ಕನಕದಾಸರು- ಬದುಕಿನ ಬಯಲು

Upayuktha
0




ನ್ನಡಿಗರ ಆತ್ಮಶಕ್ತಿಯನ್ನು ಸದೃಢಗೊಳಿಸಿದ ಕನಕದಾಸರ ಜೀವನ ಮತ್ತು ಸಾಧನೆ ಬತ್ತಲಾರದ ಗಂಗೆ ಸವೆಯಲಾರದ ಮಹಾಪರ್ವತ. ಸಾವಿಲ್ಲದ ಸಾಹಿತ್ಯದ ಮೂಲಕ ಚಿರಂತನ ಮೌಲ್ಯಗಳನ್ನು ನೀಡಿರುವ ಕನಕದಾಸರು ಮಾನವಕುಲ ಸಾಮರಸ್ಯ ಮತ್ತು ಸಮೃದ್ಧಿಯ ಸೆಲೆಯಾಗಬೇಕೆಂಬ ಕನಸು ಕಂಡವರು. ಆ ಕನಸಿನ ನನಸ್ಸಿಗಾಗಿ ಹೋರಾಡಿದವರು. ದೇಸಿಯ ಸತ್ವ-ತತ್ವದ ನೆಲೆ-ಬೆಲೆಯನ್ನು ತೆರೆದು ತೋರಿಸಿದವರು.


ಜಾಗತೀಕರಣ, ಖಾಸಗೀಕರಣ, ಉದಾರೀಕರಣ, ನಗರೀಕರಣ, ಕೈಗಾರೀಕರಣಗಳು ಸುಖ, ಶಾಂತಿ ಸಂಬಂಧ-ಸಾಮರಸ್ಯ, ನ್ಯಾಯ, ನೀತಿ ಸದ್ಗುಣ-ಸದಾಚಾರ ಸವಲತ್ತು, ದೌಲತ್ತುಗಳು ಅನ್ನ-ಅಕ್ಷರ-ಅಭಿವೃದ್ಧಿಗಳು ಸಂವರ್ಧನೆಯಾಗುತ್ತವೆAಬ ಭ್ರಮೆಯೊಳಗೆ ನೂಕಿ, ಹೊರ ಬರಲಾಗದೆ ಒದ್ದಾಡುತ್ತಿರುವುದನ್ನು ಕಂಡು ಗಹಗಹಿಸಿ ನಗುತ್ತಿವೆ. ಈವೊತ್ತಿನ ಲೋಕಯಾರೋಂದಿಗೆ ಹೇಳಿಕೊಳ್ಳಲೂ ಆಗದೆ, ತಾಳಿಕೊಳ್ಳಲೂ ಆಗದೆ, ದುರಾಸೆಯ ಸುಳಿಯೊಳಗೆ ಸಿಲುಕಿ ದೇಕು ದೇಕುತ್ತಿದೆ. ಈ ದೇಕುವುದರಲ್ಲಿಯೇ ಮುಳ್ಳು ಮುಳ್ಳುಗಳಾಗಿ ಮೆತ್ತಿಕೊಂಡಿದ್ದು, ಅಂಟಿಕೊಂಡಿದ್ದವುಗಳನ್ನು ಕಳೆದುಕೊಂಡಾಗ ತನುವಿಗೆ ತಂಪಾಗಿ, ಮನಕ್ಕೆ ಇಂಪಾಗಿ ಜೀವ-ಜೀವನಕ್ಕೆ ಆಹ್ಲಾದತೆಯು ಆವಿರ್ಭಾವವಾಗುವುದು. ಅದಕ್ಕೆ ಲೋಕದೃಷ್ಟಿ ಬೇಕೇ ಬೇಕು.  


ಭಾರತದ ಸಾಂಸ್ಕೃತಿಕ ಇತಿಹಾಸದಲ್ಲಿ ಉಜ್ವಲ ತಾರೆಯಂತೆ ಬೆಳಗಿ, ಬೆಳಕು ತೋರಿಸುತ್ತಿರುವ ದಾರ್ಶನಿಕರಲ್ಲಿ ಕನಕದಾಸರು ಕೂಡ ಒಬ್ಬರು. ಇವರು ಭಾರತೀಯ ಭಕ್ತಿ ಪರಂಪರೆಯಲ್ಲಿ ಅಪೂರ್ವವಾದ ಸಾಧನೆ ಮಾಡಿದ ಸಾಧಕರು, ವಿಚಾರಶಕ್ತಿ, ಕ್ರಿಯಾಶಕ್ತಿ ಮತ್ತು ಭಾವಶಕ್ತಿಗಳ ತ್ರಿವೇಣಿ ಸಂಗಮವಾಗಿದ್ದ ಕನಕದಾಸರ ಬದುಕು ಮತ್ತು ಬರಹ ಈ ಭವಲೋಕದ ಬವಣೆಗಳ ನಿವಾರಣೆಗೆ ಸರಿದಾರಿ ತೋರಿಸುವ ಕೈದೀವಿಗೆಯಾಗಿವೆ. 


