ಸಾಮಾಜಿಕ ಕಳಕಳಿಯ ಕಾರ್ಯ ಚಟುವಟಿಕೆಗಳಿಗೆ ಒಳ್ಳೆಯ ವೇದಿಕೆ ರಾ.ಸೇ ಯೋಜನೆ: ಡಾ.ಸತೀಶ್ಚಂದ್ರ ಎಸ್.
ಉಜಿರೆ: ದೇಶ ಸೇವೆಯೇ ಈಶ ಸೇವೆ ಎಂಬ ಸದುದ್ದೇಶದಿಂದ ಪ್ರಾರಂಭವಾದದ್ದೇ ರಾಷ್ಟ್ರೀಯ ಸೇವಾಯೋಜನೆ. ರಾಷ್ಟ್ರೀಯ ಸೇವಾ ಯೋಜನೆಯ ಶಿಕ್ಷಣವು ಜೀವನ ಶಿಕ್ಷಣವಾಗಿದೆ. ಇದರಿಂದ ಆತ್ಮೋನ್ನತಿ ಸಾಧಿಸಲು ಸಾಧ್ಯ. ಹಾಗೆಯೇ ಸಾಮಾಜಿಕ ಕಳಕಳಿಯ ಕಾರ್ಯ ಚಟುವಟಿಕೆಗಳಿಗೆ ಒಳ್ಳೆಯ ವೇದಿಕೆಯಾಗಿದೆ. ಇದರಿಂದ ಒಳ್ಳೆಯ ವ್ಯಕ್ತಿತ್ವ ಶಿಕ್ಷಣ ಹಾಗೂ ಜೀವನಕ್ಕೆ ಮಾರ್ಗದರ್ಶನ ದೊರೆಯುತ್ತದೆ ಎಂದು ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಡಾ. ಸತೀಶ್ಚಂದ್ರ ಎಸ್ ಅವರು ಹೇಳಿದರು.
ಇವರು ಮಿತ್ತಬಾಗಿಲು ಗ್ರಾಮದ ಕಿಲ್ಲೂರಿನ ಸರಕಾರಿ ಉನ್ನತೀಕರಿಸಿದ ಪ್ರಾಥಮಿಕ ಶಾಲೆಯಲ್ಲಿ ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪದವಿಪೂರ್ವ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆಯ ವಾರ್ಷಿಕ ವಿಶೇಷ ಶಿಬಿರ ಉದ್ಘಾಟಿಸಿ ಮಾತನಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದಂತಹ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪದವಿಪೂರ್ವ ಕಾಲೇಜಿನ ಪ್ರಾಚಾರ್ಯರಾದ ಪ್ರಮೋದ್ ಕುಮಾರ್ ಬಿ ಕಾರ್ಯಕ್ರಮವನ್ನು ಉದ್ದೇಶಿಸಿ ಯುವ ಜನತೆಗೆ ಸರಿಯಾದ ಮಾರ್ಗದರ್ಶನ ನೀಡುವಲ್ಲಿ ವಿಫಲರಾಗುತ್ತಿದ್ದೇವೆ. ಎಲ್ಲದಕ್ಕೂ ಯುವಶಕ್ತಿಯ ಸದ್ಬಳಕೆ ಆಗಬೇಕಾಗಿದೆ. ಇದಕ್ಕಾಗಿ ಯುವಕರು ಸಮಾಜದಲ್ಲಿ ಹಾಗೂ ರಾಷ್ಟ್ರಸೇವೆಯಲ್ಲಿ ತಮ್ಮನ್ನು ತಾವು ಸಂಪೂರ್ಣವಾಗಿ ತೊಡಗಿಸಿಕೊಳ್ಳತಕ್ಕದ್ದು ಎಂದು ಕರೆ ನೀಡಿದರು.
ಮಿತ್ತಬಾಗಿಲು ಗ್ರಾಮ ಪಂಚಾಯತ್ ಅಧ್ಯಕ್ಷರಾದ ವಿನಯಚಂದ್ರ ಸೇನೆರಬೆಟ್ಟು ಇವರು ಮುಖ್ಯ ಅತಿಥಿಗಳಾಗಿ ಶುಭ ಹಾರೈಸಿದರು.
ಮೈ ಭಾರತ್ ಪೋರ್ಟಲ್ ಮತ್ತು ಹೆಣ್ಣು ಭ್ರೂಣ ಹತ್ಯೆಯ ನಿಷೇಧದ ಬಗ್ಗೆ ಮಾಹಿತಿ ಇರುವ ಕರಪತ್ರವನ್ನು ಕೊಲ್ಲಿ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ವ್ಯವಸ್ಥಾಪನ ಸಮಿತಿಯ ಮಾಜಿ ಅಧ್ಯಕ್ಷ ವಾಸುದೇವ ರಾವ್ ಕಕ್ಕೆನೇಜಿ ಅವರು ಬಿಡುಗಡೆಗೊಳಿಸಿದರು.
ಶ್ರೀ ಧ.ಮಂ ಪದವಿಪೂರ್ವ ಕಾಲೇಜಿನ ಉಪಪ್ರಾಚಾರ್ಯರಾದ ಡಾ. ರಾಜೇಶ್ ಬಿ ಅವರು ಗೌರವಿಸಿದರು. ಶಿಬಿರ ಸಮಿತಿಯ ಅಧ್ಯಕ್ಷರಾದ ಮೋಹನ್ ಕಿಲ್ಲೂರು, ಶಾಲಾಭಿವೃದ್ದಿ ಸಮಿತಿಯ ಉಪಾಧ್ಯಕ್ಷರಾದ ರಜಿಯಾ ಹಾಗೂ ಶಾಲೆಯ ಮುಖ್ಯೋಪಾಧ್ಯಾಯ ರಮೇಶ್ ಪೈಲಾರ್, ರಾ.ಸೇ. ಯೋಜನೆಯ ಘಟಕದ ನಾಯಕ ಆದಿತ್ಯ ವಿ ಹಾಗೂ ಪ್ರಾಪ್ತಿ ಗೌಡ ಉಪಸ್ಥಿತರಿದ್ದರು.
ಯೋಜನಾಧಿಕಾರಿ ಡಾ.ಪ್ರಸನ್ನಕುಮಾರ ಐತಾಳ್ ಸ್ವಾಗತಿಸಿ, ಸಹ ಯೋಜನಾಧಿಕಾರಿ ಪದ್ಮಶ್ರೀ ರಕ್ಷಿತ್ ವಂದಿಸಿದರು. ಸ್ವಯಂ ಸೇವಕಿ ಸಾಕ್ಷಿ ನಿರೂಪಿಸಿದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


