ನವೆಂಬರ್ 26 ರ ದಿನವು ಪ್ರತಿಯೊಬ್ಬ ಭಾರತೀಯನಿಗೆ ವಿಶೇಷ ದಿನವಾಗಿದೆ. ಏಕೆಂದರೆ 26 ನವೆಂಬರ್ 1949 ರಂದು, ಭಾರತದ ಸಂವಿಧಾನ ಸಭೆಯು ತನ್ನ ಸಂವಿಧಾನವನ್ನು ಅಂಗೀಕರಿಸಿ, ಇದನ್ನು 26 ಜನವರಿ 1950 ರಂದು ಜಾರಿಗೆ ತರಲಾಯಿತ್ತು.
ಭಾರತೀಯ ಸಂವಿಧಾನದ ಪಿತಾಮಹ ಎಂದು ಕರೆಯಲ್ಪಡುವ ಬಿ.ಆರ್. ಅಂಬೇಡ್ಕರ್ (14 ಏಪ್ರಿಲ್ 1891) ಅವರ 125 ನೇ ಜನ್ಮದಿನದ ವರ್ಷವಾಗಿದ್ದ ಸಂದರ್ಭದಲ್ಲಿ, ಆ ವರ್ಷವನ್ನು ಅದ್ಧೂರಿಯಾಗಿ ಆಚರಿಸಲು ಕೇಂದ್ರ ಸರ್ಕಾರ ನಿರ್ಧರಿಸಿ 2015 ರಲ್ಲಿ ನವೆಂಬರ್ 26 ಅನ್ನು ಸಂವಿಧಾನ ದಿನ ಎಂದು ಘೋಷಿಸಿತು. ನವೆಂಬರ್ 19, 2015 ರಂದು ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯವು ನವೆಂಬರ್ 26 ಅನ್ನು 'ಸಂವಿಧಾನ ದಿನ' ಎಂದು ಆಚರಿಸಲು ಭಾರತ ಸರ್ಕಾರದ ನಿರ್ಧಾರಿಸಿ, ಅಂದಿನಿಂದ ಭಾರತದ ಪ್ರತಿಯೊಬ್ಬ ನಾಗರಿಕರಿಗೆ ಅದರಲ್ಲೂ ಶಾಲಾ, ಕಾಲೇಜು ವಿದ್ಯಾರ್ಥಿಗಳಿಗೆ ಸಂವಿಧಾನದ ಬಗ್ಗೆ ಅರಿವು ಮೂಡಿಸಲು ಮತ್ತು ಸಾಂವಿಧಾನಿಕ ಮೌಲ್ಯಗಳನ್ನು ನೆನಪಿಸಲು ಪ್ರತಿ ವರ್ಷ ನವೆಂಬರ್ 26 ರಂದು ಸಂವಿಧಾನ ದಿನವನ್ನು ಆಚರಿಸುತ್ತಾ ಬರಲಾಗುತ್ತಿದೆ.
ಈ ಮೊದಲು ರಾಷ್ಟ್ರೀಯ ಕಾನೂನು ದಿನ ಎಂದು ಆಚರಿಸಲಾಗುತ್ತಿತ್ತು ಕರೆಯಲಾಗುತ್ತದೆ. ನಾವು ಸ್ವಾತಂತ್ರ್ಯ ದಿನ ಮತ್ತು ಗಣರಾಜ್ಯೋತ್ಸವವನ್ನು ಏಕೆ ಆಚರಿಸುತ್ತೇವೆ ಎಂಬುದು ಬಹುತೇಕ ಎಲ್ಲರಿಗೂ ತಿಳಿದಿದ್ದರೂ, ನಮ್ಮಲ್ಲಿ ಅನೇಕರು ಸಂವಿಧಾನದ ದಿನದ ಮಹತ್ವವನ್ನು ತಿಳಿದಿಲ್ಲ. ಈ ದಿನವು ಭಾರತದಲ್ಲಿ ಸಂವಿಧಾನದ ಅಂಗೀಕಾರವನ್ನು ಸ್ಮರಿಸುತ್ತದೆ. ನಾಗರಿಕರಲ್ಲಿ ಸಂವಿಧಾನದ ಮೌಲ್ಯಗಳನ್ನು ಉತ್ತೇಜಿಸಲು ಈ ದಿನವನ್ನು ಆಚರಿಸಲಾಗುತ್ತದೆ.
