ತ್ರೋ ಬಾಲ್‌ನಲ್ಲಿ ರಾಷ್ಟ್ರ ಮಟ್ಟದಲ್ಲಿ ಸಾಧನೆಗೈದ ಕೃತಿ

Upayuktha
0


ಸಾಧನೆಯ ಹಾದಿಗೆ ಪ್ರಯತ್ನಗಳೇ ಸೋಪಾನ. ಸಾಧಿಸುತ್ತೇನೆ ಎಂಬ ಛಲವಿದ್ದರೆ ಪ್ರಯತ್ನಗಳಿಗೆ ಸೋಲಿಲ್ಲ, ಎಂಬ ಮಾತಿನಂತೆ ತನ್ನ ಸಾಧನೆಯ ಹಾದಿಯಲ್ಲಿ ಪ್ರಯತ್ನಗಳನ್ನೇ ಮೆಟ್ಟಿಲಾಗಿರಿಸಿ ಥ್ರೋ ಬಾಲ್ ನಲ್ಲಿ ರಾಷ್ಟ್ರಮಟ್ಟದಲ್ಲಿ ಸಾಧನೆಗೈದ ಕ್ರೀಡಾಪಟು ಕೃತಿ. ಟಿ. ಇವರು ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ಬಡಗನ್ನೂರು ಗ್ರಾಮದ ವಿಠಲ ನಾಯ್ಕ್ ಮತ್ತು ಗೀತಾ ಕೆ ದಂಪತಿಗಳ ಪುತ್ರಿ. ತನ್ನ ಪ್ರಾಥಮಿಕ ಶಿಕ್ಷಣವನ್ನು ಶ್ರೀ ಕೃಷ್ಣ ಹಿರಿಯ ಪ್ರಾಥಮಿಕ ಶಾಲೆ ಪಟ್ಟೆ, ಪ್ರೌಢ ಶಿಕ್ಷಣವನ್ನು ಪ್ರತಿಭಾ ಪ್ರೌಢ ಶಾಲೆ ಪಟ್ಟೆ ಹಾಗೂ ಪ್ರಸ್ತುತ ಪದವಿಪೂರ್ವ ಶಿಕ್ಷಣವನ್ನು ಸಂತ ಫಿಲೋಮಿನ ಕಾಲೇಜು ಪುತ್ತೂರು ಇಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ.


ಬಾಲ್ಯದಿಂದಲೇ ಕ್ರೀಡೆಯಲ್ಲಿ ಆಸಕ್ತಿ. ಮುಂದೆ ಗುರಿ ಇರಬೇಕು ಹಿಂದೆ ಗುರು ಇರಬೇಕು ಎಂಬ ಮಾತಿನಂತೆ ಪ್ರಾಥಮಿಕ ಶಾಲೆಯ ದೈಹಿಕ ಶಿಕ್ಷಕರಾದ ಮೋನಪ್ಪ ಎಂ. ಇವರ ತರಬೇತಿ ಮತ್ತು ಪ್ರೋತ್ಸಾಹದಿಂದ ಕಿರಿಯ ವಯಸ್ಸಿನಲ್ಲೆ ಶಿಕ್ಷಣದ ಜೊತೆಗೆ ಕ್ರೀಡಾಸಕ್ತಿಯನ್ನು ಬೆಳೆಸಿಕೊಂಡರು. ಆರಂಭದಲ್ಲಿ ಅತ್ಲೇಟಿಕ್ ಕ್ರೀಡೆಯ ಮೂಲಕ ಕ್ರೀಡಾ ಕ್ಷೇತ್ರಕ್ಕೆ ಹೆಜ್ಜೆ ಇಟ್ಟ ಇವರು ಮುಂದೆ ತ್ರೋ ಬಾಲ್ ಆಟಗಾರ್ತಿಯಾಗಿ ಗುರುತಿಸಿಕೊಂಡರು.


