ಒಂದು ಮಾವಿನ ಕಥೆ

Upayuktha
0

 ಒಂದೇ ಬದುಕು- ಅದರಲೇ ಅಂದವ ಹುಡುಕು




ಅವತ್ತು ಚಾಮರಾಜಪೇಟೆ ಕಡೆಯಿಂದ ರಾಷ್ಟ್ರೋತ್ಥಾನ ಕಡೆಗೆ ಹೋಗುತ್ತಿದ್ದಾಗ ಕಂಡಿದ್ದು ತರಕಾರಿ ಗಾಡಿಯ ತುಂಬ ನವ ವಿಧ ವಿನ್ಯಾಸದಲ್ಲಿ ಪೇರಿಸಿಟ್ಟ ಗಿಣಿ ಮೂತಿಯ ತೋತಾಪುರಿ.ʼಈ ಋತುವಿನಲ್ಲಿ ಮಾವಿನಕಾಯಿ ಅಪಥ್ಯʼ ಅನ್ನೋ ನಮ್ ಮನೆ ದೇವರ ಮಾತು ನೆನಪಿದ್ದರೂ ಇದಕ್ಕೆ ಉಪ್ಪು ಖಾರ ಹಚ್ಚಿ ಆಸ್ವಾದಿಸುತ್ತ ತಿನ್ನುವ ಮಗಳು ಪ್ರಣತಿಯ ಚಿತ್ರದ ಕಲ್ಪನೆಯಲ್ಲಿ ಗಂಡನ ಮಾತು ಜಾಣ ಮರೆವಾಯ್ತು. ಥಟ್ಟನೆ ಗಾಡಿ ನಿಲ್ಲಿಸಿ ಒಂದೇ ಒಂದು ಖರೀದಿಸಿದೆ.


ಶನಿವಾರ ಗುರುಕುಲದಲ್ಲಿ ಮಂಥನ (Parent’s meeting) ಇದ್ದ ಕಾರಣ ಮಕ್ಕಳಿಗೆ ಪಾಠವಿರಲಿಲ್ಲ. ಹಾಗಾಗಿ ಎಂದಿನಂತೆ ಆರೂವರೆಯೊಳಗೆ ತಿಂಡಿ ಸಿದ್ಧವಾಗಬೇಕೆಂಬ ತರಾತುರಿ ಇರಲಿಲ್ಲ. ಕೊಂಚ ನಿರಾಳವಾಗಿಯೇ ಇದ್ದ ಕಾರಣ ಬೆಳಗ್ಗೆ ದೋಸೆ ಮತ್ತು ಮಾವಿನಕಾಯಿ ಚಟ್ನಿ ಮಾಡುವ ಖುಷಿಯಲ್ಲಿ ಸಿಪ್ಪೆ ಕೆತ್ತಿದೆ. ಬಹಳಷ್ಟು ಮಂದಿ ಸಿಪ್ಪೆ ಸಮೇತ ರುಬ್ಬಿದರೆ, ನಾನು ಸಿಪ್ಪೆ ತೆಗೆಯಲೂ ಒಂದು ಕಾರಣವಿದೆ. ಹರಿತವಾದ ಚಾಕು ಸಿಕ್ಕಿದರೆ ಹೂ ಪಕಳೆಯಷ್ಟು ತೆಳ್ಳಗೆ ಸಿಪ್ಪೆ ತೆಗೆಯಬಲ್ಲೆ ಎಂಬ ನನ್ನ ಕೌಶಲ್ಯವನ್ನು ಆಗಾಗ ಶ್ರುತಪಡಿಸಿಕೊಂಡು ಅಹಂಕಾರವನ್ನು ಪೋಷಿಸುವ ಹುಚ್ಚು ಅದು. 


