ತುಳಸಿ ವಿವಾಹ- ತುಳಸಿ ಪೂಜೆ: ಪ್ರಾರಂಭವಾಗಿದ್ದು ಹೇಗೆ?

Upayuktha
0


ಎಲ್ಲರಿಗೂ ತುಳಸಿ ಹಬ್ಬದ ಹಾರ್ದಿಕ ಶುಭಾಶಯಗಳು 


"ನಮಸ್ತುಳಸಿ ಕಲ್ಯಾಣಿ ನಮೋ ವಿಷ್ಣುಪ್ರಿಯೆ ಶುಭೇ |

ನಮೋ ಮೋಕ್ಷಪ್ರದೇ ದೇವಿ ನಮಃ ಸಂಪತ್ ಪ್ರದಾಯಿನಿ" ||


ಸಕಲ ಕಾರ್ಯದ ಕಲ್ಯಾಣಕ್ಕೆ ಕಾರಣಳಾದ ವಿಷ್ಣುಪ್ರಿಯಳಾದ ಶುಭಸೂಚಕಳಾದ ಮೋಕ್ಷವೀವಳಾದ ಸರ್ವಸಂಪತ್ಪ್ರದಾಯಿನಿಯಾದ ಜಗನ್ಮಾತೆ ತುಳಸಿದೇವಿಗೆ ನಮಸ್ಕಾರಗಳು. ತುಳಸಿ ದೇವಿಯ ಮೂಲದಲ್ಲಿ ಗಂಗಾನದಿ ಸಕಲ ತೀರ್ಥಗಳು ವಾಸವಾಗಿರುವವು‌ ತುಳಸಿಯ ಮಧ್ಯದಲ್ಲಿ ಇಂದ್ರಾದಿ ಸಕಲದೇವತೆಗಳು, ಅಗ್ರ ಭಾಗದಲ್ಲಿ ಸಕಲ ವೇದಗಳು ಇರುವುದರಿಂದ ತುಳಸಿಗೆ ದಿನವೂ ಪೂಜೆ ಮಾಡಿ ನಮಸ್ಕಾರ ಮಾಡಬೇಕು.


ಸರ್ವದೇವತೆಗಳ ಪ್ರತ್ಯಕ್ಷ ರೂಪವನ್ನು ಹೊಂದಿರುವ ತುಳಸೀದೇವಿಯು ಅತ್ಯಂತ ಪವಿತ್ರಳು, ಶುಭಪ್ರದಳೂ, ಪೂಜ್ಯಳಾಗಿ ಕಾಮಧೇನು, ಕಲ್ಪವೃಕ್ಷದಂತೆ ಕಲಿಯುಗದಲ್ಲಿ ಅಪಾರ ಮಹಿಮೆಯುಳ್ಳವಳು ಆಗಿದ್ದಾಳೆ. ಇಂತಹ ಅಮೃತ ಸಮಾನವಾದ ತುಳಸೀಗಿಡದ ಪೂಜೆಯನ್ನು ಮಾಡುವುದು ಎಲ್ಲಾ ಸ್ತ್ರಿಯರ ಕರ್ತವ್ಯವಾಗಿದೆ. ಪುರುಷರು ಸಹ ಮಾಡಬಹುದು.


ತುಳಸಿ ಎಂದರೆ "ತುಲನ ನಸ್ತಿ" ಅಂದರೆ ಗುಣದಲ್ಲಿ ತುಲನೆ ಮಾಡಲು ಸಾಧ್ಯವಾಗದಿರುವ ಗಿಡವೇ ಈ ತುಳಸಿ. ತುಳಸೀ ಹೆಸರು ಕೇಳಿದಾಕ್ಷಣವೇ ನಮ್ಮ ಮನದಲ್ಲಿ ಪೂಜ್ಯ ಭಾವನೆ ಮೂಡುವುದು. ಹೀಗಾಗಿ ಹಿಂದೂ ಸಂಸ್ಕೃತಿಯಲ್ಲಿ ತುಳಸಿಯನ್ನು ಬಹಳ ಭಕ್ತಿಯಿಂದ ಪೂಜಿಸುತ್ತಾರೆ. ಶುಭ ಅಶುಭ ಕಾರ್ಯಗಳಲ್ಲೂ ಸಹ ತುಳಸೀ ಗೆ ವಿಶೇಷ ಸ್ಥಾನವಿದೆ. ದೀಪಾವಳಿ ಹಬ್ಬ ಮುಗಿದ ನಂತರ ಹಿಂದೂಗಳು ಆಚರಿಸುವ ಹಬ್ಬವೇ ತುಳಸಿ ಪೂಜೆ ಅಥವಾ ಕಿರು ದೀಪಾವಳಿ. ಚಾಂದ್ರಮಾನ ಕಾರ್ತಿಕ ಮಾಸದ ಶುಕ್ಲ ಪಕ್ಷದ 12ನೇ ದಿನ ಅಂದರೆ ದ್ವಾದಶಿಯಂದು ಈ ಹಬ್ಬವನ್ನು ಉತ್ಥಾನ ದ್ವಾದಶಿ ಎಂದು ಆಚರಿಸಲಾಗುತ್ತದೆ.


