ರಾಜ್ಯೋತ್ಸವ ಪ್ರಶಸ್ತಿ ಪುರಸ್ಕಾರಕ್ಕೆ ಅಭಿನಂದನೆಗಳು
ಶ್ರೀಮಾನ್ ವೀರಪ್ಪ ಮೊಯಿಲಿ ಅವರು ಕಾಂಗ್ರೆಸ್ ಶಾಸಕರಾಗಿದ್ದವರು, ರಾಜ್ಯದ ಮಾಜಿ ಮುಖ್ಯಮಂತ್ರಿ, (ಮೊದಲ ತುಳುವ ಮುಖ್ಯಮಂತ್ರಿ) ಚಿಕ್ಕಬಳ್ಳಾಪುರದ ಎಂಪಿಯಾಗಿದ್ದವರು, ಕೇಂದ್ರದಲ್ಲಿ ಕಾರ್ಪೋರೇಟ್ ವ್ಯವಹಾರಗಳು, ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ, ಮತ್ತು ವಿದ್ಯುತ್ ಮಂತ್ರಿಯಾಗಿದ್ದವರು, ಪ್ರಸ್ತುತ ಆಂಧ್ರಪ್ರದೇಶದ ಅಖಿಲ ಭಾರತ ಕಾಂಗ್ರೆಸ್ ಸಮಿತಿಯ ಉಸ್ತುವಾರಿ ಪ್ರಧಾನ ಕಾರ್ಯದರ್ಶಿಯಾಗಿದ್ದವರು, ಕಾಂಗ್ರೆಸ್ ಪಕ್ಷದ ಹಿರಿಯ ಸದಸ್ಯರು ಮತ್ತು ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿಯವರ ಆಪ್ತ ಸಲಹೆಗಾರರಾಗಿದ್ದವರು, ಪರಿಸರ ಮತ್ತು ಅರಣ್ಯ ಸಚಿವಾಲಯದ ಹೆಚ್ಚುವರಿ ಜವಾಬ್ದಾರಿಯನ್ನು ನಿರ್ವಹಿಸಿದವರು, ಕಾನೂನು ಮತ್ತು ನ್ಯಾಯದ ಕ್ಯಾಬಿನೆಟ್ ಮಂತ್ರಿಯಾಗಿದ್ದವರು, ಕೇಂದ್ರ ಶಿಕ್ಷಣ ಸಂಸ್ಥೆಗಳಲ್ಲಿ OBC ಗಳಿಗೆ 27 ಪ್ರತಿಶತ ಮೀಸಲಾತಿಯ ಅನುಷ್ಠಾನಕ್ಕಾಗಿ ಉಸ್ತುವಾರಿ ಸಮಿತಿಯ ಅಧ್ಯಕ್ಷರಾಗಿದ್ದವರು, ಕಂದಾಯ ಸುಧಾರಣಾ ಆಯೋಗ, 2ನೇ ಆಡಳಿತ ಸುಧಾರಣಾ ಆಯೋಗ, ತೆರಿಗೆ ಸುಧಾರಣಾ ಆಯೋಗದ ಅಧ್ಯಕ್ಷರಾಗಿದ್ದವರು, ಕಾನೂನು, ಯುವಜನ ಸೇವೆ, ಸಂಸ್ಕೃತಿ, ಮಾಹಿತಿ, ಸಂಸದೀಯ ವ್ಯವಹಾರಗಳು ಮತ್ತು ಶಿಕ್ಷಣ, ವಿಧಾನ ಸಭೆ ವಿರೋಧ ಪಕ್ಷದ ನಾಯಕ, ಹಣಕಾಸು ಮತ್ತು ಯೋಜನಾ ಸಚಿವ, ಸಣ್ಣ ಪ್ರಮಾಣದ ಕೈಗಾರಿಕೆಗಳ ಸಚಿವರು, ಕರ್ನಾಟಕದಲ್ಲಿ ಆರ್ಥಿಕ ಸುಧಾರಣೆಗಳ ಅನುಷ್ಠಾನಕ್ಕೆ ನೇತೃತ್ವ ವಹಿಸಿದವರು, ಕರ್ನಾಟಕ ಭೂ ಸುಧಾರಣಾ ಕಾಯ್ದೆಯ ಕರಡು ಮತ್ತು ಅನುಷ್ಠಾನದ ಜವಾಬ್ದಾರಿಯನ್ನು ವಹಿಸಿವರು, ಹಣಕಾಸು, ನೀರಾವರಿ ಮತ್ತು ವಿದ್ಯುತ್, ನಗರಾಭಿವೃದ್ಧಿ ಮತ್ತು ಮೂಲಸೌಕರ್ಯ, ವಸತಿ ಮತ್ತು ಗ್ರಾಮೀಣಾಭಿವೃದ್ಧಿ, ಸಬಲೀಕರಣ, ಶಿಕ್ಷಣ ಮತ್ತು ಸಂಸ್ಕೃತಿಯಂತಹ ಸಚಿವಾಲಯಗಳು ಮತ್ತು ಕ್ಷೇತ್ರಗಳಲ್ಲಿ ಕರ್ನಾಟಕ ರಾಜ್ಯದ ಹಲವಾರು ಯೋಜನೆಗಳು, ನೀತಿಗಳು ಮತ್ತು ಸಾಧನೆಗಳನ್ನು ಮುನ್ನಡೆಸಿದವರು. ತೆರಿಗೆ ಸುಧಾರಣಾ ಆಯೋಗ, ಕಂದಾಯ ಸುಧಾರಣಾ ಆಯೋಗದ ಅಧ್ಯಕ್ಷತೆ, ರಾಜ್ಯದ ಆರು ಬಜೆಟ್ಟುಗಳನ್ನು ಮಂಡಿಸಿದ, ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಮತ್ತು ವಿಶ್ವಬ್ಯಾಂಕ್‌ನಿಂದ ಮೆಚ್ಚುಗೆ ಪಡೆದ ನೀರಾವರಿ ಬಾಂಡ್‌ಗಳಂತಹ ನವೀನ ಹಣಕಾಸು ಯೋಜನೆಗಳನ್ನು ಅಭಿವೃದ್ಧಿಪಡಿಸಿದ, ಕೃಷ್ಣಾ ಜಲಭಾಗ್ಯ ನಿಗಮ ಯೋಜನೆಯನ್ನು ಸ್ಥಾಪಿಸಿದ್ದು, ಮೆರಿಟ್, ಪಾರದರ್ಶಕತೆ ಮತ್ತು ಸಾಮಾಜಿಕ ನ್ಯಾಯದ ಮೇಲೆ ಸ್ಥಾಪಿಸಲಾದ ತಾಂತ್ರಿಕ ಶಿಕ್ಷಣಕ್ಕಾಗಿ ಪ್ರವೇಶ ನೀತಿಯನ್ನು ಪ್ರಾರಂಭಿಸುವ ಹೊಸ ಸಾಮಾನ್ಯ ಪ್ರವೇಶ ಪರೀಕ್ಷೆ (CET) ವ್ಯವಸ್ಥೆಯ ಮುಖ್ಯ ವಾಸ್ತುಶಿಲ್ಪಿಯಾಗಿದ್ದ, ರಾಷ್ಟ್ರದ ಪ್ರಮುಖ ಕಾನೂನು ಸಂಸ್ಥೆ, ರಾಷ್ಟ್ರೀಯ ಕಾನೂನು ಶಾಲೆ ವಿಶ್ವವಿದ್ಯಾಲಯವನ್ನು ಸ್ಥಾಪಿಸಿದ್ದು, ಕರ್ನಾಟಕ ರಾಜ್ಯದಲ್ಲಿ ಸಂಪೂರ್ಣ ಸಾಕ್ಷರತಾ ಕಾರ್ಯಕ್ರಮವನ್ನು ಕಾರ್ಯಗತಗೊಳಿಸಿದ, ಪ್ರಾಥಮಿಕ ಶಿಕ್ಷಣದ ಸಾರ್ವತ್ರಿಕೀಕರಣವನ್ನು ಕಾರ್ಯಗತಗೊಳಿಸಲು ವಿಶ್ವಬ್ಯಾಂಕ್‌ನೊಂದಿಗೆ ಕೆಲಸ ಮಾಡಿದ ಇವರು ಆರಂಭದಲ್ಲಿ ಸ್ವಲ್ಪಕಾಲ ನ್ಯಾಯವಾದಿಯಾಗಿ ದುಡಿದವರು.