ವ್ಯಕ್ತಿಯಿಲ್ಲದೆ ಸಮಾಜವಿಲ್ಲ, ಸಮಾಜವಿಲ್ಲದೆ ವ್ಯಕ್ತಿ ಇರಲಾರ. ವ್ಯಷ್ಟಿ ಮತ್ತು ಸಮಷ್ಟಿ ಒಂದಕ್ಕೊAದು ಪೂರಕ ಮತ್ತು ಪ್ರೇರಕ. ಸಮಷ್ಟಿಯೊಳಗಿನ ವ್ಯಷ್ಟಿ ಸಂಸ್ಕೃತಿಯ ನಿರ್ಮಾಪಕನಾದಂತೆಯೇ ಅದೇ ಸಂಸ್ಕೃತಿಯು ವ್ಯಕ್ತಿಯ ವ್ಯಕ್ತಿತ್ವವನ್ನು ನಿರ್ಮಿಸುತ್ತದೆ. ಸಮಾಜ-ಸಂಸ್ಕೃತಿಯು ಪ್ರತಿಯೊಬ್ಬ ವ್ಯಕ್ತಿಯ ಶಕ್ತಿಯನ್ನು ಅವಲಂಬಿಸಿಯೇ ಅದು ಪ್ರಗತಿ ಇಲ್ಲವೇ ಅಧೋಗತಿಗೆ ಹೋಗುವುದು. ಒಬ್ಬ ವ್ಯಕ್ತಿಯ ಉನ್ನತಿ ಮತ್ತು ಅವನತಿ ಅವನಿಗೆ ಆಶ್ರಯಕೊಟ್ಟ ಸಮಾಜ ಮತ್ತು ಸಂಸ್ಕೃತಿಯನ್ನು ಅವಲಂಬಿಸಿರುತ್ತದೆ. ಉದಾತ್ತ ವ್ಯಕ್ತಿಗಳಿಂದ ಉದಾತ್ತ ಸಮಾಜ ನಿರ್ಮಾಣವಾಗುತ್ತದೆ. ವ್ಯಕ್ತಿಯು ಸದಾ ಸದ್ಗುಣಗಳ ಸಾದಾಚಾರದಲ್ಲಿದ್ದಾಗ ಅವನು ಮನುಕುಲದ ಇತಿಹಾಸದಲ್ಲಿ ಅಮರನಾಗುತ್ತಾನೆ. ತಲೆತಲಾಂತರ ಆತನ ಆದರ್ಶಗಳ ಅನುಸರಣೆಗೆ ಅರ್ಹನಾಗುತ್ತಾನೆ. ಹೀಗೆ ಆದರ್ಶ ಹಾಗೂ ಅನುಕರಣೀಯವಾದ ವ್ಯಕ್ತಿತ್ವವನ್ನು ಸಂಪಾದಿಸಿಕೊಂಡು, ಆಧ್ಯಾತ್ಮಿಕ, `ಸಾಂಸ್ಕೃತಿಕ, ಸಾಹಿತ್ಯಿಕ ಸಂಪತ್ತಾಗಿ ಆಪತ್ತಿನಲ್ಲಿದ್ದ ವೃಷ್ಟಿ ಮತ್ತು ಸಮಷ್ಟಿಯ ಪ್ರಗತಿಗೆ ಸನ್ಮಾರ್ಗದರ್ಶಕರಾಗಿರುವ ಭಕ್ತ ಕವಿ ಸಂತ ಕನಕದಾಸರ ಲೋಕದೃಷ್ಟಿ ಅನನ್ಯವಾದುದು. 


"ಏಕಾಂತವಾಗಿ ಮನೆಯಲ್ಲೋ ಮಠದಲ್ಲೋ, ಮನೆ ಮನೆ ತಿರುಗಿ ಭಿಕ್ಷೆ ಬೇಡುವಾಗ, ಬೀದಿಯಲ್ಲೋ ವೈಯಕ್ತಿಕವಾಗಿ ದೇವಾಲಯದಲ್ಲೋ ದೇವರ ಉತ್ಸವ ಹೊರಟಾಗ ಮಾಡುವ ಭಜನೆಯ ಸಮಯ ದಲ್ಲಿಯೋ ಇಷ್ಟ ದೇವತೆಯನ್ನು ಕುರಿತು ಭಾವಪೂರ್ಣವಾಗಿ ಹೃದಯ ತುಂಬಿ ಹಾಡುವ ಭಕ್ತಿ ಗೀತೆಗಳೇ ಕೀರ್ತನೆಗಳು" ಇವುಗಳ ಮೂಲಕ ಮಾನವ ಸಮಾಜದ ಅಂಕು-ಡೊಂಕುಗಳನ್ನು ತಿದ್ದಿ ತೀಡಿದ ಕೀರ್ತಿಕಾರರಲ್ಲಿ ಕನಕದಾಸರು ಒಬ್ಬರು. 


