ಸಾಂಸ್ಕೃತಿಕ- ವಿಚಾರ ಕ್ರಾಂತಿಗೆ ಬಾನುಲಿ ಕೊಡುಗೆ ಅಪಾರ: ಎಂ.ಬಿ ಪಾಟೀಲ್
ಕಲಬುರಗಿ: ಆಕಾಶವಾಣಿ ಕೇಂದ್ರಗಳು ಸಾಂಸ್ಕೃತಿಕ ರಂಗದ ಉತ್ತೇಜನ ಹಾಗೂ ಜನಮಾನಸದಲ್ಲಿ ವೈಚಾರಿಕ ಕ್ರಾಂತಿಗೆ ಪ್ರೇರಣೆ ನೀಡುವ ಪ್ರಬಲ ಮಾಧ್ಯಮ ಎಂದು ದೂರದರ್ಶನ ಕೇಂದ್ರದ ನಿವೃತ್ತ ನಿರ್ದೇಶಕ ಎಂ.ಬಿ ಪಾಟೀಲ್ ಹೇಳಿದರು.
ಕಲಬುರ್ಗಿ ಆಕಾಶವಾಣಿ ಕೇಂದ್ರದ 59ನೇ ಸಂಸ್ಥಾಪನಾ ದಿನದ ಅಂಗವಾಗಿ ನವೆಂಬರ್ 11ರಂದು ನಿಲಯದ ಸ್ಟುಡಿಯೋದಲ್ಲಿ ಏರ್ಪಡಿಸಿದ ನೇರ ಪ್ರಸಾರ ಕಾರ್ಯಕ್ರಮದಲ್ಲಿ ಶ್ರೋತೃಗಳ ಜೊತೆ ಮಾತನಾಡುತ್ತಾ ಆಕಾಶವಾಣಿಯು ತೆರೆದ ವಿಶ್ವವಿದ್ಯಾಲಯವಾಗಿದ್ದು ಜನತೆಯ ಅಶೋತ್ತರಗಳಿಗೆ ಸ್ಪಂದಿಸುವ ಮತ್ತು ಮೌಲಿಕ ಕಾರ್ಯಕ್ರಮಗಳಿಂದಾಗಿ ಮಾಧ್ಯಮಗಳ ಭರಾಟೆಯ ನಡುವೆಯು ಕೂಡ ತನ್ನ ಘನತೆಯನ್ನು ಉಳಿಸಿಕೊಂಡಿದೆ. ಸವಾಲುಗಳನ್ನು ಮೆಟ್ಟಿ ನಿಂತ ಶ್ರಾವ್ಯ ಮಾಧ್ಯಮ ಬಾನುಲಿಯು ಅಭಿವೃದ್ಧಿಗೆ ದೊಡ್ಡ ಕೊಡುಗೆಯನ್ನು ನೀಡಿದೆ. ಕೇಳುಗರ ಹಿತಾಸಕ್ತಿ ಕಾಪಾಡಿ ಅವರ ಆಶಯದ ಕಾರ್ಯಕ್ರಮಗಳನ್ನು ರೂಪುಗೊಳಿಸಿ, ಜನಾನುರಾಗಿ ಮಾಧ್ಯಮವಾಗಿ ಬೆಳೆದು ನಿಂತಿದೆ. ದೂರದರ್ಶನಕ್ಕಿಂತಲೂ ಆಕಾಶವಾಣಿ ಜನರಿಗೆ ಅತ್ಯಂತ ಹತ್ತಿರವಾಗಿ ಆಪ್ತತೆಯನ್ನು ಉಳಿಸಿಕೊಂಡು ಬೆಳೆದಿದೆ. ಸಾಹಿತ್ಯ ಮತ್ತು ಸಾಂಸ್ಕೃತಿಕ ರಂಗದಲ್ಲಿ ಅನೇಕ ಹೊಸ ಮುಖಗಳು ತಮ್ಮ ಪ್ರತಿಭೆಯನ್ನು ಸಾದರಪಡಿಸಲು ಆಕಾಶವಾಣಿ ಕಾರಣವಾಗಿ ವಿಚಾರ ಕ್ರಾಂತಿಯನ್ನು ಮಾಡಿದ ಹೆಗ್ಗಳಿಕೆಗೆ ಪಾತ್ರವಾಗಿದೆಯಲ್ಲದೆ ಬಾನುಲಿಗೆ ಸರಿಸಾಟಿಯಾಗಿ ಇತರ ಯಾವುದೇ ಮಾಧ್ಯಮ ಇಲ್ಲ. ಅದನ್ನು ಉಳಿಸಿ ಬೆಳೆಸುವ ಜವಾಬ್ದಾರಿ ಕೇಳುಗರ ಮತ್ತು ನಿಲಯದ ಸಿಬ್ಬಂದಿಗಳ ಕೈಯಲ್ಲಿದ್ದು ಆಕಾಶವಾಣಿಯು ಉತ್ತಮ ಭವಿಷ್ಯ ಹೊಂದಿದೆ ಎಂದು ಪಾಟೀಲ್ ನುಡಿದರು.
