ರೋಟರಿ ಕ್ಲಬ್ ಬೆಳ್ತಂಗಡಿ : ದೀಪಾವಳಿ ಸಂಭ್ರಮಾಚರಣೆ
ಬೆಳ್ತಂಗಡಿ: ಬೆಳಕಿನ ಹಬ್ಬವು ವಿಜಯ ಮತ್ತು ಸಾಮರಸ್ಯವನ್ನು ಪ್ರತಿಪಾದಿಸುವ ಹಬ್ಬವಾಗಿದೆ. ಧಾರ್ಮಿಕ ಮತ್ತು ಪೌರಾಣಿಕ ಹಿನ್ನೆಲೆ ಹೊಂದಿರುವ ದೀಪಾವಳಿ ಹಬ್ಬವು, ಸಮಾಜವು ಅಂಧಕಾರದಿಂದ ಎಚ್ಚೆತ್ತುಕೊಂಡು ಬೆಳಕಿನೆಡೆಗೆ ಸಾಗುವುದನ್ನು ಮಾರ್ಗದರ್ಶಿಸುತ್ತದೆ.ಈ ಬೆಳಕು ಸರ್ವರ ಬದುಕನ್ನು ಒಳಿತಿನೆಡೆಗೆ ಬೆಳಗುವ ದಾರಿದೀಪವಾಗಲಿ ಎಂದು ಬೆಳ್ತಂಗಡಿ ರೋಟರಿ ಕ್ಲಬ್ ಅಧ್ಯಕ್ಷ ಪೂರನ್ ವರ್ಮ ಅಭಿಪ್ರಾಯಪಟ್ಟರು.
ಇವರು ಬೆಳ್ತಂಗಡಿ ರೋಟರಿ ಕ್ಲಬ್ ವತಿಯಿಂದ ಉಜಿರೆಯ ಎಸ್.ಡಿ.ಎಂ ಐಟಿ ಕಾಲೇಜಿನ ಕ್ರೀಡಾಂಗಣದಲ್ಲಿ ಆಯೋಜಿಸಿದ್ದ ದೀಪಾವಳಿ ಸಂಭ್ರಮಾಚರಣೆಯಲ್ಲಿ ಮಾತನಾಡಿದರು. ಭಾರತದಲ್ಲಿನ ವಿವಿಧ ಹಬ್ಬಗಳ ಪೈಕಿ ದೀಪಾವಳಿಯು ಹೆಚ್ಚಿನ ಸಂಖ್ಯೆಯಲ್ಲಿ ಆಚರಿಸುವ ಬಹುದೊಡ್ಡ ಹಬ್ಬ. ಹಬ್ಬಗಳು ಜನರ ಜೀವನೋತ್ಸಾಹವನ್ನು ಹೆಚ್ಚಿಸುವುದರ ಜೊತೆಗೆ ಬದುಕಿನ ಪಾಠಗಳನ್ನು ತಿಳಿ ಹೇಳುತ್ತವೆ ಎಂದರು.
ಈ ಸಂದರ್ಭದಲ್ಲಿ ವಿಶೇಷವಾಗಿ ರೋಟರಿ ಸಂಸ್ಥೆಯ ಆನ್ಸ್ ಸದಸ್ಯರುಗಳಿಂದ ಲಕ್ಷ್ಮೀ ಪೂಜೆ ಕಾರ್ಯಕ್ರಮ ನಡೆಯಿತು. ಬಳಿಕ ತುಳು ನಾಡ ಶೈಲಿಯ ಹಬ್ಬದ ಆಚರಣೆಗಳನ್ನು ಯುವ ತಲೆಮಾರಿಗೆ ತಿಳಿಸುವ ಸಲುವಾಗಿ ಪ್ರತಿಯೊಂದು ಪೂಜೆಯ ವಿಧಿ ವಿಧಾನಗಳ ಮಾಹಿತಿಯನ್ನು ವಿವರಿಸಿ ನಂತರ ಎಲ್ಲರ ಸಹಭಾಗಿತ್ವದಲ್ಲಿ ಗೋ ಪೂಜೆ ಮತ್ತು ಬಲೀಂದ್ರನ ಪೂಜೆ ನೆರವೇರಿತು. ಬಲೀಂದ್ರನನ ಕೂಗುವಿಕೆ ಕಾರ್ಯಕ್ರಮದ ಮೆರುಗನ್ನು ಇನ್ನಷ್ಟು ಹೆಚ್ಚಿಸಿತು. ಇದೇ ಸಂದರ್ಭದಲ್ಲಿ ನೆರೆದಿದ್ದ ರೋಟರಿ ಸದಸ್ಯರುಗಳಿಂದ ತಮ್ಮ ತಮ್ಮ ವಾಹನಗಳಿಗೆ ಕುಂಟುಂಬ ಸಮೇತರಾಗಿ ಪೂಜೆ ಸಲ್ಲಿಸಿದರು. ಬಳಿಕ ದೀಪಗಳ ಜೊತೆಯಲ್ಲಿ ಪಟಾಕಿ ಹಚ್ಚುವ ಮೂಲಕ ಬೆಳಕಿನ ಹಬ್ಬವನ್ನು ಸಂಭ್ರಮಾಚರಿಸಲಾಯಿತು.