"ಎಲ್ಲರೂ ಮಾಡುವುದು ಹೊಟ್ಟೆಗಾಗಿ ! ಗೇಣು ಬಟ್ಟೆಗಾಗಿ" ಎಂಬ ಕೀರ್ತನೆಯಲ್ಲಿ ಕೂಲಿಗಳು, ಜ್ಯೋತಿಷಿಗಳು, ಕಾರ್ಮಿಕರು, ಸೈನಿಕರು, ರೈತರು, ಕಳ್ಳರು, ಸನ್ಯಾಸಿ, ಜಂಗಮ, ಜೋಗಿ ಜಟ್ಟಿ, ಬೈರಾಗಿ ಮೊದಲಾದವರೆಲ್ಲ ನಾನಾವೇಷ ತೊಟ್ಟ ನಾನಾ ಕಾರ್ಯ ಮಾಡುವುದು ಗೇಣು ಹೊಟ್ಟೆ-ಬಟ್ಟೆಗಾಗಿ ಎಂದು ಹೇಳುವ ಕನಕದಾಸರಲ್ಲಿ ಆಯಾಯ ಕರ್ಮಿಗಳಿಗೆ ಅನುಸಾರವಾಗಿ ಅನುಕಂಪ, ಕೋಪ ಅಸಹನೆ, ವಿರೋಧಗಳಿವೆ. ಇವರಿಗೆಲ್ಲ ಸೂಚಿಸುವ ಒಂದೇ ಒಂದು ಸರಳ ಮಾರ್ಗ ಯಾವುವೆಂದರೆ ಕಾಗಿನೆಲೆಯಾದಿಕೇಶವನನ್ನು ಅನು ದಿನವೂ ನೆನೆದು ಮುಕ್ತಿ ಪಡೆಯುವುದಾಗಿದೆ.


ಜಾನಪದದ ಲಯ ವಿನ್ಯಾಸದಲ್ಲಿ ಹೆಣೆದಿರುವ ಇವರ ಕೀರ್ತನೆ, ಕಾವ್ಯಗಳು ಹಾಡುಗಬ್ಬವಾಗಿ ಹೃನ್ಮನದ ಪರಿವರ್ತನೆಗೆ, ಹರಿಯ ನಾಮಸ್ಮರಣೆಗೆ, ಸತ್ಕಾರ್ಯಗಳ ನಿರ್ವಹಣೆಗೆ, ಸಾಧುಸಜ್ಜನರ ಸಂರಕ್ಷಣೆಗೆ, ಮಡಿವಂತರ ಮನಪರಿವರ್ತನೆಗೆ, ಕೀಳರಿಮೆಯ ನಾಶಕ್ಕೆ, ನಾಸ್ತಿಕತೆಯ ನಾಶಕ್ಕೆ, ಆಸ್ತಿಕತೆಯ ಸಂವರ್ಧನೆಗೆ, ಪರಿಶುದ್ಧ ಪ್ರೇಮದಾಂಕುರಕ್ಕೆ, ಸುಖಿದಾಂಪತ್ಯಕ್ಕೆ, ಮಾನವೀಯ ಸಂಬAಧಗಳ ವರ್ಧನೆಗೆ, ಮಾಲಿನ್ಯಮತಿಯ ನಿರ್ಮೂಲನೆಗೆ, ಮನುಕುಲದ ಸಾಮರಸ್ಯದ ಬೆಸುಗೆಗೆ ಸ್ಫೂರ್ತಿಯ ಸೆಲೆಯಾಗಿವೆ. ಇದುವೆ ಕನಕದಾಸರು ನೀಡಿದ ಲೋಕದೃಷ್ಟಿ, ಕನಕದಾಸರ ಕನಸಿನ ಲೋಕದೊಳಗೆ ಭಿನ್ನಭೇದವಿಲ್ಲ. ಹರಿಯೇ ಸರ್ವೋತ್ತಮನಲ್ಲಿ. ಆತನ ಸ್ಮರಣೆಯಲ್ಲಿ ಕಾಯ ಸವೆಸುವುದರಿಂದ ನಿಜಮುಕ್ತಿ ಲಭ್ಯ. ಅಂಥ ಕನಸಿನ ಲೋಕ ನನಸಾಗಬೇಕು.


