ಉಜಿರೆಯ ಎಸ್.ಡಿ.ಎಂ ಕಾಲೇಜಿನಲ್ಲಿ 'ಸಂವಿಧಾನ ದಿನಾಚರಣೆ'ಯಲ್ಲಿ ನ್ಯಾಯಮೂರ್ತಿ ರಾಜೇಶ್ ರೈ ಕಲ್ಲಂಗಳ
ಉಜಿರೆ: ಸಂವಿಧಾನವನ್ನು ತಿದ್ದುಪಡಿಗೊಳಪಡಿಸುವ ಹೊಸ ಕಾಲದ ಎಲ್ಲಾ ಪ್ರಯತ್ನಗಳೂ ಸಾಮಾಜಿಕ ಮತ್ತು ಆರ್ಥಿಕ ಮುನ್ನಡೆಯ ಸದಾಶಯಗಳಿಗೆ ಅನುಗುಣವಾಗಿಯೇ ಇರಬೇಕು ಎಂದು ಕರ್ನಾಟಕ ಉಚ್ಛ ನ್ಯಾಯಾಲಯದ ನ್ಯಾಯಮೂರ್ತಿ ರಾಜೇಶ್‌ರೈ ಕಲ್ಲಂಗಳ ಹೇಳಿದರು.
ಉಜಿರೆಯ ಎಸ್‌ಡಿಎಂ ಕಾಲೇಜಿನ ಇಂದ್ರಪ್ರಸ್ಥ ಸಭಾಂಗಣದಲ್ಲಿ ದಕ್ಷಿಣ ಕರ್ನಾಟಕ ಅಧಿವಕ್ತ ಪರಿಷದ್ ದಕ್ಷಿಣ ಕನ್ನಡ ಜಿಲ್ಲಾ ಘಟಕ ಹಾಗೂ ಬೆಳ್ತಂಗಡಿ ವಕೀಲರ ಸಂಘದ ಸಹಯೋಗದೊಂದಿಗೆ ಶನಿವಾರ ಆಯೋಜಿಸಲಾಗಿದ್ದ ʼಸಂವಿಧಾನ ದಿನಾಚರಣೆʼ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಸಂಸದೀಯ ಪ್ರಜಾಪ್ರಭುತ್ವಕ್ಕೆ ಅವಕಾಶ ನೀಡಿದ ಸಂವಿಧಾನವು ತಿದ್ದುಪಡಿಗೂ ಆದ್ಯತೆ ನೀಡಿದೆ ಶಾಸನಸಭೆಗಳು ಜನಪರವಾದ ನಿಲುವುಗಳಿಗೆ ಅನುಗುಣವಾಗಿ ತಿದ್ದುಪಡಿಗೆ ಒಳಪಡಿಸಬಹುದು. ಆರ್ಥಿಕಮತ್ತುಸಾಮಾಜಿಕಸಬಲೀಕರಣದ ಮೂಲ ಆಶಯಕ್ಕೆ ಧಕ್ಕೆ ಬರದ ಹಾಗೆ ಭವಿಷ್ಯವನ್ನು ಮುನ್ನಡೆಸುವ ಸಾಧ್ಯತೆಗಳೊಂದಿಗೆ ಸಂವಿಧಾನಾತ್ಮಕ ಮೂಲ ಆಶಯಗಳು ತಳುಕುಹಾಕಿಕೊಂಡಿವೆ. ಈ ಮೂಲ ಆಶಯಗಳಿಗೆ ತದ್ವಿರುದ್ಧವಾದ ಯಾವುದೇ ತಿದ್ದುಪಡಿಯ ಪ್ರಯತ್ನ ಸಂವಿಧಾನಬಾಹಿರ ಎಂದು ಹೇಳಿದರು.
