ನೆಮ್ಮದಿಯ ಜೀವನ ಮರೀಚಿಕೆಯೇ..?!

Upayuktha
0


ಪ್ರಸ್ತುತ ಯುವಜನತೆಗೆ ನೆಮ್ಮದಿ ಎಂಬುದು ಮರೀಚಿಕೆಯಾದಂತೆ ಅನಿಸಿಬಿಟ್ಟಿದೆ ಎಂದರೆ ಅತಿಶಯೋಕ್ತಿ ಏನಲ್ಲ. ಎಲ್ಲ ಇದ್ದರೂ ಮತ್ತಿನ್ನೇನೋ ಬೇಕು ಎಂಬ ತುಡಿತ ಯಾವಾಗಲೂ. ಒಬ್ಬ ಮತ್ತೊಬ್ಬನ ಜೀವನವನ್ನು ಹೋಲಿಸಿಕೊಂಡು, ತನ್ನ ಜೀವನ ಅವನಂತೆ ಇಲ್ಲವಲ್ಲ ಎಂದುಕೊಳ್ಳುವುದು. ಮತ್ತೆ ಆ ಮತ್ತೊಬ್ಬ ಇವನ ಜೀವನವನ್ನು ಕಂಡು ಇವನದಂತೆ ತನ್ನ ಬದುಕು ಇಲ್ಲವಲ್ಲ ಎಂದು ದುಃಖಿಸುವುದು ತೀರಾ ಸಾಮಾನ್ಯವಾಗಿಬಿಟ್ಟಿದೆ!


ಆದರೆ ಪಾಪ ಅವರಿಬ್ಬರಿಗೂ ಗೊತ್ತಿರುವುದಿಲ್ಲ ಅವರವರ ಜೀವನವೇ ಸುಖಮಯವೆಂದು! ಅವರಂತೆ ಜೀವಿಸಲು ಇನ್ನೂ ಅನೇಕರು ಕನಸು ಕಾಣುತ್ತಿರುತ್ತಾರೆ, ಬೇರೆಯವರು ಕಂಡ ಕನಸೇ ತಮ್ಮ ಜೀವನವಾಗಿದೆ ಎಂದು ಗೊತ್ತಾಗದೇ, ಸುಮ್ಮನೆ ವ್ಯಥೆಪಡುತ್ತಾರೆ. ಇದ್ದ ಜೀವನವನ್ನು ಖುಷಿಯಿಂದ ಕಳೆಯಬೇಕು ಎಂದು ಅನಿಸುವುದೇ ಇಲ್ಲ ಇಂಥವರಿಗೆ. ಬರೀ ಕೊರಗುತ್ತಾ, ಬೇರೆಯವರೊಂದಿಗೆ ಹೋಲಿಸಿಕೊಳ್ಳುತ್ತಲೇ ತಮ್ಮ ಸುಂದರ ಜೀವನವನ್ನು ಹಾಳು ಮಾಡಿಕೊಳ್ಳುತ್ತಾರೆ!


ವಚನ ಶ್ರೇಷ್ಠರು, ತ್ರಿಪದಿಗಳ ಬ್ರಹ್ಮ ಸರ್ವಜ್ಞರು ಒಂದು ವಚನದಲ್ಲಿ ಹೀಗೆ ಹೇಳಿದ್ದಾರೆ.


ಬೆಚ್ಚನೆಯ ಮನೆ ಇರಲು

ವೆಚ್ಚಕ್ಕೆ ಹೊನ್ನಿರಲು

ಇಚ್ಛೆಯನರಿವ ಸತಿ ಇರಲು

ಸ್ವರ್ಗಕ್ಕೆ ಕಿಚ್ಚು ಹಚ್ಚೆಂದ ಸರ್ವಜ್ಞ.


ಅಂದರೆ ಚೆಂದದ ಮನೆ, ಖರ್ಚಿಗೆ ಕಾಸು, ಸುಖ ದುಃಖಗಳನ್ನು ಅರಿತು ಮುನ್ನಡೆಯುವ ಪತ್ನಿ ಇದ್ದರೆ ಅದೇ ಸ್ವರ್ಗಕ್ಕೆ ರಹದಾರಿ ಎಂದು ಸರ್ವಜ್ಞರು ಇಲ್ಲಿ ಹೇಳಿದ್ದಾರೆ.


