಳಸಿ ಅತ್ಯಂತ ಔಷಧಿ ಗುಣವುಳ್ಳ ಗಿಡ. ಎಲ್ಲರ ಮನೆಯ ಮುಂದೆ ತನ್ನದೇ ಆದ ಸ್ಥಾನಮಾನ ಹೊಂದಿದೆ. ಬೆಳಗಿ ಸ್ನಾನಾದಿಕರ್ಮ ಮುಗಿದ ಮೇಲೆ ಹೆಂಥಹೆಗಸರು ತುಳಸಿಗೆ ನೀರು ಹಾಕುವ ವಾಡಿಕೆ ಪುರಾತನ ಕಾಲದಿಂದಲೂ ನಡೆದುಕೊಂಡು ಬಂದಿದೆ. ಇದರಿಂದ ತುಳಸಿಯಲ್ಲಿ ಅಡಗಿದ ಪರಿಮಳ ಮನಸ್ಸಿಗೆ ಮುದ ಕೊಡುವುದಲ್ಲದೆ ಸ್ವಚ್ಛ ಗಾಳಿಯು ದೇಹದೊಳಗೆ ಹೋಗಿ ನವ ಚೈತನ್ಯ ದೇಹಕ್ಕೆ ದೊರಕುತ್ತದೆ. ತುಳಸಿಗಿಡವನ್ನ ಮನೆ ಸುತ್ತಮುತ್ತ ಬೆಳಸಿದರೆ ಕ್ರಿಮಿಕೀಟಗಳು ಮನೆಯ ಸಮೀಪವೂ ಬರುವುದಿಲ್ಲ. ಆಯುರ್ವೇದದಲ್ಲಿ ಅಷ್ಟೇ ಅಲ್ಲ ಪುರಾಣಗಳಲ್ಲೂ ತುಳಸಿಯ ವಿಶೇಷವಾದ ಉಲ್ಲೇಖವಿದೆ. ತುಳಸಿ ಇಲ್ಲದೆ ದೇವರ ಪೂಜೆ ಪೂರ್ತಿಯಾಗದು ಎಂಬ ನಂಬಿಕೆ.


ತುಳಸಿ ವಿವಾಹವೆಂದರೆ ಮನೆಯಲ್ಲಿ ಆಚರಿಸುವ ಕೊನೆಯ ಹಬ್ಬ. ಮಳೆಗಾಲ ಮುಗಿದು ಚಳಿಗಾಲ ಶುರುವಾಯಿತೆಂಬ ಸಂಕೇತ. ಹಾಗೆ ಹಿಂದುಗಳಿಗೆ ಮದುವೆಯ ಸಮಯ ಮುಹೂರ್ತಗಳು ಪ್ರಾರಂಭವಾಯಿತೆಂಬ ಸಂಕೇತ. ಪುರಾಣಗಳಲ್ಲಿ ತುಳಸಿಯ ಬಗ್ಗೆ ಎರಡು ಕಥೆಗಳನ್ನು ನಾವು ಕೇಳುತ್ತೇವೆ. ಜಲಂಧರನೆಂಬ ದುಷ್ಟ ರಾಕ್ಷಸ ಅವನು ಮೂರು ಲೋಕಗಳನ್ನು ತನ್ನ ವಶ ಮಾಡಿಕೊಳ್ಳಬೇಕು ಎಂದು ದೇವತೆಗಳ ಮೇಲೆ ಆಕ್ರಮಣ ಮಾಡುತಿದ್ದ. ಜಲಂಧರನ ಹೆಂಡತಿ ವೃಂದಾ ಅವಳು ವಿಷ್ಣುವಿನ ಮಹಾ ಭಕ್ತೆ ಹಾಗು ಪತಿವ್ರತೆ ಹಾಗಾಗಿ ಅವಳ ಪುಣ್ಯ ಕರ್ಮದಿಂದ ಜಲಂಧರ ಯುದ್ಧದಲ್ಲಿ ಗೆಲ್ಲುತ್ತಿರುತ್ತಾನೆ.


ಇದನ್ನರಿತ ಶಿವನು, ವಿಷ್ಣುವಿನ ಸಹಾಯ ಕೇಳಿದಾಗ ಶ್ರೀಹರಿಯು ಜಲಂಧರನ ವೇಷದಲ್ಲಿ ವೃಂದಾಳ ಹತ್ತಿರ ಬಂದಾಗ ವೃಂದ ಗಂಡನ ವಿಜಯದ ಸಂಕಲ್ಪ ಬಿಟ್ಟು ಜಲಂಧರನ ರೂಪದಲ್ಲಿದ್ದ ವಿಷ್ಣುವಿನ ಕಾಲುಮುಟ್ಟಲು ಬಂದಾಗ ಅವಳಿಗೆ ಸತ್ಯದ ಅರಿವಾಗಿ ತನ್ನ ಪವಿತ್ರತೆಗೆ ಧಕ್ಕೆ ತಂದಿದಕ್ಕೆ ವಿಷ್ಣುವಿಗೆ ಕಪ್ಪುಕಲ್ಲಾಗು ಎಂದು ಶಪಿಸುತ್ತಾಳೆ. ಭಕ್ತೆಯ ಶಾಪ  ಮಿಥ್ಯವಾಗಬಾರದೆಂದು ಶ್ರೀಹರಿಯು ಸಾಲಿಗ್ರಾಮದ  ರೂಪ ತಾಳುತ್ತಾನೆ. ಜಲಂಧರ ಯುದ್ಧದಲ್ಲಿ ಸೋತು ಹತನಾಗುತ್ತಾನೆ. ಗಂಡನ ಚಿತೆಯಲ್ಲಿ ಹರಿ ವೃಂದಾ ಗಂಡನ ಚಿತೆಗೆ ಹಾರಿ ದೇಹತ್ಯಾಗ ಮಾಡುತ್ತಲೇ ಚಿತೆಗೆ ಹಾರುವಾಗ ವೃಂದಾಳಿಗೆ ತನ್ನ ತಪ್ಪಿನ ಅರಿವಾಗುತ್ತದೆ. ಹಾಗೆ ತನ್ನನ್ನು ಉದ್ಧರಿಸುವಂತೆ ಪ್ರಾರ್ಥಿಸುತ್ತಾಳೆ. ಆಗ ಶ್ರೀಹರಿಯು ತುಳಸಿಯಾಗಲು ವರ ನೀಡುತ್ತಾನೆ. ಹಾಗೆ ಪ್ರತಿ ವರುಷ ಪ್ರಬೋಧಿನಿ ಏಕಾದಶಿಯಂದು ವಿವಾಹವಾಗುತ್ತೇನೆ ಎಂದು ಅಭಯ ನೀಡುತ್ತಾನೆ.


ಇನ್ನೊಂದು ಪುರಾಣದ ಪ್ರಕಾರ ದಾನವರು ಮತ್ತು ದೇವತೆಗಳು ಕ್ಷೀರಸಾಗರವನ್ನು ಕಡೆದಾಗ ಕೊನೆಗೆ ಬಂದ ಅಮೃತವ ನೋಡಿ ಶ್ರೀಹರಿಗೆ ಆನಂದಭಾಷ್ಪ ಆ ಅಮೃತದ ಕಲಶದಲ್ಲಿ ಬಿದ್ದು ಅದರಿಂದ ಸಣ್ಣ ಗಿಡವೊಂದು ಹುಟ್ಟಿತು, ಅಮೃತದಂಥಾ ಗಿಡಕ್ಕೆ ತುಲನೆ ಯಾವುದು ಇಲ್ಲವೆಂದು ತುಳಸಿಯೆಂದು ಹೆಸರಿಟ್ಟು ಶ್ರೀಲಕ್ಷ್ಮಿ ಸಹಿತ ತುಳಸಿಯನ್ನು ವಿಷ್ಣು ವಿವಾಹವಾದರು ಅದಕ್ಕೆ ತುಳಸಿ ವಿವಾಹ ಎಂದರ್ಥ.


ಯಾರು ತಮ್ಮ ಮನೆಯಲ್ಲಿ ತುಳಸಿ ವಿವಾಹ ಮಾಡುತ್ತಾರೋ ಅವರಿಗೆ ಕನ್ಯಾದಾನ ಮಾಡಿದ ಪುಣ್ಯ ಲಭಿಸುತ್ತದೆ ಎಂಬ ನಂಬಿಕೆ ಇದೆ. ಹಾಗೆ ಯಾರು ಪ್ರತಿದಿನ ಮನೆಯಲ್ಲಿ ತುಳಸಿ ಪೂಜೆ ಮಾಡುತ್ತಾರೋ ಅವರ ಮನೆಯಲ್ಲಿ ಸ್ವಯಂ ಮಹಾಲಕ್ಷ್ಮಿ ಶ್ರೀಹರಿಯ ಸಮೇತ ಇರುತ್ತಾಳೆ ಎಂಬ ನಂಬಿಕೆಯುಂಟು. ದೀಪಾವಳಿಯಲ್ಲಿ ಪ್ರಾರಂಭವಾದ ಪೂಜೆ ಹನ್ನೆರೆಡು ದಿನಗಳ ಕಾಲ ನಡೆಯುತ್ತದೆ. ತುಳಸಿಕಟ್ಟೆಗೆ ಬಿಳಿ ಸುಣ್ಣ ಹಚ್ಚಿ ತಳಿರು ತೋರಣಗಳಿಂದ ಸುಂದರಗೊಳಿಸಿ, ಮುಂದೆ ಸಗಣಿ ಸಾರಿಸಿ ರಂಗವಲ್ಲಿ ಹಾಕಿ ಕಟ್ಟೆಯ ಸುತ್ತ ದೀಪಗಳನ್ನಿಟ್ಟು ನೆಲ್ಲಿಯ ಗಿಡಗಳನ್ನು ನೆಟ್ಟು ಹೂಗಳಿಂದ ಅಲಂಕಾರ ಮಾಡಿ ಪೂಜೆಗೆ ಸಿದ್ಧಮಾಡಲಾಗುತ್ತದೆ. ದೇವರ ಧ್ಯಾನ, ಶಾಸ್ತ್ರ  ಬಲ್ಲವರಿಂದ ಪೂಜೆ ಮಾಡಿಸಿ, ತುಳಸಿ ಸಾಲಿಗ್ರಾಮ ಇಲ್ಲ ಕೃಷ್ಣ ವಿಗ್ರಹವನಿಟ್ಟು ಬೆಲ್ಲ ಅವಲಕ್ಕಿ ಇಂದ ನೈವೇದ್ಯೆ ಮಾಡುತ್ತಾರೆ.


- ಕಿರಣ ಜೋಶಿ, ಬೆಂಗಳೂರು


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 


Post a Comment

0 Comments
Post a Comment (0)
To Top