ದೇಶಕ್ಕೆ ಸ್ವಾತಂತ್ರ್ಯ ಸಿಗುವ ಮೊದಲೇ ಸ್ವಾತಂತ್ರ್ಯ ಹೋರಾಟಗಾರರು ಸ್ವತಂತ್ರ ಭಾರತದ ಸಂವಿಧಾನ ಹೇಗಿರಬೇಕು ಎಂಬುದರ ಕುರಿತು ಚರ್ಚಿಸಲು ಆರಂಭಿಸಿದ್ದರು.
1945ರ ಜುಲೈ ತಿಂಗಳಿನಲ್ಲಿ ಆಗ ಭಾರತವನ್ನು ಆಳುತ್ತಿದ್ದ ಇಂಗ್ಲೆಂಡ್ನಲ್ಲಿ ಹೊಸ ಸರ್ಕಾರ ಅಧಿಕಾರಕ್ಕೆ ಬಂದಿತ್ತು. ಆ ಸರ್ಕಾರವು ಭಾರತದ ಸ್ವಾತಂತ್ರ್ಯ ಚಳುವಳಿಯ ತೀವ್ರತೆ ಅರಿಯುವುದರೊಂದಿಗೆ ಭಾರತದ ಕುರಿತು ತನ್ನ ಧೋರಣೆ ಬದಲಿಸಿಕೊಂಡಿತ್ತು. ಭಾರತಕ್ಕೆ ಪ್ರತ್ಯೇಕ ಸಂವಿಧಾನದ ಬೇಡಿಕೆ ಈಡೇರಿಸಲು ಬ್ರಿಟೀಷ್ ಸಂಸತ್ತಿನ 3 ಮಂತ್ರಿಗಳ ಸಂಪುಟ ಉಪ ಸಮಿತಿಯನ್ನು ರಚಿಸಿ ಭಾರತಕ್ಕೆ ಕಳುಹಿಸಿತ್ತು. ನಂತರ ಸಂವಿಧಾನ ರಚನಾ ಕರಡು ಸಮಿತಿ ರಚಿಸಲಾಯಿತು.
- 1946ರ ಡಿಸೆಂಬರ್ 9ರಂದು ಸಂವಿಧಾನ ಕರಡು ರಚನಾ ಸಮಿತಿ ಕಾರ್ಯಾರಂಭ ಮಾಡಿತ್ತು. ಮುಂದೆ 1947ರಲ್ಲಿ ದೇಶಕ್ಕೆ ಸಂಪೂರ್ಣ ಸ್ವಾತಂತ್ರ್ಯ ಲಭಿಸಿದಾಗ ಸಂವಿಧಾನ ರಚನಾ ಸಮಿತಿಯು ಸಂಪೂರ್ಣ ಸ್ವಾಯತ್ತತೆ ಪಡೆದುಕೊಳ್ಳುವುದರೊಂದಿಗೆ ತನ್ನ ಕೆಲಸ ಮುಂದುವರೆಸಿತ್ತು.
- 1946ರಲ್ಲಿ ಬ್ರಿಟಿಷ್ ಭಾರತದ ಪ್ರಾಂತ್ಯಗಳ 296 ಸ್ಥಾನಗಳಿಗೆ ಚುನಾವಣೆ ನಡೆದು ಭಾರತದ ಜನತೆ ಪ್ರಾಂತೀಯ ಸಭೆಗಳ ಸದಸ್ಯರನ್ನು ಆಯ್ಕೆ ಮಾಡಿದ್ದರು. ಆ ಸಭೆಗಳು ಸಂವಿಧಾನ ರಚನಾ ಸಭೆಯ ಸದಸ್ಯರನ್ನು ಆರಿಸಿದರು.
