ಎಡನೀರು ಶ್ರೀಗಳ ಕಾರಿನ ಮೇಲೆ ಮತಾಂಧರ ದಾಳಿಗೆ ನಳಿನ್ ಕುಮಾರ್ ಕಟೀಲ್ ಖಂಡನೆ

Chandrashekhara Kulamarva
0

ಮಠಕ್ಕೆ ಭೇಟಿ ನೀಡಿ ಶ್ರೀಗಳ ಯೋಗಕ್ಷೇಮ ವಿಚಾರಿಸಿದ ಮಾಜಿ ಸಂಸದ



ಮಂಗಳೂರು: ಎಡನೀರು ಮಠದ ಶ್ರೀ ಸಚ್ಛಿದಾನಂದ ಭಾರತೀ ಸ್ವಾಮೀಜಿ ಕಾರಿಗೆ ತಡೆಯೊಡ್ಡಿ ದಾಳಿ ಪ್ರಕರಣವನ್ನು ಮಾಜಿ ಸಂಸದ ಹಾಗೂ ಕರ್ನಾಟಕ ಬಿಜೆಪಿಯ ಮಾಜಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರು ತೀವ್ರವಾಗಿ ಖಂಡಿಸಿದ್ದಾರೆ.


ಇಂದು (ನ.6) ಕಾಸರಗೋಡು ಸಮೀಪದ ಎಡನೀರು ಮಠಕ್ಕೆ ತೆರಳಿ ಶ್ರೀಗಳನ್ನು ಭೇಟಿ ಮಾಡಿದ ಅವರು, ಶ್ರೀಗಳ ಕುಶಲೋಪರಿ ವಿಚಾರಿಸಿ ಅವರ ಆಶೀರ್ವಾದ ಪಡೆದುಕೊಂಡರು.


ಬಳಿಕ ಮಾಧ್ಯಮಕ್ಕೆ ಹೇಳಿಕೆ ನೀಡಿದ ಅವರು, ಕೇರಳದ ಕಮ್ಯುನಿಸ್ಟ್ ಸರಕಾರದ ವೋಟ್ ಬ್ಯಾಂಕ್ ರಾಜಕಾರಣ ಮತ್ತು ದುರಾಡಳಿತದ ಪರಿಣಾಮ ರಾಜ್ಯದಲ್ಲಿ ಇಂತಹ ದುಷ್ಕೃತ್ಯಗಳು ಪದೇ ಪದೇ ಸಂಭವಿಸುತ್ತಿವೆ. ಕೇರಳ ಸರ್ಕಾರ ಸ್ವಯಂ ಪ್ರೇರಿತ ಕೇಸು ದಾಖಲಿಸಿ ಆರೋಪಿಗಳನ್ನು ಬಂಧಿಸಬೇಕಿತ್ತು. ಆದರೆ ಘಟನೆ ನಡೆದು ಎರಡು ದಿನವಾದ್ರೂ ಆರೋಪಿಗಳ ಬಂಧನ ಆಗಿಲ್ಲ. ಮತಬ್ಯಾಂಕ್ ಹಿಂದೆ ಬಿದ್ದಿರುವ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಈ ಘಟನೆಯನ್ನು ಗಂಭೀರವಾಗಿ ಪರಿಗಣಿಸಿಲ್ಲ. ಕೇರಳದ ಗೃಹ ಸಚಿವರು ಕೂಡ ನಿರ್ಲಕ್ಷ್ಯ ವಹಿಇಸಿದ್ದು ಘಟನೆಯ ತನಿಖೆಗೆ ಆದೇಶ ನೀಡಿಲ್ಲ ಎಂದು ವಾಗ್ದಾಳಿ ನಡೆಸಿದರು.


ಸರಕಾರದ ಧೋರಣೆ ಹೀಗೆಯೇ ಮುಂದುವರಿದಲ್ಲಿ ಮುಂದಿನ ದಿನಗಳಲ್ಲಿ ಕೇರಳದಲ್ಲಿ ಮತ್ತಷ್ಟು ಇಂತಹ ಘಟನೆಗಳು ನಡೆಯಬಹುದು ಎನ್ನುವ ಭಯ ಹಿಂದೂ ಸಮಾಜಕ್ಕೆ ಶುರುವಾಗಿದೆ. ಇಂತಹ ಘಟನೆಗಳ ಹಿಂದೆ ಕೇರಳದ ಅನ್ಯಕೋಮಿನ ಮತಾಂಧ ಶಕ್ತಿಗಳ ಕೈವಾಡವಿದ್ದು, ಶಾಂತಿ ಸುವ್ಯವಸ್ಥೆ ಕಾಪಾಡುವಲ್ಲಿ ಪಿಣರಾಯಿ ಸರಕಾರ ಎಡವಿದೆ ಎಂದು ನಳಿನ್ ಕುಮಾರ್ ಕಟೀಲ್ ಹೇಳಿದರು.


ಧಾರ್ಮಿಕ ಕಾರ್ಯಕ್ರಮದ ನಿಮಿತ್ತ ಎಡನೀರು ಶ್ರೀಗಳು ತೆರಳುವಾಗಲೇ ಕಾರನ್ನು ಅಡ್ಡಗಟ್ಟಿ ಗಲಾಟೆ ಮಾಡಿದ್ದ ಗುಂಪೊಂದು, ಶ್ರೀಗಳು ವಾಪಸ್ ಬರುವಾಗ ಅವರನ್ನು ಕಾರನ್ನು ಹಿಂಬಾಲಿಸಿ ಬಂದು ಕಾರಿನ ಮೇಲೆ ಕಲ್ಲು ತೂರಾಟ ನಡೆಸಿದೆ. ಬೋವಿಕ್ಕಾನ-ಇರಿಯಣ್ಣಿ ಮಧ್ಯೆ ಈ ಘಟನೆ ಸಂಭವಿಸಿದೆ. ಈ ಸಂದರ್ಭದಲ್ಲಿ ಶ್ರೀಗಳು ಯಾವುದೇ ಉದ್ವೇಗಕ್ಕೆ ಒಳಗಾಗದೆ ಶಾಂತ ಚಿತ್ತರಾಗಿ ಕಾರನ್ನು ನಿಲ್ಲಿಸದೆ ಪ್ರಯಾಣ ಮುಂದುವರಿಸಿ ಕ್ಷೇಮವಾಗಿ ಮಠಕ್ಕೆ ತಲುಪಿದ್ದರು.


ಸುಮಾರು 400 ವರ್ಷಗಳ ಇತಿಹಾಸ ಹೊಂದಿರುವ ಕಾಸರಗೋಡು ಜಿಲ್ಲೆಯ ಎಡನೀರು‌ ಮಠಕ್ಕೆ ಅಪಾರ ಶಿಷ್ಯವರ್ಗ ಹಾಗೂ ಭಕ್ತರ ಸಮುದಾಯವಿದೆ. ಸ್ವಾಮೀಜಿಗಳ ಜೊತೆ ಇಡೀ ಹಿಂದೂ ಸಮಾಜ ಇದೆ. ಇಂತಹ ಕೃತ್ಯಗಳು ನಡೆದಾಗ ನಾವು ಕೈ ಕಟ್ಟಿ ಕುಳಿತುಕೊಳ್ಳುವ ಪ್ರಶ್ನೆಯೇ ಇಲ್ಲ ಎಂದು ನಳಿನ್ ಕುಮಾರ್ ಕಟೀಲ್ ಹೇಳಿದರು.


Post a Comment

0 Comments
Post a Comment (0)
To Top