ವ್ಯವಹಾರಿಕ ಜ್ಞಾನದ ತೀವ್ರತೆಯಿಂದ ಸಾಹಿತ್ಯ ಒಲವು ಕ್ಷೀಣಿಸುತ್ತಿದೆ: ಡಾ. ರಾಘವೇಂದ್ರರಾವ್

Upayuktha
0


ಮಂಗಳೂರು: ಪ್ರಸ್ತುತ ಜಗತ್ತು ವ್ಯವಹಾರದ ಸುತ್ತ ಅಲೆಯುತ್ತಿದ್ದು ಸಾಹಿತ್ಯದ ಮೇಲಿನ ಒಲವು ಕಡಿಮೆಯಾಗಿದೆ. ವ್ಯವಹಾರಿಕ ಜ್ಞಾನಕ್ಕೆ ಹೆಚ್ಚಿನ ಒತ್ತು ನೀಡುತ್ತಿದ್ದು ಸಾಹಿತ್ಯದ ಮೇಲಿನ ಒಲವು ಕ್ಷೀಣಿಸುತ್ತಿದೆ. ಯುವ ಜನರಲ್ಲಿ ಸಾಹಿತ್ಯ ಕುರಿತಾದ ಒಲವು ಇರಲೇಬೇಕು ಎಂದು ಪಡುಬಿದ್ರಿ ಪ್ರೌಢಶಾಲಾ ಸಂಸ್ಕೃತ ಉಪನ್ಯಾಸಕ ವಿದ್ವಾನ್ ಡಾ.ರಾಘವೇಂದ್ರ ರಾವ್‌ ತಿಳಿಸಿದರು.


ನಗರದ ವಿವಿ ಕಾಲೇಜಿನ ರವೀಂದ್ರ ಕಲಾಭವನದಲ್ಲಿ ಭಾರತ್‌ ಪೌಂಡೇಶನ್ ಹಾಗೂ ಎಸ್.ವಿ.ಪಿ ಕನ್ನಡ ಅಧ್ಯಯನ ಸಂಸ್ಥೆ ಮಂಗಳೂರು ವಿಶ್ವವಿದ್ಯಾನಿಲಯ ಇವರ ಸಂಯುಕ್ತ ಆಶ್ರಯದಲ್ಲಿ ಮಂಗಳೂರು ಲಿಟ್ಫೆಸ್ಟ್‌ ಪ್ರಯುಕ್ತ ನಡೆದ ಅಂತರ್‌ ಕಾಲೇಜು ರಸಪ್ರಶ್ನೆ ಮತ್ತು ಪುಸ್ತಕ ವಿಮರ್ಶಾ ಸ್ಪರ್ಧೆ ಕಾರ್ಯಕ್ರಮದಲ್ಲಿ ವಿಶೇಷ ಉಪನ್ಯಾಸ ನೀಡಿ ಮಾತನಾಡಿದ ಇವರು ಸಾಹಿತ್ಯವು ಸಾಮಾನ್ಯ ವಿಚಾರದ ಮೂಲಕ ಅಪೂರ್ವ ಚಿಂತನೆಯನ್ನು ಹುಟ್ಟಿಸುತ್ತದೆ. ಇದು ಮಾನವೀಯ ಧರ್ಮವನ್ನು ಜಗತ್ತಿಗೆ ತೋರಿಸಿಕೊಂಡು ಬಂದಿದೆ. ಸಾಹಿತ್ಯ ಸಾಗರವಿದ್ದಂತೆ, ಇವು ಮನಸಿನ ಭಾವ ತರಂಗಗಳನ್ನು ಎಬ್ಬಿಸುವ ಕಾರ್ಯ ಮಾಡುತ್ತವೆ. ಜಗತ್ತಿನಲ್ಲಿಎರಡು ಶ್ರೇಷ್ಠವಾದ ತತ್ವವೆಂದರೆ ಅನ್ನ ಮತ್ತು ಅಕ್ಷರ.  ಯಾವಾಗ ನಾವು ಅಧ್ಯಯನಶೀಲ ಹಾಗೂ ಜ್ಞಾನಶೀಲರಾಗುತ್ತೇವೆಯೋ ಆಗ ಹೆಸರು ಶಾಶ್ವತವಾಗಿ ಉಳಿಯುತ್ತದೆ. ಆತ್ಮವಿಶ್ವಾಸ ಇದ್ದಾಗ ಅಸಾಧ್ಯವಾದುದು ಯಾವುದು ಇಲ್ಲ. ಪ್ರಯತ್ನ ಇದ್ದರೆ ಎಲ್ಲವೂ ಸಾಧ್ಯ ಎಂದು ಹೇಳಿದರು.


