ಭಾರತೀಯ ಅಂಚೆ ಮತ್ತು ಆತ್ಮ ನಿರ್ಭರ್ ಭಾರತ್

Upayuktha
0


‘ಅಂಚೆ ಅಣ್ಣ ಬಂದ, ನನಗೆ ಅಂಚೆ ತಂದ, ಪದ್ದು ಮದುವೆ ಅಂದ’! 

ಈ ಹಾಡನ್ನು ಇನ್ಫೋಬೆಲ್ಸ್ ನಲ್ಲಿ ಕೇಳುವಾಗ ಯಾಕೋ ಮದುವೆ ಮನೆಯವರೇ ನಮ್ಮನ್ನು ಆತ್ಮೀಯವಾಗಿ ಆಮಂತ್ರಿಸಿದ ಭಾವನೆ. ಅಷ್ಟರ ಮಟ್ಟಿಗೆ ಅಂಚೆ ನಮ್ಮ ಮನಸ್ಸಿಗೆ ಹತ್ತಿರವಾಗಿತ್ತು!


ಭಾರತೀಯ ಅಂಚೆಯು ಅಕ್ಟೋಬರ್ 1, 1854ರಲ್ಲಿ ಹುಟ್ಟಿಕೊಂಡಿದ್ದು, ನವ ದೆಹಲಿಯಲ್ಲಿ ಇದರ ಪ್ರಧಾನ ಕಛೇರಿ ಇದೆ. ಇದು ಇಡೀ ವಿಶ್ವದಲ್ಲಿ ಅತ್ಯಂತ ವ್ಯಾಪಕವಾಗಿ ಹಬ್ಬಿಕೊಂಡಿದ್ದು, 1,64,972 ಅಂಚೆ ಕಛೇರಿಗಳೊಂದಿಗೆ ಅತೀ ಹೆಚ್ಚು ಸಂಖ್ಯೆಯ ಅಂಚೆ-ಕಛೇರಿಗಳನ್ನು ಹೊಂದಿರುವ ದೇಶ ಎಂಬ ಪ್ರಶಂಸೆಗೆ ಭಾರತ ಪಾತ್ರವಾಗಿದೆ. ಸಾಂಪ್ರದಾಯಿಕ ಹಳೆಯ ಅಂಚೆ ಸೇವೆಗಳಿಂದ ಹಿಡಿದು ಇ-ಕಾಮರ್ಸ್ ಮತ್ತು ಬ್ಯಾಂಕಿಂಗ್ ವರೆಗೆ ಸೇವೆಗಳನ್ನು ನೀಡುವ ಮೂಲಕ ಭಾರತೀಯ ಅಂಚೆ ವಿಶ್ವ ಮಟ್ಟದಲ್ಲಿ ಗುರುತಿಸುವಷ್ಟು ಬೆಳೆದಿದೆ. 


ಕೇವಲ ಅಂಚೆಯನ್ನು ತಲುಪಿಸುವುದರ ಜೊತೆ-ಜೊತೆಗೆ ಇತರೆ ಸೇವೆಗಳಾದ ಮನಿ ಆರ್ಡರ್ ಗಳ ಮೂಲಕ ಹಣವನ್ನು ರವಾನೆ ಮಾಡುವುದು,  ಸಣ್ಣ ಉಳಿತಾಯ ಯೋಜನೆಗಳ ಅಡಿಯಲ್ಲಿ ಠೇವಣಿಗಳನ್ನು ಸ್ವೀಕರಿಸುವುದು, ಅಂಚೆ ಜೀವ ವಿಮೆ ಮತ್ತು ಗ್ರಾಮೀಣ ಅಂಚೆ ಜೀವ ವಿಮೆ ಅಡಿಯಲ್ಲಿ ಜೀವ ವಿಮಾ ರಕ್ಷಣೆಯನ್ನು ಒದಗಿಸುವುದು, ಅಂತಾರಾಷ್ಟೀಯ ಹಣಕಾಸು ವಿನಿಮಯ, ಸುಕನ್ಯಾ ಸಮೃದ್ಧಿ, ಬಿಲ್ ಸಂಗ್ರಹಣೆ ಇತ್ಯಾದಿ ಸೇವೆಗಳನ್ನು ಒದಗಿಸುತ್ತದೆ. ಈ ರೀತಿಯ ಸಾಮಾನ್ಯ ಸೇವೆಗಳಲ್ಲದೆ, ಐತಿಹಾಸಿಕ ಹಾಗೂ ವಾಸ್ತುಶಿಲ್ಪದ ವೈಭವವನ್ನು ಬಿಂಬಿಸುವ ಪಾರಂಪರಿಕ ಕಟ್ಟಡಗಳಲ್ಲಿ  ಕಾರ್ಯಾಚರಣೆ ಮಾಡಿ ವಿವಿಧ ಸೇವೆಗಳನ್ನು ಒದಗಿಸುವ ದೇಶದ ಏಕೈಕ ಸಾರ್ವಜನಿಕ ಸಂಸ್ಥೆ ಎಂದರೆ ಅದು ಭಾರತೀಯ ಅಂಚೆ. 

