- ಸ್ಥಳೀಯ ಸಂಸ್ಥೆಗಳಿಂದ ವಿಧಾನ ಪರಿಷತ್ ಸ್ಥಾನಕ್ಕೆ ನಡೆಯುವ ಚುನಾವಣೆ ಹಿನ್ನೆಲೆ
- ಬಂಟ್ವಾಳ ಬಿಜೆಪಿ ವತಿಯಿಂದ ಜನಪ್ರತಿನಿಧಿಗಳ ಸಮಾವೇಶ
ಬಂಟ್ವಾಳ: ವಿಧಾನ ಪರಿಷತ್ ದಕ್ಷಿಣ ಕನ್ನಡ ಸ್ಥಳೀಯ ಪ್ರಾಧಿಕಾರದ ಕ್ಷೇತ್ರದಲ್ಲಿ ಬಿಜೆಪಿಯು ಸಂಘ-ಪಕ್ಷದ ನಿಷ್ಠೆಯ ಕೆಲಸಕ್ಕಾಗಿ ಸಣ್ಣ ಸಮುದಾಯದ ಪ್ರಾಮಾಣಿಕ ಕೆಲಸಗಾರನಿಗೆ ಅವಕಾಶ ನೀಡಿದ್ದು, ಇದು ಕಾರ್ಯಕರ್ತರೇ ಕಾರ್ಯಕರ್ತನನ್ನು ಗೆಲ್ಲಿಸುವ ಚುನಾವಣೆಯಾಗಿದೆ. ಹೀಗಾಗಿ ಗ್ರಾ.ಪಂ. ಸದಸ್ಯರು, ಪುರಸಭಾ ಸದಸ್ಯರು ಜತೆಯಾಗಿ ತೆರಳಿ ಮತ ಹಾಕುವ ಮೂಲಕ ನಮ್ಮ ಅಭ್ಯರ್ಥಿಯನ್ನು ಗೆಲ್ಲಿಸುವ ಕಾರ್ಯ ಮಾಡಬೇಕು ಎಂದು ದ.ಕ.ಲೋಕಸಭಾ ಕ್ಷೇತ್ರದ ಸಂಸದ ಕ್ಯಾ.ಬ್ರಿಜೇಶ್ ಚೌಟ ಹೇಳಿದರು.
ಅವರು ಬಿ.ಸಿ.ರೋಡಿನ ಸ್ಪರ್ಶ ಕಲಾಮಂದಿರದಲ್ಲಿ ದಕ್ಷಿಣ ಕನ್ನಡ ಸ್ಥಳೀಯ ಪ್ರಾಧಿಕಾರ ಕ್ಷೇತ್ರ ಪರಿಷತ್ ಉಪಚುನಾವಣೆಯ ಹಿನ್ನೆಲೆಯಲ್ಲಿ ಬಂಟ್ವಾಳ ಬಿಜೆಪಿ ವತಿಯಿಂದ ನಡೆದ ಜನಪ್ರತಿನಿಧಿಗಳ ಸಮಾವೇಶದಲ್ಲಿ ಮಾತನಾಡಿದರು. ಸಮಾವೇಶ ಉದ್ಘಾಟಿಸಿದ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿ ಮಾತನಾಡಿ, ಬಂಟ್ವಾಳ ಕ್ಷೇತ್ರದಲ್ಲಿ ಒಟ್ಟು 329 ಬಿಜೆಪಿಯ ಮತಗಳಿದ್ದು, 317 ಪಂಚಾಯತ್ ಸದಸ್ಯರು, 11 ಪುರಸಭಾ ಸದಸ್ಯರು, ತಲಾ ಒಂದೊಂದು ಶಾಸಕರು-ಸಂಸದರ ಮತಗಳಿವೆ. ನಮ್ಮ ಮತ ಜಾಸ್ತಿ ಇದೆ ಎಂದು ಯಾರೂ ಕೂಡ ಸುಮ್ಮನೆ ಕೂರದೆ ತಮ್ಮ ಹಕ್ಕನ್ನು ಚಲಾಯಿಸುವ ಕಾರ್ಯ ಮಾಡಬೇಕು. ಹಿಂದೆ ಕೋಟ ಶ್ರೀನಿವಾಸ ಪೂಜಾರಿ ಅವರು 1500 ಮತಗಳಿಂದ ಗೆದ್ದಿದ್ದು, ಸಂಘಟನೆಯಲ್ಲಿ ತೊಡಗಿ ನಾಯಕರ ಜತೆ ಒಡನಾಟ ಹೊಂದಿರುವ ಪ್ರಾಮಾಣಿಕ ಕಾರ್ಯಕರ್ತನಿಗೆ ಪಕ್ಷ ಅವಕಾಶ ನೀಡಿದೆ ಎಂದರು.