ತುಳಸಿ ವಿವಾಹದ ಬಗ್ಗೆ ಒಂದು ಪೌರಾಣಿಕ ಕಥೆ ಇದೆ. ಹಿಂದೂ ಪುರಾಣಗಳ ಪ್ರಕಾರ ವೃಂದಾ ಎಂಬ ಹೆಸರಿನ ಸ್ತ್ರೀ ತುಳಸಿಯಾಗಿ ಗಿಡದ ರೂಪ ಪಡೆದಿರುವುದು. ಈಕೆ ಜಲಂಧರನೆಂಬ ದುಷ್ಟರಾಜನನ್ನು ಮದುವೆಯಾಗಿರುತ್ತಾಳೆ. ಅವಳಿಗೆ ಮಹಾವಿಷ್ಣುವಿನ ಮೇಲೆ ವಿಶೇಷ ಭಕ್ತಿ ಇದು ಜಲಂಧ ನನಗೆ ಇಷ್ಟವಿರುವುದಿಲ್ಲ. ಆತ ದೇವತೆಗಳಿಗೆ ತುಂಬಾ ತೊಂದರೆ ಕೊಡುತ್ತಿರುತ್ತಾನೆ. ಆತನ ಕಣ್ಣು ಪಾರ್ವತಿಯ ಮೇಲೆ ಬೀಳುತ್ತದೆ. ಆಗ ಶಿವನ ವಿಷ್ಣುವಿನ ಮೊರೆ ಹೋಗುತ್ತಾನೆ. ಆಗ ವಿಷ್ಣು ಜಲಂಧರನ ರೂಪ ತಾಳಿ ಬೃಂದಾಳ ಬಳಿಗೆ ಬಂದು ಮೋಹಿಸಿ ಆಕೆಯ ಪಾವಿತ್ರ್ಯತೆಗೆ ಧಕ್ಕೆ ತರುತ್ತಾನೆ. ಈ ಸಂದರ್ಭದಲ್ಲಿ ಇವನು ಜಲಂಧರ ರಾಜನನ್ನು ಸಂಹರಿಸುತ್ತಾನೆ. ಇತ್ತತನ ಚಾರಿತ್ಯಕ್ಕೆ ಧಕ್ಕೆ ತಂದ ವಿಷ್ಣುವಿಗೆ ಬೃಂದ ಕಪ್ಪು ಕಲ್ಲಾಗಿ ಹೋಗು ಎಂದು ಶಾಪ ನೀಡುತ್ತಾಳೆ ಗ್ರಾಮವಾಗಿ ಮಾರ್ಪಾಡಾಗುತ್ತಾನೆ ಅಷ್ಟೇ ಅಲ್ಲದೆ ನಿನಗೆ ಪತ್ನಿಯ ವಿರಹ ಉಂಟಾಗಲಿ ಎಂದು ಶಾಪ ಕೊಡುತ್ತಾಳೆ. ಇದರಿಂದ ರಾಮಾಯಣದಲ್ಲಿ ವಿಷ್ಣುವಿನ ಅವತಾರವಾದ ಶ್ರೀರಾಮನಿಗೆ ಸೀತೆಯ ಕಾಡಿನಲ್ಲಿ ಕೆಲವು ವರ್ಷಗಳ ಕಾಲ ದೂರವಿದ್ದುದರಿಂದ ಶ್ರೀರಾಮನಿಗೆ ಪತ್ನಿಯ ವಿರಹ ಉಂಟಾಗುತ್ತದೆ. ತನ್ನ ಚಾರಿತ್ರ್ಯಕ್ಕೆ ಧಕ್ಕೆ ಉಂಟಾದ್ದರಿಂದ ಬೃಂದ ಪತಿಯ ಚಿತೆಗೆ ಹಾರಿ ಸಾವನ್ನಪ್ಪುತ್ತಾಳೆ. ನಂತರ ವಿಷ್ಣು ಆಕೆಯ ಆತ್ಮವನ್ನು ತುಳಸಿ ಗಿಡವಾಗಿ ಪರಿವರ್ತಿಸಿ ಮುಂದಿನ ಜನ್ಮದಲ್ಲಿ ಸಾಲಿಗ್ರಾಮವಾಗಿ ಪ್ರಮೋದಿನಿ ದ್ವಾದಶಿ ದಿನದಂದು ತುಳಸಿಯನ್ನು ಮದುವೆಯಾಗುತ್ತಾನೆ. ಇದರ ಸಂಕೇತವೇ ವಿಷ್ಣು ತುಳಸಿ ವಿವಾಹ. ತುಳಸಿ ಗಿಡಕ್ಕೆ ವಿವಾಹವೆಂದರೆ ಮಳೆಗಾಲ ಮುಗಿದು ಚಳಿಗಾಲದಲ್ಲಿ ಹಿಂದೂ ಮದುವೆಗಳು ಆರಂಭವಾಗುವ ಸಮಯ. ಈ ದಿನ ತುಳಸಿಯನ್ನು ವಧುವಿನಂತೆ ಅಲಂಕರಿಸಲಾಗುತ್ತದೆ. ಮಂಗಳಕರ ಹಾಡುಗಳು ತುಳಸಿ ವಿವಾಹದ ಮೂಲಕ ವಿಷ್ಣು ವರ್ಧನ ಮೆಚ್ಚಿಸಲು ಈ ದಿನ ಅತ್ಯುತ್ತಮವಾದದ್ದು ಪರಿಗಣಿಸಲಾಗುತ್ತದೆ ತುಳಸಿ ವಿವಾಹವು ಕನ್ಯಾ ದಾನಕ್ಕೆ ಸಮಾನವಾದ ಫಲವನ್ನು ನೀಡುತ್ತದೆ.