ಅಡಿಗೆ ಎನ್ನುವುದು ನನಗೊಲಿದ ಕಲೆಯೂ ಅಲ್ಲ; ಹೇಗಾದರೂ ಒಲಿಸಿಕೊಳ್ಳುವೆನೆಂಬ ಛಲ ನನಗೂ ಇಲ್ಲ. ಪರಿಣತಿ ಹೇಗೇ ಇರಲಿ, ಶ್ರದ್ಧೆಯಿಂದ ತಯಾರಿಸಿ ಪ್ರೀತಿಯಿಂದ ಬಡಿಸಿದರೆ ಉಣ್ಣುವವರಿಗೆ ಅದು ಸೇರುತ್ತದೆಂದು ನಂಬಿಕೆ. ಆ ಶನಿವಾರದ ಬೆಳಗೂ ಹೀಗೇ ಅಂದುಕೊಂಡು ತೆಗೆದ ಸಿಪ್ಪೆಯನ್ನು ಸರಿಸಿ ಒಂದು ಬದಿಯ ಗುಳ ಕೆತ್ತಿದೆನಷ್ಟೇ; ಅದರ ಜೊತೆಗೂ ತೋರು ಬೆರಳನ್ನೂ ಅಷ್ಟೇ ಸಲೀಸಾಗಿ ಸೀಳಿತ್ತು ನನ್ನ ಪ್ರೀತಿಯ ಹರಿತವಾದ ಚಾಕು. ತೀರ ಹತ್ತಿರದವರು ಎಂದುಕೊಂಡವರೇ ಅಚಾನಕ್ಕಾಗಿ ಕನಸಲ್ಲೂ ಊಹಿಸದಂಥ ಮೋಸ ಮಾಡ್ತಾರಲ್ಲ, ಥೇಟ್ ಹಾಗೆ. 



