ಎಲ್ಲರೊಳು ತಾನೊಬ್ಬನಾಗಿ ಜಗವೆಲ್ಲ ಹೆಪ್ಪುಗಟ್ಟಿದ ಜಾತಿ ಧರ್ಮದ ಸರಪಳಿಯ ಕಳಚಿ ಸಮಾನತೆಯ ಸಾರುತ ಎಲ್ಲ ಧರ್ಮೀಯರೊಡನೆ ಅರಿತು ಬೆರೆತು ವಿವಿಧ ವಿಷಯಗಳನ್ನು ಚಿಂತನೆಗೆ ಒಳಪಡಿಸಿ ಮಾನವೀಯ ನೆಲೆಗಟ್ಟಿನಲ್ಲಿ ನಿಲುವನ್ನು ನೇರವಾಗಿ ಸ್ಪಷ್ಟಪಡಿಸುತ ಜನರಿಗೆ ಬದುಕಿನ ಸೂತ್ರಗಳನ್ನು ಹೇಳುತ ಡಂಭಾಚಾರಗಳನ್ನು ಖಂಡಿಸುತ ನೈಜತ್ವ ಅರಿಕೆ ಮಾಡಿ ಜನಮಾನಸದಿ ನೆಲೆಯಾಗಿ ನಿಂತ ಮಹಾನ ಸಂತ ಸಹಾನುಭೂತಿ ಧೈರ್ಯಶಾಲಿ ಧರ್ಮದ ಸಂಸ್ಥಾಪಕ ಗುರು ನಾನಕ್ ರು.
ಬಾಲ್ಯದಿಂದಲೇ ಎಲ್ಲರೊಡನೆ ಬೆರೆತು ಕೂಡಿ ನಲಿಯುತ ಅದರಲ್ಲಿಯೂ ಹಿಂದೂ ಮುಸ್ಲಿಂ ಮಕ್ಕಳೊಂದಿಗೆ ಆತ್ಮೀಯ ಒಡನಾಟ ಬೆಸೆಯಿತು. ಜೊತೆಗೆ ಆ ಧರ್ಮಗಳು ಇವರ ಮೇಲೆ ಪ್ರಭಾವ ಬೀರಿ ಇವರನ್ನು ಚಿಂತನಾಶೀಲತೆಯತ್ತ ವಾಲಿಸಿ ತಮ್ಮೊಳಗೆ ಪ್ರಶ್ನಿಸಿಕೊಳ್ಳುತ್ತ ತಮ್ಮದೇ ಆದ ಅಭಿಪ್ರಾಯವನ್ನು ವ್ಯಕ್ತಪಡಿಸುತ್ತಿದ್ದರು. ಜನರಿಗೆ ಸತ್ಯದ ಸಾಕ್ಷಾತ್ಕಾರ ಮಾಡಿಸುತ್ತ ಕಥೆಗಳ ಮೂಲಕ ಅವರೊಳಗೆ ಸತ್ಯದ ದರ್ಶನ ಮಾಡಿಸುತ್ತಿದ್ದರು. ಒಂದು ಕಥೆ ನೆನಪಾಗುತ್ತೆ. ಒಮ್ಮೆ ಒಬ್ಬ ಶ್ರೀಮಂತನ ಮನೆಗೆ ನಾನಕ್ ರು ತೆರೆಳಿರುತ್ತಾರೆ. ಆಗ ಅವನಿಗೆ ಸೂಜಿಯನ್ನು ನೀಡಿ ನಿಮ್ಮ ಬಳಿ ಇಟ್ಟುಕೊಳ್ಳಿ ಆಮೇಲೆ ಸ್ವಲ್ಪ ದಿನಗಳ ನಂತರ ಮರಳಿ ಕೊಡುವಿರಂತೆ ಎಂದು ನಿರ್ಗಮಿಸಿದರು ನಾನಕ್. ನಂತರ ಅವನ ಹೆಂಡತಿ ಇದನ್ನೇಕೆ ಇಟ್ಟುಕೊಂಡಿರಿ? ಅವನು ಮುದುಕ ಸತ್ತರೆ ನೀವು ಶಾಶ್ವತವಾಗಿ ಅವನ ಋಣದಲ್ಲಿ ಇದ್ದಂತೆ ಎಂದು ಹೇಳಿದಾಗ ತಡವರಿಸಿ ನಾನಕ್ ರನ್ನು ಅರಿಸಿ ಹೋದ ಸಿಕ್ಕ ಮೇಲೆ ಇದನ್ನು ನಾನು ಒಯ್ಯಲು ಬಯಸುವುದಿಲ್ಲ ನೀನು ಮುದುಕ ಸತ್ತರೆ ಸಾಲದ ಹೊರೆ ನನ್ನ ಮೇಲಿರುತ್ತದೆ ತೆಗೆದುಕೊಳ್ಳಿ ಇದನ್ನು ಎಂದಾಗ ನಾನಕ್ ರು ಹೇಳುತ್ತಾರೆ "ಸೂಜಿ ಸ್ವರ್ಗಕ್ಕೆ ಒಯ್ಯಲು ಸಾಧ್ಯವಿಲ್ಲ ಎಂದು ನಿನಗೆ ಗೊತ್ತಾಗಿದೆ ತಾನೇ ಹಾಗೆ ನೀವು ಶೇಖರಿಸುತ್ತಿರುವ ಇತರ ವಸ್ತುಗಳು ಬಗ್ಗೆ ನಿನ್ನ ನಿಲುವೇನು ಎಂದಾಗ ವ್ಯಕ್ತಿಗೆ ಅರಿವಾಗಿ ನಾನಕ್ ರ ಚರಣಕೆ ಎರಗಿ ನಂತರ ಮನೆಗೆ ತೆರಳಿ ತನಗೆ ಬೇಕಾದದ್ದನ್ನು ಇಟ್ಟುಕೊಂಡು ಉಳಿದದ್ದನ್ನು ಸಮಾಜದ ಜನರಿಗೆ ನೀಡಲು ಹೋದನು. ಇದು ಒಂದು ಕಥೆಯೇ ಗುರುನಾನಕ್ ರ ಚಿಂತನೆ, ತತ್ವ, ಆಲೋಚಿಸುವ ರೀತಿ, ಬೋಧನೆಗಳು ಮಹಾನ್ ಸಮಾಜದ ಹಿತ ಚಿಂತಕ ಎಂಬುದು ಸ್ಪಷ್ಟ.
ಮಾನವ ತನ್ನತನದ ಬಗ್ಗೆ ಯೋಚಿಸುತ್ತ ಕುಳಿತರೆ ಸಮಾಜ ಮತ್ತು ರಾಷ್ಟ್ರಕ್ಕೆ ವಿಪತ್ತು ಕಟ್ಟಿಟ್ಟ ಬುತ್ತಿ. ಪ್ರಪಂಚ ವಿರಳ ಸಂಪನ್ಮೂಲ ಹೊಂದಿದ್ದು ತನಗೆ ಬೇಕಾದಷ್ಟೂ ಮಾತ್ರ ಬಳಸಿ ಉಳಿದದ್ದು ಸಮಾಜಕ್ಕೆ ಅರ್ಪಿಸಿದರೆ ಯಾವ ನೋವು ಕಲಹವೂ ಬಾರದು. ನನ್ನ ಸಾಮರ್ಥ್ಯ ನನ್ನನ್ನು ಅಲ್ಲದೆ ಇತರರಿಗೂ ವಿನಿಯೋಗವಾಗಿ ಸಕಲರ ಯೋಗಕ್ಷೇಮಕ್ಕೆ ಉಪಯೋಗಿಸಬೇಕು ಇಲ್ಲದಿರೆ ಲೋಕಕ್ಕೆ ಆಪತ್ತು. ಈ ಜಗದಲ್ಲಿ ನಿಜವಾಗಿಯೂ ಸುನಾಮಿ ಭೂಕಂಪ ಯಾವುದು ಇಲ್ಲ ಇವೆಲ್ಲವೂ ಮಾನವನ ಅತಿರೇಕ ಅಜ್ಞಾನ. ಅಜ್ಞಾನವೇ ವಿಪತ್ತು ಜ್ಞಾನವೇ ಎಲ್ಲಕ್ಕೂ ಪರಿಹಾರ ಎಂದು ಜಗತ್ತಿನ ಕಣ್ಣು ತೆರೆಸಿದ ಮಹಾಚೇತನರು ನಾನಕ್ ರು.
ಇವರು ಏಪ್ರಿಲ್ 15 1469ರಲ್ಲಿ ರಾವಿಯಲ್ಲಿ ಜನಿಸಿದರು. ಬಾಲ್ಯದಲ್ಲೇ ತುಂಬಾ ಜಾಣರಾಗಿದ್ದು, ಓದುವಾಗಲೇ ಅದರ ಅರ್ಥ, ಪದ್ಯದ ಭಾವ ಎಲ್ಲವನು ತಟ್ಟನೆ ಗ್ರಹಿಸುವ ಸಾಮರ್ಥ್ಯ ಬಲು ಚುರುಕಾಗಿತ್ತು. ಆದರೆ ಶಾಲೆಯನ್ನು ಸರಿಯಾಗಿ ಕಲಿಯದೆ ಅತ್ತ ಇತ್ತ ಕಾಡಲ್ಲಿ ಅಲೆಯುತ್ತ ದನಗಳನ್ನು ಕಾಯುತ್ತ ಪದ್ಯಗಳನ್ನು ಹಾಡುತ್ತಿದ್ದರು. ಯಾವುದೇ ಕಾರ್ಯವನ್ನು ಗಮನವಿಟ್ಟು ಮಾಡುತ್ತಿರಲಿಲ್ಲ ತನ್ನದೇ ಯಾದ ಕಲ್ಪನಾ ಲೋಕದಲ್ಲಿ ಸಂಚರಿಸುತ್ತಾ ಯೋಚನೆಯಲ್ಲಿ ತೊಡಗುತ್ತಿದ್ದರು. ಹೀಗೆ ಪ್ರತಿಯೊಂದರಲ್ಲಿ ಅರ್ಥವ ಹುಡುಕಿದರೂ ದೊರೆಯದಿದ್ದರೆ ಪ್ರಶ್ನಿಸುತ್ತಿದ್ದರು. ಮದುವೆ ಆದ ಮೇಲಾದರೂ ಪ್ರಶ್ನಿಸುವುದ ಬಿಡಬಹುದೆಂದು ಮದುವೆ ಮಾಡಿದರೂ ಸಂಸಾರ ಸಾಗಿಸಲು ದುಡಿಮೆಗಾಗಿ ಅಂಗಡಿ ಇಟ್ಟುಕೊಟ್ಟರೂ ಬಡವರಿಗೆ ದಾನ ಮಾಡಿದ. ಹೀಗೆ ಊರು ಬಿಟ್ಟು ತೆರಳಿ ಲೋಕವ ಸುತ್ತುತ್ತ ನಡೆದರು.