ವೃಂದಳ ಶಾಪದಿಂದ ವಿಷ್ಣು ಕಪ್ಪು ಕಲ್ಲಾಗಿ ಮಾರ್ಪಟ್ಟ. ಅದೇ ಕಲ್ಲನ್ನು ಸಾಲಿಗ್ರಾಮ ಎಂದು ಕರೆಯಲಾಯಿತು. ಇದು ವಿಶ್ವದಲ್ಲಿ ಪ್ರಳಯದ ಸ್ಥಿತಿಗೆ ಕಾರಣವಾಯಿತು ಆಗ ದೇವಾನುದೇವತೆಗಳು ಮತ್ತು ತಾಯಿ ಲಕ್ಷ್ಮಿ ದೇವಿ ವೃಂದಾಳನ್ನು ಕೋರಿದರು. ಆಗ ವೃಂದ ವಿಷ್ಣುವನ್ನು ಶಾಪದಿಂದ ಮುಕ್ತಿಗೊಳಿಸಿ ತನ್ನ ಪ್ರಾಣವನ್ನು ತ್ಯಜಿಸುತ್ತಾಳೆ.ಆಗ ಶ್ರೀ ಹರಿಯು ನಾನು ನಿನ್ನನ್ನು ಯಾವಾಗಲೂ ನನ್ನ ತಲೆಯ ಮೇಲೆ ಧರಿಸುತ್ತೇನೆ ಮತ್ತು ಲಕ್ಷ್ಮಿ ದೇವಿಯಂತೆ ನೀನು ಯಾವಾಗಲೂ ನನ್ನ ಪ್ರೀತಿ ಪಾತ್ರಳಾಗಿರುತ್ತೀಯ ಮತ್ತು ನೀನಿಲ್ಲದೆ ನಾನು ಏನನ್ನು ಸ್ವೀಕರಿಸುವುದಿಲ್ಲ ಎಂದು ಹೇಳುತ್ತಾನೆ. 