ಬಿಜೆಪಿ ಅಭ್ಯರ್ಥಿ ಕಿಶೋರ್ ಕುಮಾರ್ ಪುತ್ತೂರು ಮಾತನಾಡಿ, ಸಂಘದ ಕಟ್ಟಾಳುವಾಗಿ, ಪಕ್ಷದ ಸಾಮಾನ್ಯ ಕಾರ್ಯಕರ್ತನಾಗಿ ಈವರೆಗೆ ಎಲ್ಲಾ ಜವಾಬ್ದಾರಿಗಳನ್ನುನ್ನು ಪ್ರಾಮಾಣಿಕ ನಿರ್ವಹಿಸಿಕೊಂಡು ಬಂದಿದ್ದು, ಪರಿಷತ್‌ನಲ್ಲಿ ನಿಮ್ಮ ಪರ ಗಟ್ಟಿ ಧ್ವನಿಯಲ್ಲಿ ಮಾತನಾಡುವ ಶಕ್ತಿಯನ್ನು ಪಕ್ಷ ಕೊಟ್ಟಿದೆ ಎಂದರು.
ಚುನಾವಣಾ ನಿರ್ವಹಣಾ ಸಮಿತಿಯ ಸಂಚಾಲಕ ಕ್ಯಾ| ಗಣೇಶ್ ಕ್ಯಾರ್ಣಿಕ್ ಮಾತನಾಡಿ, ಪ್ರತಿ ಚುನಾವಣೆಯಂತೆ ಇದನ್ನೂ ಗಂಭೀರವಾಗಿ ಪರಿಗಣಿಸಿ ಬಿಜೆಪಿ ಅಭ್ಯರ್ಥಿ ಪರ ಕೆಲಸ ಮಾಡಬೇಕಿದೆ ಎಂದರು.
ಬಿಜೆಪಿ ದ.ಕ.ಜಿಲ್ಲಾಧ್ಯಕ್ಷ ಸತೀಶ್ ಕುಂಪಲ ಮಾತನಾಡಿ, ಕೇಂದ್ರದಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರಕಾರವು ಪಂಚಾಯತ್‌ಗಳಿಗೆ ನೇರ ಅನುದಾನ ನೀಡುವ ಕಾರ್ಯ ಮಾಡಿದ್ದು, ಆದರೆ ಪ್ರಸ್ತುತ ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ನಯಾ ಪೈಸೆ ಅನುದಾವನ್ನು ನೀಡುತ್ತಿಲ್ಲ. ಹೀಗಾಗಿ ಈ ಚುನಾವಣೆಯ ಮೂಲಕ ಕಾಂಗ್ರೆಸ್‌ಗೆ ತಕ್ಕ ಪಾಠ ಕಲಿಸುವ ಕಾರ್ಯ ಆಗಬೇಕಿದೆ ಎಂದರು.
ಬಿಜೆಪಿ ಬಂಟ್ವಾಳ ಮಂಡಲ ಅಧ್ಯಕ್ಷ ಆರ್.ಚೆನ್ನಪ್ಪ ಕೋಟ್ಯಾನ್ ಅಧ್ಯಕ್ಷತೆ ವಹಿಸಿದ್ದರು. ಚುನಾವಣಾ ನಿರ್ವಹಣಾ ಸಮಿತಿಯ ಜಿಲ್ಲಾ ಸಹಸಂಚಾಲಕ ರಾಕೇಶ್ ರೈ ಕೆಡೆಂಜಿ, ಮಾಜಿ ಸಚಿವ ಬಿ.ನಾಗರಾಜ ಶೆಟ್ಟಿ, ಮಾಜಿ ಶಾಸಕರಾದ ರುಕ್ಮಯ ಪೂಜಾರಿ, ಪದ್ಮನಾಭ ಕೊಟ್ಟಾರಿ, ಚುನಾವಣಾ ಜಿಲ್ಲಾ ಪ್ರವಾಸ ಪ್ರಮುಖ್ ಬಿ.ದೇವದಾಸ್ ಶೆಟ್ಟಿ, ಮಂಡಲ ಪ್ರಧಾನ ಕಾರ್ಯದರ್ಶಿ ಶಿವಪ್ರಸಾದ್ ಶೆಟ್ಟಿ, ಬಂಟ್ವಾಳ ಚುನಾವಣಾ ನಿರ್ವಹಣಾ ಸಮಿತಿ ಸಂಚಾಲಕ ಪ್ರಭಾಕರ ಪ್ರಭು ವೇದಿಕೆಯಲ್ಲಿದ್ದರು.
ಮಂಡಲ ಪ್ರಧಾನ ಕಾರ್ಯದರ್ಶಿ ಸುದರ್ಶನ್ ಬಜ ಸ್ವಾಗತಿಸಿದರು. ಬಂಟ್ವಾಳ ಚುನಾವಣಾ ನಿರ್ವಹಣಾ ಸಮಿತಿಯ ಸಹಸಂಚಾಲಕ ಸಂಜೀವ ಪೂಜಾರಿ ವಂದಿಸಿದರು. ಮಾತೇಶ್ ಭಂಡಾರಿ ಕಾರ್ಯಕ್ರಮ ನಿರ್ವಹಿಸಿದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