ಪರಂಪರೆಯಲ್ಲಿ ಅಳಿಯದ ದಾಸ ಶ್ರೇಷ್ಠ ಕನಕದಾಸರು

Upayuktha
0


ದು ಶತಮಾನಗಳ ಹಿಂದೆಯೇ ಒಬ್ಬ ಹರಿದಾಸ ಆಧ್ಯಾತ್ಮಿಕ ಸಂತಕವಿ ಮಾನವನ ಬದುಕಿನಲ್ಲಿ ಏನೆಲ್ಲಾ ಎದುರಿಸಬೇಕಾಗುತ್ತದೆ ಎಂಬುದನ್ನು ಚಿತ್ರಿಸುತ್ತಲೇ ಜೀವನ ಮೌಲ್ಯಗಳನ್ನು ತಿಳಿ ಹೇಳುತ್ತಾ, ಕನ್ನಡ ನಾಡಿನ ಸಾಂಸ್ಕೃತಿ ಪರಂಪರೆಯಲ್ಲಿ ಅಚ್ಚಳಿಯದ ಛಾಪು ಮೂಡಿಸಿದರು. “ಕುಲಕುಲ ಕುಲವೆಂದು ಹೊಡೆದಾಡದಿರಿ ನಿಮ್ಮ ಕುಲದ ನೆಲೆಯೇನಾದರೂ ಬಲ್ಲಿರಾ?” ಎಂದು ವರ್ಗ ತಾರತಮ್ಯದ ವಿರುದ್ಧ ದನಿ ಎತ್ತಿದ ಶ್ರೇಷ್ಠ ಸಮಾಜ ಸುಧಾರಕರು ದಾಸ ಶ್ರೇಷ್ಠ ಕನಕದಾಸರು.


ನಡುಗನ್ನಡ ಸಾಹಿತ್ಯದ ಪ್ರಮುಖ ಕೀರ್ತನೆಕಾರ, ಸಾಮಂತ, ಕವಿ, ಜ್ಞಾನಿ, ದಾರ್ಶನಿಕರಾಗಿ ಅವರು ಸಮಾಜಕ್ಕೆ ನೀಡಿದ ಕೊಡುಗೆ ವರ್ಣಿಸಲಸಾಧ್ಯ. ದೈವಸ್ತುತಿಯೇ ಪ್ರಮುಖವೆನಿಸಿದ ಭಕ್ತಿ ಪರಂಪರೆಯ ಕಾಲದಲ್ಲಿ ಧೃವತಾರೆಯಂತೆ ಅವತರಿಸಿದ ಕನಕದಾಸರು ತಮ್ಮ ವೈಚಾರಿಕ ಮತ್ತು ಪ್ರತಿಭಟನಾ ನೆಲೆಗಟ್ಟಿನಿಂದ ದಾಸಸಾಹಿತ್ಯಕ್ಕೆ, ತನ್ಮೂಲಕ ಕನ್ನಡ ಸಾಹಿತ್ಯಕ್ಕೆ ವೈಚಾರಿಕ ಪ್ರಭೆಯನ್ನು ನೀಡಿದ್ದಾರೆ. 