ಕೆ.ಆರ್.ಎಸ್. ಕ್ರೆಸ್ಟ್ ಗೇಟ್ ತೆರೆದಾಗ ಧುಮ್ಮುಕ್ಕುವ ನೀರಿನ ಜೊತೆ ಸ್ಫರ್ಧೆಗಿಳಿದಂತೆ ಚಿಮ್ಮಿತ್ತು ರಕ್ತ. ನಾನು ಕಿರುಚಿಕೊಂಡ ಪರಿಗೆ ಗಂಡ, ಮಕ್ಕಳಿಬ್ಬರೂ ಮರುಕ್ಷಣ ಅಡಿಗೆ ಮನೆಯಲ್ಲಿದ್ದರು. ನಲ್ಲಿ ನೀರಿನ ಕೆಳಗೆ ಬೆರಳು ಹಿಡಿದ ನಾನು “ಕಾಯೆಣ್ಣೆ” ಎಂದು ಬಡಬಡಿಸುತ್ತಿದ್ದಂತೆ ಹತ್ತಿ, ಬ್ಯಾಂಡೇಜ್ ಬಟ್ಟೆ, ಕಾಯೆಣ್ಣೆ ಎಲ್ಲ ತಂದು ಮೂರೂ ಜನರ ಜಂಟಿ ಕಾರ್ಯಾಚರಣೆಯಲ್ಲಿ ಕಾಮಗಾರಿ ಪೂರ್ಣವಾಗಿ ಬೆರಳು ಶ್ವೇತಾಂಬರಿಯಾಗಿ ಕಂಗೊಳಿಸಿತ್ತಾದರೂ ತಲೆ ಸುತ್ತಲಾರಂಭಿಸಿತು. ಒಂದ್ಹತ್ತು ನಿಮಿಷಗಳು ಮಲಗೆದ್ದು ಅಡಿಗೆ, ನಿತ್ಯ ಕಲಾಪಗಳು ಮುಂದುವರಿದವು. ರಕ್ತ ಬರುವುದು ನಿಂತಿದ್ದರೂ ಜೀವ ಹೋಗುವಂಥ ನೋವ್ಯಾಕಾಗ್ತಿದೆ, ಹೊಟ್ಟೆಯೊಳಗ್ಯಾಕೆ ಅಷ್ಟು ಸಂಕಟ ಅರ್ಥವಾಗಲಿಲ್ಲ. ಗುರುಕುಲದಲ್ಲಿನ ಮಂಥನಕ್ಕೆ ಹೋಗಿದ್ದ ನಮ್ ಡಾಕ್ಟ್ರು ಮಧ್ಯಾಹ್ನ ಊಟದ ಬಿಡುವಿನಲ್ಲಿ ಕರೆ ಮಾಡಿದಾಗ ನನ್ನ ದನಿಯಲ್ಲೇ ಇದೆಲ್ಲ ಅರ್ಥವಾದವರಂತೆ “ಬಹುಶಃ ಗಾಯ ಆಳವಾಗಿದೆ ಅನಿಸುತ್ತಿದೆ; ಬೆಳಗ್ಗೆ ಗಾಯವೇ ಕಾಣದಷ್ಟು ರಕ್ತ ಹರೀತಿತ್ತಲ್ಲ ಹಾಗಾಗಿ ಸ್ಪಷ್ಟವಾಗಲಿಲ್ಲ. ಸಂಜೆ ನಾನು ಬಂದ ತಕ್ಷಣ ಆಸ್ಪತ್ರೆಗೆ ಹೋಗೋಣ. ಹೊಲಿಗೆ ಹಾಕಬೇಕಾ ನೋಡಬೇಕು” ಎಂದರು. ನಾನು ಎಂದಿನ ಭಂಡ ಧೈರ್ಯದಲ್ಲಿ “ಅಷ್ಟೆಲ್ಲ ಸೀನ್ ಇಲ್ಲ, ರಕ್ತ ಕಟ್ಟಿದೆ; ಹಾಗಾಗಿ ಜಾಸ್ತಿ ಏನಾಗಿರಲ್ಲ ಡಾಕ್ಟ್ರೇ, ನೀವು ಮಂಥನ ಮುಗಿಸಿ ಕ್ಲಿನಿಕಿಗೆ ಹೋಗಿ. ಅನಿವಾರ್ಯ ಅನಿಸಿದರೆ ನಾನೇ ಹೇಳ್ತೇನೆ. ರಾತ್ರಿ ಕ್ಲಿನಿಕ್ಕಿಂದ ಬಂದ ನಂತರ ಮತ್ತೆ ಗಾಯವನ್ನು ಮತ್ತೆ ಸ್ವಚ್ಛ ಮಾಡಿ ಇನ್ನೊಂದು ಸಲ ಕಾಯೆಣ್ಣೆ ಹಚ್ಚಿದ್ರಾಯ್ತು” ಎಂದೆ. ಹೊಸಬರಲ್ಲದ ಡಾಕ್ಟ್ರೂ ಹಳೆಯ ರೋಗಿಯ ಮುಂದೆ ಸುಮ್ಮನಾದರು. 



