ಶೀಗಿ ಹುಣ್ಣಿಮೆ, ಶರದ್ ಪೂರ್ಣಿಮಾ (ಕುಮಾರ ಪೂರ್ಣಿಮಾ, ಕೋಜಗರಿ ಪೂರ್ಣಿಮಾ, ನವನ್ನ ಪೂರ್ಣಿಮಾ, ಕೊಜಾಗ್ರತ್ ಪೂರ್ಣಿಮಾ ಅಥವಾ ಕೌಮುದಿ ಪೂರ್ಣಿಮಾ) ಎಂದು ಹಲವು ಹೆಸರು. ಶರದ್ ಪೂರ್ಣಿಮೆಯು ಅಶ್ವಿನ್ ಮಾಸದ ಶುಕ್ಲ ಪಕ್ಷದ ಹುಣ್ಣಿಮೆಯ ದಿನದಂದು ಆಚರಿಸಲಾಗುವ ಧಾರ್ಮಿಕ ಹಬ್ಬವಾಗಿದೆ. ಇದು ವಿಶೇಷ ಮಹತ್ವವನ್ನು ಹೊಂದಿದೆ. ಸಮುದ್ರಮಂಥನವಾದಾಗ ಇದೇ ಸಮಯದಲ್ಲಿ ಲಕ್ಷ್ಮಿ ದೇವಿ ಹುಟ್ಟಿ ಬಂದಳು ಎಂಬ ಪ್ರತೀತಿ ಕೆಲವೆಡೆ ಇದೆ. ಇನ್ನು ಆ ದಿನ ಚಂದ್ರನ ಮೂಲಕ ಅಮೃತ ಕಿರಣಗಳು ಹೊಮ್ಮುವವು. ಇವೋ ತೇಜೋವೃದ್ದಿ ಹಾಗೂ ವ್ಯಾಧಿ ನಾಶಕಗುಣ ಹೊಂದಿರುವವು ಎಂಬ ಪ್ರತೀತಿ ಕೂಡ ಇದೆ.
ಅದಕ್ಕೆಂದೇ ರಾತ್ರಿ ಮನೆಯ ಅಂಗಳದಲ್ಲಿ, ಅಥವಾ ಮನೆಯೊಳಗೆ ಬೆಳಕಿಂಡಿಯ ಮೂಲಕ, ಎಲ್ಲಿ ಚಂದ್ರನ ತೇಜೋಮಯ ಕಿರಣಗಳು ಮನೆಯನ್ನು ಪ್ರವೇಶಿಸುತ್ತವೆಯೋ ಅಲ್ಲಿ, ಹಾಲಿನ ಪಾಯಸದ ಪಾತ್ರೆಯನ್ನು ಇಡಲಾಗುತ್ತದೆ. ಪಶ್ಚಿಮ ಬಂಗಾಳ ಮತ್ತು ತ್ರಿಪುರಾ ದಲ್ಲಿ ಅಕ್ಕಿ, ಏಲಕ್ಕಿ ಮತ್ತು ಹಾಲು ಹಾಕಿದ ಪಾಯಸ ಮಾಡಿದ ಪಾತ್ರೆ ಇಡುತ್ತಾರೆ. ಗುಜರಾತಿನಲ್ಲಿ ಮಸಾಲೆ ಹಾಲಿನ ಪಾತ್ರೆಯನ್ನು ಚಂದ್ರನ ಬೆಳಕಿನಲ್ಲಿ ಇಡುತ್ತಾರೆ. ಈ ರೀತಿ ಚಂದ್ರನ ಕಿರಣಗಳನ್ನು ಹಾಲು ಆಕರ್ಷಿಸಿ ಹೀರಿಕೊಂಡು ಅಮೃತ ಸಮಾನ ದಿವ್ಯ ಗುಣಗಳನ್ನು ಹೊಂದಿರುತ್ತದೆ. ಇದನ್ನು ಸೇವಿಸುವುದರಿಂದ ಮನುಷ್ಯನು ರೋಗ ಮುಕ್ತನಾಗುವುದಲ್ಲದೇ, ದೇಹ ಕಾಂತಿಯನ್ನು ಪಡೆಯುತ್ತಾನೆ ಎಂಬ ನಂಬಿಕೆ.