- ಕರಡು ಸಮಿತಿ ಸದಸ್ಯರು ಸಂವಿಧಾನ ರಚನಾಸಭೆಯಲ್ಲಿ ಭಾರತದ ವಿವಿಧ ಪ್ರದೇಶಗಳಿಗೆ ಹಾಗೂ ಸಮುದಾಯಗಳಿಗೆ ಸೇರಿದ ಸದಸ್ಯರು ಮತ್ತು ಆಗ ಭಾರತದ ಭಾಗವಾಗಿದ್ದ ಪಾಕಿಸ್ತಾನ, ಬಾಂಗ್ಲಾದೇಶದಿಂದಲೂ ಪ್ರತಿನಿಧಿಗಳು ಭಾಗಿಯಾಗಿದ್ದರು.ವಿಭಜನೆ ಆದ ಬಳಿಕ ಅವೆರಡು ದೇಶಗಳು ಪ್ರತ್ಯೇಕ ಸಂವಿಧಾನ ರಚನೆ ಮಾಡಿದವು.
ಬೇರೆ ಬೇರೆ ರಾಜಕೀಯ ವಿಚಾರಧಾರೆಗಳನ್ನು ಪ್ರತಿನಿಧಿಸುವ ಸದಸ್ಯರೂ ಅಲ್ಲಿ ಇದ್ದರು. ಜವಾಹರ್ಲಾಲ್ ನೆಹರೂ, ರಾಜೇಂದ್ರ ಪ್ರಸಾದ್, ಸರ್ದಾರ್ ಪಟೇಲ್, ಮೌಲಾನಾ ಅಬುಲ್ ಕಲಂ ಆಝಾದ್ ಮತ್ತು ಶ್ಯಾಮ್ ಪ್ರಸಾದ್ ಮುಖರ್ಜಿ ಅವರಲ್ಲಿ ಪ್ರಮುಖರು. ಪರಿಶಿಷ್ಟ ವರ್ಗಗಳಿಗೆ ಸೇರಿದ ಮೂವತ್ತಕ್ಕೂ ಹೆಚ್ಚು ಸದಸ್ಯರಿದ್ದರು. ಆಂಗ್ಲೋ-ಇಂಡಿಯನ್ ಸಮುದಾಯವನ್ನು ಫ್ರಾಂಕ್ ಆಂಟನಿ ಅವರೂ ಪಾರ್ಸಿ ಜನರನ್ನು ಎಚ್.ಪಿ. ಮೋದಿ ಅವರೂ ಪ್ರತಿನಿಧಿಸಿದ್ದರು. ಆಂಗ್ಲೊ-ಇಂಡಿಯನ್ನರ ಹೊರತಾದ ಎಲ್ಲ ಕ್ರೈಸ್ತರನ್ನು ಪ್ರತಿನಿಧಿಸಿದ ಖ್ಯಾತ ಕ್ರೈಸ್ತರಾದ ಹರೇಂದ್ರ ಕುಮಾರ್ ಮುಖರ್ಜಿಯವರು ಅಲ್ಪಸಂಖ್ಯಾತರ ಸಮಿತಿಯ ಅಧ್ಯಕ್ಷರಾಗಿ ಇದ್ದರು. ಸಂವಿಧಾನ ತಜ್ಞರಾದ ಅಲ್ಲಾಡಿ ಕೃಷ್ಣಸ್ವಾಮಿ, ಡಾ. ಬಿ.ಆರ್. ಅಂಬೇಡ್ಕರ್, ಬಿ.ಎನ್. ರಾಜು ಮತ್ತು ಕೆ.ಎಂ. ಮುನ್ಷಿ ಅವರೂ ಸಭೆಯ ಸದಸ್ಯರಾಗಿದ್ದರು. ಸರೋಜಿನಿ ನಾಯ್ಡು ಮತ್ತು ವಿಜಯಲಕ್ಷ್ಮಿ ಪಂಡಿತ್ ಅವರು ಪ್ರಮುಖ ಮಹಿಳಾ ಸದಸ್ಯರಾಗಿದ್ದರು. ಡಾ. ಸಚ್ಚಿದಾನಂದ ಸಿನ್ಹಾ ಅವರು ಸಂವಿಧಾನರಚನಾ ಸಭೆಯ ತಾತ್ಕಲಿಕ ಅಧ್ಯಕ್ಷರಾಗಿದ್ದರು. ನಂತರ, ಡಾ. ರಾಜೇಂದ್ರ ಪ್ರಸಾದ್ ಅವರು ಅಧ್ಯಕ್ಷರಾಗಿಯೂ ಬಿ.ಆರ್. ಅಂಬೇಡ್ಕರ್ ಅವರು ಕರಡು ಸಮಿತಿ ಅಧ್ಯಕ್ಷರಾಗಿಯೂ ಆಯ್ಕೆಯಾದರು.