ಈ ಎಲ್ಲ ರಾಜಕೀಯ ಕಾರ್ಯಬಾಹುಳ್ಯದಲ್ಲೂ ಸಾಹಿತ್ಯ ಕೃಷಿಯನ್ನೂ ಅಗಾಧವಾಗಿ ಮಾಡಿದವರು. ಅವರ ಕನ್ನಡದ ಸೇವೆ ಬಹುದೊಡ್ಡದಾಗಿಯೇ ಇದೆ. 42,295 ಸಾಲುಗಳನ್ನು ಹೊಂದಿರುವ ಐದು ಸಂಪುಟಗಳಲ್ಲಿ ಇವರು ಬರೆದ ಶ್ರೀ ರಾಮಾಯಣ ಮಹಾನ್ವೇಷಣಂ ಎಂಬ ಮಹಾಕಾವ್ಯ ಕುವೆಂಪು ಅವರ ಶ್ರೀ ರಾಮಾಯಣ ದರ್ಶನಂ ಅನ್ನು ಮೀರಿಸುವಂತಿದೆಯೇನೋ ಎಂದೆನಿಸುತ್ತದೆ! ಹಿಂದಿಗೆ ಅನುವಾದಗೊಂಡ ಈ ಕೃತಿಯನ್ನು ಇಂದಿರಾ ಗಾಂಧಿ ನ್ಯಾಷನಲ್ ಸೆಂಟರ್ ಫಾರ್ ಆರ್ಟ್ಸ್, ನವದೆಹಲಿಯಿಂದ ಪ್ರಕಟಿಸಲಾಗುತ್ತಿದೆ. ಸಾರ್ವಜನಿಕ ಹಣಕಾಸು ಸೇರಿದಂತೆ ಸಮಕಾಲೀನ ಸಮಸ್ಯೆಗಳ ಕುರಿತು ಲೇಖನಗಳನ್ನು ಹೊಂದಿರುವ ಇಂಗ್ಲಿಷಲ್ಲಿ 'ಮ್ಯೂಸಿಂಗ್ಸ್ ಆನ್ ಇಂಡಿಯಾ' ಭಾಗ 1 ಮತ್ತು 2 ಅನ್ನು ರಚಿಸಲಾಗಿದೆ. ಇವರು ಪ್ರಮುಖ ಮುದ್ರಣ ಪ್ರಕಟಣೆಗಳು ಮತ್ತು ಎಲೆಕ್ಟ್ರಾನಿಕ್ ಮಾಧ್ಯಮಗಳಿಗೆ ನಿಯಮಿತ ಅಂಕಣಕಾರರಾಗಿದ್ದರು. 2020ರ ಹೊತ್ತಿಗೇನೇ ಭಾರತವನ್ನು ಆರ್ಥಿಕ ಸೂಪರ್ ಪವರ್ ಮಾಡಲು ತೆಗೆದುಕೊಳ್ಳಬೇಕಾದ ಕ್ರಮಗಳ ಕುರಿತು ಪ್ರಸ್ತುತ ಪುಸ್ತಕವನ್ನು ಬರೆಯುತ್ತಿದ್ದರೆಂಬ ವದಂತಿಯಿತ್ತು. ಭಾರತವನ್ನು ಜಗತ್ತಿನ ಮೂರನೆಯ ದೊಡ್ದ ಆರ್ಥಿಕ ಶಕ್ತಿ ರಾಷ್ಟ್ರವನ್ನಾಗಿ ಮಾಡುವ ಗುರಿ ಮತ್ತು ಮಹದಾಸೆಯನ್ನು ಹೊಂದಿರುವ ಮೋದಿಯವರಿಗೆ ಮೊಯ್ಲಿಯವರ ಈ ಪುಸ್ತಕ ಸಿಕ್ಕಿದ್ದರೆ ತುಂಬಾನೇ ಶಕ್ತಿ ಬರುತ್ತಿತ್ತು.
ವೀರಪ್ಪ ಮೊಯ್ಲಿ ಅವರು ದಿ ಹಿಂದೂ ಮತ್ತು ಡೆಕ್ಕನ್ ಹೆರಾಲ್ಡ್ ಮತ್ತು ಸಂಯುಕ್ತ ಕರ್ನಾಟಕ ನಿಯಮಿತ ಅಂಕಣಕಾರರಾಗಿ ಸೇವೆ ಸಲ್ಲಿಸಿದ್ದಾರೆ. ಅವರು ಕನ್ನಡದಲ್ಲಿ ಹಲವಾರು ಪುಸ್ತಕಗಳನ್ನು ಸಹ ಬರೆದಿದ್ದಾರೆ: ತೆಂಬರೆ, (ಇಂಗ್ಲಿಷ್‌ಗೆ ಅನುವಾದಿಸಲಾಗಿದೆ). ಕೊಟ್ಟ (ಕನ್ನಡ ಮತ್ತು ಹಿಂದಿ ಎರಡರಲ್ಲೂ ಟೆಲಿಫಿಲ್ಮ್ ಗಳಾಗಿವೆ. ಸುಳಿಗಾಳಿ ("ಟೈಫೂನ್"). ಇದನ್ನು ಪ್ರೇಮವೇ ಬಾಳಿನ ಬೆಳಕು (ಎಂಬ ಶೀರ್ಷಿಕೆಯ ಚಲನಚಿತ್ರಕ್ಕೆ ಅಳವಡಿಸಲಾಯಿತು). ಸಾಗರದೀಪ, ಮಿಲನಾ, ಪರಾಜಿತ, ಪ್ರೇಮವೆಂದರೆ, ಮೂರು ನಾಟಕಗಳು, ಹಾಲು-ಜೇನು, ಮತ್ತೆ ನಡೆಯಲಿ ಸಮರ, ಯಕ್ಷಪ್ರಶ್ನೆ, ಜೊತೆಯಾಗಿ ನಡೆಯೋಣ, ಶ್ರೀ ರಾಮಾಯಣ ಮಹಾನ್ವೇಷಣಂ, ಮ್ಯೂಸಿಂಗ್ಸ್ ಆನ್ ಇಂಡಿಯಾ, ಅನ್ಲೀಶಿಂಗ್ ಇಂಡಿಯಾ ಎಂಬ ಇಂಗ್ಲಿಷ್ ಪುಸ್ತಕದ ನಾಲ್ಕು ಸಂಪುಟಗಳನ್ನು ಬರೆದಿದ್ದಾರೆ. ಇದು 25 ರಿಂದ 30 ವರ್ಷಗಳ ನಂತರ ಭಾರತವು ತನ್ನ ಜನಸಂಖ್ಯಾ ಲಾಭಾಂಶವನ್ನು ಸರಿಯಾಗಿ ಬಳಸಿಕೊಳ್ಳುವ ಮೂಲಕ ಹೇಗೆ ಸೂಪರ್ ಪವರ್ ಆಗಬಹುದು ಎಂಬುದನ್ನು ವಿವರಿಸುತ್ತದೆ. ಈ ಪುಸ್ತಕದ ಆರಂಭಿಕ ಮೂರು ಸಂಪುಟಗಳು ಕೃಷಿ, ನೀರು, ಮತ್ತು ವಿದ್ಯುತ್ ಅಂಶಗಳ ಬಗ್ಗೆ ವ್ಯವಹರಿಸುತ್ತವೆ: ನಾಲ್ಕನೇ ಸಂಪುಟ, ಅನ್‌ಲೀಶಿಂಗ್ ಇಂಡಿಯಾ: ದಿ ಫೈರ್ ಆಫ್ ನಾಲೆಡ್ಜ್- ಇದು ಭಾರತೀಯ ಶಿಕ್ಷಣ ವ್ಯವಸ್ಥೆಯಲ್ಲಿನ ನ್ಯೂನತೆಗಳ ವಿವರವಾದ ವಿಶ್ಲೇಷಣೆಯನ್ನು ವಿವರಿಸುತ್ತದೆ, ಜೊತೆಗೆ 21ನೆಯ ಶತಮಾನದಲ್ಲಿ ದೇಶದ ಶೈಕ್ಷಣಿಕ ಅಗತ್ಯಗಳನ್ನು ಪರಿಹರಿಸಲು ನವೀನ ತಂತ್ರಗಳು ಮತ್ತು ಪರಿಹಾರಗಳು- ಹೀಗೆ ಸಾಹಿತ್ಯದ ವಿವಿಧ ನೆಲೆಗಳಲ್ಲಿ ಇವರು ಸಾಹಿತ್ಯ ಕೃಷಿಯನ್ನು ಮಾಡಿರುವ ಇವರಿಗೆ, 2000ರಲ್ಲಿ- ಅಮೀನ್ ಸದ್ಭಾವನಾ ಪ್ರಶಸ್ತಿ, 2001ರಲ್ಲಿ- ದೇವರಾಜ್ ಅರಸ್ ಪ್ರಶಸ್ತಿ, 2001ರಲ್ಲಿ- ಆರ್ಯಭಟ್ಟ ಪ್ರಶಸ್ತಿ, ೨೦೦೨ರಲ್ಲಿ ಗೊರೂರು ಪ್ರತಿಷ್ಠಾನದ ಸಮಗ್ರ ಸಾಹಿತ್ಯ ಪುರಸ್ಕಾರ, 2007ರಲ್ಲಿ- ಶ್ರೀ ರಾಮಾಯಣ ಮಹಾನ್ವೇಷಣಂಗಾಗಿ ಮೂರ್ತಿದೇವಿ ಪ್ರಶಸ್ತಿ, 2014ರಲ್ಲಿ - ಶ್ರೀ ರಾಮಾಯಣ ಮಹಾನ್ವೇಷಣಂಗಾಗಿ ಸರಸ್ವತಿ ಸಮ್ಮಾನ್, ೨೦೨೦ರಲ್ಲಿ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, 