ಕಾರ್ಮಿಕರಿಗೆ ಸೌಲಭ್ಯಗಳನ್ನು ಪರಿಣಾಮಕಾರಿ ಅನುಷ್ಠಾನಿಸಿ: ಉಡುಪಿ ಡಿಸಿ

Upayuktha
0


ಉಡುಪಿ: ಕಾರ್ಮಿಕರ ಕಲ್ಯಾಣಕ್ಕಾಗಿ ಕೇಂದ್ರ ಹಾಗೂ ರಾಜ್ಯ ಸರಕಾರಗಳು ಹಲವಾರು ಕಾನೂನುಗಳನ್ನು ಜಾರಿಗೆ ತರುವುದರ ಜೊತೆಗೆ ಅನೇಕ ಸೌಲಭ್ಯಗಳನ್ನು ನೀಡುತ್ತಿದ್ದು, ಇವುಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಬೇಕಿದೆ ಎಂದು ಜಿಲ್ಲಾಧಿಕಾರಿ ಡಾ. ಕೆ ವಿದ್ಯಾಕುಮಾರಿ ಹೇಳಿದರು. 


ಅವರು ಮಂಗಳವಾರ ನಗರದ ಮಣಿಪಾಲ ರಜತಾದ್ರಿಯ ಅಟಲ್ ಬಿಹಾರಿ ವಾಜಪೇಯಿ ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಕಾರ್ಮಿಕ ಇಲಾಖೆ, ಕಾರ್ಖಾನೆಗಳು, ಬಾಯ್ಲರುಗಳು ಕೈಗಾರಿಕಾ ಸುರಕ್ಷತೆ ಮತ್ತು ಸ್ವಾಸ್ಥ್ಯ ಇಲಾಖೆ, ಕಾರ್ಮಿಕರ ರಾಜ್ಯ ವಿಮಾ ಯೋಜನೆ ವೈದ್ಯಕೀಯ ಸೇವೆ ಹಾಗೂ ಕಾರ್ಮಿಕರ ಭವಿಷ್ಯ ಶಿಧಿ ಸಂಘಟನೆ ಉಡುಪಿ ಇವರ ಸಂಯುಕ್ತ ಆಶ್ರಯದಲ್ಲಿ ನಡೆದ ಜಿಲ್ಲೆಯ ಉದ್ಯೋಗದಾತರಿಗೆ, ಗುತ್ತಿಗೆದಾರರಿಗೆ, ಸಂಘಟಿತ ಮತ್ತು ಅಸಂಘಟಿತ ಕಾರ್ಮಿಕ ಸಂಘಟನೆಗಳ ಪದಾಧಿಕಾರಿಗಳಿಗೆ ಹಾಗೂ ಕಾರ್ಮಿಕರಿಗೆ, ಕಾರ್ಮಿಕ ಇಲಾಖೆಯಿಂದ ಹಾಗೂ ಇತರೆ ಇಲಾಖೆಯಿಂದ ಅನುಷ್ಠಾನಗೊಳಿಸುತ್ತಿರುವ ವಿವಿಧ ಕಾರ್ಮಿಕ ಕಾಯ್ದೆಗಳ ಪರಿಣಾಮಕಾರಿ ಅನುಷ್ಠಾನದ ಕುರಿತ ಜಿಲ್ಲಾ ಮಟ್ಟದ ಕಾರ್ಯಾಗಾರವುವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.


ಕಾರ್ಮಿಕ ಕಾಯಿದೆಗಳು ಬಲಿಷ್ಠವಾಗಿದ್ದು, ಇವುಗಳ ಬಗ್ಗೆ ಉದ್ಯೋಗದಾತರಿಗೆ ಕಾನೂನಿನ ಅರಿವು ಮೂಡಿಸಿ ಆ ಮೂಲಕ ಕಾರ್ಮಿಕರಿಗೆ ಸಿಗುವಂತಹ ಸೌಲಭ್ಯಗಳನ್ನು ಸರಿಯಾಗಿ ತಲುಪಿಸಿ, ಮಾನವೀಯ ನೆಲೆಯೊಂದಿಗೆ ಕಾನೂನಿನ ಅಡಿಯಲ್ಲಿ ಕಾರ್ಮಿಕರನ್ನು ದುಡಿಸಿಕೊಳ್ಳುವ ಬಗ್ಗೆ ತಿಳುವಳಿಕೆ ಮೂಡಿಸಿದಾಗ ಕಾಯಿದೆಗಳು ಪರಿಣಾಮಕಾರಿಯಾಗಿ ಅನುಷ್ಠಾನಗೊಳ್ಳುತ್ತವೆ ಎಂದರು. 