ಸಂವಿಧಾನ ರಚನಾ ಸಮಿತಿಯಲ್ಲಿ 284 ಮಂದಿ ಸದಸ್ಯರಿದ್ದರು. ಅವರಲ್ಲಿ 15 ಮಂದಿ ಮಹಿಳಾ ಸದಸ್ಯರಿದ್ದರು. ಅದರ ಕರಡನ್ನು 1949ರ ನವೆಂಬರ್ ತಿಂಗಳಿನಲ್ಲಿ ಸಲ್ಲಿಸಲಾಯಿತು. ಸಲ್ಲಿಸಿದ ಬಳಿಕವೂ ಅದನ್ನು ಪೂರ್ಣಗೊಳಿಸಲು ಮೂರು ವರ್ಷ ಬೇಕಾಯಿತು. ಸಂವಿಧಾನ ರಚನೆಯಾಗಲು ಎರಡು ವರ್ಷ 11 ತಿಂಗಳು 18 ದಿನಗಳ ಕಾಲ ಹಿಡಿಯಿತು. ಒಟ್ಟು ಸಂವಿಧಾನ ರಚನಾ ಸಮಿತಿಯು 166 ದಿನ ಸಮಾವೇಶಗೊಂಡಿತು. ಈ ಸಮಾವೇಶಗಳಿಗೆ ಸಾರ್ವಜನಿಕರಿಗೂ ಹಾಗೂ ಪತ್ರಕರ್ತರಿಗೂ ಪ್ರವೇಶವಿತ್ತು.
ಸಂವಿಧಾನ ರಚನಾ ಸಮಿತಿಯಲ್ಲಿದ್ದ ಎಲ್ಲ 284 ಮಂದಿ ಸದಸ್ಯರು 1950ರ ಜನವರಿ 24ರಂದು ಈ ದಾಖಲೆಗೆ ಸಹಿ ಮಾಡಿದರು. 1950ರ ಜನವರಿ 26ರಂದು ಇದು ಅಸ್ತಿತ್ವಕ್ಕೆ ಬಂತು. ಭಾರತದ ರಾಷ್ಟ್ರಲಾಂಛನವನ್ನೂ ಅದೇ ದಿನ ಅಳವಡಿಸಿಕೊಳ್ಳಲಾಯಿತು.
ಅಂದಿನ ಕಾಲದಲ್ಲಿ ದೇಶದ ಸಂವಿಧಾನ ರಚನೆಗೆ ಸುಮಾರು 1 ಕೋಟಿ ರೂ. ವೆಚ್ಚ ತಗುಲಿತ್ತು. ಸಂವಿಧಾನದ ಮೂಲ ಪ್ರತಿಯನ್ನು ಪ್ರೇಮ್ ಬಿಹಾರಿ ನಾರಾಯಣ ರಾಯ್ಜಾದಾ ಬರೆದಿದ್ದಾರೆ.