ಶರದ್ ಪೂರ್ಣಿಮೆಯುಂದು ಕೃಷ್ಣ ಮತ್ತು ಬ್ರಜ್‌ನ ಗೋಪಿಯರ (ಹಾಲಿನ ಸೇವಕಿಯರು) ನಡುವೆ ರಾಸಲೀಲವನ್ನು (ವೃತ್ತಾಕಾರದ ನೃತ್ಯ) ಪ್ರದರ್ಶಿಸಿದ ರಾತ್ರಿಯನ್ನು ಸೂಚಿಸುತ್ತದೆ. ಈ ದೈವಿಕ ನೃತ್ಯದಲ್ಲಿ ಭಾಗವಹಿಸಲು, ಶಿವನು ಗೋಪೀಶ್ವರ ಮಹಾದೇವನ ರೂಪವನ್ನು ಪಡೆದನು. ಈ ರಾತ್ರಿಯ ಸ್ಪಷ್ಟವಾದ ವಿವರಣೆಯನ್ನು ಬ್ರಹ್ಮ ಪುರಾಣ, ಸ್ಕಂದ ಪುರಾಣ, ಬ್ರಹ್ಮ ವೈವರ್ತ ಪುರಾಣ ಮತ್ತು ಲಿಂಗ ಪುರಾಣಗಳಲ್ಲಿ ನೀಡಲಾಗಿದೆ. ಪ್ರಕಾಶಮಾನವಾದ ರಾತ್ರಿಯಲ್ಲಿ, ಪ್ರಭು ಶ್ರೀ ಕೃಷ್ಣ: ಸಂಪೂರ್ಣ ಗೋಕುಲದ ಸ್ತ್ರೀಯರ ನಡುವೆ ಶ್ರೀ ಗೋಕುಲ್ ಚಂದ್ರಮಾಜಿಯಾಗಿ ಕಾಣಿಸಿಕೊಳ್ಳುತ್ತಾನೆ. (ಪ್ರೀತಿಯಿಂದ ಚಾಂದ್ ಬಾಬಾ ಎಂದು ಕರೆಯಲಾಗುತ್ತದೆ). ಮತ್ತು ಗೋಪಿಯರೊಂದಿಗೆ ಭವ್ಯವಾದ ಮಹಾರಾಸ್ ಲೀಲೆಯನ್ನು ಆಯೋಜಿಸುತ್ತಾನೆ. ಅದಕ್ಕೆ ಇದನ್ನು "ಬ್ರಿಜರಸ" ಮತ್ತು "ಮಹಾರಸ ಉತ್ಸವ" ಎಂದೂ ಆಚರಿಸುತ್ತಾರೆ. ಇದನ್ನು ಕೃಷ್ಣ ಗೋಪಿಯರಿಗೆ ನೀಡಿದ ಅನುಗ್ರಹ ಪ್ರತೀಕವಾಗಿದೆ.
ಹಿಂದೂ ಧರ್ಮದಲ್ಲಿ, ಶರದ್ ಪೂರ್ಣಿಮೆಯ ರಾತ್ರಿಯನ್ನು ಬಹಳ ವಿಶೇಷವೆಂದು ಪರಿಗಣಿಸಲಾಗುತ್ತದೆ, ಏಕೆಂದರೆ ಈ ರಾತ್ರಿಯಲ್ಲಿ ಸ್ವತಃ ಲಕ್ಷ್ಮಿ ದೇವಿಯೇ ಮನೆ, ಮನೆಗೂ ಸಂಚರಿಸುತ್ತಾಳೆ. ರಾತ್ರಿಯಲ್ಲಿ, ಲಕ್ಷ್ಮಿ ದೇವತೆ ಮಾನವರ ಕ್ರಿಯೆಗಳನ್ನು ವೀಕ್ಷಿಸಲು ಭೂಮಿಗೆ ಇಳಿಯುತ್ತಾಳೆ ಎಂದು ನಂಬಿಕೆ.