ಕನಕರು 16ನೇ ಶತಮಾನದ ಪೂರ್ವಾರ್ಧದಲ್ಲಿ ಈಗಿನ ಹಾವೇರಿ ಜಿಲ್ಲೆ, ಶಿಗ್ಗಾಂವಿ ತಾಲ್ಲೂಕಿನ ಬಾಡ ಎಂಬಲ್ಲಿ ಬೀರಪ್ಪನಾಯಕ-ಬಚ್ಚಮ್ಮ ದಂಪತಿಯ ಮಗನಾಗಿ ಜನಿಸಿದರು. ಶ್ರೀ ವೈಷ್ಣವ ಮತಕ್ಕೆ ಶರಣುಹೋದ ದಂಪತಿಗಳು ತಿರುಪತಿ ವೆಂಕಟೇಶ್ವರ ಸ್ವಾಮಿಯನ್ನೇ ತಮ್ಮ ಆರಾಧ್ಯ ದೈವವನ್ನಾಗಿ ಮಾಡಿಕೊಂಡರು. ಅನೇಕ ದಿನಗಳಿಂದ ಕುಲದೀಪಕನಾದ ಮಗ ಬೇಕೆಂದು ಬೇಡಿಕೊಂಡಿದ್ದರ ಫಲವಾಗಿ ಕನಕರು ಜನಿಸಿ, ತಿಮ್ಮಪ್ಪ ಎಂದು ನಾಮಕರಣಗೊಂಡರು. ಬಾಲಕ ತಿಮ್ಮಪ್ಪ ಬಾಲ್ಯದಲ್ಲೇ ಅಕ್ಷರಾಭ್ಯಾಸ, ವ್ಯಾಕರಣಗಳ ಜೊತೆಗೆ ಕತ್ತಿವರಸೆ, ಕುದುರೆ ಸವಾರಿ ಕಲಿತು ಬಂಕಾಪುರ ಪ್ರಾಂತ್ಯಕ್ಕೆ ಡಣ್ಣಾಯಕನಾದ. ವಿಜಯನಗರದ ಅರಸರ ಪರವಾಗಿ ಯುದ್ದವೊಂದರಲ್ಲಿ ಪಾಲ್ಗೊಂಡಿದ್ದಾಗ, ಮಾರಣಾಂತಿಕ ಹೊಡೆತ ಅನುಭವಿಸಿ ಆಶ್ಚರ್ಯಕರ ರೀತಿಯಲ್ಲಿ ಬದುಕುಳಿದರು. ತಂದೆ, ತಾಯಿ, ಬಂಧು, ಬಳಗ, ಅಪಾರ ಸೈನ್ಯ ಸಿರಿ ಸಂಪತ್ತು ಕಳೆದುಕೊಂಡು ಜರ್ಜರಿತನಾಗಿದ್ದ ಕನಕನಿಗೆ ಅಶರೀರವಾಣಿಯೊಂದು ದಾಸನಾಗು ಎಂದು ಹೇಳಿದ ಹಾಗಾಯಿತು. ಈ ಘಟನೆಯಿಂದ ಪರಿವರ್ತನೆಗೊಂಡ ಕನಕ ಸಮಸ್ತ ರಾಜ್ಯವನ್ನೆಲ್ಲಾ ಬಿಟ್ಟು ಶ್ರೀಹರಿಯನ್ನೇ ಸ್ತುತಿಸುತ್ತಾ ತಂಬೂರಿ, ತಾಳವನ್ನು ಹಿಡಿದು ಕನಕದಾಸರಾದರು.


ಕರ್ನಾಟಕದಲ್ಲಿ ಹರಿದಾಸ ಪರಂಪರೆಗೆ ಸುಮಾರು 500 ವರ್ಷಗಳ ಭವ್ಯ ಇತಿಹಾಸವಿದೆ. ಕರ್ನಾಟಕದಲ್ಲಿ 15 ಮತ್ತು 16ನೇ ಶತಮಾನಗಳಲ್ಲಿ ಜನಪ್ರಿಯವಾದ ಭಕ್ತಿ ಪಂಥದ ಮುಖ್ಯ ಹರಿದಾಸರಲ್ಲಿ ಒಬ್ಬರು 'ಕನಕದಾಸ'ರು. ಇವರು ಪುರಂದರದಾಸರ ಸಮಕಾಲಿನವರು, ಅದೇ ರೀತಿ ಸ್ವತಂತ್ರ ಕಾಂತಿವುಳ್ಳವರೂ, ಸಮಾಜ ಸುಧಾರಕರೂ, ವೈಚಾರಿಕ ಮನೋಧರ್ಮದವರಾಗಿದ್ದರು. "ಕನಕ ಪುರಂದರರನ್ನು" ಕನ್ನಡ ಕೀರ್ತನ ಸಾಹಿತ್ಯದ ಅಶ್ವಿನಿ ದೇವತೆಗಳೆಂದು ಬಣ್ಣಿಸಲಾಗಿದೆ. ಕನ್ನಡ ಭಾಷೆಯ ಪ್ರಸಿದ್ಧ ಕವಿಗಳಾದ ಇವರು ಪುರಂದರ ದಾಸರೊಂದಿಗೆ ಕರ್ನಾಟಕ ಸಂಗೀತದ ಮೂಲಭೂತ ಸಿದ್ಧಾಂತಗಳಿಗೆ ಕಾಣಿಕೆಯನ್ನಿತ್ತವರು.