ರಾತ್ರಿಯೂಟ ಮುಗಿದು ನಾನು ಅಡಿಗೆ ಮನೆಯ ತೊಳಿ-ಬಳಿ ಮುಗಿಸುವಷ್ಟರಲ್ಲಿ ಅಪ್ಪ, ಮಕ್ಕಳು ಏನೋ ಮಹತ್ಕಾರ್ಯಕ್ಕೆ ತಯಾರಿ ಮಾಡುವವರಂತೆ ಮತ್ತದೇ ಕಾಯೆಣ್ಣೆ ಡಬ್ಬಿ ಇತ್ಯಾದಿ ಸರಕುಗಳನ್ನು ತಂದಿಟ್ಟುಕೊಂಡು, ತೀರ ಅವಶ್ಯಕ ಎನಿಸಿದರೆ ಇರಲೆಂದು ಹಳೆಯ ಪತ್ರಿಕೆ ಹಾಸಿ, ಬೆರಳ ಶ್ವೇತಾಂಬರ ಬಿಚ್ಚಿ ಹೊಸದನ್ನು ತೊಡಿಸಲು ಸಕಲ ಸಿದ್ಧತೆ ಮಾಡಿಕೊಂಡಿದ್ದರು. ಮದುವೆ ಮನೆಯಲ್ಲಿ ಅಲಂಕಾರ ಮಾಡಲು ಕಾದು ಕೂತಿರ್ತಾರಲ್ಲ, ಥೇಟ್ ಅದೇ ಭಾವ-ಭಂಗಿ. ಶೋ-ಸ್ಟಾಪರ್ ಥರ ಬಂದು ಬೆರಳು ಮುಂಚಾಚಿದೆ. ಗಾಯ ನೋಡುವ ಕುತೂಹಲದಲ್ಲಿ ಕೂಸುಗಳು ಯಾವತ್ತಿಗಿಂತ ಹೆಚ್ಚೇ ಕಣ್ಣರಳಿಸಿದ್ದರು. ಡಾಕ್ಟ್ರು ಕಟ್ಟು ಬಿಚ್ಚುವುದನ್ನೇ ಕಾಯುತ್ತಿದ್ದೆ ಎಂಬ ಹಾಗೆ ಈ ಬಾರಿ ತೆರೆದ ಕ್ರೆಸ್ಟ್ ಗೇಟ್ನಿಂದ ʼತಾಕತ್ತಿದ್ದರೆ ತಡೆಯಿರಿʼ ಎಂದು ಸವಾಲೆಸುವಂತೆ ಹರಿದ ರಕ್ತ ಅರೆನಿಮಿಷದಲ್ಲಿ ಇಡೀ ನ್ಯೂಸ್ ಪೇಪರನ್ನು ತೋಯಿಸಿತ್ತು ಮತ್ತು ಏನು ಮಾಡಿದರೂ ರಕ್ತ ನಿಲ್ಲಲಿಲ್ಲ. “ಇದ್ಯಾಕೋ ನಾವು ಅಂದ್ಕಂಡಂತಿಲ್ಲ, ನಡಿ,  ಕೂಡ್ಲೇ ಆಸ್ಪತ್ರೆಗೆ ಹೋಗಬೇಕು; ಬಹುಶಃ ಹೊಲಿಗೆ ಹಾಕಬೇಕಾಗಬಹುದು” ಎಂದಾಗ ಮರು ಮಾತಾಡದೇ ಹೊರಟೆ.