ಸ್ವತಂತ್ರ ಭಾರತದ ಆರಂಭಿಕ ವರ್ಷಗಳಲ್ಲಿ, ದೇಶದ ಯೋಜಿತ ಅಭಿವೃದ್ಧಿಗೆ ಸಂಪನ್ಮೂಲ ಕ್ರೋಢೀಕರಣವು ನಿರ್ಣಾಯಕವಾಗಿತ್ತು. ಈ ಸಂದರ್ಭದಲ್ಲಿ  ಭಾರತೀಯ ಅಂಚೆ ವ್ಯವಸ್ಥೆಯು, ವಿವಿಧ ಹಣಕಾಸು ಸೇವೆಗಳ ಮೂಲಕ ಲಕ್ಷಾಂತರ ನಾಗರಿಕರಿಂದ ಸಣ್ಣ ಉಳಿತಾಯವನ್ನು ಮಾಡಿಸಿ ದೇಶದ ಸಾಮಾಜಿಕ ಹಾಗೂ ಆರ್ಥಿಕ ಅಭಿವೃದ್ಧಿಗೆ ಕೊಡುಗೆ ನೀಡುವಲ್ಲಿ ಮಹತ್ವದ ಪಾತ್ರವನ್ನು ವಹಿಸಿದೆ. 