ಭಾರತ್‌ ಪೌಂಡೇಶನ್ ವಿಶ್ವಸ್ಥ ಸುನಿಲ್‌ ಕುಲಕರ್ಣಿ ಮಾತನಾಡಿ, ನಮ್ಮ ನಾಡಿನ ಸೊಗಡಿಗೆ ಶಕ್ತಿ ದೊರಕಿಸುವುದು ಮತ್ತು ಸಾಹಿತ್ಯಭರಿತ ವಿಚಾರ ಧಾರೆಯನ್ನು ಮುಂದಿನ ಪೀಳಿಗೆಗೆ ಸಾಗಿಸುವುದು ಈ ಕಾರ್ಯಕ್ರಮದ ಉದ್ದೇಶ. ಸಾಹಿತ್ಯ ಕ್ಷೇತ್ರದಲ್ಲಿ ಕೃಷಿ ಮಾಡುವ ಮುಖೇನ ದೇಶ ವಿದೇಶಗಳಲ್ಲಿ ಸಾಧನೆಗೈದವರು ನಮಗೆಲ್ಲ ಪ್ರೇರಣೆಯಾಗಿದ್ದಾರೆ. ಪ್ರತಿಭೆಗಳ ವೇದಿಕೆಯಾಗಿ ಯುವ ಮನಸ್ಸುಗಳಿಗೆ ಯಶಸ್ಸಿನತ್ತ ಹೆಜ್ಜೆಇಡಲು ಸಂಸ್ಥೆಯು ಅವಕಾಶ ನೀಡುತ್ತದೆ. ಸಾಹಿತ್ಯವು ಬಹುಮಾನಕ್ಕೆ ಸೀಮಿತವಾಗಿರದೆ ಯುವ ಜನಾಂಗದಲ್ಲಿ ಸಾಹಿತ್ಯ ಅಭಿರುಚಿ ಹೆಚ್ಚಿಸಲು ಪ್ರೇರಣೆಯಾಗಬೇಕು ಎಂದು ತಿಳಿಸಿದರು.


ಜಗತ್ತಿನಲ್ಲಿ ಶ್ರೇಷ್ಠವಾದದ್ದು ಭಾಷೆ. ಜಗತ್ತನ್ನು ಹಲವಾರು ಭಾಷೆಗಳು ಆವರಿಸಿಕೊಂಡಿವೆ. ಮನುಷ್ಯ ಇದುವರೆಗೆ ವಿವಿಧ ಭಾಷೆಗಳಲ್ಲಿ ಅದೆಷ್ಟೋ ಸಾಧನೆ, ಸಂಶೋಧನೆಗಳನ್ನು ಮಾಡಿದ್ದಾನೆ. ಭಾಷೆ ಬೆಳೆದರೆ ನಾವು ಬೆಳೆದಂತೆ ಎಂದು ವಿಶ್ರಾಂತ ಕನ್ನಡ ಪ್ರಾಧ್ಯಾಪಕವಿ.ವಿ ಕುಳಮರ್ವ ತಿಳಿಸಿದರು.


ಅಧ್ಯಕ್ಷತೆಯನ್ನು ವಹಿಸಿಕೊಂಡಿದ್ದ ಮಂಗಳೂರಿನ ವಿಶ್ವವಿದ್ಯಾನಿಲಯ ಕಾಲೇಜಿನ ಪ್ರಾಂಶುಪಾಲ ಪ್ರೊ.ಗಣಪತಿ ಗೌಡ ಮಾತನಾಡಿ ಜ್ಞಾನಕ್ಕಾಗಿ ಇಂಟರ್‌ನೆಟ್ ಅವಲಂಬಿಸಿದ ಯುವ ಪೀಳಿಗೆ ನಮ್ಮದು. ಜ್ಞಾನವೃದ್ಧಿಸಿಕೊಳ್ಳಲು ಇಂತಹ ಸ್ಪರ್ಧೆಗಳು ಅಗತ್ಯ. ಪುಸ್ತಕ ಕುರಿತು ಅಧ್ಯಯನ ನಡೆಸಿ ಪರಿಪೂರ್ಣತೆ ಪಡೆದಾಗ ಮಾತ್ರ ವಿಮರ್ಶೆ ಪೂರ್ಣ ಎನಿಸಿಕೊಳ್ಳುತ್ತದೆ ಎಂದು ಹೇಳಿದರು.


ಬೆಸೆಂಟ್‌ ಕಾಲೇಜು ಕನ್ನಡ ಉಪನ್ಯಾಸಕಿ ಡಾ. ಮೀನಾಕ್ಷಿ ರಾಮಚಂದ್ರ, ವಿವಿಧ ವಿಭಾಗದ ಉಪನ್ಯಾಸಕರು ಹಾಗೂ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.




 ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top