ಮನೆಯ ಹತ್ತಿರದ ಆಸ್ಪತ್ರೆ ತಲುಪಿದಾಗ ಎದುರಾದ ಸೆಕ್ಯುರಿಟಿ ಅಣ್ಣಯ್ಯ casualty ವರೆಗೂ ಬಿಟ್ಟು ಹೋದರು. ಉಟ್ಟ ನಂತರ ಮತ್ತೊಮ್ಮೆ ಇಸ್ರ್ತಿ ಮಾಡಿದ್ದರೇನೋ ಎಂಬಷ್ಟು ಒಪ್ಪವಾಗುಟ್ಟಿದ್ದ ಸೀರೆ, ಹಣೆಯಲ್ಲಿ ಕಾಸಿನಗಲ ಬೊಟ್ಟು, ಎರಡೂ ಕೈಗಳ ತುಂಬ ಕೆಂಪು ಗಾಜಿನ ಬಳೆಗಳನ್ನು ತೊಟ್ಟ ಡಾ. ಗುಂಜನ್ ಅವರನ್ನು ಕಂಡಾಗ ಆ ನೋವಿನಲ್ಲೂ ಹಾಯೆನಿಸಿತು. ಮನೆ ಡಾಕ್ಟ್ರೂ, ಆಸ್ಪತ್ರೆ ಡಾಕ್ಟ್ರೂ ಒಂದೆರಡು ನಿಮಿಷಗಳ ಮಾತಿನಲ್ಲೇ ವಿಷಯ ವಿನಿಮಯ ಮಾಡಿಕೊಂಡರು. ತಕ್ಷಣ ಒಂದು ಬೆಡ್ ಬಳಿ ಕರ್ಕೊಂಡು ಹೋಗಿ ಮಲಗಿಸಿ ನರ್ಸೊಬ್ಬರು ಪ್ರಾಥಮಿಕ ವಿಧಿಗಳನ್ನು (ಬಿ.ಪಿ ನೋಡುವುದು ಇತ್ಯಾದಿ) ಶುರು ಮಾಡಿದರು. ಐದೇ ನಿಮಿಷದಲ್ಲಿ ಮರಳಿ ಬಂದ ಡಾ. ಗುಂಜನ್ ತುರ್ತು ಚಿಕಿತ್ಸೆಗೆ ಹೇಳಿ ಮಾಡಿಸಿದಂತೆ ನಯ, ನಾಜೂಕು ಮತ್ತು ಸ್ಪರ್ಶದಲ್ಲಿ ಪ್ರೀತಿ. ಮಕ್ಕಳೆಷ್ಟು, ಏನು ಓದುತ್ತಿದ್ದಾರೆ, ಅಡುಗೆ ಮನೆಯಲ್ಲಿ ಇಷ್ಟು ಆಳವಾದ ಗಾಯ ಹೇಗಾಯ್ತು ಎಂದೆಲ್ಲ ಕೇಳುತ್ತ ಮತ್ತೊಮ್ಮೆ ರಿವೈಂಡ್, ಪ್ಲೇ ಮಾಡಿ ಇನ್ನೇನು ಕಥೆ ಮುಗಿಯಿತು ಎನ್ನುವಷ್ಟರಲ್ಲಿ ಗಾಯದ ಆಳ ನೋಡಬೇಕೆಂದು ಕೆತ್ತಿ ಹೋದ ಬೆರಳಿನ ಭಾಗವನ್ನು ಕೊಂಚ ಸರಿಸಿದರು ನೋಡಿ, ಇಡೀ casuality ಬೆಚ್ಚುವ ರೀತಿಯಲ್ಲಿ ಕಿರುಚಿದ್ದೆ. ಡಾ.ಗುಂಜನ್ ತಣ್ಣಗೆ ಕೇಳಿದರು “ನಿಮ್ಮದು ನಾರ್ಮಲ್ ಡೆಲಿವರಿಯಾ? ಸಿಝೇರಿಯನಾ?” ನೋವಿನ ನಡುವಲ್ಲೂ ಹೇಳಿದೆ “ಡೆಲಿವರಿ ನಾರ್ಮಲ್. ಆ ನೋವು ಮರೆತು ಹತ್ತು ವರ್ಷಗಳಾದವು”