ಸಂಘಟಿತ ಹಾಗೂ ಅಸಂಘಟಿತ ಕಾರ್ಮಿಕರಿಗೆ ಅವರ ಪರ ಕಾರ್ಮಿಕ ಕಾನೂನುಗಳಿವೆ. ಅವುಗಳನ್ನು ಅರ್ಥೈಸಿಕೊಂಡು ಉದ್ಯೋಗದಾತರು ಸರ್ಕಾರಿ ಅಥವಾ ಖಾಸಗಿ ಸಂಸ್ಥೆಗಳಲ್ಲಿ ಕಾರ್ಮಿಕರನ್ನು ನೇಮಿಸಿಕೊಳ್ಳಬೇಕು. ಕಾರ್ಮಿಕರ ದುಡಿಮೆಗೆ ಅನುಗುಣವಾಗಿ ಕನಿಷ್ಠ ವೇತನ ಕಾಯಿದೆ ಅನ್ವಯ ಸಂಬಳ, ಸಾಮಾಜಿಕ ಭದ್ರತಾ ಸೌಲಭ್ಯಗಳಾದ ಇ.ಎಸ್.ಐ, ಪಿಎಫ್, ಹೆಚ್ಚುವರಿ ಕೆಲಸ ಮಾಡಿಸಿಕೊಂಡಲ್ಲಿ ಹೆಚ್ಚುವರಿ  ಪೇಮೆಂಟ್ ನೀಡುವುದು, ಕಾರ್ಮಿಕರು ಸುರಕ್ಷತೆಯಿಂದ ಕೆಲಸ ಮಾಡಲು ಸುರಕ್ಷಿತ ವಾತಾವರಣವನ್ನು ಕಲ್ಪಿಸಬೇಕು ಎಂದರು. 


ಕಾರ್ಮಿಕ ಇಲಾಖೆಯ ಕಾರ್ಯಚಟುವಟಿಕೆಗಳು ಹಾಗೂ ಯೋಜನೆಗಳ ಬಗ್ಗೆ ಸಂಬಂಧಿಸಿದ ಕಾರ್ಮಿಕರು, ಮಾಲೀಕರು ಹಾಗೂ ಸಾರ್ವಜನಿಕರಿಗೆ ತಿಳುವಳಿಕೆ ನಿಡುವ ನಿಟ್ಟಿನಲ್ಲಿ ಕಾರ್ಯಾಗಾರ ಆಯೋಜಿಸಲಾಗಿದ್ದು, ಉದ್ಯೋಗದಾತರು, ಗುತ್ತಿಗೆದಾರರು ಹಾಗೂ ಸಂಘಟಿತ ಮತ್ತು ಅಸಂಘಟಿತ ಕಾರ್ಮಿಕ ಸಂಘಟನೆಗಳ ಪದಾಧಿಕಾರಿಗಳು ಕಾರ್ಯಾಗಾರದ ಸದುಪಯೋಗ ಪಡೆದುಕೊಳ್ಳಬೇಕು ಎಂದರು. 


ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರತೀಕ್ ಬಾಯಲ್ ಮಾತನಾಡಿ, ಕೇಂದ್ರ ಹಾಗೂ ರಾಜ್ಯ ಸರಕಾರಗಳು ಕಾರ್ಮಿಕರ ಸುರಕ್ಷತೆಗೆ ಅನುಗುಣವಾಗಿ ಕಾನೂನುಗಳನ್ನು ರೂಪಿಸಿವೆ. ಸರಕಾರದಿಂದ ಕಾರ್ಮಿಕರ ಸರ್ವತೋಮುಖ ಅಭಿವೃದ್ಧಿಗೆ ಹಲವು ಸವಲತ್ತುಗಳಿವೆ. ಈ ಬಗ್ಗೆ ಹಲವರಿಗೆ ಅರಿವೇ ಇರುವುದಿಲ್ಲ. ಉದ್ಯೋಗದಾತರು ಹಾಗೂ ಸಂಬಂದಪಟ್ಟ ಇಲಾಖೆಗಳು ಇವುಗಳನ್ನು ತಲುಪಿಸುವಲ್ಲಿ ಕಾರ್ಯಪ್ರವೃತ್ತರಾಗುವುದರೊಂದಿಗೆ, ಉದ್ಯೋಗದಾತರು ಸ್ವ-ಜವಾಬ್ದಾರಿಗಳನ್ನು ಅರಿತು ಕಾರ್ಮಿಕರನ್ನು ಕೆಲಸಕ್ಕೆ ನಿಯೋಜಿಸಿಕೊಳ್ಳಬೇಕು ಎಂದರು 