ರಂಗಾಯಣದ ನಿರ್ದೇಶಕಿ ಡಾ. ಸುಜಾತಾ ಜಂಗಮಶೆಟ್ಟಿ ಮಾತನಾಡಿ ಕಲಾವಿದರು ಸಾಹಿತಿ ಬರಹಗಾರರನ್ನು ಸೃಷ್ಟಿಸುವ ಪ್ರಯೋಗ ಶಾಲೆ ಆಕಾಶವಾಣಿಯಾಗಿದ್ದು ಆ ಮೂಲಕ ರಂಗಾಯಣ ಸೇರಿದಂತೆ ಅನೇಕ ಸಂಸ್ಥೆಗಳಲ್ಲಿ ಅನೇಕರು ಸ್ಥಾನ ಪಡೆಯಲು ಮತ್ತು ವಿವಿಧ ರಂಗಗಳಲ್ಲಿ ಬೆಳೆಯಲು ಸಾಧ್ಯವಾಗಿದೆ ಎಂದು ತಮ್ಮ ಅನುಭವವನ್ನು ಹಂಚಿಕೊಂಡರು.
ನಿಲಯದ ಕಾರ್ಯಕ್ರಮ ಮುಖ್ಯಸ್ಥರಾದ ಸೋಮಶೇಖರ್ ರುಳಿ ಪ್ರಾಸ್ತಾವಿಕವಾಗಿ ಮಾತನಾಡಿ ಕೇಳುಗರ ಮನೋಭಿಲಾಷೆಯಂತೆ ನವೀನ ಕಾರ್ಯಕ್ರಮಗಳನ್ನು ಸಿದ್ಧಗೊಳಿಸಲು ಆಕಾಶವಾಣಿ ಸದಾ ಸಿದ್ಧ ಎಂದರು. ನಿಲಯದ ತಾಂತ್ರಿಕ ಮುಖ್ಯಸ್ಥರಾದ ಗೋಪಾಲ ನಾಯಕ್ ಮಾತನಾಡಿ ಆಧುನಿಕ ಪ್ರಸಾರ ತಂತ್ರಜ್ಞಾನದ ವ್ಯವಸ್ಥೆಯಿಂದ ಕಲಬುರಗಿ ಬಾನುಲಿ ಕೇಂದ್ರವು ಹೆಚ್ಚು ಜನರನ್ನು ತಲುಪುತ್ತಿರುವುದು ಸಂತಸದ ಸಂಗತಿ ಎಂದರು.