ಕಾರ್ಯಕ್ರಮದಲ್ಲಿ ರೋಟರಿ ಕ್ಲಬ್ ಸದಸ್ಯರಾದ ರೊ.ಅನಂತ ಭಟ್, ರೊ. ಶ್ರೀಧರ್ ಕೆ ವಿ, ರೊ.ಬಿ.ಕೆ ಧನಂಜಯ್ ರಾವ್, ರೊ.ವಿದ್ಯಾ ಕುಮಾರ್, ರೊ.ಶರತ್ ಕೃಷ್ಣ ಪಡುವೆಟ್ನಾಯ ಮತ್ತು ಆನ್ಸ್ ಕ್ಲಬ್ ಅಧ್ಯಕ್ಷೆ ಗಾಯತ್ರಿ ಶ್ರೀಧರ್, ಕಾರ್ಯದರ್ಶಿ ವಿನಯ ಕಿಶೋರ್ ಸೇರಿದಂತೆ ಹಲವರು ಭಾಗಿಯಾಗಿದ್ದರು. ಕಾರ್ಯಕ್ರಮವನ್ನು ಸ್ತ್ರೀರೋಗ ತಜ್ಞೆ ಡಾ. ಜಿ ಅಂಕಿತ ಭಟ್ ಪ್ರಾರ್ಥನೆಯ ಮೂಲಕ ಆರಂಭಿಸಿದರು. ಬೆಳ್ತಂಗಡಿ ರೋಟರಿ ಕ್ಲಬ್ ಕಾರ್ಯದರ್ಶಿ ಸಂದೇಶ್ ಕುಮಾರ್ ರಾವ್ ವಂದಿಸಿದರು.
ಕೃಷಿ ಪರಿಕರಗಳಿಗೆ ವಿಶೇಷ ಪೂಜೆ
ಕೃಷೀ ಭೂಮಿಗೆ ಹೆಸರಾಗಿರುವ ಬೆಳ್ತಂಗಡಿ ಭಾಗದಲ್ಲಿ, ಹಿಂದಿನಿಂದಲೂ ಕೃಷಿ ಕಾರ್ಯಗಳಿಗೆ ಬಳಸುವ ಕೃಷಿ ಪರಿಕರಗಳಿಗೆ ತನ್ನದ್ದೇ ಆದ ಮಹತ್ವವಿದೆ. ಇಂತಹ ಕೃಷಿ ಪರಿಕರಗಳಿಗೆ ಈ ಸಂದರ್ಭದಲ್ಲಿ ವಿಶೇಷ ಪೂಜೆ ಸಲ್ಲಿಸಲಾಯಿತು. ಕೃಷಿಯಿಂದ ಯುವ ಜನತೆ ತಂತ್ರಜ್ಞಾನಗಳತ್ತ ಸಾಗುತ್ತಿರುವ ವರ್ತಮಾನದಲ್ಲಿ , ಕೃಷಿ ಪರಿಕರಗಳ ಮಹತ್ವ ಮತ್ತು ಉಪಯೋಗಗಳ ಕುರಿತಾಗಿ ನೆರೆದಿದ್ದ ಮಕ್ಕಳು ಮತ್ತು ಸಭಿಕರಿಗೆ ತಿಳಿಸಲಾಯಿತು. ಈ ಸಂದರ್ಭದಲ್ಲಿ ರೋಟರಿ ಕ್ಲಬ್ ಅಧ್ಯಕ್ಷ ಪೂರನ್ ವರ್ಮ, ಕಾರ್ಯದರ್ಶಿ ಸಂದೇಶ್ ಕುಮಾರ್ ರಾವ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