ಗುರುವೇ ಎಲ್ಲವೂ ಗುರುವಿನಿಂದಲೆ ಸರ್ವಸ್ವವೂ ಎನ್ನುತ್ತ ಗುರು ಪರಂಪರೆಯ ಹಾದಿಯಲ್ಲಿ ತಮ್ಮ ಬದುಕನ್ನು ರೂಪಿಸಿಕೊಳ್ಳುತ್ತ (10 ಗುರುಗಳು) ಗುರುಗಳ ಸಮೂಹದಿಂದಲೇ ಜಗತ್ತಲ್ಲಿ ತಲೆ ಎತ್ತಿ ನಿಂತು ಗುರುವಿನ ಮಹತ್ವ ಶಕ್ತಿಯನ್ನು ಅರಿಯುತ ಸ್ಥಾಪಿತವಾದದ್ದೇ ಸಿಖ್ ಪಂಥ. ಗುರುವೇ ಜಗದ ನಿರ್ಮಾತೃ ಗುರುವನ್ನೇ ಮಾನವ ಸ್ವರೂಪಿಯನ್ನಾಗಿ ನಂಬಿದ ಪಂಥದ ಸ್ಥಾಪಕರು. ಬದುಕಿನ ಹೊಸ ಹಾದಿಯಲಿ ಸಾಗುತ ಆಶಯಗಳನ್ನು ಜನರಲ್ಲಿ ಬಿತ್ತುತ್ತ ದೇವರು- ಗುರು ಒಂದೇ ಎಂದು ಹೇಳುತ್ತ ಗುರುವನ್ನು ನೆನೆದರೆ ಸಾಕು ಎಲ್ಲವೂ ಕಣ್ಣು ಮುಂದೇನೆ ದರ್ಶನವಾಗುತ್ತೆ ಎಂದರು. ಒಟ್ಟು ಹತ್ತು ಜನ ಗುರುಗಳ ಬೋಧನೆಗಳನ್ನು ಒಳಗೊಂಡ ಅತ್ಯಮೂಲ್ಯ ಅನುಭಾವಿಕ ಕೃತಿಯೇ "ಗುರುಗ್ರಂಥ ಸಾಹೇಬ್" ಇವರ ಪರಮ ಗುರುವಿದು.
ಸಮಾಜ ಉದ್ಧರಿಸುತ, ಗುರುವೇ ಸಕಲ ಸಂಪದವು, ಗುರುವೇ ಬದುಕು ಎಂದು ಬದುಕಿ ಬಾಳಿ ಎಲ್ಲ ಧರ್ಮಿಯರಿಗೆ ಜೀವನದ ಪಾಠ ಕಲಿಸಿದ ಸಮಾಜದ ಸಂತ. ಇವರ ನೆನಪಿಗೆ ಹಿಂದೂ ಮುಸ್ಲಿಮರು ಒಗ್ಗಟ್ಟಿನಿಂದ ರಾವಿ ನದಿ ದಡದ ಮೇಲೆ ಸ್ಮಾರಕ ಕಟ್ಟಿದ್ದಾರೆ.
ಗುರುನಾನಕ್ ನಡೆದಂತೆ ನುಡಿದು ನುಡಿದಂತೆ ಬದುಕಿದವರು ಜನಸಾಮಾನ್ಯರೊಡನೆ ಸಾಮಾನ್ಯರಾಗಿ ಬದುಕಿಗೆ ಬೆಳಕಾದವರು. ಪಂಜಾಬಿನ ಜನರಿಗೆ ಆರಾಧ್ಯ ದೈವವಾದರು ಗುರು ಗುರುನಾನಕರು.
- ಅವಿನಾಶ ಸೆರೆಮನಿ
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