ಕಾರ್ತಿಕ ಮಾಸದ ಶುಕ್ಲ ಪಕ್ಷದ ಏಕಾದಶಿಯನ್ನು ದೇವ ಉತ್ಥಾನ ಏಕಾದಶಿ ಅಥವಾ ಪ್ರಮೋದಿನಿ ಏಕಾದಶಿಯೆಂದು ಕರೆಯುತ್ತಾರೆ. ಶ್ರೀ ವಿಷ್ಣುವು  ಇಂದು ಯೋಗ ನಿದ್ರೆಯಿಂದ ಏಳುತ್ತಾನೆ. ಆಶಾಡ ಮಾಸದ ಏಕಾದಶಿಯಂದು ಆದಿಶೇಷನ ಮೇಲೆ ಯೋಗ ನಿದ್ದೆಗೆ ಜಾರಿರುತ್ತಾನೆ. ಭಗವಂತನು ಆಷಾಢ, ಶ್ರಾವಣ, ಭಾದ್ರಪದ ಮತ್ತು ಆಶ್ವಿಜ ಈ ನಾಲ್ಕು ಚಾತುರ್ಮಾಸಗಳಲ್ಲಿ ಮಲಗಿದ್ದು ಕಾರ್ತಿಕ ಮಾಸದ ಉತ್ಥಾನ ದ್ವಾದಶಿಯಂದು ಏಳುತ್ತಾನೆ. ವಿಷ್ಣು ನಾಲ್ಕು ತಿಂಗಳ ಯೋಗ ನಿದ್ರೆಯಿಂದ ಎಚ್ಚರಗೊಂಡು ತುಳಸಿಯೊಂದಿಗೆ ಮದುವೆ ಮಾಡಿಕೊಳ್ಳುತ್ತಾನೆ. ಇದನ್ನೇ ಉತ್ತಾನ ದ್ವಾದಶಿ ಎಂದು ಕರೆಯಲಾಗುತ್ತದೆ. ಕಾರ್ತಿಕ ತಿಂಗಳ ಶುಕ್ಲ ಪಕ್ಷದ ದ್ವಾದಶಿಯಂದು ತುಳಸಿ ಮತ್ತು ಸಾಲಿಗ್ರಾಮದಲ್ಲಿ ಭಕ್ತನು ಏನೇ ಬಯಸಿದರೂ ಅವರ ಎಲ್ಲಾ ಆಶಯಗಳು ಈಡೇರುತ್ತದೆ ಎಂದು ಧರ್ಮ ಗ್ರಂಥಗಳಲ್ಲಿ ತಿಳಿಸಲಾಗಿದೆ. ವಿಷ್ಣು ಮತ್ತು ಮಹಾಲಕ್ಷ್ಮಿ ಅವರ ಸಾಂಕೇತಿಕ ವಿವಾಹದಂತೆ ಸಾಲಿಗ್ರಾಮ ಮತ್ತು ತುಳಸಿಯ ವಿವಾಹವನ್ನು ಆಚರಿಸಲಾಗುತ್ತದೆ.


ಇನ್ನೊಂದು ಕಥೆಯ ಪ್ರಕಾರ ಹಿಂದೆ ಅಮೃತಮಥನ ಕಾಲದಲ್ಲಿ ಅಮೃತದ ಕಲಶವನ್ನು ವಿಷ್ಣು ಹಿಡಿದುಕೊಂಡಾಗ ಅವನ ಕಣ್ಣಿನಿಂದ ಉದುರಿದ ಆನಂದಭಾಷ್ಪದ  ಒಂದೆರಡು ಹನಿಗಳು ಆ ಕಳಸದಲ್ಲಿ ಬಿದ್ದಾಗ ಅಲ್ಲಿ ತುಳಸಿ ಹುಟ್ಟಿತು ಎಂದು ಹೇಳುತ್ತಾರೆ. ಅಲ್ಲಿ ಉದ್ಭವಿಸಿದ ತುಳಸಿಯು ವಿಷ್ಣುವಿನಿಂದ ಮೋಹಿತಳಾಗಿ ತನ್ನನ್ನು ಮದುವೆಯಾಗುವಂತೆ ಕೇಳುತ್ತಾಳೆ. ಆಗ ಲಕ್ಷ್ಮೀದೇವಿಯು ಕೋಪಗೊಂಡು ಅವಳಿಗೆ ಗಿಡವಾಗುವಂತೆ ಶಾಪ ಕೊಡುತ್ತಾಳೆ. ಆದರೆ ಭಕ್ತ ಬಾಂಧವನಾದ ಶ್ರೀಹರಿಯು ತುಳಸಿಗೆ ಸಮಾಧಾನ ಮಾಡುತ್ತಾ ತಾನು ಸಾಲಿಗ್ರಾಮದ ರೂಪದಲ್ಲಿ ಇರುವಾಗ ನಿನ್ನನ್ನು ಸಹ ಜೊತೆಯಲ್ಲಿಟ್ಟುಕೊಳ್ಳುತ್ತೇನೆ ಎಂದು ಹೇಳಿ ಒಪ್ಪಿಸುತ್ತಾನೆ . ಆದುದರಿಂದ ವಿಷ್ಣುರೂಪದ ಸಾಲಿಗ್ರಾಮದ ಮೇಲೆ ಯಾವಾಗಲೂ ತುಳಸಿದಳವನ್ನಿಟ್ಟು ಪೂಜಿಸುತ್ತಾರೆ. ಹಾಗಾಗಿ ತುಳಸಿಯನ್ನು "ಹರಿವಲ್ಲಭೆ" ಎಂದು ಕರೆಯುತ್ತಾರೆ.