ಕ್ರೀಡೆಯು ಬದುಕಿನ  ಗುರಿಯ ಮಾರ್ಗದರ್ಶನ ಎಂದು ಸ್ವೀಕರಿಸಿ ತ್ರೋಬಾಲ್ ಕ್ರೀಡೆಯನ್ನು ಆಯ್ಕೆಯಾಗಿಟ್ಟುಕೊಂಡು ತನ್ನ ಕ್ರೀಡಾ ಸಾಧನೆಯ ಪಯಣವನ್ನು ಮುಂದುವರೆಸಿದರು. ಮಾತ್ರವಲ್ಲದೇ ರಾಷ್ಟ ಮಟ್ಟದಲ್ಲಿ ಚಿನ್ನದ ಪದಕ ಗಳಿಸಿದ ಹೆಗ್ಗಳಿಕೆ ಇವರದು, ಇವರ ಈ ಸಾಧನೆಗೆ ಉತ್ತಮ ತರಬೇತಿ ನೀಡಿ ಪ್ರೋತ್ಸಾಹ ನೀಡಿದವರು ಅಂತಾರಾಷ್ಟ್ರೀಯ ಮಟ್ಟದ ಕ್ರೀಡಾಪಟು ಪೂರ್ಣಿಮಾ. ಇವರ ಅತ್ಯುತ್ತಮ ತರಬೇತಿಯೊಂದಿಗೆ ರಾಷ್ಟ್ರ ಮಟ್ಟದ ತ್ರೋ ಬಾಲ್ ನಲ್ಲಿ ಭಾಗವಹಿಸಲು ಅವಕಾಶ ನೀಡಿತು ಮಾತ್ರವಲ್ಲದೇ ಚಿನ್ನದ ಪದಕ ಗಳಿಸಿದ ಇವರು ಮುಂದೆ ತಾಲೂಕು, ಜಿಲ್ಲೆ, ರಾಜ್ಯ, ರಾಷ್ಟ ಮಟ್ಟದಲ್ಲಿ ಭಾಗವಹಿಸಿದ ಹೆಮ್ಮೆಯ ಆಟಗಾರ್ತಿಯೂ ಹೌದು.


ಕೊರೋನ ಸಂದರ್ಭದಲ್ಲಿ ಕ್ರೀಡಾ ಚಟುವಟಿಕೆಗೆ ಅಲ್ಪ ಕಾಲ ಅಂತರವಿದ್ದರೂ ಪದವಿ ಪೂರ್ವ ಕಾಲೇಜಿನಲ್ಲಿ ಕ್ರೀಡೆಗೆ ಸಿಕ್ಕ ಪ್ರೋತ್ಸಾಹ ಅಪಾರ. ತರಗತಿಯ ಬಿಡುವಿನ ಸಮಯದಲ್ಲಿ ಮೈದಾನದಲ್ಲೇ ನಿರಂತರವಾಗಿ ಅಭ್ಯಾಸ ಮಾಡುತ್ತಿದ್ದ ಅವರ ಪ್ರಯತ್ನಗಳೇ ಅವರ ಸಾಧನೆಯ ಯಶಸ್ಸಿನ ಮೆಟ್ಟಿಲು. ಸಾಧಿಸುವವನಿಗೆ ಪ್ರೋತ್ಸಾಹ ಅತ್ಯಂತ ಮುಖ್ಯ ವಾದುದು ಅಂತೆಯೇ ಸಂತ ಫಿಲೋಮೀನ ಕಾಲೇಜಿನ ದೈಹಿಕ ಶಿಕ್ಷಕರಾದ ರಾಜೇಶ್  ಮೂಲ್ಯ ರವರ ಪ್ರೋತ್ಸಾಹ ಮತ್ತು ತರಬೇತಿಯಿಂದ ಇವರು ತ್ರೋ ಬಾಲ್ ಕ್ರೀಡೆಯಲ್ಲಿ ತನ್ನನ್ನು ತಾನು ಸಕ್ರಿಯವಾಗಿ ತೊಡಗಿಸಿಕೊಂಡು ಸಾಧನೆಯತ್ತ ಮುನ್ನುಗುತ್ತಿರುವ ಕ್ರೀಡಾ ಪಟು.



ಸಾಧನೆಗೆ ಸಂದ ಪ್ರಶಸ್ತಿಗಳು

2022 ಅಕ್ಟೋಬರ್ 04 ರಂದು ಕೊಂಬೆಟ್ಟು ಪುತ್ತೂರು ಇಲ್ಲಿ ನಡೆದ ಪುತ್ತೂರು ತಾಲೂಕು ಮಟ್ಟದ ದಸರಾ ಕ್ರೀಡಾಕೂಟದಲ್ಲಿ ಚಿನ್ನದ ಪದಕ.