ಇದನ್ನು ಅದಕ್ಕೆ ಕೋಜಾಗಿರಿ ಪೂರ್ಣಿಮಾ ಎಂದೂ ಕರೆಯುತ್ತಾರೆ. ಕೋಜಾಗಿರಿ ಎಂದರೆ ಎಚ್ಚರವಾಗಿರುವುದು ಎಂದು ಬಂಗಾಲಿ ಭಾಷೆಯಲ್ಲಿ ಅರ್ಥ.
ರಾತ್ರಿ ಮನೆಯದ್ವಾರಗಳನ್ನು ಸಾರಿಸಿ, ರಂಗೋಲಿ ಹಾಕಿ, ದೇವರ ಮನೆಯನ್ನು ಅಲಂಕರಿಸಿ ಲಕ್ಷ್ಮೀ ಪೂಜೆ ಮಾಡಿ ಹಾಲಿನ ಖೀರ ನೈವೇದ್ಯ ಅರ್ಪಿಸುವ ಪ್ರಥೆ ಇದೆ. ಬಂಗಾಲ, ಓಡಿಸ್ಸಾ, ಉತ್ತರ ಪ್ರದೇಶ, ಬಿಹಾರ, ಜಾರ್ಖಂಡ್, ಮಧ್ಯಪ್ರದೇಶ ಮತ್ತು ಛತ್ತೀಸ್‌ಗಢದಂತಹ ಭಾರತದ ಉತ್ತರ ಮತ್ತು ಮಧ್ಯ ರಾಜ್ಯಗಳಲ್ಲಿ, ಖೀರ್ ಅನ್ನು ರಾತ್ರಿಯಲ್ಲಿ ತಯಾರಿಸಲಾಗುತ್ತದೆ ಮತ್ತು ರಾತ್ರಿಯಲ್ಲಿ ತೆರೆದ ಛಾವಣಿಯ ಜಾಗದಲ್ಲಿ ಚಂದ್ರನ ಬೆಳಕಿನಲ್ಲಿ ಇಡಲಾಗುತ್ತದೆ.
ಇನ್ನು ಓಡಿಸ್ಸಾದಲ್ಲಿ ಅವಿವಾಹಿತ ಕನ್ಯೆಯರು ಉತ್ತಮ ವರ ಸಿಗಲೆಂದು ಉಪವಾಸಮಾಡಿ, ರಾತ್ರಿ ಜಾಗರಣೆ ಮಾಡಿ ಚಂದ್ರನ ಪೂಜೆ ಮಾಡುತ್ತಾರೆ. ಮುಂಜಾನೆ ಚಂದ್ರನು ಹೊಸ ಉಡುಗೆಯೊಂದಿಗೆ ಅಸ್ತಮಿಸಿದಾಗ ಪೂಜೆ ಪ್ರಾರಂಭವಾಗುತ್ತದೆ. ಒಂದು ಕುಲಾ (ನೇಯ್ದ ಬಿದಿರಿನ ಪಟ್ಟಿಗಳಿಂದ ಮಾಡಿದ ಬುಟ್ಟಿ) ಅಕ್ಕಿ ಫಲಗಳು, ಕಬ್ಬು, ವೀಳ್ಯದೆಲೆ, ಸೌತೆಕಾಯಿಗಳು, ತೆಂಗಿನಕಾಯಿಗಳು ಮತ್ತು ಸೇಬುಗಳು ಅಥವಾ ಬಾಳೆಹಣ್ಣುಗಳಂತಹ ಏಳು ಇತರ ಹಣ್ಣುಗಳಿಂದ ತುಂಬಿ ಮುಚ್ಚಿ ಡುತ್ತಾರೆ.ಸಂಜೆ ಹುಣ್ಣಿಮೆಯನ್ನು ಮತ್ತೆ ಪೂಜಿಸಲಾಗುತ್ತದೆ ಮತ್ತು ಚಂದ್ರ ಅಸ್ತಮಾನದ ನಂತರ ಆರಾಧಕರು ತಮ್ಮ ಉಪವಾಸವನ್ನು ಮುರಿಯುತ್ತಾರೆ, ಕುಲದಿಂದ ಹುರಿದ ಭತ್ತದರಳು ಮತ್ತು ಹಣ್ಣುಗಳನ್ನು ಹೊಂದಿರುವ ಭಕ್ಷ್ಯವನ್ನು ಮೊಸರು ಮತ್ತು ಬೆಲ್ಲದೊಂದಿಗೆ ತಯಾರಿಸಿ ತುಳಸಿ ಗಿಡದ ಮುಂದೆ ಚಂದ್ರ ದೇವರಿಗೆ ಅರ್ಪಿಸುತ್ತಾರೆ.