     

ತುಳಸಿ ಒಂದು ಸಸ್ಯ. ಇದರಲ್ಲಿ ಅನೇಕ ಔಷಧೀಯ ಗುಣ ಸಹ ಇದೆ. ತುಳಸಿಯನ್ನು ಮನೆಯಲ್ಲಿ ಬೆಳೆಸಿದಾಗ ಮನೆಯ ಸುತ್ತಮುತ್ತ ಸೋಂಕು ,ಕ್ರಿಮಿ ಕೀಟಗಳು, ರೋಗರುಜಿನಗಳು ಬರುವ ಸಾಧ್ಯತೆ ಕಡಿಮೆ. ಮಳೆಗಾಲ ಚಳಿಗಾಲದಲ್ಲಿ ತುಳಸಿ ಎಲೆಯನ್ನು ಕಾಳುಮೆಣಸಿನ ಸೇರಿಸಿ ಕಷಾಯ ಮಾಡಿ ಕುಡಿದರೆ ಶೀತ, ತಲೆನೋವು, ಜ್ವರ, ಕಫ ಒಂದೆರಡು ದಿನಗಳಲ್ಲಿ ಮಾಯವಾಗಿ ಬಿಡುತ್ತದೆ. ಚಿಕ್ಕ ಮಕ್ಕಳು ಹೊಟ್ಟೆ ನೋವು ಎಂದು ಅಳುತ್ತಿದ್ದರೆ  ತುಳಸಿ ಎಲೆಯನ್ನು ಚೆನ್ನಾಗಿ ಅರೆದು ರಸ ಹಿಂಡಿ ಒಂದು ಕಲ್ಲುಪ್ಪು ಬೆರೆಸಿ ಒಂದೆರಡು ಚಮಚ ಕುಡಿಸಿದರೆ ಕೆಲವೇ ಕ್ಷಣದಲ್ಲಿ ನೋವು ಕಡಿಮೆಯಾಗುತ್ತದೆ . ತುಳಸಿ ಎಲೆಯು ಅಲರ್ಜಿ ಶಮನಕಾರಿಯೂ ಹೌದು.