ಉಡುಪಿ ಉಪ ವಿಭಾಗದ ಕಾರ್ಮಿಕ ಅಧಿಕಾರಿ ಕಮಲ್ ಷಾ ಅಲ್ತಾಪ್ ಅಹಮದ್ ಪ್ರಾಸ್ತಾವಿಕವಾಗಿ ಮಾತನಾಡಿ, ಕಾರ್ಮಿಕರ ಕಲ್ಯಾಣವನ್ನು ಆದ್ಯತೆಯನ್ನಾಗಿಸಿಕೊಂಡು ಸರಕಾರ ಹಾಗೂ ಇಲಾಖೆಯು ಕಾರ್ಮಿಕರು ಸಬಲರಾಗಿ, ಆರ್ಥಿಕವಾಗಿ, ಶೈಕ್ಷಣಿಕವಾಗಿ ಹಾಗೂ ಆರೋಗ್ಯದ ಹಿತದೃಷ್ಠಿಯಿಂದ ಹಲವು ಸೌಲಭ್ಯಗಳನ್ನು ಒದಗಿಸುವ ಮೂಲಕ ಕಾರ್ಮಿಕರ ಹಿತಕಾಯುವಲ್ಲಿ ಹಾಗೂ ಜನಪರ ಯೋಜನೆಗಳನ್ನು ಸಕಾಲದಲ್ಲಿ ಕಾರ್ಮಿಕರುಗಳಿಗೆ ತಲುಪಿಸಿದೆ ಎಂದರು.


ಜಿಲ್ಲೆಯಲ್ಲಿ ಉದ್ಭವಿಸುವ ಕೈಗಾರಿಕಾ ವಿವಾದಗಳನ್ನು ಸೌಹಾರ್ದಯುತ ನೆಲೆಯಲ್ಲಿ ಬಗೆಹರಿಸಿ, ಕೈಗಾರಿಕಾ ಶಾಂತಿಯನ್ನು ಕಾಪಾಡುವ ನಿಟ್ಟಿನಲ್ಲಿ ಮೇಲ್ವಿಚಾರಣೆ ನಡೆಸುತ್ತಾ ಬಂದಿದೆ. ಕಾರ್ಮಿಕರ ಹಕ್ಕುಗಳನ್ನು ರಕ್ಷಿಸಿ, ಅವರ ಸ್ಥಿತಿಗತಿಗಳನ್ನು ಉತ್ತೇಜಿಸುವುದರ ಜೊತೆಗೆ ಕೈಗಾರಿಕೆಗಳ ಬೆಳವಣಿಗೆಗೆ ಅನುಕೂಲಕರ ವಾತಾವರಣ ಕಲ್ಪಿಸಿದೆ ಎಂದರು.


ಹಿರಿಯ ಸಿವಿಲ್ ನ್ಯಾಯಾಧೀಶ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಯೋಗೀಶ್ ಪಿ. ಆರ್ ಕಾರ್ಯಕ್ರಮ ಅಧ್ಯಕ್ಷತೆ ವಹಿಸಿ ಮಾತನಾಡಿ, ಕಾರ್ಮಿಕರು ಹಾಗೂ ಮಾಲೀಕರ ನಡುವೆ ಉತ್ತಮ ಬಾಂಧವ್ಯ ಇರಬೇಕು. ಕಾರ್ಮಿಕರುಗಳಿಗೆ ಸೂಕ್ತ ಸೌಲಭ್ಯ ಒದಗಿಸಿದಾಗ ಕಾರ್ಮಿಕರು ಹಾಗೂ ಮಾಲೀಕರ ನಡುವೆ ಯಾವುದೇ ಭಿನ್ನಾಭಿಪ್ರಾಯಗಳು ಉಂಟಾಗುವುದಿಲ್ಲ ಎಂದ ಅವರು, ಉದ್ಯೋಗ ನೀಡಿದಾಗ ಕಾರ್ಮಿಕರ ಅಗತ್ಯ ದಾಖಲೆಗಳನ್ನು ಕಾನೂನಿನ ಪ್ರಕಾರ ನಿರ್ವಹಣೆ ಮಾಡುವುದು ಉದ್ಯೋಗದಾತರ ಜವಾಬ್ದಾರಿ ಎಂದರು.   