2021ರಲ್ಲಿ– ಶ್ರೀ ಬಾಹುಬಲಿ ಅಹಿಂಸಾ ದಿಗ್ವಿಜಯಂ ಮಹಾಕಾವ್ಯಕ್ಕಾಗಿ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ದೊರೆತಿದೆ. ಈಗ ೨೦೨೪ರ ಸಾಲಿನ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ದೊರೆತಿದೆ. ಕನ್ನಡದಲ್ಲಿ ಎಸ್.ಎಲ್.ಭೈರಪ್ಪನವರನ್ನು ಹೊರತುಪಡಿಸಿದರೆ, ಸಾರಸ್ವತ ಮತ್ತು ವಿದ್ವತ್ ಲೋಕದ ಆಲದಮರ ಶ್ರೀ ಬನ್ನಂಜೆ ಗೋವಿಂದಾಚಾರ್ಯ, ರಾಮಾಯಣಾಚಾರ್ಯ, ವಾಲ್ಮೀಕಿ ಹೃದಯಜ್ಞ ಶ್ರೀ ಕೆ.ಎಸ್, ನಾರಾಯಣಾಚಾರ್ಯ, ಪುರುಷ ಸರಸ್ವತಿ ಎಂದು ಎಸ್.ಎಲ್.ಭೈರಪ್ಪನವರಿಂದಲೇ ಶ್ಲಾಘಿಸಲ್ಪಟ್ಟ ಶತಾವಧಾನಿ ಡಾ.ಆರ್.ಗಣೇಶರಂಥವರಿಗೂ ಸರಸ್ವತಿ ಸಮ್ಮಾನ್ ಸಂದಲಿಲ್ಲ. ಆದರೆ, ವೀರಪ್ಪ ಮೊಯ್ಲಿಯವರಿಗೆ ಸಂದಿದೆ ಎಂಬುದೇ ಅವರ ವಿದ್ವತ್ತನ್ನು ಸಾರಿ ಸಾರಿ ಹೇಳುತ್ತದೆ. ಪ್ರಶಸ್ತಿಯೇ ವಿದ್ವತ್ತಿಗೆ ಮಾನದಂಡವೆಂಬುದನ್ನು ಸಾಬೀತು ಮಾಡಿದ ಕೀರ್ತಿಗೂ ಮೊಯ್ಲಿಯವರು ಭಾಜನರಾಗಿದ್ದು ಈ ಮೂಲಕ!
ಕರ್ನಾಟಕ ರಾಜ್ಯದ ಮುಖ್ಯಮಂತ್ರಿಯಾಗಿ, ಕೇಂದ್ರ ಸಚಿವರಾಗಿ, ವಿವಿಧ ಆಯೋಗಗಳಲ್ಲಿ ಅಧ್ಯಕ್ಷರಾಗಿ ಸೇವೆ ಮಾಡಿರುವ ಮೊಯ್ಲಿಯವರಿಗೆ ಈಗಾಗಲೇ ಸರಸ್ವತಿ ಸಮ್ಮಾನ್ ಬಂದಿದೆ. ಕೇಂದ್ರ ಸಾಹಿತ್ಯ ಅಕಾಡೆಮಿಯೂ ಬಂದಿದೆ. ಗೊರೂರು ಪ್ರಶಸ್ತಿ, ದೇವರಾಜ್ ಅರಸ್ ಪ್ರಶಸ್ತಿಗಳೂ ಬಂದಿದೆ. ಇಷ್ಟೆಲ್ಲ ಪ್ರಶಸ್ತಿ ಸಾಧನೆ ಮಾಡಿರುವ ಮೊಯ್ಲಿಯವರಿಗೆ ರಾಜ್ಯೋತ್ಸವ ಪ್ರಶಸ್ತಿ ಯಾವ ಲೆಕ್ಕಕ್ಕೂ ಸಲ್ಲ ಎಂದರೆ ತಪ್ಪಾಗಲಿಕ್ಕಿಲ್ಲ! (ನಾನಿಲ್ಲಿ ಪ್ರಶಸ್ತಿಯ ಮೌಲ್ಯ ಮತ್ತು ಘನತೆಯನ್ನು ದರಕರಿಸುತ್ತಿಲ್ಲ ಎಂದು ಸ್ಪಷ್ಟಪಡಿಸುತ್ತೇನೆ. ಆದರೆ ಮೊಯ್ಲಿಯವರ ಸಾಧನೆಯ ಮುಂದೆ ಈ ಪ್ರಶಸ್ತಿ ಏನೂ ಅಲ್ಲ ಎಂಬುದು ನನ್ನ ಅನಿಸಿಕೆ, ಅಭಿಪ್ರಾಯವಷ್ಟೆ) ಆದರೆ, ಮೊಯ್ಲಿಯವರು ತುಂಬಾ ಉದಾರ ಮನಸ್ಸಿನವರು. ತನಗೆ ಕೊಡಮಾಡಿದ ಈ ರಾಜ್ಯೋತ್ಸವ ಪ್ರಶಸ್ತಿಯನ್ನು ಸಾಹಿತ್ಯದಲ್ಲಿ ಕೃಷಿ ಮಾಡಿದ ಇನ್ನೊಬ್ಬ ಸಾಧಕನಿಗೆ ನೀಡಿ ಎಂದು ಹೇಳಿ ಹೊಸ ಮೇಲ್ಪಂಕ್ತಿಯನ್ನು ಹಾಕಬಹುದಿತ್ತು. ಆದರೆ ಹಾಗೆ ಮಾಡುವುದು ತನ್ನ ವ್ಯಕ್ತಿತ್ವಕ್ಕೆ ಘನತೆಯನ್ನು ನೀಡಲಾರದು ಎಂದೆಣಿಸಿ ಬಹುದೊಡ್ಡ ಔದಾರ್ಯದೊಂದಿಗೆ ಪ್ರಶಸ್ತಿಯನ್ನು ಸ್ವೀಕರಿಸಿದ್ದಾರೆ. ಇದು ಅವರ ದೊಡ್ದತನ. ಈ ಮನೋಧರ್ಮ ಯಾವ ಸಾಧಕನಲ್ಲೂ ಅಷ್ಟು ಸುಲಭವಾಗಿ ಹುಟ್ಟುವುದಕ್ಕೆ ಸಾಧ್ಯವಿಲ್ಲ. ನಾಳೆ ಬೆಂಗಳೂರೋ, ದಕ್ಷಿಣ ಕನ್ನಡವೋ, ಚಿಕ್ಕಬಳ್ಳಾಪುರವೋ ಅಥವಾ ಯಾವುದಾದರೂ ಜಿಲ್ಲೆಯ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿಯನ್ನು ಘೋಷಿಸಿದರೂ ಅದನ್ನು ವೀರಪ್ಪ ಮೊಯ್ಲಿಯವರು ನಿರಾಕರಿಸದೆ ಪ್ರೀತಿಯಿಂದ ಗೌರವಯುತವಾಗಿ ಸ್ವೀಕರಿಸುವಷ್ಟು ಔದಾರ್ಯವನ್ನು ಹೊಂದಿದ್ದಾರೆಂಬುದನ್ನು ಈ ಪ್ರಶಸ್ತಿ ಸ್ವೀಕಾರದ ಹಿನ್ನೆಲೆಯಿಂದಲೇ ಗ್ರಹಿಸಲು ಸಾಧ್ಯವಿದೆ. ತಾನು ಈ ನಾಡಿನ ಮುಖ್ಯಮಂತ್ರಿಯಾಗಿದ್ದವನು. ಕೇಂದ್ರದಲ್ಲಿ ಸಚಿವನಾಗಿದ್ದವನು. ಹಣಕಾಸು ಆಯೋಗದ ಅಧ್ಯಕ್ಷನಾಗಿದ್ದವನು. ಸರ್ಕಾರದ ಅನ್ಯಾನ್ಯ ಅಂಗಗಳಲ್ಲಿ ಮಂತ್ರಿ ಪದವಿ, ಹುದ್ದೆ, ಅಧಿಕಾರ, ಸ್ಥಾನಮಾನವನ್ನು ಅನುಭವಿಸಿದವನು, ಸರಸ್ವತಿ ಸಮ್ಮಾನ್ (ಮಧ್ಯಪ್ರದೇಶದಲ್ಲಿ ಕಾಂಗ್ರೆಸ್ ಸರ್ಕಾರವಿದ್ದಾಗ ಅವರು ತಮ್ಮ ಪ್ರಭಾವವನ್ನು ಬಳಸಿ ಪಡೆದದ್ದು ಎಂಬ ಗಾಳಿಸುದ್ದಿಯಿದೆ) ಪುರಸ್ಕಾರದಂಥ ದೊಡ್ದ ಪ್ರಶಸ್ತಿ ಪಡೆದವನು ಎಂಬ ಗರ್ವದಿಂದಾಗಲೀ, ಜಂಭತನದಿಂದಾಗಲೀ ರಾಜ್ಯೋತ್ಸವ ಪ್ರಶಸ್ತಿಯನ್ನು ಮೊಯ್ಲಿಯವರು ದರಕರಿಸದೆ ಸ್ವೀಕರಿಸಿದ್ದಾರೆ. ನಿಜವಾಗಿ ಅವರ ದೊಡ್ದತನವಿದು. ಸರ್ಕಾರದ ಮಟ್ಟದಲ್ಲಿ ಎತ್ತರದ ಹುದ್ದೆ, ಪದವಿ, ಸ್ಥಾನಮಾನ, ಪ್ರಶಸ್ತಿ, ಪುರಸ್ಕಾರಗಳನ್ನು