ಇನ್ನು ಉತ್ತರ ಕರ್ನಾಟಕದಲ್ಲಿ ರೈತರಿಗೆ ಇದು ಸಂಭ್ರಮ, ಸಡಗರದ ಹಬ್ಬ. ಇದನ್ನು ಭೂಮಿಯ ಫಲವತ್ತಿಕೆಯ ಪೂಜೆ ಎಂದೂ ಹೇಳಲಾಗುತ್ತದೆ. ಭೂತಾಯಿ ಗೆ ಮಾಡುವ ಸೀಮಂತವೇ ಶೀಗಿಹುಣ್ಣಿಮೆ. ಫಲವನ್ನು ತುಂಬಿದ, ಆದರೆ ಇನ್ನು ಕಟಾವಿಗೆ ಬಾರದ ಫಸಲನ್ನು ಹೊತ್ತ ಹಸಿರು ಸಂಪತ್ತು ಹೊತ್ತ ಭೂತಾಯಿ ಗೆ, ಸೀಮಂತ ಬಯಕೆಯ ಊಟವನ್ನು ಚರಗದ ರೂಪದಲ್ಲಿ ಚಲ್ಲಿ, ಭೂ ತಾಯಿಗೆ ಬಯಿಕೆ ಊಟಮಾಡಿಸಿ ಕೃತಾರ್ಥರಾಗುವ ಕ್ಷಣ. ಶೀಗಿ ಹುಣ್ಣಿಮೆ ಎರಡು ದಿನ ಮುಂಚೆಯೇ ಬಿದಿರಿನ ಬುಟ್ಟಿಗಳಿಗೆ, ಸುಣ್ಣ, ಜಾಜುಗಳಿಂದ ಸಿಂಗಾರ ಮಾಡಿ, ಅವುಗಳಲ್ಲಿ, ಹಸಿ ಹಿಟ್ಟು ,ತರಕಾರಿ, ಸಿರಿಧಾನ್ಯಗಳನ್ನು ತುಂಬುತ್ತಾರೆ. ಹೊತ್ತಾರೆ ಎದ್ದ ರೈತ ಪತ್ನಿಯರು... ಜೋಳದ ಕಡಬು, ಹುರಕ್ಕೆ ಹೋಳಿಗೆ, ಉಂಡಗಾಳು, ಕಟಕ ರೊಟ್ಟಿ,ಸಜ್ಜೆ, ರೊಟ್ಟಿ, ಬದನೆಕಾಯಿ ಪಲ್ಯ, ಕಾಳು ಪಲ್ಯ, ಚಟ್ನಿ, ಗುರೆಳ್ಳು, ಶೇಂಗಾ ಚಟ್ನಿ ಕೆನೆ ಮೊಸರು, ನುಚ್ಚಿನಂಬಲಿ, ಹಿಟ್ಟಿನ ಕಡಬುಗಳಂತಹ ಸಾಂಪ್ರದಾಯಿಕ ಖಾದ್ಯಗಳನ್ನು, ಹಪ್ಪಳ, ಸಂಡಿಗೆ,ಉಪ್ಪಿನಕಾಯಿ ಗಳನ್ನು ತಯಾರಿಸಿ, ಸಿಂಗರಿಸಿದ ಎತ್ತಿನ ಬಂಡಿಗಳಲ್ಲಿ ಹೊಲಕ್ಕೆ ಹೋಗುತ್ತಾರೆ. ಅಲ್ಲಿ ಐದು ಸಣ್ಣ ಗಾತ್ರದ ಕಲ್ಲುಗಳನ್ನು ಆರಿಸಿ ತೊಳೆದು