ಭಾರತೀಯ ಅಂಚೆಯ ಆಧುನೀಕರಣವು 1990 ರ ದಶಕದ ಆರಂಭದಲ್ಲಿ ಪ್ರಾರಂಭವಾಯಿತು. ಆ ದಿನಗಳಲ್ಲಿ, ಲೆಟರ್ ಮೇಲ್‌ನ ಪ್ರಮಾಣವು ದಿನಕ್ಕೆ ಸರಿಸುಮಾರು 20 ಮಿಲಿಯನ್ ಆಗಿತ್ತು. ಕ್ರಮೇಣ ಇದು ಸಂವಹನ ತಂತ್ರಜ್ಞಾನದ ಹೆಚ್ಚಿನ ಬಳಕೆಯಿಂದಾಗಿ ದಿನಕ್ಕೆ ಒಂದು ಮಿಲಿಯನ್‌ಗಿಂತಲೂ ಕಡಿಮೆಯಾಗುತ್ತಾ ಬಂತು. ಇದರಿಂದ ಉಂಟಾದ ಆದಾಯದ ಕುಸಿತವನ್ನು ನಿವಾರಿಸಲು ಭಾರತೀಯ ಅಂಚೆ ಅನೇಕ ಪೂರಕ ಸೇವೆಗಳನ್ನು ಪರಿಚಯಿಸಿತು. ಆದರೂ ಇಲಾಖೆ ನಿರೀಕ್ಷಿಸಿದಷ್ಟು ಆದಾಯವನ್ನು ಗಳಿಸಲು ಸಾಧ್ಯವಾಗಲಿಲ್ಲ. ಅದೇನೇ ಇದ್ದರೂ, ಗ್ರಾಹಕರ ಅನುಭವ ಮತ್ತು ಆದಾಯವನ್ನು ಸುಧಾರಿಸಲು ತಮ್ಮ ಸೇವೆಗಳ ಆವಿಷ್ಕಾರವನ್ನು ಅಂಚೆ ಇಲಾಖೆಯು ನಿಲ್ಲಿಸಲಿಲ್ಲ. 2017ರ ದರ್ಪಣ್ ಇದಕ್ಕೆ ಒಂದು ಉದಾಹರಣೆ. ಅದಲ್ಲದೇ, ಅಮೆಜಾನ್ ಮತ್ತು ಫ್ಲಿಪ್‌ಕಾರ್ಟ್‌ನಂತಹ ಆನ್‌ಲೈನ್ ವಾಣಿಜ್ಯ ದೈತ್ಯರೊಂದಿಗೆ ಸಹಯೋಗ ಮಾಡಿಕೊಂಡಿರುವುದು ಭಾರತೀಯ  ಅಂಚೆಯ ಹೊಸತನಕ್ಕೆ ನಾಂದಿಯಾಗಿದೆ. ಅಂಚೆ ಇಲಾಖೆಯ 2023-24 ರ ವಾರ್ಷಿಕ ವರದಿಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಈ ರೀತಿ ಪ್ರತಿಕ್ರಿಯಿಸಿದ್ದಾರೆ. "ಬೆಂಗಳೂರಿನ ಕೇಂಬ್ರಿಡ್ಜ್ ಲೇಔಟ್‌ನಲ್ಲಿ ಭಾರತದ ಮೊದಲ 3ಡಿ ಮುದ್ರಿತ ಅಂಚೆ ಕಛೇರಿಯನ್ನು ನೋಡಲು ಪ್ರತಿಯೊಬ್ಬ ಭಾರತೀಯನು ಹೆಮ್ಮೆಪಡುತ್ತಾನೆ. ಇದು ನಮ್ಮ ರಾಷ್ಟ್ರದ ನಾವೀನ್ಯತೆ ಮತ್ತು ಪ್ರಗತಿಗೆ ಸಾಕ್ಷಿಯಾಗಿದ್ದು, ಸ್ವಾವಲಂಬಿ ಭಾರತದ ಹೆಗ್ಗುರುತಾಗಿದೆ. ಅಂಚೆ ಕಛೇರಿಯ ನಿರ್ಮಾಣವನ್ನು ಪೂರ್ಣಗೊಳಿಸುವಲ್ಲಿ ಶ್ರಮಿಸಿದವರಿಗೆ ಅಭಿನಂದನೆಗಳು". ಪ್ರಧಾನಿಯವರ ಈ ಮಾತು ಅಂಚೆಯ ನಾವೀನ್ಯಕ್ಕೆ ಭಾರತ ಸರಕಾರ ಕೊಡುತ್ತಿರುವ ಪ್ರಾಮುಖ್ಯತೆಯನ್ನು ಸೂಚಿಸುತ್ತದೆ.


ಭಾರತೀಯ ಅಂಚೆ ಇಲಾಖೆ ಎದುರಿಸುತ್ತಿರುವ ಸವಾಲುಗಳು:

ನಮ್ಮ ದೇಶದ ಹೆಮ್ಮೆಯ ಅಂಚೆ ಇಲಾಖೆ ಸಾಮಾಜಿಕ ಹಾಗೂ ಆರ್ಥಿಕವಾಗಿ ದುರ್ಬಲ ವರ್ಗದವರಿಗೆ ವಿವಿಧ ಸೇವೆಗಳ ಮೂಲಕ ಬೆಂಬಲವನ್ನು ನೀಡುತ್ತಿರುವುದು ನಮಗೆಲ್ಲ ಅತ್ಯಂತ ಸಂತೋಷದ ವಿಚಾರ. ಆದರೆ, ಇತ್ತೀಚಿನ ವರ್ಷಗಳಲ್ಲಿ ಅಂಚೆ ಇಲಾಖೆಯು ಅತೀ ಹೆಚ್ಚು ನಷ್ಟವನ್ನುಂಟುಮಾಡುವ ಘಟಕವಾಗಿದ್ದು, 2010-11 ರಲ್ಲಿ ₹ 6,113 ಕೋಟಿಯಷ್ಟು ಇದ್ದ ಒಟ್ಟು ನಷ್ಟವು 2022-23ರಲ್ಲಿ ₹ 20,538.44 ಕೋಟಿಯಷ್ಟಾಗಿದೆ. ಇದು ನಮ್ಮ ಬೊಕ್ಕಸಕ್ಕೆ ದೊಡ್ಡ ಹೊರೆಯಾಗಿ ಪರಿಣಮಿಸಿದೆ. ಡಿಜಿಟಲೀಕರಣ, ಖಾಸಗಿ ವಲಯದ ಕೊರಿಯರ್ ಹಾಗೂ ವಿಮಾ  ಸಂಸ್ಥೆಗಳಿಂದ  ತೀವ್ರ ಪೈಪೋಟಿ,  ನೌಕರರ ಕೌಶಲ್ಯದ ಕೊರತೆ ಇತ್ಯಾದಿ ಅಂಚೆ ಕಛೇರಿಗಳ ಆಡಳಿತಕ್ಕೆ ಹಿನ್ನಡೆಯಾಗಿವೆ. ಕಳಪೆ ರಸ್ತೆಗಳು, ವಿದ್ಯುತ್ ಮತ್ತು ಇಂಟರ್ನೆಟ್ ಸಂಪರ್ಕದಂತಹ ಮೂಲಭೂತ ಸೌಕರ್ಯ ಸಮಸ್ಯೆಗಳು, ವಿಶೇಷವಾಗಿ ಗ್ರಾಮೀಣ ಪ್ರದೇಶಗಳಲ್ಲಿ ನಿರಂತರ ಸೇವೆಗಳನ್ನು ಒದಗಿಸಲು ತೊಡಕಾಗಿದೆ. ಅಲ್ಲದೆ ಇಮೇಲ್ ಮತ್ತು ಸಾಮಾಜಿಕ ಮಾಧ್ಯಮದಂತಹ ಎಲೆಕ್ಟ್ರಾನಿಕ್ ಸಂವಹನದ ಹೆಚ್ಚಳವು ಸಾಂಪ್ರದಾಯಿಕ ಅಂಚೆ ಸಂವಹನದ  ಬೇಡಿಕೆಯನ್ನು ಕಡಿಮೆ ಮಾಡಿದೆ. ಅದೇನೇ ಸವಾಲುಗಳಿದ್ದರೂ ಕೂಡಾ ಭಾರತ ಸರಕಾರ ಅಂಚೆ ಇಲಾಖೆಯ ಸೇವೆಯನ್ನು ಗಮನದಲ್ಲಿಟ್ಟುಕೊಂಡು ಸದಾ ಪ್ರೋತ್ಸಾಹಿಸುವ ಕೆಲಸವನ್ನು ಮಾಡುತ್ತಿದೆ. “ಮುಂದಿನ 3-4 ವರ್ಷಗಳಲ್ಲಿ ಇಂಡಿಯಾ ಪೋಸ್ಟ್ ಅನ್ನು ಲಾಜಿಸ್ಟಿಕ್ಸ್ ಕಂಪನಿಯಾಗಿ ಪರಿವರ್ತಿಸಲು ಮತ್ತು ಇಲಾಖೆಯ ಆದಾಯವನ್ನು ಶೇಕಡಾ 50-60 ರಷ್ಟು ಹೆಚ್ಚಿಸಲು ಸರ್ಕಾರ ಬಯಸುತ್ತಿದೆ” ಎಂಬ ಹೇಳಿಕೆಯನ್ನು ಕೊಟ್ಟ ಕೇಂದ್ರ ಟೆಲಿಕಾಂ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಅವರ ಮಾತು ಇದಕ್ಕೆ ಇನ್ನಷ್ಟು ಪುಷ್ಟಿ ನೀಡುತ್ತದೆ.  