2022 ಅಕ್ಟೋಬರ್ 13 ರಿಂದ 15 ರವರೆಗೆ ಗೋವಾದಲ್ಲಿ ನಡೆದ ಯೂತ್ & ಸ್ಪೋರ್ಟ್ಸ್ ಪ್ರಮೋಷನ್ ಅಸೋಸಿಯೇಷನ್ ಆಫ್ ಇಂಡಿಯಾ ಆಯೋಜಿಸಿದ ಥ್ರೋ ಬಾಲ್ ಪಂದ್ಯಾಟದಲ್ಲಿ ಕರ್ನಾಟಕವನ್ನು ಪ್ರತಿನಿಧಿಸಿ ಚಿನ್ನದ ಪದಕ.


2023 ಅಕ್ಟೊಬರ್ 30 ರಿಂದ ನವೆಂಬರ್ 04 ರವರೆಗೆ ಮಂಗಳೂರು ಕ್ರೀಡಾಂಗಣ ಇಲ್ಲಿ ನಡೆದ ದಕ್ಷಿಣ ಕನ್ನಡ ಜಿಲ್ಲಾ ಮಟ್ಟದ ದಸರಾ ಕ್ರೀಡಾಕೂಟದಲ್ಲಿ ಚಿನ್ನದ ಪದಕ.


2023 ಜನವರಿಯಲ್ಲಿ ಸುದಾನ ರೆಸಿಡೆನ್ಷಿಯಲ್ ಸ್ಕೂಲ್ ಪುತ್ತೂರು ಇಲ್ಲಿ ನಡೆದ ಜಿಲ್ಲಾ ಮಟ್ಟದ ವಾಲಿಬಾಲ್ ಚಾಂಪಿಯನ್ಶಿಪ್ ಇದರಲ್ಲಿ ದ್ವಿತೀಯ ಸ್ಥಾನ.


2023ರಲ್ಲಿ ಪುತ್ತೂರು ತಾಲೂಕು ಮಟ್ಟದ ಪದವಿ ಪೂರ್ವ ವಿದ್ಯಾರ್ಥಿಗಳ ಕ್ರೀಡಾಕೂಟದಲ್ಲಿ 800 ಓಟದಲ್ಲಿ ಕಂಚಿನ ಪದಕ.

4×100 ರಿಲೇಯಲ್ಲಿ ಚಿನ್ನದ ಪದಕ.


2023 ನವೆಂಬರ್ 02 ರಿಂದ 04 ರವರೆಗೆ ಮಂಗಳೂರಿನಲ್ಲಿ ನಡೆದ ಮೈಸೂರು ವಿಭಾಗ ಮಟ್ಟದ ದಸರಾ ಕ್ರೀಡಾಕೂಟ - 2023 ಇದರಲ್ಲಿ ಚಿನ್ನದ ಪದಕ.


ಅಕ್ಟೋಬರ್ 11 ರಿಂದ 14 ರವರೆಗೆ ಚಾಮುಂಡಿ ವಿಹಾರ ಕ್ರೀಡಾಂಗಣ ಮೈಸೂರು ಇಲ್ಲಿ ನಡೆದ ರಾಜ್ಯ ಮಟ್ಟದ ದಸರಾ ಕ್ರೀಡಾಕೂಟ ಸಿ ಎಂ ಕಪ್ 2023 ಇದರಲ್ಲಿ ಚಿನ್ನದ ಪದಕ. ಪಡೆದುಕೊಂಡಿದ್ದಾರೆ.

 ಇವರ ಈ ಸಾಧನೆಯೂ ಇನ್ನಷ್ಟು ಎತ್ತರಕ್ಕೇರಲಿ ಸಾಗಲಿ ಎಂಬ  ಆಶಯ ನಮ್ಮದು.

- ವಿಜಯಲಕ್ಷ್ಮಿ. ಬಿ ಕೆಯ್ಯೂರು

ಪತ್ರಿಕೋದ್ಯಮ ವಿದ್ಯಾರ್ಥಿನಿ

ವಿವೇಕಾನಂದ ಮಹಾವಿದ್ಯಾಲಯ ಪುತ್ತೂರು


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top