ಕಾರ್ಯಕ್ರಮ ನಿರ್ವಾಹಕ ಸಿದ್ದಣ್ಣ, ಪ್ರಸಾರ ನಿರ್ವಾಹಕ ಸಂಗಮೇಶ್, ಉದ್ಘೋಷಕಿ ಶಾರದಾ ಜಂಬಲದಿನ್ನಿ ಕಾರ್ಯಕ್ರಮ ನಡೆಸಿಕೊಟ್ಟರು. ಈ ಕಾರ್ಯಕ್ರಮದಲ್ಲಿ ಕೇಳುಗರಾದ ಗೌತಮ ಗಾಯಕವಾಡ ಹಾರಕೂಡ, ಶರಣಪ್ಪ ಬೆಳಾಮ, ಶ್ರೀಶೈಲ ಬೆಳಗಾವಿ, ನರೇಶ ರೆಡ್ಡಿ ಸೇಡಂ, ಶಿವಾನಂದ ಸಾಂಗ್ಲಿ, ಶಿವಲಿಂಗಪ್ಪ ಭದ್ರ ಮಾದನ ಹಿಪ್ಪರಗಿ, ಶಿವರಾಜ್ ಭೀಮಳ್ಳಿ, ಕುಪೇಂದ್ರ ಶಾಸ್ತ್ರಿ ಕೃಷ್ಣಮೂರ್ತಿ, ಭೀಮಸೇನ್ ರಾವ್ ಕುಲಕರ್ಣಿ, ಚಂದ್ರಶೇಖರ ಚಿತ್ತಾಪುರ ಕರೆ ಮಾಡಿ ಮಾತನಾಡಿದರು. ತಾಂತ್ರಿಕ ವಿಭಾಗದ ಪ್ರಭು ನಿಷ್ಠಿ ಎಂ.ಎ ಖಾಸದಾರ, ಜಿ . ವಿ.ಕುಲಕರ್ಣಿ, ಲಕ್ಷ್ಮಿಕಾಂತ್ ಪಾಟೀಲ್, ಶಿವ ಕುಮಾರ್, ಆಜಾದ್ ಪುರ ಉಪಸ್ಥಿತರಿದ್ದರು.
ಹಿರಿಯರಿಗೆ ಗೌರವ- ಸನ್ಮಾನ:
ಆಕಾಶವಾಣಿ ಮತ್ತು ದೂರದರ್ಶನ ಕೇಂದ್ರದಲ್ಲಿ ಬಹುಕಾಲ ಸೇವೆ ಸಲ್ಲಿಸಿ ಜನಪ್ರಿಯರಾದ ದೂರದರ್ಶನ ಕೇಂದ್ರದ ಹಿರಿಯ ನಿವೃತ್ತ ನಿರ್ದೇಶಕ ಎಂ. ಬಿ. ಪಾಟೀಲ್ ಹಾಗೂ ಪ್ರಸಾರ ಕಾರ್ಯದಲ್ಲಿ ತೊಡಗಿ ಆಕಾಶವಾಣಿ ಮತ್ತು ದೂರದರ್ಶನ ಕೇಂದ್ರಗಳಲ್ಲಿ ತಾತ್ಕಾಲಿಕ ಉದ್ಘೋಷಕಿಯಾಗಿ ಕಾರ್ಯನಿರ್ವಹಿಸಿದ ರಂಗಾಯಣ ನಿರ್ದೇಶಕರಾದ ಡಾ. ಸುಜಾತಾ ಜಂಗಮಶೆಟ್ಟಿ ಅವರನ್ನು ಆಕಾಶವಾಣಿಯ 59ನೇ ಸಂಸ್ಥಾಪನಾ ದಿನದ ಅಂಗವಾಗಿ ಕಾರ್ಯಕ್ರಮ ಮುಖ್ಯಸ್ಥ ಸೋಮಶೇಖರ ರುಳಿ ಮತ್ತು ಮತ್ತು ಆಕಾಶವಾಣಿಯ ನಿವೃತ್ತ ಹಿರಿಯ ಕಾರ್ಯಕ್ರಮ ನಿರ್ವಹಣಾಧಿಕಾರಿ ಡಾ. ಸದಾನಂದ ಪೆರ್ಲ ಶಾಲು, ಪುಷ್ಪಗುಚ್ಛ ಹಾಗೂ ಕೃತಿಯನ್ನು ನೀಡಿ ಸನ್ಮಾನಿಸಿದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