ಭಾರತೀಯ ಅಂಚೆ ಮತ್ತು ಒಳಗೊಳ್ಳುವಿಕೆಯ ಅಭಿವೃದ್ಧಿ:

"ಭಾರತದ ಭವಿಷ್ಯವು ಅದರ ಹಳ್ಳಿಗಳಲ್ಲಿದೆ" ಎಂಬುದು ಮಹಾತ್ಮ ಗಾಂಧಿಯವರ ಪ್ರಸಿದ್ಧ ಉಲ್ಲೇಖವಾಗಿದೆ. ಇದಕ್ಕೆ ಪೂರಕವೆಂಬಂತೆ, ಭಾರತೀಯ ಅಂಚೆ ವಿಶೇಷವಾಗಿ ಗ್ರಾಮೀಣ ಪ್ರದೇಶಗಳಲ್ಲಿ ಹಣಕಾಸಿನ ಸೇರ್ಪಡೆಯಲ್ಲಿ ಬಹಳ ದೊಡ್ಡ ಪಾತ್ರವನ್ನು ವಹಿಸುತ್ತದೆ. ಇದಕ್ಕೆ ಮುಖ್ಯ ಕಾರಣವೆಂದರೆ ಒಟ್ಟು ಅಂಚೆ ಕಛೇರಿಗಳಲ್ಲಿ, ಸುಮಾರು ಶೇಕಡಾ 90.6 ಅಂಚೆ ಕಛೇರಿಗಳು ಗ್ರಾಮೀಣ ಭಾಗದಲ್ಲಿವೆ. ಕೇವಲ ಶೇಕಡಾ 9.4 ಮಾತ್ರ ನಗರ ಪ್ರದೇಶದಲ್ಲಿ ಕಾರ್ಯ ನಿರ್ವಹಿಸುತ್ತಿವೆ. ಗ್ರಾಮೀಣ ಭಾಗಗಳಲ್ಲಿ 6,030 ಜನರಿಗೊಂದು ಅಂಚೆ ಕಛೇರಿಯಿದ್ದರೆ, ನಗರಗಳಲ್ಲಿ 31,422 ಜನರಿಗೊಂದು ಅಂಚೆ ಕಛೇರಿ ಸೇವೆ ನೀಡುತ್ತಿರುವುದು ಮೇಲಿನ ಮಾತಿಗೆ ಪೂರಕವಾಗಿದೆ. ಇದರೊಂದಿಗೆ 26 ಕೋಟಿಯಷ್ಟು ವಿವಿಧ ಖಾತೆಗಳ ಮೂಲಕ ಜನರ ಹಣದ ಉಳಿತಾಯ ಮಾತ್ರವಲ್ಲದೆ ಹೂಡಿಕೆಗೂ ಬೆಂಬಲವನ್ನು ನೀಡುತ್ತಿದೆ. 2.5 ಲಕ್ಷದಷ್ಟು ಗ್ರಾಮೀಣ ಅಂಚೆ ಸೇವಕರೊಂದಿಗೆ ಸುಮಾರು 5 ಲಕ್ಷಕ್ಕಿಂತಲೂ ಅಧಿಕ ಉದ್ಯೋಗವನ್ನು ಕೊಡುವ ಮೂಲಕ ಗ್ರಾಮೀಣ ಭಾಗದ ನಿರುದ್ಯೋಗ ನಿವಾರಣೆಯಲ್ಲಿ ತನ್ನದೇ ಆದ ಪಾತ್ರವನ್ನು ನಿರ್ವಹಿಸುತ್ತಿದೆ. ಸುಕನ್ಯಾ ಸಮೃದ್ಧಿ ಯೋಜನೆಯಡಿಯಲ್ಲಿ ಒಟ್ಟು 3.23 ಕೋಟಿ ಖಾತೆಗಳು ಅಂಚೆ ಕಛೇರಿಗಳಲ್ಲಿ ಕಾರ್ಯನಿರ್ವಹಿಸುತ್ತಿರುವುದು ನಮ್ಮ ದೇಶದ ಹೆಮ್ಮೆಯ ‘ಬೇಟೀ ಪಡಾವೋ ಬೇಟೀ ಬಚಾವೋ’ ಯೋಜನೆಗೆ ಇನ್ನಷ್ಟು ಪುಷ್ಟಿ ನೀಡಿದೆ. ಇದಲ್ಲದೇ ದೇಶದ ಇತರೇ ಮುಖ್ಯ ಯೋಜನೆಗಳಾದ ‘ಮಹಿಳಾ ಸಮ್ಮಾನ್ ಉಳಿತಾಯ ಪ್ರಮಾಣಪತ್ರ’, ‘ಕಿಸಾನ್ ವಿಕಾಸ್ ಪತ್ರ’, ‘ರಾಷ್ಟ್ರೀಯ ಉಳಿತಾಯ ಪ್ರಮಾಣಪತ್ರ’. ‘ಮರುಕಳಿಸುವ ಠೇವಣಿ’, ‘ಹಿರಿಯ ನಾಗರಿಕರ ಉಳಿತಾಯ ಯೋಜನೆ’ ಹಾಗೂ ‘ಅಟಲ್ ಪೆನ್ಶನ್ ಯೋಜನೆ’ ಮುಂತಾದವುಗಳಲ್ಲಿ ಮುಂಚೂಣಿಯಲ್ಲಿರುವುದು ದೇಶದ ಒಳಗೊಳ್ಳುವಿಕೆಯ ಅಭಿವೃದ್ಧಿಗೆ ಭದ್ರ ಬುನಾದಿಯಂತಿದೆ. ಸರಕಾರಿ ಸ್ವಾಮ್ಯದ ಯಾವುದೇ ಸಂಘ ಸಂಸ್ಥೆಗಳು ಮಾಡದ ಆತ್ಮನಿರ್ಭರ್ ಭಾರತದ ಸಾಕಾರಕ್ಕೆ ತಕ್ಕಂತೆ ಕೆಲಸವನ್ನು ನಮ್ಮ ಅಂಚೆಕಛೇರಿಗಳು ಮಾಡುತ್ತಿವೆ. 