ಅಲಂಕರಿಸಿದವರಿಗೆ ಪ್ರಶಸ್ತಿಗಳ ಕುರಿತಾಗಿ ಅಸಡ್ಡೆ, ತಾತ್ಸಾರ, ನಿರಾಕರಣೆ ಹುಟ್ಟುವುದೂ ಸಹಜವೇ. ಆದರೆ, ವೀರಪ್ಪ ಮೊಯ್ಲಿಯವರಿಗೆ ಸದ್ಯ ಅಂಥ ಯಾವ ಹುದ್ದೆ, ಪದವಿ, ಸ್ಥಾನಮಾನ, ಪ್ರಶಸ್ತಿ, ಪುರಸ್ಕಾರ ಇಲ್ಲದಿದ್ದರೂ, ಎಲ್ಲವನ್ನೂ ತಾನು ಪಡೆದವನಿದ್ದೇನೆ ಎಂಬ ದೊಡ್ಡಸ್ಥಿಕೆಯನ್ನೂ ಬಿಟ್ಟು ರಾಜ್ಯೋತ್ಸವ ಪ್ರಶಸ್ತಿಗೆ ಅರ್ಜಿಯನ್ನು ಹಾಕುವುದರ ಮೂಲಕ ಸಾಹಿತ್ಯ ವಿಭಾಗದಲ್ಲಿ ರಾಜ್ಯೋತ್ಸವ ಪ್ರಶಸ್ತಿಯನ್ನು ಪಡೆದಿದ್ದಾರೆಯೋ ಅಥವಾ ಯಾರದ್ದಾದರೂ ಶಿಫಾರಸ್ಸಿನ ಮೇಲೆ ಅವರಿಗೆ ಪ್ರಶಸ್ತಿ ದೊರೆತಿದೆಯೋ ಗೊತ್ತಿಲ್ಲ, ಅಂತೂ ಪ್ರಶಸ್ತಿಯನ್ನು ಗೌರವಿಸಿ ಪಡೆಯುತ್ತಿರುವುದು ಮಾತ್ರ ಅವರಲ್ಲಿರುವ ಪರಮ ಔದಾರ್ಯವೇ ಸರಿ. ಮತ್ತು ಮೊಯ್ಲಿಯಂಥ ಅಪ್ಪಟ ಪ್ರತಿಭೆಗೆ ಸಂದ ಮನ್ನಣೆಯೂ, ಪುರಸ್ಕಾರವೂ ಅಹುದು. ನಾಲ್ಕು ಕಾದಂಬರಿ, ಮೂರು ನಾಟಕ, ಮೂರು ಕವನ ಸಂಕಲನ, ಎರಡು ಮಹಾಕಾವ್ಯ (ಅದನ್ನು ಅವರೇ ಕುಳಿತು ಓದಿದರೂ ಅವರಿಗೇ ಅರ್ಥವಾಗುವುದಿಲ್ಲ ಎಂಬ ಮಾತೂ ಇದೆ), ಲೇಖನಗಳ ಸಂಕಲನ, ನಾಲ್ಕು ಸಂಪುಟಗಳ ಒಂದು ಇಂಗ್ಲಿಷ್ ಕೃತಿ, ದ್ರೌಪದಿಯ ಮೇಲೆ ಮತ್ತೊಂದು ಮಹಾಕಾವ್ಯವನ್ನು ಶ್ರೀಮುಡಿ ಪರಿಕ್ರಣಂ ಎಂಬ ಶೀರ್ಷಿಕೆಯಡಿ ಬರೆಯುತ್ತಿರುವ (“ನಾನು ಹೀಗೆ ಬರೆಯುತ್ತಿದ್ದೇನೆ, ಇದು ತಡೆಯಲಾಗದ ಪ್ರಯಾಣ” ಎಂದು ಬಾರ್ ಎಂಡ್ ಬೆಂಚ್ ಗೆ ನೀಡಿದ ಸಂದರ್ಶನದಲ್ಲಿ ಹೇಳಿಕೊಂಡಿದ್ದಾರಂತೆ) ವೀರಪ್ಪ ಮೊಯ್ಲಿಯವರು ಬಿಎಂಶ್ರೀ, ಕಾರಂತ, ಡಿವಿಜಿ, ಕುವೆಂಪು, ಬೇಂದ್ರೆ, ಮಾಸ್ತಿ, ಪಂಜೆ, ಗೋವಿಂದ ಪೈ, ಪುತಿನ, ಭೈರಪ್ಪ ಅವರೆಲ್ಲರ ಸಾಹಿತ್ಯ ಕೃಷಿಗೆ ಸರಿಸಮಾನವಾಗಿಯೋ ಅಥವಾ ಅವರನ್ನೂ ಮೀರಿದ ಸಾಹಿತಿಯಾಗಿಯೋ ಕಂಡರೆ ಅಚ್ಚರಿಯೇನಲ್ಲ! ಮತ್ತು ಹಾಗೆ ಭಾವಿಸುವುದು ಕೂಡ ಅತಿಶಯೋಕ್ತಿಯಲ್ಲ.