ಕೇಶವಾನಂದ ಭಾರತಿ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ನೀಡಿದ್ದ ತೀರ್ಪು ಸಂವಿಧಾನದ ಜನಪರವಾದ, ಸಮಾಜಮುಖಿಯಾದ ಸಂವಿಧಾನ ಪಾರಮ್ಯವನ್ನು ಎತ್ತಿಹಿಡಿದಿತ್ತು. ಎಸ್.ಆರ್.ಬೊಮ್ಮಾಯಿ ಪ್ರಕರಣದಲ್ಲಿ ಸರ್ವೋಚ್ಛ ನ್ಯಾಯಾಲಯವು ನೀಡಿದ್ದ ತೀರ್ಪು ರಾಜ್ಯ ಸರ್ಕಾರಗಳನ್ನು ಸಕಾರಣವಿಲ್ಲದೇ ವಜಾಗೊಳಿಸುವ ಅತಿರೇಕದ ಹೆಜ್ಜೆಗಳಿಗೆ ಕಡಿವಾಣ ಹಾಕಿಎಚ್ಚರಿಸಿತ್ತು. ತದನಂತರದ ಮಹತ್ವದ ತೀರ್ಪುಗಳೂ ಸಂವಿಧಾನದ ಸದಾಶಯಗಳೊಂದಿಗಿನ ಮೂಲ ಸ್ವರೂಪದ ಮಹತ್ವವನ್ನು ಪ್ರತಿಪಾದಿಸುತ್ತಲೇ ಬಂದಿವೆ ಎಂದು ಅವರು ನುಡಿದರು.
ಮಾನವೀಯತೆ ಇಲ್ಲದೇ ಇದ್ದರೆ ದೇಶದ ಮೌಲಿಕ ಪ್ರಜೆಯಾಗಿ ರೂಪುಗೊಳ್ಳುವುದಕ್ಕೆ ಸಾಧ್ಯವಿಲ್ಲ. ಜೀವನ ಮೌಲ್ಯಗಳೊಂದಿಗಿನ ಸಣ್ಣ ಸಣ್ಣ ನಡೆಗಳೊಂದಿಗೆ ಗುರುತಿಸಿಕೊಂಡಾಗ ಒಳಿತಿನ ಮಾದರಿಗಳು ಸೃಷ್ಟಿಯಾಗುತ್ತವೆ. ಕೋಪ ಮತ್ತು ಆಸೆ ಇವೆರಡನ್ನೂ ನಿಯಂತ್ರಿಸಿಕೊಂಡು ಬದುಕಿದರೆ ಪರಿಪೂರ್ಣ ಯಶಸ್ಸಿನೊಂದಿಗೆ ಸಾಧನೆ ಸಾಧ್ಯವಾಗುತ್ತದೆ. ಇಂಥದ್ದೊಂದು ಸಾಧನೆಗೆ ಪೂರಕವಾದ ಅನೇಕ ಮೌಲಿಕ ಅಂಶಗಳನ್ನು ಸಂವಿಧಾನವು ಒಳಗೊಂಡಿದೆ ಎಂದು ತಿಳಿಸಿದರು.
ಮುಖ್ಯ ಅತಿಥಿಯಾಗಿ ಮಾತನಾಡಿದ ಎಸ್.ಡಿ.ಎಂ ಶಿಕ್ಷಣಸಂಸ್ಥೆಗಳ ಕಾರ್ಯದರ್ಶಿ ಡಾ.ಸತೀಶ್ಚಂದ್ರ ಎಸ್ ಅವರು ಸಂವಿಧಾನದ ಸಮಕಾಲೀನ ಮಹತ್ವವನ್ನು ಯವಸಮೂಹ ಅರಿತುಕೊಂಡು ಸಾಮಾಜಿಕ ಬದುಕಿನಲ್ಲಿ ಮುನ್ನಡೆ ಕಂಡುಕೊಳ್ಳಲು ಪ್ರಯತ್ನಿಸಬೇಕು ಎಂದರು. ಪ್ರಜಾಪ್ರಭುತ್ವವಿರುವ ದೇಶಕ್ಕೆ ಸಂವಿಧಾನವು ಪವಿತ್ರಗ್ರಂಥ, ಅದು ಪ್ರಜಾಪ್ರಭುತ್ವದ ಆತ್ಮವಿದ್ದಂತೆ. ಇದರ ಅರಿವಾಗಬೇಕಾದರೆ, ಸಂವಿಧಾನವಿಲ್ಲದ ದೇಶಗಳನ್ನು ಗಮನಿಸಿದರೆ ತಿಳಿಯುತ್ತದೆ. ಪ್ರಜೆಗಳ ಆಶೋತ್ತರಗಳನ್ನು ಈಡೇರಿಸುವ ಮೂಲಕ ಸಾಮಾಜಿಕ, ಆರ್ಥಿಕ, ರಾಜಕೀಯ ನ್ಯಾಯವನ್ನು ಸಂವಿಧಾನ ನೀಡಿದೆ ಎಂದು ಡಾ. ಸತೀಶ್ಚಂದ್ರ ಎಸ್. ಅಭಿಪ್ರಾಯಪಟ್ಟರು.
ಕಾರ್ಯಕ್ರಮದ ಅಧ್ಯಕ್ಷತೆವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ಡಾ. ಕುಮಾರ ಹೆಗ್ಡೆ ಮಾತನಾಡಿದರು. ಸ್ವಾತಂತ್ರ್ಯ ಪೂರ್ವಭಾರತ ಹಾಗೂ ಸ್ವಾತಂತ್ರ್ಯದ ನಂತರದ ಭಾರತವನ್ನು ಗಮನಿಸಿದರೆ ಸಂವಿಧಾನದ ಮಹತ್ವದ ಅರಿವಾಗುತ್ತದೆ. ಸಮಾನತೆ, ನ್ಯಾಯ, ಐಕ್ಯತೆಯ ಮೂಲಕ ಬದುಕನ್ನು ಎದುರಿಸುವ ಆತ್ಮವಿಶ್ವಾಸವನ್ನು ಸಂವಿಧಾನ ನೀಡಿದೆ ಎಂದರು.
ಇತ್ತೀಚೆಗೆ ಜಗತ್ತಿನಲ್ಲಿ ನಡೆಯುತ್ತಿರುವ ಕೆಲವು ವಿದ್ಯಮಾನಗಳನ್ನು ಗಮನಿಸಿದಾಗ ಭಾರತದ ಸಂವಿಧಾನ ಎಷ್ಟು ಬಲಿಷ್ಠವಾಗಿದೆ ಎಂಬುದು ತಿಳಿಯುತ್ತದೆ. ಜನಪ್ರಿಯ ವ್ಯಕ್ತಿಗಳು ತಪ್ಪು ಮಾಡಿದಾಗಲೂ ಅವರಿಗೆ ಶಿಕ್ಷೆಯಾಗುವಂತೆ ನೋಡಿಕೊಂಡದ್ದು ಸಂವಿಧಾನ. ಅಲ್ಲದೇ ರಾಜಕಾರಣಿಗಳನ್ನು ಪ್ರಶ್ನಿಸುವ ಸ್ವಾತಂತ್ರ್ಯವನ್ನು ಕೂಡ ಸಂವಿಧಾನ ನೀಡಿದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಬೆಳ್ತಂಗಡಿ ವಕೀಲರ ಸಂಘದ ಸದಸ್ಯರು ನಾಡಗೀತೆ ಹಾಡಿದರು. ನಂತರ ಕರ್ನಾಟಕ ಅಧಿವಕ್ತ ಪರಿಷದ್ ಅಧ್ಯಕ್ಷ ಗುರುಪ್ರಸಾದ್‌ಶೆಟ್ಟಿ ಪ್ರಸ್ತಾವಿಕ ಮಾತುಗಳನ್ನಾಡಿದರು. ನ್ಯಾಯಮೂರ್ತಿ ರಾಜೇಶ್‌ರೈ ಕಲ್ಲಂಗಳ ಅವರನ್ನು ಸನ್ಮಾನಿಸಲಾಯಿತು.ಅಧಿವಕ್ತ ಪರಿಷದ್ ದಕ್ಷಿಣ ಕನ್ನಡ ಜಿಲ್ಲಾ ಘಟಕದ ಅಧ್ಯಕ್ಷೆ ಪುಷ್ಪಲತ ಯು.ಕೆ, ಬೆಳ್ತಂಗಡಿ ವಕೀಲರ ಸಂಘದ ಕಾರ್ಯದರ್ಶಿ ನವೀನ್‌ಬಿ.ಕೆ. ಉಪಸ್ಥಿತರಿದ್ದರು. ವಕೀಲ ಧನಂಜಯ ರಾವ್‌ಕಾರ್ಯಕ್ರಮ ನಿರೂಪಿಸಿದರು. ಬೆಳ್ತಂಗಡಿ ವಕೀಲರದ ಸಂಘದ ಅಧ್ಯಕ್ಷ ವಸಂತ ಮರಕಡ ಸ್ವಾಗತಿಸಿದರು, ದಕ್ಷಿಣ ಕರ್ನಾಟಕ ಅಧಿವಕ್ತ ಪರಿಷದ್‌ದಕ್ಷಿಣ ಕನ್ನಡ ಜಿಲ್ಲಾ ಘಟಕದ ಕಾರ್ಯದರ್ಶಿ ಶಾಮ್‌ಪ್ರಸಾದ್ ಕೈಲಾರ್ ವಂದನಾರ್ಪಣೆ ಮಾಡಿದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