ಮಂಗಳೂರು: ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಮಂಗಳೂರು ತಾಲೂಕು ಘಟಕದ ವತಿಯಿಂದ ನಮ್ಮ ಸಾಧಕರೊಂದಿಗೆ ಸಂಭ್ರಮ ಎಂಬ ಆಪ್ತ ಕಾರ್ಯಕ್ರಮ ನಗರದ ಶಾರದಾ ವಿದ್ಯಾಲಯದಲ್ಲಿ ಜರುಗಿತು.
ಘಟಕದ ಸದಸ್ಯ , ಕನ್ನಡ ತುಳು ಸಾಹಿತಿ , ಪೊಳಲಿ ಶೀನಪ್ಪ ಹೆಗ್ಡೆ ಪ್ರಶಸ್ತಿ ಪುರಸ್ಕೃತ ಬೆನೆಟ್ ಜಿ. ಅಮ್ಮನ್ನ ಮತ್ತು ಘಟಕದ ಗೌರವ ಕಾರ್ಯದರ್ಶಿ , ಕ ಸಾ ಪ ಕೇಂದ್ರ ಮಾರ್ಗದರ್ಶಿ ಸಮಿತಿಯ ಪದಾಧಿಕಾರಿ, ರಾಷ್ಟ್ರಪತಿ ವಿಶಿಷ್ಟ ಸೇವಾ ಪದಕ ಪುರಸ್ಕೃತ ( ಗೃಹ ರಕ್ಷಕ ದಳ ಸಮಾದೇಷ್ಟರಾಗಿ ಸೇವೆ ) ಅಲ್ಲದೆ ಇದೀಗ ಕನ್ನಡ ಸಾಹಿತ್ಯ ಪರಿಷತ್ತಿನ ವಿದೇಶೀ ರಾಯಭಾರಿಯಾಗಿ ನಿಯೋಜಿತರಾಗಿರುವ ಡಾ. ಮುರಲೀಮೋಹನ್ ಚೂಂತಾರು ಅವರನ್ನು ಆತ್ಮೀಯವಾಗಿ ಅಭಿನಂದಿಸಿ ಸಮ್ಮಾನಿಸಲಾಯಿತು. ಚೂಂತಾರು ಅವರ, ಕ ಸಾ ಪ ಅಧ್ಯಕ್ಷ ನಾಡೋಜ ಮಹೇಶ್ ಜೋಶಿಯವರೊಂದಿಗಿನ ವಿದೇಶ ಪ್ರವಾಸ, ಅಲ್ಲಿನ ಕನ್ನಡ ಸಂಘಗಳಿಗೆ ಭೇಟಿ ಮತ್ತು ರಾಜ್ಯೋತ್ಸವ ಕಾರ್ಯಕ್ರಮಗಳಿಗೆ ಶುಭ ಕೋರಲಾಯಿತು.
ಈ ಸಂದರ್ಭದಲ್ಲಿ ಇಂಚರ ತಂಡದ ಗಾಯಕಿಯರಾದ ರತ್ನಾವತಿ ಜೆ. ಬೈಕಾಡಿ , ಗೀತಾ ಮಲ್ಯ , ಜಯಲಕ್ಷ್ಮೀ ಬಾಲಕೃಷ್ಣ , ಜಯಶ್ರೀ , ಉಮಾ ಫಾಲಾಕ್ಷಪ್ಪ ಸಮೂಹ ಗಾಯನದಲ್ಲಿ ಮತ್ತು ಪ್ರತೀಕ್ಷಾ ಭಟ್ ಕೋಂಬ್ರಾಜೆ , ಪುಟಾಣಿ ಸಹಸ್ರ ಕೋಂಬ್ರಾಜೆ , ಮುರಳೀಧರ ಭಾರದ್ವಾಜ್ , ಉಷಾ ಜಿ. ಪ್ರಸಾದ್ ಕನ್ನಡ ಹಾಡುಗಳ ಪ್ರಸ್ತುತಿ ಸಭಾಸದರ ಮುಕ್ತ ಕಂಠದ ಪ್ರಶಂಸೆಗೆ ಪಾತ್ರವಾಯಿತು. ಡಾ. ಶ್ರೀಕೃಷ್ಣ ಭಟ್ ಸುಣ್ಣಂಗುಳಿ ಅವರ ಕಾವ್ಯ ವಾಚನ ನೆರೆದವರ ಮನಸೂರೆಗೊಂಡಿತು.
ಸಂಮಾನಿತರಿಬ್ಬರೂ ಇದು ನಮ್ಮ ಮನೆಯಲ್ಲೇ ದೊರೆತ ಸಂಮಾನ, ಪ್ರೀತಿಯಿಂದ ಸ್ವೀಕರಿಸಿದ್ದೇವೆ, ಪರಿಷತ್ತಿನ ಚಟುವಟಿಕೆಗಳನ್ನು ಇನ್ನಷ್ಟು ವಿಸ್ತರಿಸೋಣ, ಇಂತಹ ಗೀತ ಗಾಯನ ವ್ಯಾಪಕವಾಗಬೇಕಿದೆ ಎಂದು ನುಡಿದರು.
ಘಟಕದ ಅಧ್ಯಕ್ಷ ಮಂಜುನಾಥ ಎಸ್. ರೇವಣ್ಕರ್ ಅಧ್ಯಕ್ಷತೆ ವಹಿಸಿ ಅಭಿನಂದನೆ ನುಡಿಯನ್ನಾಡಿದರು. ಕ ಸಾ ಪ ಜಿಲ್ಲಾ ಸಮಿತಿಯ ಸನತ್ ಕುಮಾರ್ ಜೈನ್, ಘಟಕದ ಸದಸ್ಯ ಬಿ. ಕೆ. ನಾಯ್ಕ್, ರವೀಂದ್ರನಾಥ್, ನಿಜಗುಣ ದೊಡ್ಡಮನಿ, ಅನುಜ್, ಡಾ ರಾಜಶ್ರೀ ಮೋಹನ್ ಹಾಗೂ ಸಾಹಿತ್ಯಾಸಕ್ತರು ಭಾಗವಹಿಸಿದ್ದರು.
ಘಟಕದ ಗೌರವ ಕಾರ್ಯದರ್ಶಿ ಗಣೇಶ್ ಪ್ರಸಾದ್ ಜೀ ಸ್ವಾಗತಿಸಿ ಪ್ರಸ್ತಾವಿಸಿದರು. ಗೌರವ ಕೋಶಾಧಿಕಾರಿ ಎನ್. ಸುಬ್ರಾಯ ಭಟ್ ನಿರೂಪಿಸಿ ವಂದಿಸಿದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