ಯಕ್ಷಾಂಗಣ ನುಡಿಹಬ್ಬದಲ್ಲಿ ಕುಂಬಳೆ ಶ್ರೀಧರ ಸಂಸ್ಮರಣೆ- ಸಾಧಕರಿಗೆ ಸನ್ಮಾನ

Chandrashekhara Kulamarva
0

ಯಕ್ಷಗಾನದಲ್ಲಿ ಮಕ್ಕಳನ್ನು ತೊಡಗಿಸಿ: ಸಿಎ ಶಾಂತರಾಮಶೆಟ್ಟಿ




ಮಂಗಳೂರು: 'ಯಕ್ಷಗಾನದಲ್ಲಿ ನಮ್ಮ ಜೀವನ ಮೌಲ್ಯದ ಪಾಠವಿದೆ. ಆದ್ದರಿಂದ ಎಳೆಯ ಜನಾಂಗ ಅದರತ್ತ ಹೆಚ್ಚು ಆಸಕ್ತರಾಗುವ ಅಗತ್ಯವಿದೆ. ಕಲಿಯುವ ಮಕ್ಕಳನ್ನು ಶಾಲಾ ಹಂತದಲ್ಲೇ ಯಕ್ಷಗಾನದಲ್ಲಿ ತೊಡಗಿಸಲು ಪೋಷಕರು ಮುಂದಾಗಬೇಕು' ಎಂದು ಭಾರತೀಯ ರೆಡ್ ಕ್ರಾಸ್ ಅಧ್ಯಕ್ಷ ಸಿಎ ಶಾಂತರಾಮ ಶೆಟ್ಟಿ ಹೇಳಿದರು.


ಯಕ್ಷಾಂಗಣ ಮಂಗಳೂರು, ಯಕ್ಷಗಾನ ಚಿಂತನ - ಮಂಥನ ಮತ್ತು ಪ್ರದರ್ಶನ ವೇದಿಕೆ ಹಾಗೂ ಕರ್ನಾಟಕ ಯಕ್ಷಭಾರತಿ ಪುತ್ತೂರು ಇವರು ಕದ್ರಿ ಶ್ರೀ ಮಂಜುನಾಥ ದೇವಾಲಯದ ರಾಜಾಂಗಣದಲ್ಲಿ ಏರ್ಪಡಿಸಿದ್ದ ಕರ್ನಾಟಕ ರಾಜ್ಯೋತ್ಸವ ಕಲಾ ಸಂಭ್ರಮ 12ನೇ ವರ್ಷದ ನುಡಿಹಬ್ಬ 'ಯಕ್ಷಗಾನ ತಾಳಮದ್ದಳೆ ಸಪ್ತಾಹ- 2024' ಅಂಗವಾಗಿ 4ನೇ ದಿನದ ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿದ ಬಳಿಕ ಅವರು ಮಾತನಾಡಿದರು. ಮಂಗಳೂರಿನ ಶ್ರೀ ಕಾಳಿಕಾಂಬಾ ವಿನಾಯಕ ದೇವಸ್ಥಾನದ ಮಾಜಿ ಮೊಕ್ತೇಸರ ಹಾಗೂ ಕೌಶಲ್ಯ ಕನ್‌ಸ್ಟ್ರಕ್ಷನ್ಸ್ ನ ಜಿ. ಸುಂದರ ಆಚಾರ್ಯ ಬೆಳುವಾಯಿ ಮುಖ್ಯ ಅತಿಥಿಯಾಗಿದ್ದರು.


ಕುಂಬಳೆ ಯಕ್ಷಗಾನದ ಕಣ್ಣು: ಎಂ.ನಾ.

ಕಾರ್ಯಕ್ರಮದಲ್ಲಿ ಇತ್ತೀಚೆಗೆ ಅಗಲಿದ ಯಕ್ಷಗಾನದ ಹಿರಿಯ ಕಲಾವಿದ ಕುಂಬ್ಳೆ ಶ್ರೀಧರ ರಾವ್ ಅವರ ಸಂಸ್ಮರಣೆ ಜರಗಿತು. ಸಂಸ್ಮರಣಾ ಭಾಷಣ ಮಾಡಿದ 'ಕಣಿಪುರ' ಮಾಸಪತ್ರಿಕೆ ಸಂಪಾದಕ ಎಂ.ನಾ.ಚಂಬಲ್ತಿಮಾರ್ ಮಾತನಾಡಿ 'ತೆಂಕುತಿಟ್ಟಿನ ಮೂಲನೆಲವಾದ ಕುಂಬ್ಳೆಯ ಹೆಸರನ್ನು ವರ್ತಮಾನದಲ್ಲಿ ಬೆಳಗಿಸಿ, ಮೆರೆಸಿದವರು ಕುಂಬ್ಳೆ ಸುಂದರ ರಾವ್ ಮತ್ತು ಶ್ರೀಧರ ರಾಯರು. ಅವರಿಬ್ಬರೂ ಅಗಲುವ ಮೂಲಕ ಕುಂಬ್ಳೆಯ ಹೆಸರನ್ನು ಮೆರೆಸಲು ಮತ್ತು ಮೆರೆಯಲು ಕುಂಬ್ಳೆಯಲ್ಲಿ ಕಲಾವಿದರೇ ಇಲ್ಲ! ಈ ಮೂಲಕ ಕುಂಬ್ಳೆಯ ಯಕ್ಷಗಾನದ ಕಣ್ಣುಗಳೆರಡೂ ಮಂಜಾಗಿವೆ' ಎಂದರು.