ಅದಕ್ಕೆ ಅರಿಷಿಣ, ಕುಂಕುಮ, ವಿಭೂತಿ, ಹೂವು ಇಟ್ಟು ಪೂಜಿಸುತ್ತಾರೆ. ಇವರನ್ನು ಪಾಂಡವರು ಎಂದು ಹೇಳುವರು. ಪಾಂಡವರ ವನವಾಸ ಮುಗಿಸಿ ಬಂದುದರ ದ್ಯೋತಕವಾಗಿ ಇವರಿಗೆ ಬನ್ನಿ ಎಲೆಗಳನ್ನು ಮತ್ತು ಮಾಡಿದ ಅಡುಗೆಯನ್ನು ನೈವೇದ್ಯವಾಗಿ ಸಮರ್ಪಿಸುತ್ತಾರೆ.ಅದರ ಜೊತೆ ಕಳ್ಳ ಕಲ್ಲು ಎಂದು ಇನ್ನೂಂದುಕಲ್ಲನ್ನು ಇಟ್ಟಿರುತ್ತಾರೆ.
ನಂತರ ಗಂಡಸರು ಭೂತಾಯಿಯನ್ನು ಪೂಜಿಸಿ ನಮಿಸಿ ಬಿದಿರಿನ ಬುಟ್ಟಿಯಲ್ಲಿ ತಂದ ಪದಾರ್ಥಗಳನ್ನು, ಹೊಲದಲ್ಲಿ ಎಲ್ಲಕಡೆ ಚಲ್ಲುತ್ತಾರೆ. ಮನೆಯಿಂದ ಮಾಡಿದ ಅಡುಗೆಯನ್ನು ಹೊಲದೆಲ್ಲೆಡೆ ಸ್ವಲ್ಪ ಸ್ವಲ್ಪ ಪ್ರಮಾಣದಲ್ಲಿ ಭೂತಾಯಿಗೆ ನೈವೇದ್ಯ ರೂಪದಲ್ಲಿ ಚಲ್ಲುತ್ತಾರೆ. ಚಲ್ಲುವಾಗ" ಹುಲ್ಲುಹುಲ್ಯಗೋ... ' ಎಂದು ಕೂಗುತ್ತಾರೆ. ತಾಯಿ ಸ್ವರೂಪ ಭೂಮಾತೆ, ಬೆಳೆಯನ್ನು ನೀಡಿ ರಕ್ಷಿಸಲಿ, ಬೆಳೆರೋಗಗಳು ಬಾರದಿರಲಿ, ಜನವಾರುಗಳಿಗೆ ರೋಗ ರುಜಿನಗಳು ಬರದಂತೆ ನೀರು ಮೇವು ಒದಗಿಸಿ ರಕ್ಷಿಸಬೇಕೆಂದು ಭೂತಾಯಿಯನ್ನು ಪ್ರಾರ್ಥನೆ ಮಾಡಿ ನಮಿಸುತ್ತಾರೆ. ಈ ರೀತಿ ರೈತನೊಬ್ಬ ಭೂ ತಾಯಿಗೆ ಸಾಂಕೇತಿಕ ಸೀಮಂತ ಶಾಸ್ತ್ರವನ್ನು ಮಾಡುವ ಅದಮ್ಯ ಪ್ರೀತಿಯ ಹಬ್ಬ!!
ಸೀಗಿ ಹುಣ್ಣಿಮೆ ಬಗ್ಗೆ ಶಿಶುನಾಳ ಶರೀಫರ ಹಾಡು ಹೀಗಿದೆ..