ಪ್ರತಿಯೋರ್ವ ಸಾಧಕನ ಸಾಧನೆಯ ಮೊದಲ ಹಂತವೆಂದರೆ ನಾನು ಎಂಬ ಮಮಕಾರ ಹೋಗಬೇಕು. ಆದರೆ ನಾನು ನನ್ನದು ಎಂಬ ಹಂಬಲ ಸುಮ್ಮನೇ ಅಳಿಯುವುದಿಲ್ಲ. ಪರಮಾತ್ಮನ ದಯೆ ಇರಬೇಕು ಎಂದು ಕನಕರು ತಮ್ಮ ಕೀರ್ತನೆಯಲ್ಲಿ ಅಭಿಪ್ರಾಯಿಸಿದ್ದಾರೆ. ದಾಸರ ಕೀರ್ತನೆಗಳ ವೈಶಿಷ್ಟ್ಯವೆಂದರೆ ಸರಳ ಭಾಷೆಯಲ್ಲಿ ವಿಷಯವನ್ನು ಮನಮುಟ್ಟುವಂತೆ ತಿಳಿಸುವುದು.


ಕನ್ನಡ ಸಾಹಿತ್ಯಕ್ಕೆ ತಮ್ಮದೆ ಕೀರ್ತನೆಗಳ ಮೂಲಕ  ಸಾಹಿತ್ಯದ ವಿವಿಧ ಪ್ರಕಾರಗಳಾದ ಕೀರ್ತನೆಗಳು, ಸುಳಾದಿಗಳು, ಉಗಾಭೋಗಗಳು, ಕನ್ನಡ ಸಾಹಿತ್ಯಕ್ಕೆ ಅರ್ಪಿಸಿರುವುದಲ್ಲದೆ ಸಂಗೀತ ಪ್ರಪಂಚಕ್ಕೆ ತನ್ನದೇ ಆದಂತಹ ಅನರ್ಘ್ಯ ಕೊಡುಗೆಯನ್ನು ಮುಂಡಿಗೆಗಳ ರೂಪದಲ್ಲಿ ನೀಡಿದ್ದಾರೆ. ಸುಮಾರು 816 ಕೀರ್ತನೆಗಳು ಪ್ರಸಿದ್ಧವಾಗಿವೆ. ಮೋಹನತರಂಗಿಣಿ, ನಳಚರಿತ್ರೆ, ರಾಮಧ್ಯಾನ ಚರಿತೆ, ಹರಿಭಕ್ತಿಸಾರ, ನೃಸಿಂಹಸ್ತವ ಇನ್ನು ಹಲವಾರು ಜಗತ್ಪ್ರಸಿದ್ದವಾಗಿವೆ. ಕನಕದಾಸರ ಜೋಳಿಗೆಯಲಿ ಭಕ್ತಿಯ ಸಿಂಚನವಿದೆ, ಅವರ ನುಡಿಮುತ್ತುಗಳಲ್ಲಿ ಮಧುರಾಮೃತವಿದೆ.


"ತಲ್ಲಣಿಸದಿರು ಕಂಡ್ಯ ತಾಳು ಮನವೇ ಎಲ್ಲರನ್ನು ಸಲಹುವನು ಇದಕೆ ಸಂಶಯವಿಲ್ಲ "ಎನ್ನುವಲ್ಲಿ ಶ್ರೀಹರಿಯನ್ನು ಸಾಕ್ಷಾತ್ಕರಿಸಿಕೊಳ್ಳುವ, ಅವನನ್ನು ಎಲ್ಲೆಡೆ ಕಾಣುವ ಅವನ ಸಂಗಸುಖವನ್ನು ಅನುಭವಿಸುವ ಕಾತುರವನ್ನು ಕಾಣುತ್ತೇವೆ. "ಇಲ್ಲಿ ವೃಕ್ಷಕ್ಕೆ ನೀರೆರೆದವರು; ಪಕ್ಷಿಗಳಿಗೆ ಅನ್ನವಿತ್ತವರು ;ಕಪ್ಪೆಗಳಿಗೆ ಆಹಾರ ತಂದಿದ್ದವರು; ಯಾರು ಎಂಬ ಬೆರಗಿನ ಪ್ರಶ್ನೆಗಳಿಗೆ ಹುಟ್ಟಿಸಿದ ದೇವ ತಾ ಹೊಣೆಗಾರ ಎಂಬ ಉತ್ತರವನ್ನು ಕಂಡುಕೊಳ್ಳುತ್ತಾರೆ.