ಎಂತಹ ಅರ್ಥಗರ್ಭಿತವಾದ ವಚನವಲ್ಲವೇ ಇದು ?! ಆದರೆ ಈಗಿನ ಕಾಲದಲ್ಲಿ ಮದುವೆಯಾಗಿ ಚೆಂದದ ಮನೆ, ಜೀವನ ಸಾಗಿಸಲು ಒಳ್ಳೆಯ ಉದ್ಯೋಗ, ಖರ್ಚಿಗೆ ಹಣ, ಜವಾಬ್ದಾರಿಯುತವಾಗಿ ಮನೆಯನ್ನು ನೋಡಿಕೊಳ್ಳುವ ಹೆಂಡತಿ, ಮುದ್ದಾದ ಮಕ್ಕಳಿದ್ದರೂ ಅದೇಕೋ ಕೆಲವು ಮನೆಗಳಲ್ಲಿ ನೆಮ್ಮದಿ, ಸುಖ, ಸಂತೋಷಗಳೇ ಇರುವುದಿಲ್ಲ. ಜಗಳ ಮನಸ್ತಾಪಗಳಿಂದ ಇಡೀ ಮನೆ ಪ್ರಕ್ಷುಬ್ಧ ವಾತಾವರಣದಿಂದ ಕೂಡಿರುತ್ತದೆ. ಈ ರೀತಿ ಆಗಲು ಕಾರಣಗಳು ಹಲವಾರು.


ಮೊದಲೇ ಹೇಳಿದಂತೆ ಬೇರೆಯವರ ಜೀವನದೊಂದಿಗೆ ಹೋಲಿಕೆ, ಒಳ್ಳೆಯ ಸಂಬಳ ಬರುತ್ತಿದ್ದರೂ ಇನ್ನೂ ಬೇಕು ಎಂಬ ಅತಿಯಾದ ದುರಾಸೆ, ಎಲ್ಲದರ ಮೇಲೂ ಅತಿಯಾದ ನಿರೀಕ್ಷೆ, ಸಮಯದ ಅಭಾವ, ಮನೆಯಲ್ಲಿದ್ದರೂ ಸದಾ ಕೆಲಸದ ಬಗ್ಗೆ ಧ್ಯಾನ, ಮನೆ-ಮಕ್ಕಳಿಗಾಗಿ ಖರ್ಚು ಮಾಡದೇ ಭವಿಷ್ಯಕ್ಕೆ ಬೇಕೆಂದು ವಿಪರೀತವಾಗಿ ಹಣ ಕೂಡಿಡುವುದು ಹೀಗೆ ಒಂದೇ ಎರಡೇ? ಜಗಳ ಹತ್ತಿಕೊಳ್ಳಲು, ಮನೆಯಲ್ಲಿ ಮನಸ್ತಾಪ ಶುರುವಾಗಲು, ಇಂತಹ ಯಾವುದೇ ಸಂದರ್ಭಗಳು ಅನುವು ಮಾಡಿಕೊಡಬಹುದು.


"ಇದೆ ಎಂದರೆ ಇದೆ, ಇಲ್ಲ ಎಂದರೆ ಇಲ್ಲ" ಎಂಬಂತೆ ನಾವು ದೃಢವಾಗಿ ಮನಸ್ಸಲ್ಲಿ ಏನೆಂದುಕೊಳ್ಳುತ್ತೇವೋ ಅದೇ ಆಗುತ್ತದೆ. ಆದ್ದರಿಂದ ನಮ್ಮಲ್ಲಿ ಏನಿದೆಯೋ ಅದೇ ನಮಗೆ ಸಿಕ್ಕ ವರ ಎಂದುಕೊಳ್ಳುತ್ತಾ, ಇಲ್ಲದರ ಬಗ್ಗೆ ಪಟ್ಟಿ ಮಾಡದೇ, ವ್ಯಥೆಪಡದೇ, ಇರುವುದರ ಬಗ್ಗೆ ಹೆಚ್ಚು ಗಮನ ಕೊಡುತ್ತಾ, ಮನೆ-ಸಂಸಾರದಲ್ಲಿ ಸುಖ ಕಾಣುತ್ತಾ, ಸರ್ವಜ್ಞ ಹೇಳಿದಂತೆ ಸ್ವರ್ಗಕ್ಕೆ ಕಿಚ್ಚು ಹಚ್ಚಬೇಕಿದೆ!!


- ಅಚಲ ಬಿ ಹೆನ್ಲಿ, ಬೆಂಗಳೂರು


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 


Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top