ತುಳಸಿ ಕಟ್ಟೆಯಲ್ಲಿ ಬಾಡಿ ಹೋದ ತುಳಸಿ ಗಿಡವನ್ನು ತೆಗೆದು ಹೊಸ ಸಸಿಯನ್ನು ನೆಡಬೇಕು. ಬಾಡಿಹೋದ ಸಸಿಯನ್ನು ಮಂಗಳವಾರ, ಶುಕ್ರವಾರ, ಅಮಾವಾಸ್ಯೆ ,ಹುಣ್ಣಿಮೆ , ಅಷ್ಟಮಿ ಮತ್ತು ಸಂಕ್ರಾಂತಿಗಳಂದು ತೆಗೆಯಬಾರದು. ದ್ವಾದಶಿಯಂದು ಸರ್ವತ ತೆಗಿಯಬಾರದು. ಸಾಮಾನ್ಯವಾಗಿ ಯಾವುದೇ ಗಿಡವನ್ನು ಪುರುಷರೇ ತೆಗೆಯಬೇಕು. ವಂಶವನ್ನು ಬೆಳೆಸುವ ಮಹತ್ತರ ಸೌಭಾಗ್ಯದ ಕಾರ್ಯವನ್ನು ಹೊಂದಿರುವ ಸ್ತ್ರೀಯರು ಇದನ್ನು ಮಾಡತಕ್ಕದ್ದಲ್ಲ .ಅತ್ಯಂತ ಅನಿವಾರ್ಯ ಸಂದರ್ಭದಲ್ಲಿ ಮಾತ್ರ ಹೊಸದಾದ ಗಿಡವನ್ನು ಮುತ್ತೈದೆಯಾದ ಸ್ತ್ರೀಯರು ನೆಡುವುದು ಯಶಸ್ಸನ್ನು ನೀಡುವ ಪುಣ್ಯ ಕಾರ್ಯ.

ತುಳಸಿ ಕಷ್ಟದಿಂದ ತುಳಸಿ ಮನೆಗಳನ್ನು ಮಾಡಿಸಿ ಸರದ ರೂಪದಲ್ಲಿ ಹಾಕಿಕೊಳ್ಳುವುದರಿಂದ ಆರೋಗ್ಯವೂ ವೃದ್ಧಿಸುತ್ತದೆ. ತುಳಸಿ ಇಲ್ಲದಿದ್ದರೆ ತುಳಸಿ ಕಾಷ್ಠದಿಂದಲೂ ದೇವರಿಗೆ ಪೂಜೆಯನ್ನು ಮಾಡಬಹುದು.

   

1. ತುಳಸಿ ಪೂಜೆಯನ್ನು ನಿತ್ಯವೂ ಮಾಡುವುದರಿಂದ ಸಕಲ ಸೌಭಾಗ್ಯಗಳು ದೊರೆಯುತ್ತವೆ. 

2. ವಿಶೇಷವಾಗಿ ಪ್ರತಿ ವರ್ಷದ ಕಾರ್ತಿಕ ಮಾಸದ ಶುದ್ಧ ದ್ವಾದಶಿಯಂದು ತುಳಸಿ ಪೂಜೆ ಮಾಡುವುದರಿಂದ ಎಷ್ಟೋ ಪಾಪಗಳು ನಾಶವಾಗುತ್ತವೆ.

3. ತುಳಸಿ ಗಿಡವನ್ನು ನೆಲಕ್ಕಿಂತ ಸ್ವಲ್ಪ ಎತ್ತರದಲ್ಲಿ ಪ್ರದೇಶದಲ್ಲಿ ಬೆಳೆಸಬೇಕು.

4. ಕಾರ್ತಿಕ ಮಾಸದಲ್ಲಿ ಪೂರ್ತಿಯಾಗಿ ತುಳಸಿ ಗಿಡದ ಸುತ್ತಲೂ "ನೆಲ್ಲಿಕಾಯಿ" ದೀಪವನ್ನು ಬೆಳಗಿ ಪೂಜಿಸಿದರೆ ಉತ್ತಮ ಫಲ ದೊರೆಯುವುದು. ಹಣದ ಸಮಸ್ಯೆ ನಿವಾರಣೆಯಾಗಿ ಸಂಸಾರದಲ್ಲಿ ನೆಮ್ಮದಿ ಕಾಣುವುದು.

5. ತುಳಸಿಗೆ ಸಿಹಿ ನೈವೇದ್ಯವನ್ನು ಮಾಡಬೇಕು.

6. ಪೂಜೆಗಾಗಿ ಇಟ್ಟಿರುವ ತುಳಸಿ ಗಿಡದಿಂದ ತುಳಸಿಯನ್ನು ಕೀಳಬಾರದು. 

7. ತುಳಸಿ ಗಿಡದ ಮೃತ್ತಿಕೆಯು ಕುಂಕುಮದಂತೆ ಶ್ರೇಷ್ಠ. ಆದುದರಿಂದ ಇದನ್ನು ಧರಿಸುವುದರಿಂದ ಯಾವ ದುಷ್ಟ ಭಯವೂ ಇರುವುದಿಲ್ಲ ಮತ್ತು ಮಾಟ ಮಂತ್ರ ತಟ್ಟುವುದಿಲ್ಲ.