ಕಾರ್ಯಾಗಾರದಲ್ಲಿ ಸಂಪನ್ಮೂಲ ವ್ಯಕ್ತಿಗಳು ಕಾರ್ಮಿಕ ಇಲಾಖೆಯಿಂದ ಹಾಗೂ ಇತರೆ ಇಲಾಖೆಯಿಂದ ಅನುಷ್ಠಾನಗೊಳಿಸುತ್ತಿರುವ ವಿವಿಧ ಕಾರ್ಮಿಕ ಕಾಯ್ದೆಗಳ ಪರಿಣಾಮಕಾರಿ ಅನುಷ್ಠಾನದ ಕುರಿತು ಮಾಹಿತಿ ನೀಡಿದರು. 


ಕಾರ್ಯಾಗಾರದಲ್ಲಿ ಮಂಗಳೂರು ವಿಭಾಗದ ಸಹಾಯಕ ಕಾರ್ಮಿಕ ಆಯುಕ್ತೆ ನಾಜಿಯಾ ಸುಲ್ತಾನ, ಕಾರ್ಮಿಕ ಭವಿಷ್ಯ ನಿಧಿ ಸಂಘಟನೆಯ ಜಿಲ್ಲಾ ಪ್ರಾದೇಶಿಕ ಆಯುಕ್ತ ಸಂದೀಪ್ ಕುಮಾರ್, ಕಾರ್ಖಾನೆಗಳು, ಬಾಯ್ಲರುಗಳು ಕೈಗಾರಿಕಾ ಸುರಕ್ಷತೆ ಮತ್ತು ಸ್ವಾಸ್ಥ್ಯ ಇಲಾಖೆಯ ಸಹಾಯಕ ನಿರ್ದೇಶಕ ಪ್ರತಾಪ್ ಹೆಚ್ ಎ, ಕಾರ್ಮಿಕರ ರಾಜ್ಯ ವಿಮಾ ಯೋಜನೆ ಮತ್ತು ವೈದ್ಯಕೀಯ ಸೇವೆಯ ಆಡಳಿತ ವಿಮಾ ವೈದ್ಯಾಧಿಕಾರಿ ಡಾ. ಹೇಮಂತ್ ಕುಮಾರ್, ಮಂಗಳೂರು ಉಪ ವಿಭಾಗದ ಕಾರ್ಮಿಕ ಅಧಿಕಾರಿ ಬಿ.ಆರ್ ಕುಮಾರ್, ಕಾರ್ಮಿಕ ನಿರೀಕ್ಷಕರುಗಳು, ಗುತ್ತಿಗೆದಾರರು, ಸಂಘಟಿತ ಹಾಗೂ ಅಸಂಘಟಿತ ಕಾರ್ಮಿಕ ಸಂಘಟನೆಗಳ ಪದಾಧಿಕಾರಿಗಳು ಹಾಗೂ ಮತ್ತಿತರರು ಉಪಸ್ಥಿತರಿದ್ದರು.

 

ಬಾಲ ಕಾರ್ಮಿಕ ಯೋಜನಾ ಸಂಸ್ಥೆಯ ಯೋಜನಾ ನಿರ್ದೇಶಕಿ ಅಮೃತಾ ಸ್ವಾಗತಿಸಿ, ಮಂಜುಳಾ ಜಿ ತೆಕ್ಕಟ್ಟೆ ನಿರೂಪಿಸಿ, ಕಾರ್ಕಳ ವೃತ್ತ ಕಾರ್ಮಿಕ ನಿರೀಕ್ಷಕ ನವೀನ್ ವಂದಿಸಿದರು. 



  ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter  

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top