- ಭಾರತದ ಸಂವಿಧಾನದ ಪೀಠಿಕೆ ಹೀಗಿದೆ:
'ಭಾರತ ವಾಸಿಗಳಾದ ನಾವು, ಭಾರತವನ್ನು ಸಾರ್ವಭೌಮ ಸಮಾಜವಾದಿ ಜಾತ್ಯಾತೀತ (1976ರಲ್ಲಿ ಅಂದಿನ ಪ್ರಧಾನಿ ಇಂದಿರಾ ಗಾಂಧಿ ಅವರಿಂದ ಸೇರಿಸಲ್ಪಟ್ಟದ್ದು) ಲೋಕತಂತ್ರಿಕ ಗಣತಂತ್ರವನ್ನಾಗಿ ವಿಧಿಯುಕ್ತವಾಗಿ ಸ್ಥಾಪಿಸಿ, ಅದರ ಎಲ್ಲಾ ಪ್ರಜೆಗಳಿಗೆ ಈ ಕೆಳಗಿನ ಹಕ್ಕುಗಳಾದ: ಸಾಮಾಜಿಕ, ಆರ್ಥಿಕ ಮತ್ತು ರಾಜಕೀಯ ನ್ಯಾಯ; ವಿಚಾರ, ಅಭಿವ್ಯಕ್ತಿ, ನಂಬಿಕೆ, ಭಕ್ತಿ ಮತ್ತು ಆರಾಧನೆಗಳಲ್ಲಿ ಸ್ವಾತಂತ್ರ್ಯ; ಸ್ಥಾನಮಾನ ಮತ್ತು ಅವಕಾಶಗಳ ಸಮಾನತೆಗಳನ್ನು ದೊರಕಿಸಿ, ವೈಯುಕ್ತಿಕ ಘನತೆ ಮತ್ತು ದೇಶದ ಒಗ್ಗಟ್ಟು ಮತ್ತು ಐಕ್ಯತೆಗೆ ಎಲ್ಲರಲ್ಲೂ ಭ್ರಾತೃತ್ವತೆ ಯನ್ನು ಪ್ರೋತ್ನಾಹಿಸಲು ನಿರ್ಧರಿಸಿ; ನಮ್ಮ ಸಂವಿಧಾನ ರಚನಾ ಸಭೆಯಲ್ಲಿ ಈ 1949ರ ನವೆಂಬರ್ ಮಾಹೆಯ 26ನೇ ದಿನದಂದು, ನಾವಾಗಿ ನಾವೇ ಈ ಸಂವಿಧಾನವನ್ನು ಸ್ವೀಕರಿಸಿ, ಶಾಸನವನ್ನಾಗಿ ವಿಧಿಸಿಕೊಳ್ಳುತ್ತೇವೆ." ಪೀಠಿಕೆಯ ಮೂಲಪ್ರತಿಯಲ್ಲಿ "ಸಾರ್ವಭೌಮ ಪ್ರಜಾಪ್ರಭುತ್ವ ಗಣರಾಜ್ಯ" ಎಂದಿತ್ತು. ಎರಡು ಹೆಚ್ಚಿನ ಪದಗಳಾದ "ಸಮಾಜವಾದಿ" ಮತ್ತು "ಜಾತ್ಯಾತೀತ" ಪದಗಳನ್ನು 1976ರಲ್ಲಿ ಸಂವಿಧಾನದ 42ನೆ ತಿದ್ದುಪಡಿಯಲ್ಲಿ ಸೇರಿಸಲಾಯಿತು.
ಸರ್ಕಾರ ಸಂವಿಧಾನದ ಮೂಲಕ ಕಾರ್ಯಾಂಗ, ಶಾಸಕಾಂಗ ಮತ್ತು ನ್ಯಾಯಾಂಗಗಳ ಅಧಿಕಾರದ ವ್ಯಾಖ್ಯಾನ ಮಾಡುತ್ತದೆ. ಪ್ರಜೆಗಳ ಹಕ್ಕು ಮತ್ತು ಕರ್ತವ್ಯಗಳನ್ನ ನಿರ್ದಿಷ್ಟಪಡಿಸುತ್ತದೆ. ಎಲ್ಲಾ ಕಾನೂನಿಗಿಂತ ಸಂವಿಧಾನವೇ ಮಿಗಿಲು. ಹೀಗಾಗಿ, ಸಂವಿಧಾನದ ಆಶಯಕ್ಕೆ ವಿರುದ್ಧವಾಗಿ ಕಾನೂನು ರೂಪಿಸಲು ಸಾಧ್ಯವಿಲ್ಲ.