ಹಾಗೆ ನೋಡಿದರೆ ವೀರಪ್ಪ ಮೊಯ್ಲಿಯವರಿಗೆ ಡಾ.ರಾಜಕುಮಾರ, ಕುವೆಂಪು, ಜಿ.ಎಸ್.ಶಿವರುದ್ರಪ್ಪ ಅವರಂಥ ಮಹಾನ್ ಸಾಧಕರಿಗೆ ಪ್ರದಾನಿಸಿದ ಕರ್ನಾಟಕ ರತ್ನವನ್ನು ಈಗಾಗಲೇ ಕೊಡಬೇಕಿತ್ತು ಎಂದೇ ನನಗೆ ಅನಿಸುವುದು. ಖಂಡಿತವಾಗಿಯೂ ಮುಂದಿನ ದಿನಗಳಲ್ಲಿ ಅದೂ ಅವರಿಗೆ ಸಿಗಬಹುದು. ಇನ್ನೂ ಮುಂದುವರೆದು ಹೇಳುವುದಾದರೆ ಅವರ ಜ್ಞಾನನಿಧಿಗೆ ಈಗಾಗಲೇ ಭಾರತೀಯ ಜ್ಞಾನಪೀಠ ಸಲ್ಲಬೇಕಿತ್ತು. (ಹಿಂದೊಮ್ಮೆ ಅವರು ಜ್ಞಾನಪೀಠಕ್ಕೆ ಲಾಭಿಯನ್ನು ನಡೆಸಿದ್ದರು ಎಂಬ ವದಂತಿಯೂ ಇದೆ) ಅದನ್ನು ನೋಡುವ ಭಾಗ್ಯ ಕನ್ನಡಿಗರಿಗೆ ಆದಷ್ಟು ಬೇಗ ಸಿಗುವಂತಾಗಲಿ ಎಂದು ಆಶಿಸುತ್ತೇನೆ. ಸದ್ಯಕ್ಕೆ ರಾಜ್ಯೋತ್ಸವ ಪ್ರಶಸ್ತಿಗಾಗಿ ಅವರನ್ನು ಅಭಿನಂದಿಸುತ್ತೇನೆ. ಸಾಹಿತ್ಯ ವಿಭಾಗದಲ್ಲಿ ಪ್ರಶಸ್ತಿಯನ್ನು ಪಡೆದ ಉಳಿದೆಲ್ಲ ಸಾಧಕರಿಗಿಂತ ಭಿನ್ನವಾದ ನೆಲೆಯಲ್ಲಿ ಕಾಣಿಸುವವರು ವೀರಪ್ಪ ಮೊಯಿಲಿಯವರು ಮಾತ್ರ. ಅದಕ್ಕಾಗಿ ವಿಶೇಷ ಅಭಿನಂದನೆಗೆ ಅವರು ಅರ್ಹರು. ಪ್ರಶಸ್ತಿ ಪುರಸ್ಕೃತರೆಲ್ಲರಿಗೂ ಅಭಿನಂದನೆಗಳು. ರಾಜ್ಯೋತ್ಸವ ಪ್ರಶಸ್ತಿಯ ಮೆರುಗನ್ನು ಇನ್ನಷ್ಟು ಹೆಚ್ಚುವಂತೆ ಮಾಡಿದ ವೀರಪ್ಪ ಮೊಯಿಲಿಯವರಿಗೆ ಸಮಗ್ರ ಕನ್ನಡ ಸಾಹಿತ್ಯಾಭಿಮಾನಗಳ ಅಭಿನಂದನೆಯಂತೂ ಇದ್ದೇ ಇದೆ. ಇಂಥ ಪ್ರಶಸ್ತಿಗಳು ಇನ್ನಷ್ಟು ಅವರಿಗೆ ಸಂದಲಿ. ಅವರ ಕೃತಿಗಳು ಅಕೆಡೆಮಿಕ್ ಪಠ್ಯಕ್ಕೆ ಸೇರಿ ಅಧ್ಯಯನ ಮಾಡುವಂತಾಗಲಿ. ಒಬ್ಬ ಸಾಹಿತ್ಯೋಪಾಸಕನಾಗಿ ಇಲ್ಲಿಯವರೆಗೆ ಅವರ ಯಾವ ಕೃತಿಯನ್ನೂ ನಾನು ಓದಿಲ್ಲ ಎಂದು ವಿನಮ್ರವಾಗಿ ಒಪ್ಪುತ್ತ ಸಾಧ್ಯವಾದರೆ ಮುಂದಿನ ದಿನಗಳಲ್ಲಿ ಓದುತ್ತೇನೆಂದು ಅರ್ಧಕ್ಷತ್ರಿಯ ರಾಜಕಾರಣಿಯಂತೆ ಭರವಸೆ ನೀಡುತ್ತೇನೆ.
ಒಂದಂತೂ ಸತ್ಯ: ಯಾರೇನೇ ಹೇಳಲಿ, ನಿಜಕ್ಕೂ ವೀರಪ್ಪ ಮೊಯ್ಲಿಯವರು ಗ್ರೇಟ್!
-ಟಿ. ದೇವಿದಾಸ್
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ



