ಚಿಪ್ ವಿನ್ಯಾಸ ಕ್ಷೇತ್ರದ ಉದ್ಯಮಿ ಗೌತಮ್ ಸಿಂಗ್
ವರದಿ: ರಾಮಚಂದ್ರ ಮುಳಿಯಾಲ
ಬೆಂಗಳೂರು: ಭಾರತದ ಸೆಮಿ ಕಂಡಕ್ಟರ್ ಕ್ಷೇತ್ರ ಇನ್ನೂ ತರುಣಾವಸ್ಥೆಯಲ್ಲಷ್ಟೇ ಇದೆ. ಅವಕಾಶಗಳು ವಿಪುಲವಾಗಿರುವಷ್ಟೇ ಸವಾಲುಗಳ ಪರ್ವತವೂ ಎದುರಿದೆ ಎಂದು ಫೆರ್ಮಿಯಾನಿಕ್ ಕಂಪನಿಯ ಸಹಸಂಸ್ಥಾಪಕರಾದದ ಗೌತಮ್ ಸಿಂಗ್ ಹೇಳಿದ್ದಾರೆ.
ಬೆಂಗಳೂರಿನಲ್ಲಿ ನಡೆಯುತ್ತಿರುವ ಟೆಕ್ ಶೃಂಗಸಭೆಯ ಎರಡನೇ ದಿನವಾದ ಬುಧವಾರ ನಡೆದ “ಭಾರತದ ಚಿಪ್ ವಿನ್ಯಾಸ ಪ್ರತಿಭೆ ಮತ್ತು ಪರಿಸರ ವ್ಯವಸ್ಥೆಯನ್ನು ಸಜ್ಜುಗೊಳಿಸುವಿಕೆ” ಕುರಿತ ಸಂವಾದದಲ್ಲಿ ಅವರು ಮಾತನಾಡಿದರು.
ಸೆಮಿ ಕಂಡಕ್ಟರ್ ಕ್ಷೇತ್ರದ ಕುರಿತಂತೆ ದೇಶಕ್ಕೆ ಮಹತ್ವಾಕಾಂಕ್ಷೆ ಇದೆ. ಆದರೆ ನಮ್ಮ ದೌರ್ಬಲ್ಯಗಳನ್ನು ಅರ್ಥಮಾಡಿಕೊಂಡು ಮುಂದೆ ಸಾಗಿದರೆ ಪ್ರಗತಿ ಸಾಧಿಸಲು ಸುಲಭ. ಸಿಸ್ಟಂ ಡಿಸೈನ್‌ನಲ್ಲಿ ನಾವು ಹಿಂದಿದ್ದೇವೆ. ಉತ್ಪನ್ನಗಳನ್ನು ಮಾರುಕಟ್ಟೆಗೆ ಪರಿಚಯಿಸಿದ ಮೇಲೆ ಉದ್ಯಮಕ್ಕೆ ನಿಜವಾದ ಸವಾಲು ಎದುರಾಗುತ್ತದೆ ಎಂದು ಅವರು ಅಭಿಪ್ರಾಯಪಟ್ಟರು.
ಫ್ಯಾಬ್‌ಲೆಸ್ ಚಿಪ್ ವಿನ್ಯಾಸದಲ್ಲಿ ಭಾರತ ಉತ್ತಮವಾಗಿ ಕೆಲಸ ಮಾಡುತ್ತಿದೆ. ಆದರೆ ಸ್ವತಂತ್ರವಾಗಿ ಉತ್ಪನ್ನ ವಿನ್ಯಾಸದಲ್ಲಿ ನಾವು ಹಿಂದಿದ್ದೇವೆ. ಅದ್ಭುತವಾಗಿ ಪ್ರಗತಿ ಸಾಧಿಸಿರುವ ಇಸ್ರೇಲ್ ಮಾದರಿ ನಮ್ಮ ಕಣ್ಣೆದುರಿದೆ. ಚಿಪ್ ವಿನ್ಯಾಸಕ್ಕೆ ಸಂಬಂಧಿಸಿದಂತೆ ಸರ್ಕಾರದ ನೀತಿ ಪೂರಕವಾಗಿದೆ. ನಿಧಾನವಾಗಿಯಾದರೂ ಈ ಕ್ಷೇತ್ರ ಬೆಳಣಿಗೆ ಸಾಧಿಸುವುದು ನಿಸ್ಸಂಶಯ ಎಂದು ಯಾಲಿ ಕ್ಯಾಪಿಟಲ್‌ನ ಸಂಸ್ಥಾಪಕ ನಿರ್ದೇಶಕರಾದ ಗಣಪತಿ ಸುಬ್ರಮಣಿಯನ್ ಅವರು ಹೇಳಿದರು.
ದೇಶದಲ್ಲಿ ಅಗಾಧ ಪ್ರತಿಭೆಗಳಿವೆ. ಆದರೆ ದೊಡ್ಡ ಸಂಬಳದೊಂದಿಗೆ ಬಹುರಾಷ್ಟ್ರೀಯ ಕಂಪನಿಗಳಲ್ಲಿ ನೆಲೆ ಕಂಡುಕೊಂಡಿದ್ದಾರೆ. ಅವರನ್ನು ಫ್ಯಾಬ್‌ಲೆಸ್ ಚಿಪ್ ಉದ್ಯಮಕ್ಕೆ ಸೆಳೆಯುವುದು ದುಬಾರಿಯಾಗುತ್ತದೆ. ಇದು ಸವಾಲಾಗಿದೆ. ಫ್ಯಾಬ್‌ಲೆಸ್ ಚಿಪ್ ನವೋದ್ಯಮಗಳಿಗೆ ಆರಂಭಿಕ 4,5 ವರ್ಷಗಳ ಕಾಲ ಫಂಡಿಂಗ್ ಅಗತ್ಯವಿದೆ ಎಂದೂ ಅವರು ಅಭಿಪ್ರಾಯಪಟ್ಟರು.
ಸೆಮಿ ಕಂಡಕ್ಟರ್ ಉತ್ಪನ್ನದ ವಿನ್ಯಾಸಕ್ಕೆ ತುಂಬಾ ಸಮಯ ಬೇಕಾಗುತ್ತದೆ. ಅಷ್ಟು ದೀರ್ಘಕಾಲ ಉದ್ಯಮದ ಸ್ಥಿರತೆ ಕಾಪಾಡಿಕೊಳ್ಳುವುದು, ಬಂಡವಾಳ ಕ್ರೋಢೀಕರಿಸುವುದು ಈ ಕ್ಷೇತ್ರದ ಇನ್ನೊಂದು ಸವಲಾಗಿದೆ ಎಂಬುದಾಗಿ ಮಾರ್ವೆಲ್ ಟೆಕ್ನಾಲಜೀಸ್‌ನ ದೇಶದ ಮುಖ್ಯಸ್ಥರಾದ ನವೀನ್ ಬಿಶ್ಮಿ ಹೇಳಿದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