"ನೀ ಮಾಯೆಯೊಳಗೊ ನಿನ್ನೊಳು ಮಾಯೆಯೋ ! ನೀ ದೇಹದೊಳಗೋ ನಿನ್ನೊಳು ದೇಹವೋ ಹರಿಯೆ" ಎಂಬ ಕೀರ್ತನೆಯಲ್ಲಿ ಅನುಮಾನದ ಪ್ರಶ್ನೆಗಳನ್ನೆತ್ತುವ ಮೂಲಕ ಬಯಲಯ-ಆಲಯ, ನಯನ-ಬುದ್ಧಿ, ಸವಿ-ಸಕ್ಕರೆ ಜಿಹ್ವೆ-ಮನಸ್ಸು, ಕುಸುಮ-ಗಂಧ ಇವುಗಳ ಪರಸ್ಪರ ಸಂಬಂಧ ಇವುಗಳಿಗೆಲ್ಲ ಕಾರಣಕರ್ತನಾದ ನಿನ್ನೊಳಗೊ ಎಂಬ ದೈನ್ಯದ ಭಾವವನ್ನು ಬಿತ್ತಿ ಬೆಳೆದಿರುವ ಭಕ್ತ ಕನಕದಾಸರು.


ಮುತ್ತು ಬಂದಿದೆ ಕೇರಿಗೆ, ಭಕ್ತಿಯುಳ್ಳವರೆಲ್ಲ ಕಟ್ಟಿಕೊಳ್ಳಿ ಸೆರಗಿನಲ್ಲಿ ಎಂದು ಕೂಗಿ ಕರೆಯುವುದರಲ್ಲಿಯೇ ಇವರ ಲೋಕದೃಷ್ಟಿ ಅಡಗಿದೆ. ಕೇರಿ ಕೇರಿಯ ಜನರಲ್ಲಿನ ಅಜ್ಞಾನ, ಅಂಧಾನುಕರಣೆಗಳನ್ನು ಅವೈಚಾರಿಕತೆಯನ್ನು ಹೋಗಲಾಡಿಸಿ, ಭಕ್ತಿಪಥದಲ್ಲಿ ಮುಕ್ತಿ ಮಾರ್ಗ ತೋರಿಸುವುದು ಕನಕದಾಸರ ಲೋಕದೃಷ್ಟಿಯಾಗಿದೆ.


`ಕನಕನನ್ನು ಕೆಣಕಬೇಡ, `ಕೆಣಕಿ ತಿಣುಕಬೇಡ’ `ಕನಕನ ತಾಳಾಗು, ಇಲ್ಲದಿದ್ದರೆ ಹಾಳಾಗು’, `ಕಂಡಕಂಡಂತೆ ಹೇಳಾಕ ಕನಕದಾಸನೇನು?- ಎಂಬಂಥ ಗಾದೆಗಳು ಕನಕದಾಸರು ಜನಮಾನಸದಲ್ಲಿ ನೆಲೆಯಾಗಿದ್ದನ್ನು ಸೂಚಿಸುತ್ತವೆ. ಕಲಿಯಾಗಿ, ಶೂದ್ರನಾಗಿ, ಕವಿಯಾಗಿ, ಸಂತನಾಗಿ, ಭಕ್ತನಾಗಿ, ಕೀರ್ತನಕಾರನಾಗಿ, ಹರಿದಾಸನಾಗಿ ಬೀದಿಬೀದಿ ಕೇರಿ ಕೇರಿ ಅಲೆದು, ಪಂಡಿತ ಪಾಮರರನ್ನು ಬಲ್ಲವರಾಗಿ, ಮಠಮಂದಿರಗಳಿಗೆ ಅಲೆದಾಡಿ, ಗುರು-ಶಿಷ್ಯರ ಸಮೂಹದೊಳಗೆ ಬೆರೆತವರಾಗಿರುವ ಕನಕದಾಸರ ಸಂವೇದನೆಗಳಿಗೆ ಹಿಡಿದ ರನ್ನಗನ್ನಡಿಯಾಗಿದೆ ಅವರ ಬರಹ. ಇದರೊಳಗಿನ ಅವರ ಲೋಕದೃಷ್ಟಿ ತೆರೆದ ಪುಸ್ತಕದಂತಿದೆ. 



-ಡಾ. ಗುರುರಾಜ ಪೋಶೆಟ್ಟಿಹಳ್ಳಿ 


  ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top