ಅಡಿಗೆ ಮನೆಯಲ್ಲಾದ ಗಾಯವೊಂದು ಅಷ್ಟು ನೋವು ಕೊಡಬಹುದು ಎಂದು ಅರಿವಾದ ಯುರೇಕಾ ಘಳಿಗೆಯದು. ಅಲ್ಲಿಯವರೆಗೂ ಅಳದವಳು ಆಗ ಮಾತ್ರ ಸುಮಾರು ಹತ್ತು ನಿಮಿಷಗಳ ಕಾಲ ಬಿಕ್ಕಿ ಬಿಕ್ಕಿ ಅತ್ತಿದ್ದೆ. ಅಳುವಿನ ನಡುವೆಯೂ ಕೇಳಿಸಿತ್ತು; ಡಾ.ಗುಂಜನ್ ತನ್ನ ಮೆಲುದನಿಯಲ್ಲಿ ಹೇಳುತ್ತಿದ್ದರು “It is an arterial cut doctor. We need to stitch.  Arterial cut ಅಂದರೆ ಅಪಧಮನಿಯೇ ತುಂಡಾಗಿದೆ ಅನ್ನೋದು ಅರ್ಥವಾದಾಗ ಯಾರೂ ಏನೂ ಹೇಳದೆಯೇ ಗಾಯದ ಗಂಭೀರತೆಯೂ ಅರ್ಥವಾಗಿತ್ತು. ಹದಿನೈದಿಪ್ಪತ್ತು ದಿನಗಳ ನೋವಿಗೆ ಸಿದ್ಧಳಾದೆ. ಎಲ್ಲ ಕ್ಲೀನ್ ಮಾಡಿ ಸ್ಟಿಚ್ ಮುಗಿಸಲು I need 30-40 min. ನೀವು ಕೂತಿರಿ ನಾನು ಎಲ್ಲ ರೆಡಿ ಮಾಡಿಸ್ತೀನಿ.”ಸಿಸ್ಟರ್ ಸುಪ್ರೀತಾ ಒಂದು ಟಿ.ಟಿ, ಇನ್ನೊಂದು ಪೈನ್ ಕಿಲ್ಲರ್ ಕೊಟ್ಟು ಉಳಿದ ಸಿದ್ಧತೆ ಮಾಡಿಕೊಳ್ಳುತ್ತಿದ್ದ ಹಾಗೇ ಹಸನ್ಮುಖಿ ಡಾ.ಗುಂಜನ್ ಬಂದು ಪಕ್ಕದಲ್ಲಿ ಕುಳಿತು ನನ್ನ ಕೈಯನ್ನು ತಮ್ಮ ಕೈಗಳಲ್ಲಿರಿಸಿಕೊಂಡು ಹಾಡೊಂದನ್ನು ಗುನುಗುತ್ತಿದ್ದರು. ತಾಯಿ ಮಮತೆಯ ಇಂಥ ವೈದ್ಯರಿದ್ದರೆ ಯಾವ ನೋವಿದ್ದರೂ ತಡೆದುಕೊಳ್ಳಬಹುದು ಎನಿಸಿದ ಕ್ಷಣವದು. ಗಾಯವನ್ನೆಲ್ಲ ಸ್ವಚ್ಛಗೊಳಿಸಿ ಹೊಲಿಗೆ ಹಾಕಲನುವಾದಾಗ ಮತ್ತೆ ಕೇಳಿದ್ದೆ “ಅನಸ್ತೇಷಿಯಾ ಕೊಟ್ಟೇ ಹೊಲೀತೀರ ಅಲ್ವಾ ಡಾಕ್ಟರ್?” ಈ ಸಲ ದೊಡ್ಡದಾಗಿ ಕಣ್ಣು ಬಿಟ್ಟು ಕೇಳಿದ್ರು “ನಾರ್ಮಲ್ ಡೆಲಿವರಿ ತಡ್ಕೊಂಡವರಲ್ವಾ ನೀವು? ಆವಾಗ ಅನಸ್ತೇಷಿಯಾ ಕೊಟ್ಟಿದ್ರಾ?” ಬಾಯ್ಮಿಚ್ಚಿ ಕೂರದೇ ವಿಧಿಯಿರಲಿಲ್ಲ. ಇಷ್ಟೆಲ್ಲ ಆಗುವಷ್ಟರಲ್ಲಿ ʼಮಿಷನ್ ಮಾವಿನಕಾಯಿʼ ಕೊನೇ ಹಂತ ತಲುಪಿತ್ತು. ಗಾಯದ ಸುತ್ತ ಲೋಕಲ್ ಅನಸ್ತೇಷಿಯಾ ನಾಲ್ಕೂ ದಿಕ್ಕುಗಳಲ್ಲಿ ಚುಚ್ಚಿ ಐದು ನಿಮಿಷಕ್ಕೆಲ್ಲ ಬೆರಳು ಮರಗಟ್ಟಿದಂತೆ ಭಾಸವಾಯಿತು. ಹಾಡು ಗುನುಗುತ್ತಲೇ ಡಾಕ್ಟರ್ ದರ್ಜಿಯಾದರು. ಹೊಲಿಗೆ ಮುಗಿಸಿ ಒಂದಷ್ಟು ಔಷಧಿಗಳನ್ನೂ ಹಚ್ಚಿ ಮತ್ತೆ ಬೆರಳಿಗೆ ಶ್ವೇತಾಂಬರ ಧಾರಣೆಯಾಗಿ “ಎರಡು ದಿನಕ್ಕೊಮ್ಮೆ ಬಂದು ಡ್ರೆಸಿಂಗ್ ಮಾಡಿಸಿಕೊಂಡು ಹೋಗಿ, ಯಾವ ಕಾರಣಕ್ಕೂ ನೀರು ಸೋಕದಂತೆ ಎಚ್ಚರಾಗಿರಿ...” ಇತ್ಯಾದಿ ಇತ್ಯಾದಿಗಳೆಲ್ಲ ಮುಗಿಯುವಾಗ ನಡುರಾತ್ರಿ 12.00 ಆಗಿತ್ತು. ಹೊರಡುವಾಗ ಮನಸು “ಎಲ್ಲ ಆಸ್ಪತ್ರೆಗಳ ತುರ್ತು ಚಿಕಿತ್ಸಾ ಘಟಕಗಳಿಗೂ ಒಬ್ಬರಾದರೂ ಡಾ.ಗುಂಜನ್ ದಕ್ಕಲಿ” ಎನ್ನುವ ಮಟ್ಟಿಗೆ ನನ್ನ ಸೆಳೆದಿದ್ದರು ಅಕ್ಕಯ್ಯ.



ಮುಂಚಿನ ದಿನ ಏನೂ ಆಗಲೇ ಇಲ್ಲವೇನೋ ಎಂಬಂತೆ ಮಾರನೆಯ ದಿನ ಎದ್ದು ಅದೇ ಮಾವಿನಕಾಯಿಯನ್ನು ಹಿಂದಿನ ದಿನದಷ್ಟೇ ಪ್ರೀತಿಯಿಂದ ಹೆಚ್ಚಿ ಚಟ್ನಿ ಮಾಡಿ ತಿನ್ನುವ ಮೂಲಕ ʼಇಷ್ಟಕ್ಕೆಲ್ಲ ಕಾರಣವಾದರೂ ನಿನ್ನ ಮೇಲಿನ ಪ್ರೀತಿ ಹಾಗೇ ಇದೆʼ ಎಂಬುದನ್ನು ಶ್ರುತಪಡಿಸಲಾಯ್ತು.



ಮರೆಯುವ ಮುನ್ನ: “ಒಂದು ಮಾವಿನಕಾಯಿ ದಸೆಯಿಂದ ಖರ್ಚು ಮಾಡಿದ ಇದೇ ನಾಲ್ಕು ಸಾವಿರ ಕೊಟ್ಟಿದ್ರೆ ಯಾರಾದರೂ ವರ್ಷ ಪೂರ್ತಿ ಮಾವಿನ ಚಟ್ನಿ ಮಾಡಿ ಕೊಡ್ತಿದ್ರಪ್ಪ” ಅಂದ್ಬಿಟ್ರಲ ನಮ್ಮನೆ ಡಾಕ್ಟ್ರು! 


ಅಂದ್ಹಾಗೆ ಈಗ ವಾಸಿಯಾಗುತ್ತಿರುವ ಗಾಯದ ದೈನಂದಿನ ಕ್ಲೀನಿಂಗ್, ಡ್ರೆಸಿಂಗ್ ಇತ್ಯಾದಿಗಳಿಗೆ, ಅಡುಗೆಗೆ ಬೇಕಾದ ಎಲ್ಲ ತರಕಾರಿ ಹೆಚ್ಚುವ, ಅನ್ನ ಬಸಿಯುವ… ಮುಂತಾದವುಗಳಿಗೀಗ ಅವರೇ ಉಸ್ತುವಾರಿ ಸಚಿವರು ಎಂಬಲ್ಲಿಗೆ ಮಾವಿನಕಾಯಿ ಪುರಾಣ ಸಂಪನ್ನ.


- ಶಮ ನಂದಿಬೆಟ್ಟ


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 


Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top