ಅಂಚೆ ಸೇವಾ ಕಾರ್ಯಗಳು ಮತ್ತು ಅದರ ಮಹತ್ವವನ್ನು ತೋರಿಸುವ ಉದ್ದೇಶದಿಂದ ಪ್ರತಿ ವರ್ಷ ಅಕ್ಟೋಬರ್ ತಿಂಗಳಲ್ಲಿ ವಿಶ್ವ ಅಂಚೆ ದಿನವನ್ನು ಆಚರಿಸಲಾಗುತ್ತದೆ. ಹಳದಿ ಲಕೋಟೆ, ಮನಿ ಆರ್ಡರ್‌ಗಳ ಜೊತೆಗೆ ಪೋಸ್ಟ್‌ಕಾರ್ಡ್‌ಗಳಲ್ಲಿ ತಮ್ಮ ಹೆತ್ತವರು ಹಾಗೂ ಹೆಂಡತಿ ಮಕ್ಕಳು ಬರೆದ ಪತ್ರಗಳನ್ನು ಸ್ವೀಕರಿಸಿ ಅದನ್ನು ಓದಿದಾಗ ನಮ್ಮ ಸೈನಿಕರ ಮುಖದಲ್ಲಿ ಅರಳುವ  ನಗುವಿನ ಕ್ರೆಡಿಟ್ ಭಾರತೀಯ ಅಂಚೆ ಇಲಾಖೆಗೆ ಸಲ್ಲಲೇಬೇಕು. ಈ ಎಲ್ಲಾ ನೆನಪುಗಳನ್ನು ನಾವು ಎಂದಿಗೂ ಮರೆಯಲು ಸಾಧ್ಯವಿಲ್ಲ. ಹಾಗಾಗಿ ಭಾರತೀಯ ಅಂಚೆ ಸೇವೆಯ ಇತಿಹಾಸವನ್ನು ಗಮನದಲ್ಲಿಟ್ಟುಕೊಂಡು ಅದನ್ನು ಉಳಿಸಿ ಪೋಷಿಸುವ ಜವಾಬ್ದಾರಿ ಕೇವಲ ಸರಕಾರದ್ದಷ್ಟೇ ಅಲ್ಲ; ನಮ್ಮ ನಿಮ್ಮೆಲ್ಲರದ್ದು ಎಂಬ ಅರಿವು ಜಾಗೃತವಾಗಬೇಕಿದೆ! 




- ಡಾ. ಗಣರಾಜ ಕೆ.

ಅರ್ಥಶಾಸ್ತ್ರ ಉಪನ್ಯಾಸಕರು

ಎಸ್.ಡಿ.ಎಂ ಕಾಲೇಜು, ಉಜಿರೆ


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top