ಭಾರತವನ್ನು ಸಾರ್ವಭೌಮ, ಜಾತ್ಯತೀತ, ಸಮಾಜವಾದಿ ಮತ್ತು ಪ್ರಜಾಸತ್ತಾತ್ಮಕ ಗಣತಂತ್ರ ದೇಶ ಎಂದು ಸಂವಿಧಾನದಲ್ಲಿ ಘೋಷಿಸಲಾಗಿದೆ. ಇಲ್ಲಿರುವ ಪ್ರತಿಯೊಬ್ಬ ಪ್ರಜೆಗೂ ಸಮಾನತೆ, ನ್ಯಾಯ ಮತ್ತು ಸ್ವಾತಂತ್ರ್ಯ ಒದಗಿಸಲಾಗಿದೆ. ಭಾರತದ ಸಂವಿಧಾನವನ್ನು ವಿಶ್ವದ ಶ್ರೇಷ್ಠ ಸಂವಿಧಾನಗಳಲ್ಲಿ ಒಂದು ಎಂದು ಪರಿಗಣಿಸಲಾಗಿದೆ. ಸಂವಿಧಾನ ರಚನಾ ಸಭೆಯಲ್ಲಿ 250ಕ್ಕೂ ಹೆಚ್ಚು ಸದಸ್ಯರು ಇದ್ದರಾದರೂ ಇದರ ಪ್ರಮುಖ ಶಿಲ್ಪಿ ಬಿ.ಆರ್. ಅಂಬೇಡ್ಕರ್ ಅವರಾಗಿದ್ದಾರೆ. ಹೀಗಾಗಿ, ಅವರನ್ನ ಸಂವಿಧಾನ ಕರ್ತೃ ಆಗಿದ್ದಾರೆ.
ಭಾರತ ಸಂವಿಧಾನವು ಹಲವು ದೇಶದ ಸಂವಿಧಾನದ ಪ್ರಮುಖ ಅಂಶಗಳನ್ನು ಎರವಲು ಪಡೆದಿದೆ.
ಬ್ರಿಟನ್, ಐರ್ಲ್ಯಾಂಡ್, ಜಪಾನ್, ಯುಎಸ್ಎ, ದಕ್ಷಿಣ ಆಫ್ರಿಕಾ, ಜರ್ಮನಿ, ಆಸ್ಟ್ರೇಲಿಯಾ ಮತ್ತು ಕೆನಡಾ ದೇಶಗಳ ಸಂವಿಧಾನದ ಕೆಲವು ಅಂಶಗಳನ್ನು ಎರವಲು ಪಡೆದಿದೆ.
2 ವರ್ಷ 11 ತಿಂಗಳು, 17 ದಿನಗಳ ಅವಧಿಯಲ್ಲಿ ರಚಿಸಿದ ಸಂವಿಧಾನ ನಮ್ಮದಾಗಿದೆ.
ಭಾರತ ಸಂವಿಧಾನ ಅತಿದೊಡ್ಡ ಕೈಬರವಣಿಗೆಯ ಡಾಕ್ಯುಮೆಂಟ್ ಹೊಂದಿರುವ ಸಂವಿಧಾನವಾಗಿದ್ದು, ಇಂಗ್ಲಿಷ್ನಲ್ಲಿ ಒಟ್ಟು 1,17,369 ಪದಗಳನ್ನು ಹೊಂದಿದೆ.
ಕೈ ಬರವಣಿಗೆಯಲ್ಲಿ ಬರೆದ ಮೂಲ ಸಂವಿಧಾನ ಪುಸ್ತಕವನ್ನು ಸಂಸತ್ತಿನ ಗ್ರಂಥಾಲಯದಲ್ಲಿ ಹೀಲಿಯಂ ನಿಂದ ಕೂಡಿದ ಕೇಸ್ನಲ್ಲಿ ಸುರಕ್ಷಿತವಾಗಿ ಇಡಲಾಗಿದೆ.