'ದುರಂತ ಮತ್ತು ವಿಷಾದ ಎಂದರೆ ವರ್ತಮಾನದ ಕಲಾಭಿಮಾನಿಗಳಿಗೆ ಪಾರ್ತಿಸುಬ್ಬನೇ ಕುಂಬ್ಳೆಯವನೆಂದು ಗೊತ್ತಿಲ್ಲ. ಕುಂಬ್ಳೆ ಸೀಮೆಯೆಂದರೆ ಯಕ್ಷಗಾನದ ತವರು. ಅಲ್ಲಿನ ಕಲಾವಿದರನ್ನು ಈಗೀಗ ಕೇರಳದ ಕಲಾವಿದರೆಂದು ಗುರುತಿಸುವುದು ವಿಷಾದನೀಯ. ತುಳುವರು, ಕನ್ನಡಿಗರು ತಮ್ಮದೇ ನಾಡಿನ ಸಾಂಸ್ಕೃತಿಕ ಸೌರಭವನ್ನು ಮರೆಯುವುದು ವಿಷಾದಕರ' ಎಂದು ಎಂ.ನಾ.ನುಡಿದರು.


ವಾಸುದೇವ ಕೊಟ್ಟಾರಿ ಸಮ್ಮಾನ:

ಸಮಾರಂಭದಲ್ಲಿ ಯಕ್ಷಾಂಗಣದ ಹಿರಿಯ ಸದಸ್ಯ, ಧಾರ್ಮಿಕ ಮುಂದಾಳು  ಅಳಪೆ - ಕರ್ಮಾರ್ ಸತ್ಸಂಗ ಸಮಿತಿ ಸಂಚಾಲಕ ವಾಸುದೇವ ಆರ್. ಕೊಟ್ಟಾರಿ ಅವರನ್ನು ಯಕ್ಷಾಂಗಣದ ವತಿಯಿಂದ ಸನ್ಮಾನವಿತ್ತು ಗೌರವಿಸಲಾಯಿತು. ಯಕ್ಷಾಂಗಣದ ಕಾರ್ಯಾಧ್ಯಕ್ಷ ಪ್ರೊ. ಭಾಸ್ಕರ ರೈ ಕುಕ್ಕುವಳ್ಳಿ ತಮ್ಮ ಪ್ರಾಸ್ತಾವಿಕ ಮಾತುಗಳಲ್ಲಿ ಅವರನ್ನು ಅಭಿನಂದಿಸಿದರು.       


ಹರಿದಾಸ, ನ್ಯಾಯವಾದಿ ಮಹಾಬಲ ಶೆಟ್ಟಿ ಕೂಡ್ಲು, ಭಾರತೀಯ ರಿಸರ್ವ್ ಬ್ಯಾಂಕಿನ ನಿವೃತ್ತ ಮಹಾ ಪ್ರಬಂಧಕ ರಾಜಾರಾಮ್ ಶೆಟ್ಟಿ, ಮನವಳಿಕೆ ಗುತ್ತು; ಪದಾಧಿಕಾರಿಗಳಾದ  ಎಂ. ಸುಂದರ ಶೆಟ್ಟಿ ಬೆಟ್ಟಂಪಾಡಿ, ರವೀಂದ್ರ ರೈ ಕಲ್ಲಿಮಾರು, ತೋನ್ಸೆ ಪುಷ್ಕಳ ಕುಮಾರ್, ಕರುಣಾಕರ ಶೆಟ್ಟಿ ಪಣಿಯೂರು, ಲಕ್ಷ್ಮೀನಾರಾಯಣ ರೈ ಹರೇಕಳ, ನಿವೇದಿತಾ ಎನ್. ಶೆಟ್ಟಿ ಬೆಳ್ಳಿಪ್ಪಾಡಿ, ಸುಮಾ ಪ್ರಸಾದ್ ವೇದಿಕೆಯಲ್ಲಿದ್ದರು.


'ತ್ರಿಶಂಕು ಸ್ವರ್ಗ' ತಾಳಮದ್ದಳೆ:

ಬಳಿಕ ವಾಣೀವಿಲಾಸ ಯಕ್ಷಬಳಗ ಕಟೀಲು ಇವರಿಂದ 'ತ್ರಿಶಂಕು ಸ್ವರ್ಗ' ಯಕ್ಷಗಾನ ತಾಳಮದ್ದಳೆ ನಡೆಯಿತು. ಭಾಗವತರಾಗಿ ರವಿಕೃಷ್ಣ ದಂಬೆ, ಹಿಮ್ಮೇಳದಲ್ಲಿ ಮಣಿಮುಂಡ ಸುಬ್ರಹ್ಮಣ್ಯ ಶಾಸ್ತ್ರಿ, ರಾಮ ಹೊಳ್ಳ ಭಾಗವಹಿಸಿದರು. ಸರ್ಪಂಗಳ ಈಶ್ವರ ಭಟ್, ವಿನಯಾಚಾರ್ ಹೊಸಬೆಟ್ಟು, ಪಶುಪತಿ ಶಾಸ್ತ್ರಿ ಶಿರಂಕಲ್ಲು, ಉಮೇಶ ನೀಲಾವರ ಅರ್ಥಧಾರಿಗಳಾಗಿದ್ದರು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

إرسال تعليق

0 تعليقات
إرسال تعليق (0)
To Top