 "ನೆಚ್ಚದಿರ ಸಂಸಾರ ನೆಲೆ ಯಲ್ಲವೀ ಕಾಯ ದಾನ ಧರ್ಮವ ಮಾಡಿ ಸುಖಿಯಾಗು ಮನವೇ", "ತನು ನಿನ್ನದು ಜೀವನ ನಿನ್ನದು" ಎಂಬ ಕೀರ್ತನೆಗಳಲ್ಲಿ ಜೀವನದ ಹೊಯ್ದಾಟ ಎದ್ದು ಕಾಣುತ್ತದೆ."ಎಳ್ಳು ಕಾಳಿನಷ್ಟು ಭಕುತಿ ಎನ್ನೊಳಗಿಲ್ಲ ಮಾಯಾ ಪಾಶದೊಳಗೆ ಸಿಲುಕಿಸುವಂತಹ ಪಂಚೇಂದ್ರಿಯಗಳು" ಇಂತಹ ಕೀರ್ತನೆಗಳಲ್ಲಿ ಸಮರ್ಪಣ ದೃಷ್ಟಿಯನ್ನು ಕಾಣಬಹುದು. "ಆವ ಸಿರಿಯಲಿ ಎನ್ನ ಮರೆತೆ", "ದೇವ ಜಾನಕಿ ರಮಣ ಪೇಳು", "ಆರು ಬದುಕಿದರಯ್ಯ ಹರಿ ನಿನ್ನ ನಂಬಿ", "ಬಾಗಿಲನು ತೆರೆದು ಸೇವೆಯನ್ನು ಕೊಡು ಹರಿಯೇ"  ಭಗವಂತನಿಗಾಗಿ ಅನುದಿನ ಅಂಗಲಾಚಿದರೂ ಅವನು ದರ್ಶನವೀಯದಿದ್ದಾಗ ಭಕ್ತನಲ್ಲಿ ಸಹಜವಾಗಿ ಛಲ ತಲೆಯೆತ್ತುತ್ತದೆ. ಇವುಗಳಲ್ಲೆಲ್ಲ ಭಕ್ತಿ ಸಾತ್ವಿಕ ಕ್ರೋಧವು ಕಾಣುತ್ತದೆ. ದೇವರನ್ನು ಕಾಣಬೇಕೆಂಬ ಹಂಬಲ, ಛಲ ವ್ಯಕ್ತವಾಗುತ್ತದೆ.


"ಎಲ್ಲಾರು ಮಾಡುವುದು ಹೊಟ್ಟೆಗಾಗಿ ಗೇಣು ಬಟ್ಟೆಗಾಗಿ ತುತ್ತು ಹಿಟ್ಟಿಗಾಗಿ" ಎಂಬ ಕಾವ್ಯ ಭಾವಾರ್ಥವು ಯುವಕರ ಮನ ಮಿಡಿಯುವುದು ಯುವಕರ ನಿಲುವನ್ನು ಅವರ ಗುರಿಯನ್ನು ದಾರಿಗೆ ಒಯ್ಯುವಂತೆ ಮಾಡಿದ ನಮ್ಮ ಶ್ರೇಷ್ಠ ಸಂತ ಕವಿ 'ಕನಕದಾಸರು.