ಸಂವಿಧಾನ ಅಂಗೀಕಾರದ ನಂತರ ಗಣರಾಜ್ಯ ದೇಶದ ಮೊದಲ ರಾಷ್ಟ್ರಪತಿಯಾಗಿ ಡಾ. ಬಾಬು ರಾಜೇಂದ್ರ ಪ್ರಸಾದ್ ಅವರನ್ನು ಆಯ್ಕೆ ಮಾಡಲಾಗಿತ್ತು.
ಸಂವಿಧಾನ ದ ಬಗ್ಗೆ ಕೆಲವು ಮಾಹಿತಿಗಳು
1. ಇದು 1950ರ ಜನವರಿ 26ರಂದು ಅನುಷ್ಠಾನಕ್ಕೆ ಬಂತು.
2. ಭಾರತದ ಸಂವಿಧಾನವು ಟೈಪ್ ಮಾಡಿರುವುದಲ್ಲ ಅಥವಾ ಮುದ್ರಿತವೂ ಅಲ್ಲ. ಅದನ್ನು ಕೈಯಲ್ಲಿ ಬರೆಯಲಾಗಿದ್ದು, ಇಂಗ್ಲಿಷ್ ಮತ್ತು ಹಿಂದಿಯಲ್ಲಿದೆ.
3. ಭಾರತ ಸಂವಿಧಾನದ ಮೂಲ ಪ್ರತಿಗಳನ್ನು ವಿಶೇಷ ಹೀಲಿಯಂ ತುಂಬಿದ ಕವಚಗಳಲ್ಲಿ ಸಂರಕ್ಷಿಸಲಾಗಿದ್ದು, ಇದು ಭಾರತದ ಸಂಸತ್ ಭವನದ ಗ್ರಂಥಾಲಯದಲ್ಲಿದೆ.
4. ಭಾರತ ಸಂವಿಧಾನವನ್ನು ಬೇರೆ ಕಡೆಗಳಿಂದ ಪಡೆದ ಅಂಶಗಳ ಚೀಲ ಎಂದು ಕರೆಯಲಾಗುತ್ತಿದೆ.
5. ಸ್ವಾತಂತ್ರ್ಯ, ಸಮಾನತೆ ಹಾಗೂ ಭ್ರಾತೃತದ ಪರಿಕಲ್ಪನೆಗಳನ್ನು ಫ್ರಾನ್ಸ್ ಸಂವಿಧಾನದಿಂದ ಪಡೆಯಲಾಗಿದೆ.
6. ಪಂಚವಾರ್ಷಿಕ ಯೋಜನೆಯ ಕಲ್ಪನೆಯನ್ನು ಸೋವಿಯತ್ ಒಕ್ಕೂಟದಿಂದ ಪಡೆಯಲಾಗಿದೆ.
7. ರಾಜ್ಯ ನಿರ್ದೇಶನ ತತ್ವಗಳು ಐರ್ಲೆಂಡ್ ಸಂವಿಧಾನದ ಕೊಡುಗೆ
8. ಸುಪ್ರೀಂಕೋರ್ಟ್ ಕಾರ್ಯನಿರ್ವಹಣೆಯ ಕಾನೂನನ್ನು ಜಪಾನ್‍ನಿಂದ ಎರವಲು ಪಡೆಯಲಾಗಿದೆ.
9. ಇದು ವಿಶ್ವದ ಯಾವುದೇ ಸ್ವತಂತ್ರ್ಯ ದೇಶಗಳ ಅತಿ ಉದ್ದವಾದ ಸಂವಿಧಾನವಾಗಿದೆ.
10. ಭಾರತದ ಸಂವಿಧಾನದಲ್ಲಿ 448 ವಿಧಿಗಳು, 25 ಭಾಗಗಳು, 12 ಶೆಡ್ಯೂಲ್, 5 ಅನುಬಂಧಗಳು, 98 ತಿದ್ದುಪಡಿಗಳಿವೆ.
11. ಸಂವಿಧಾನ ರಚನಾ ಸಮಿತಿಯಲ್ಲಿ 284 ಮಂದಿ ಸದಸ್ಯರಿದ್ದರು. ಅವರಲ್ಲಿ 15 ಮಂದಿ ಮಹಿಳೆಯರು.
12. ಇದರ ಕರಡನ್ನು 1949ರ ನವೆಂಬರ್‍ನಲ್ಲಿ ಸಲ್ಲಿಸಲಾಯಿತು. ಸಲ್ಲಿಕೆ ಬಳಿಕ ಅದನ್ನು ಪೂರ್ಣಗೊಳಿಸಲು ಮೂರು ವರ್ಷ ಬೇಕಾಯಿತು.
13. ಸಂವಿಧಾನ ರಚನಾ ಸಮಿತಿಯಲ್ಲಿದ್ದ ಎಲ್ಲ 284 ಮಂದಿ ಸದಸ್ಯರು 1950ರ ಜನವರಿ 24ರಂದು ಈ ದಾಖಲೆಗೆ ಸಹಿ ಮಾಡಿದರು.
13.1950ರ ಜನವರಿ 26ರಂದು ಇದು ಅಸ್ತಿತ್ವಕ್ಕೆ ಬಂತು.
14. ಭಾರತದ ರಾಷ್ಟ್ರಲಾಂಛನವನ್ನೂ ಅದೇ ದಿನ ಅಳವಡಿಸಿಕೊಳ್ಳಲಾಯಿತು.
ಭಾರತದ ಸಂವಿಧಾನವನ್ನು ವಿಶ್ವದ ಅತ್ಯುತ್ತಮ ಸಂವಿಧಾನಗಳಲ್ಲೊಂದು ಎಂದು ಹೇಳಲಾಗಿದೆ. ಏಕೆಂದರೆ ಅದಕ್ಕೆ ಕೇವಲ 94 ತಿದ್ದುಪಡಿಗಳನ್ನು ತರಲಾಗಿದೆ.
ನಮ್ಮ ಸಂವಿಧಾನ ದೇಶದ ಜನರನ್ನು ಸಶಕ್ತಗೊಳಿಸಿದೆ. ಸರ್ವರಿಗೂ ಸಮಾನತೆಯೊದಗಿಸಿದೆ. ಮೂಲಭೂತ ಹಕ್ಕುಗಳು, ಕರ್ತವ್ಯವನ್ನೂ ನೀಡಿದೆ. ಭಾರತಕ್ಕೆ ಸಂವಿಧಾನವೇ ದೊಡ್ಡ ಬಲ. ನಮ್ಮ ಸಂವಿಧಾನವು ನಮ್ಮೆಲ್ಲರನ್ನು ರಕ್ಷಿಸುವ ಬಹುದೊಡ್ಡ ಕಾನೂನು.
ನಮ್ಮ ದೇಶದಲ್ಲಿ ಹೊಸ ಶಕೆ ಆರಂಭವಾಗಿದ್ದು ಸಂವಿಧಾನ ಜಾರಿಗೆ ಬಂದಾಗಿನಿಂದಲೇ. ಸಂವಿಧಾನದ ಮಹತ್ವದ ಬಗ್ಗೆ ಎಲ್ಲರಿಗೂ ಅರಿವು ಮೂಡಿಸುವುದು, ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅವರಿಗೆ ಗೌರವ ಸಲ್ಲಿಸುವದರ ಜೊತೆಗೆ ಅವರ ಸಾಧನೆಯ ಬಗ್ಗೆ ತಿಳಿಸಿ ಕೊಡುವುದು ಈ ದಿನದ ವಿಶೇಷತೆ. ಈ ಸಂವಿಧಾನವನ್ನು ಪ್ರತಿಯೊಬ್ಬರು ಅರ್ಥೈಸಿ ಕೊಂಡು ಪರಿಪಾಲಿಸಿಕೊಂಡು ಹೋಗುವುದು ನಮ್ಮೆಲ್ಲರ ಕರ್ತವ್ಯವಾಗಿದೆ.
- ಡಾ. ಗುರುಪ್ರಸಾದ ರಾವ್ ಹವಲ್ದಾರ್
ಲೇಖಕರು ಮತ್ತು ಉಪನ್ಯಾಸಕರು
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