ಸ್ನಾತಕೋತ್ತರ ಪದವಿ ಮುಗಿಸಿದ ಬಳಿಕ ಕೆಲವು ಮಾಸಗಳ ಕಾಲ ಪ್ರತಿಷ್ಠಿತ ಕಂಪನಿಯೊಂದರ ಇನ್ಸುರೆನ್ಸ್ ವಿಭಾಗದಲ್ಲಿ ಸೇಲ್ಸ್ ಮ್ಯಾನೇಜರ್ ಆಗಿ ಕೆಲಸ ಮಾಡುತ್ತಿದ್ದೆ. ಯಾರೊಂದಿಗೂ ಹಣಕಾಸಿನ ವ್ಯವಹಾರ ಇಟ್ಟುಕೊಳ್ಳಲು ಬಯಸದ, ಜೊತೆಗೆ ವಾಣಿಜ್ಯ ವಿಷಯವೆಂದರೆ ಮಾರುದ್ದ ದೂರ ಓಡುತ್ತಿದ್ದ ನಾನು ಮಾಡುವ ಕೆಲಸ ಏನೆಂದು ಅರಿಯದೇ ಕೇವಲ 16ಸಾವಿರ ಸಂಬಳದ ಮುಖ ನೋಡಿ ಕೆಲಸಕ್ಕೆ ಸೇರಿದ್ದಾಯ್ತು. ಆಮೇಲೆ ಅನುಭವಿಸಿದ್ದು, ಪರದಾಡಿದ್ದು ದೊಡ್ಡ ಕಥೆಯೇ ಇದೆ. ಅದು ಬಿಡಿ, ನಾನು ಹೇಳ ಹೊರಟಿರುವ ವಿಷಯವೇ ಬೇರೆ.
ಅಲ್ಲಿದ್ದ ಮೂರು- ನಾಲ್ಕು ತಿಂಗಳು ಪಿಜಿಯೊಂದರಲ್ಲಿ ಉಳಿದುಕೊಂಡಿದ್ದೆ. 9ನೇ ಮಹಡಿಯಲ್ಲಿತ್ತು ಆ ಪಿಜಿ. ಮಾಲೀಕರು ಐಶ್ವರ್ಯ ರೈ ಸಂಬಂಧಿಗಳು. ಒಂದು ದೊಡ್ಡ ಹಾಲ್‌ನಲ್ಲಿ ಹುಡುಗಿಯರಿಗೆ ವ್ಯವಸ್ಥೆ ಮಾಡಿದ್ದರೆ, ಇನ್ನೊಂದರಲ್ಲಿ ಹುಡುಗರಿಗೆ. ಅದೊಂದು ದಿನ ಊಟ ತರಲೆಂದು ಮಾಲೀಕರ ಅಡುಗೆ ಕೋಣೆ ಕಡೆಗೆ ಹೋದರೆ ಹಜಾರದಲ್ಲಿ ಪರಿಚಿತ ಮುಖವೊಂದು ಕಾಣಿಸಿತ್ತು. ಶಾಲೆಯಲ್ಲಿ ನನಗಿಂತ 6 ವರ್ಷ ಮುಂದಿದ್ದ, ಸದ್ಯ ವೈದ್ಯರಾಗಿದ್ದವರೊಬ್ಬರು ಅಲ್ಲಿ ಕುಳಿತಿದ್ದರು. ಹೋಗಿ ಅಣ್ಣ ಆರಾಮಾ ಎಂದು ಮಾತನಾಡಿಸಿದೆ. ತನ್ನ ಚಿಕ್ಕಮ್ಮನ ಮಗನನ್ನು ಅಲ್ಲಿ ಸೇರಿಸಲು ಬಂದಿದ್ದರವರು. ಆ ಪೋರನ ಹೆಸರು ಸೂರ್ಯ. ಹೀಗೆ ಆಗಿತ್ತು ಸೂರ್ಯ ಮತ್ತು ನನ್ನ ಪರಿಚಯ.