ಕನಕರು ಕೃಷ್ಣನ ಪರಮ ಭಕ್ತರಾಗಿದ್ದವರು. ಉಡುಪಿಯ ದೇವಾಲಯದಲ್ಲಿ ಅವರಿಗೆ ಪ್ರವೇಶ ದೊರೆಯದೆ ಹೋದಾಗ ದೇವಸ್ಥಾನದ ಹಿಂಭಾಗದ ಸ್ಥಳದಲ್ಲಿ ನಿಂತು "ಬಾಗಿಲನು ತೆರೆದು ಸೇವೆಯನು ಕೊಡು ಹರಿಯೇ" ಎಂದು ಹಾಡತೊಡಗಿದರು. ಆಗ ಹಿಂಭಾಗದ ಗೋಡೆ ಬಿರುಕು ಒಡೆದು ಕೃಷ್ಣನ ವಿಗ್ರಹ ತಿರುಗಿತಂತೆ. ಅವರ ಭಕ್ತಿಗೆ ಕೃಷ್ಣ ಪರಮಾತ್ಮ ದರ್ಶನ ನೀಡಿರುವ ಕಿಂಡಿಯು ಇಂದಿಗೂ 'ಕನಕನ ಕಿಂಡಿ' ಎಂದೇ ಪ್ರಸಿದ್ದಿ ಪಡೆದಿದೆ. ಅಂದು ಕಂಡಂತಹ ಉಡುಪಿಯ ಕೃಷ್ಣನ ದರ್ಶನವನ್ನು ಇಂದಿಗೂ ನಾವು ಕಾಣಬಹುದು.


ಕನಕದಾಸರ ವೈಚಾರಿಕ ಪ್ರಗತಿಪರ ನಿಲುವನ್ನು ಇತರರಲ್ಲಿ ಕಾಣಲು ಬರುವುದಿಲ್ಲ. ಕನಕದಾಸರನ್ನು ಜನಾಂಗೀಯ ವ್ಯಕ್ತಿಯನ್ನಾಗಿ ಭಾವಿಸದೆ ಪರಮ ಹರಿಭಕ್ತರೆಂದರಿತಾಗ ನಮ್ಮಲ್ಲೂ ಆ ದೈವೀಕ ಭಾವ ಜಾಗೃತವಾಗುವುದು. ಪರಮ ವೈಷ್ಣವನೆನಿಸಿದ ಈ ದಾಸಶ್ರೇಷ್ಟನನ್ನು ಮನುಕುಲದ ಪ್ರತಿನಿಧಿಯಾಗಿ, ಆದರ್ಶಗಳ ಭಂಡಾರಿಯಾಗಿ ಕಂಡಾಗ ಅವರಿದ್ದ ನಾಡಿನವರು ನಾವೆಲ್ಲ ಎಂಬ ಧನ್ಯತೆ ಮೂಡುವುದು.


ಯಾವುದೇ ಮತಕ್ಕೆ ಕಟ್ಟು ಬೀಳದೆ ಸರ್ವಮತಗಳ ಒಳಿತನ್ನು ಪಡೆದು ಸ್ವಂತ ವ್ಯಕ್ತಿತ್ತ್ವವನ್ನು ಜನಹಿತಕ್ಕಾಗಿ ಬೆಳೆಸಿಕೊಂಡು ಬಾಳಿದವರು, ಉಳಿದವರೂ, ಬಾಳುವಂತೆ ಹೇಳಿದವರು. ದಬ್ಬಾಳಿಕೆಗೆ ಒಳಗಾದವರನ್ನು ಮೇಲೆತ್ತಲು ಪ್ರಯತ್ನಿಸಿದರು, ಕನಕದಾಸರ ವೈಚಾರಿಕ ಪ್ರಗತಿಪರ ನಿಲುವನ್ನು ಇತರರಲ್ಲಿ ಕಾಣಲು ಬರುವುದಿಲ್ಲ.


ಎಲ್ಲ ಮತೀಯ, ಸಾಮಾಜಿಕ ಕಟ್ಟುನಿಟ್ಟುಗಳಿಂದ ಮುಕ್ತರಾಗಿ ಆಧ್ಯಾತ್ಮ ಸಿದ್ಧಿಯ ಶಿಖರವನ್ನೇರಿದ ವಿಶ್ವಬಂಧು  ಈ ಸಂತ ಕವಿಯ ಕೃತಿಗಳನ್ನು ಸರ್ವರೂ ಅಭ್ಯಸಿಸಲಿ, ದಾಸರ ಆದರ್ಶಗುಣಗಳು ವಿಶ್ವವ್ಯಾಪಕವಾಗಲೆಂದು ಆಶಿಸುತ್ತಾ ಅವರ ಜನುಮದ ಪುಣ್ಯದಿನದಂದು ನನ್ನ ಶಿರಸಾಷ್ಠಾಂಗ ಪ್ರಣಾಮಗಳನ್ನು ಅರ್ಪಿಸುತ್ತಿದ್ದೇನೆ.

- ಸೌಮ್ಯ ಸನತ್


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top