8. ಯಾವುದೇ ಪೂಜೆಯನ್ನು ಮಾಡುವ ಮೊದಲು ತುಳಸಿ ಪೂಜೆ ಮಾಡಿ ನಂತರ ಉಳಿದ ಪೂಜೆಗಳನ್ನು ಮಾಡಿದರೆ ಅತ್ಯಂತ ಶುಭ ಫಲಗಳು ಶೀಘ್ರವಾಗಿ ದೊರಕುತ್ತದೆ. ತುಳಸಿ ಪೂಜೆ ಮಾಡದೆ ಯಾವ ಪೂಜೆಯನ್ನು ಮಾಡಿದರು ಶ್ರೀಹರಿಯನ್ನು ಗಣನೆಗೆ ತೆಗೆದುಕೊಳ್ಳುವುದಿಲ್ಲ ಎಂದು ದಾಸ ಶ್ರೇಷ್ಠರಾದ ಪುರಂದರದಾಸರು ಈ ರೀತಿ ಹಾಡನ್ನು ರಚನೆ ಮಾಡಿದ್ದಾರೆ.


ಒಲ್ಲನೋ ಹರಿ ಕೊಳ್ಳನೋ

ಎಲ್ಲಾ ಸಾಧನವಿದ್ದು ತುಳಸಿಯಿಲ್ಲದ ಪೂಜೆ 

ಒಲ್ಲನೋ ಹರಿ ಕೊಳ್ಳನೋ


ಸಿಂಧು ಶತಕೋಟಿ ಗಂಗೋದಕವಿದ್ದು 

ಗಂಧ ಸುಪರಿಮಳ ವಸ್ತುವಿದ್ದು 

ಚಂದುಳ್ಳ ಆಭರಣ ಧೂಪ ದೀಪಗಳಿದ್ದು 

ಬೃಂದಾವನ ಶ್ರೀ ತುಳಸಿ ಇಲ್ಲದ ಪೂಜೆ ‌‌   ||೧||


ದಧೀ ಕ್ಷೀರ ಮೊದಲಾದ ಅಭಿಷೇಕಗಳಿದ್ದು 

ಮಧುಪರ್ಕ ಪಂಚೋಪಚಾರವಿದ್ದು

ಮುದದಿಂದ ಮುದ್ದು ಶ್ರೀ ಕೃಷ್ಣನ ಪೂಜೆಗೆ 

ಸದಮಲಳಾದ ಶ್ರೀ ತುಳಸಿ ಇಲ್ಲದ ಪೂಜೆ ||೨||


ಮಂತ್ರ ಮಹಾಮಂತ್ರ ಪುರುಷ ಸೂಕ್ತಗಳಿದ್ದು 

ತಂತು ತಪ್ಪದೆ ತಂತ್ರಸಾರವಿದ್ದು 

ಸಂತತ ಸುಖ ಸಂಪೂರ್ಣನ ಪೂಜೆಗೆ 

ಅತ್ಯಂತ ಪ್ರಿಯವಾದ ತುಳಸಿ ಇಲ್ಲದ ಪೂಜೆ ||೩||


ಕಮಲ ಮಲ್ಲಿಗೆ ಜಾಜಿ ಸಂಪಿಗೆ ಕೈದಿಗೆ 

ವಿಮಲ ಘಂಟೆ ಪಂಚ ವಾದ್ಯವಿದ್ದು 

ಅಮಲ ಪಂಚಭಕ್ಷ್ಯ ಪರಮಾನ್ನಗಳಿದ್ದು

ಕಮಲನಾಭನು ತನ್ನ ತುಳಸಿ ಇಲ್ಲದ ಪೂಜೆ ||೪||


ಪೂಜೆಯ ಮಾಡದೆ ತುಳಸಿ ಮಂಜರಿಯಿಂದ

ಮೂರು ಜಗದೊಡೆಯ ಮುರಾರಿಯನು

ರಾಜಾಧಿರಾಜನೆಂಬ ಮಂತ್ರ ಪುಷ್ಪಗಳಿಂದ 

ಪೂಜಿಸಿದರು ಒಲ್ಲ ಪುರಂದರ ವಿಠಲ  ||೫||




- ಮೇಘ ಮುರಳಿ ಕಶ್ಯಪ್


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top