ನನಗಿಂತ ಕನಿಷ್ಠ 5 ವರ್ಷವಾದರೂ ಕಿರಿಯವನಾಗಿದ್ದ ಸೂರ್ಯ ಡಿಪ್ಲೊಮಾ ಓದಲು ಅಲ್ಲಿಗೆ ಬಂದಿದ್ದ. ಸಿಕ್ಕಾಗ ಮಾತನಾಡುತ್ತಿದ್ದ. ಮೊಬೈಲ್ ನಂಬರ್ ಅನ್ನು ಕೂಡ ವಿನಿಮಯ ಮಾಡಿಕೊಂಡೆವು. ಪಾಲಿಸಿ ಹುಡುಕಲಾಗದೇ ನನ್ನ ಹೆಸರಲ್ಲಿ, ಅಕ್ಕನ ಹೆಸರಲ್ಲಿ, ಆಪ್ತ ಸ್ನೇಹಿತರ ಹೆಸರಲ್ಲಿ ಪಾಲಿಸಿ ಮಾಡಿ, ಬರುವ ಸಂಬಳವನ್ನೆಲ್ಲ ಅಲ್ಲೇ ಸುರಿದು 4 ತಿಂಗಳಾಗುವಷ್ಟರಲ್ಲಿ ಅಲ್ಲಿಂದ ಕಾಲ್ಕಿತ್ತಿದ್ದೆ. ಆದರೆ ಈ ಹುಡುಗ ಮಾತ್ರ ಸಂಪರ್ಕದಲ್ಲಿದ್ದ. ಆಗಷ್ಟೇ 18 ದಾಟಿದ್ದ ಅವನು ಮಾತನಾಡಿದ, ಮೆಸೇಜ್ ಮಾಡಿದನೆಂದರೆ ಮತ್ಯಾವ ವಿಷಯವಿರಲಿಕ್ಕೆ ಸಾಕು? ಹುಡುಗಿಯರ ವಿಷಯವೇ. ಅವಳನ್ನು ನೋಡಿದೆ, ಇವಳನ್ನು ನೋಡಿದೆ, ಅವಳಿಷ್ಟವಾದಳು. ಇವಳಿಷ್ಟವಾದಳು. ಕೇಳಿ ಕೇಳಿ ನನಗೂ ತಲೆ ಕೆಟ್ಟಿತ್ತು.
ಕೊನೆಗೂ ನನ್ನ ಆ ತಮ್ಮ ಓದನ್ನು ಮುಗಿಸಿ ಬೆಂಗಳೂರು ತಲುಪಿದ್ದ. ನಾನೂ ಆ ಮಾಯಾ ನಗರಿ ಸೇರಿ ಬಹುದಿನಗಳೇ ಆಗಿದ್ದವು. ಅದ್ಯಾವುದೋ ಹುಡುಗಿಯನ್ನು ಪಟಾಯಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದ ಅವನು ಅವಳ ಬಗ್ಗೆ ಹೇಳಿ ಹೇಳಿ ನನ್ನ ತಲೆ ತಿನ್ನತೊಡಗಿದ. ಹುಂ, ಹುಂ ಎನ್ನುತ್ತ ಕಿವಿಯಾದೆ. ಅದೊಂದು ದಿನ ಅವರಿಬ್ಬರಲ್ಲಿ ಏನಾಯಿತೋ ಗೊತ್ತಿಲ್ಲ. ಅಕ್ಕ ಅವಳು ಗುಡ್ ಬೈ ಹೇಳಿಬಿಟ್ಟಳು ಎಂದು ಕಾಲ್ ಮಾಡಿ ಗೋಳೋ ಎಂದು ಅಳತೊಡಗಿದ. ಹೇಗೆ ಸಮಾಧಾನ ಮಾಡುವುದು ತಿಳಿಯಲಿಲ್ಲ. ಅವಳೇ ನನ್ನ ಪ್ರಥಮ- ಅಂತಿಮ ಪ್ರೀತಿ. ಅವಳಿಲ್ಲದೆ ಬದುಕಲಾರೆ. ಬೇಕವಳು ಎಂದು ಚಂಡಿ ಹಿಡಿದ. ನಾನೇನು ಮಾಡಲು ಸಾಧ್ಯ? ಬಾಲ್ಯದಲ್ಲಿ ತಂದೆಯನ್ನು ಕಳೆದುಕೊಂಡಿದ್ದನಾತ. ಹಗಲಿರುಳು ದುಡಿದು 3 ಮಕ್ಕಳನ್ನು ಸಾಕಿದ್ದ ಅವನ ತಾಯಿ ಕಣ್ಮುಂದೆ ಬಂದು ಹೋದಳು. ಸಮಾಧಾನ ಮಾಡಿದೆ. ಕೇಳಲಿಲ್ಲ ಆತ, ಅಕ್ಕ ನಾನು ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ ಎಂದು 25 ನಿದ್ದೆ ಮಾತ್ರೆಯನ್ನು ಮೊಬೈಲ್‌ನಲ್ಲಿ ಫೋಟೋ ಹೊಡೆದು ಕಳಿಸಿ, ಓಹ್ ನೀರು ತಂದುಕೊಳ್ಳೋಕೆ ಮರೆತೆ, ಇವತ್ತು ಆಂಟಿ ಚಿಕನ್ ಮಾಡಿದ್ದರು ಅದನ್ನು ತಿನ್ನಲಾಗಲ್ಲ, ಹೋಗುತ್ತಿದ್ದೇನೆ ಅಕ್ಕ ಹೇಳಿ ಎಂದು ಫೋನ್ ಕಟ್ ಮಾಡಿದ. ಕಂಗಾಲಾದ ನನಗೆ ಅವನಿರುವ ವಿಳಾಸವೂ ಗೊತ್ತಿಲ್ಲ. ಪರಿಚಯವಿದ್ದರೂ ಅವರ ತಾಯಿಯ ಸಂಪರ್ಕವೂ ಇರಲಿಲ್ಲ. ಮತ್ತೆರಡು ದಿನ ನನ್ನದು ಯಮಯಾತನೆ. ಅವನ ಸಾವಿನ ಸುದ್ದಿ ಬರಬಹುದು ಎಂಬ ಆತಂಕ. ಇಷ್ಟು ಚಿಕ್ಕ ಪ್ರಾಯದ ಹುಡುಗ, ಗೊತ್ತಿದ್ದು ಉಳಿಸಿಕೊಳ್ಳಲಾಗಲಿಲ್ಲ ಎಂಬ ಪಶ್ಚಾತ್ತಾಪ. ಅವರಮ್ಮನ ನೆನೆದು ನಾನು ಕಣ್ಣೀರಾಗಿದ್ದೆ.
ಮತ್ತೆರಡು ದಿನ ಸುದ್ದಿಯೇ ಇಲ್ಲ. ಕಾಲ್ ಮಾಡಲು ಸಹ ಭಯ. ಅವನನ್ನೇ ನೆನಪಿಸಿಕೊಂಡು ಸುಮ್ಮನೆ ಕುಳಿತಿದ್ದೆ. ಮೊಬೈಲ್ ಠಣ್ ಎಂದಾಗ ಮೆಸೇಜ್ ತೆಗೆದು ನೋಡಿದ್ದೆ. ಮೇಲಿದ್ದದ್ದು ಅವನದೇ ಮೆಸೇಜ್. ಗಡಬಡಿಸಿ ತೆಗೆದು ನೋಡಿದ್ದೆ ಇವಳು ಹೇಗಿದ್ದಾಳಕ್ಕ ಅನ್ನೋ ಮೆಸೇಜ್- ಯುವತಿಯೊಬ್ಬಳ ಫೋಟೋ ಜೊತೆ. ಓಹ್ ಇಬ್ಬರು ರಾಜಿ ಮಾಡಿಕೊಂಡಿರಬೇಕು ಅಂದುಕೊಂಡು ಎಲ್ಲ ಸರಿ ಹೋಯ್ತಾ ತಮ್ಮ ಎಂದೆ. ಅವಳಲ್ಲಕ್ಕ ಇವಳು. ನಿನ್ನೆ ಪರಿಚಯ ಆದ್ಲು ಎಂದು ತಿರುಗಿ ಉತ್ತರ ಬಂದಿತ್ತು. ನಾನು ಕುಂತಲ್ಲೇ ಸುಸ್ತು ಹೊಡೆದಿದ್ದೆ.
ಮನಸಲ್ಲೇ ಬೈದುಕೊಂಡೆ, ಹಾಳಾದವನೆ ನಾನು 2 ದಿನ ನೆಮ್ಮದಿ ಕಳೆದುಕೊಂಡು ಕಣ್ಣೀರು ಸುರಿಸುತ್ತಾ ಕುಳಿತರೆ, ನೀನು ಮತ್ತೊಂದು ಹುಡುಗಿಯತ್ತ ಕಣ್ಣು ಹಾಯಿಸುತ್ತ ನೆಮ್ಮದಿಯಿಂದ ಹಾಯಾಗಿದ್ದೀಯಾ?
ಅದಾದ ಮೇಲೆ ನಾನು, ಲವ್ ಫೇಲ್ಯೂವರ್ ಆಗಿ ಸಾಯುತ್ತೇನೆ ಎನ್ನುವ ಯಾವ ಆಸಾಮಿಯನ್ನೂ ನಂಬುತ್ತಿಲ್ಲ.
- ಜಯಾ ಗಣಪತಿ, ಕುಮಟಾ
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