ಸೀಗಿ ಹುಣ್ಣಿಮೆ ಮರುದಿನ ಉಣ್ಣಲಿಕ್ಕೆ ಕರೆಯುವರೇನಲ್ಲಾ ಕರೆದರೆ ಹೋಗೋದು ಬಿಡಲಿಲ್ಲವಲ್ಲಾ ಹುರಿಯಕ್ಕಿ ಹೋಳಿಗೆ ಹೂರಣಗಡುಬು ಕಡಲೀ ಪಚ್ಚಡಿ ಕಟ್ಟಿನಂಬರಾ ಉಂಡಿಗಡಬು ಪುಂಡಿಪಲ್ಲೆ ಬುಟ್ಟಿಯೊಳಿಟ್ಟೆಲ್ಲ ಬುಟ್ಟಿಗೆ ಕೆಮ್ಮಣ್ಣು ಬಡಿದೆಲ್ಲ ಅದರ ಅನುಭವ ತಿಳಿದಿಲ್ಲ ಅಂದು ಇಂದು ಬಂದು ಬಹುದಿನ ಹೊಲದೊಳು ಕುಂತೆಲ್ಲೋ ಮನಸಿಗೆ ಮೈಲಿಗೆ ತಿಳಿಲಿಲ್ಲಾ ಗಂಧದ ಬಟ್ಟು ಯಮಕಿಲೆ ಇಟ್ಟು ಹಂಗನೂಲು ಹಾಕಿದೆಲ್ಲ ಬಟ್ಟನ್ನ ಕಲ್ಲೀಗಿ ಸುಣ್ಣಾ ತೊಟ್ಟು ಕಣ್ಣೀಲೆ ಕಂಡೆಲ್ಲಾ ಆ ಕಲ್ಲು ಉಣಲಿಲ್ಲಾ ಎಡೆಮಾಡಿ ನೀನೇ ಉಂಡೆಲ್ಲ ವಸುಧೆಯೊಳು ಶಿಶುನಾಳಧೀಶನಲ್ಲೇ ಬಲ್ಲವರು ನೀವೆಲ್ಲ ಕೂಡಿದಲ್ಲೇ ಶೃಂಗಾರ ನಾರ್ಯಾರೆಲ್ಲಾ ರಂಗಿನಿಂದ ಕೋಲು ಹಿಡಿದು ಯೋಗದಿಂದಾ ತ್ಯಾಗ ಮಾಡಿ ರಾಗದಲ್ಲೇ ಶಿವಶರಣರಲ್ಲೇ ಸೀಗಿ ಕರೆದಾರಲ್ಲಾ..
ಮೈಸೂರಿನಲ್ಲಿ ಗೊಂಬೆಗಳ ಹಬ್ಬ ವಾದರೆ, ಉತ್ತರ ಕರ್ನಾಟಕದಲ್ಲಿ, ಸಕ್ಕರೆ ಅಚ್ಚಿನಲ್ಲಿ ಮಾಡಿದ ಗೊಂಬೆಯಿಂದ ಶೀಗಿ ಗೌರಿ ಆರತಿ ಮಾಡಿ, ಚಿಕ್ಕ ಮಕ್ಕಳು ಸೀರೆ ಉಟ್ಟು ಸಂಭ್ರಮಿಸುತ್ತಾರೆ. ಶೀಗಿ ಗೌರಿ ಪೂಜೆ ನೋಡಲು ಸ್ವತಃ ಶಿವ ಪಾರ್ವತಿಯರೇ ಧರೆಗೆ ಸಾಯಂಕಾಲ ಬರುತ್ತಾರೆ ಎಂಬ ನಂಬಿಕೆ.ಅದಕ್ಕೆ ಸಾಯಂಕಾಲದಲ್ಲಿ, ಮನ ಮನೆಯಿಂದ ಆರತಿ ತೆಗೆದುಕೊಂಡು ದೇವಿಗುಡಿಗೆ ಹೋಗಿ ಪೂಜೆ ಮಾಡುತ್ತಾರೆ. ಒಟ್ಟಾರೆ ವಿವಿಧ ರೀತಿ ಈ ಹಬ್ಬಗಳನ್ನು ಸಂಭ್ರಮಿಸಿ, ಆಚರಣೆ ನೆಪದಲ್ಲಿ ಜಡತ್ವ ವಿರೋಧಿಸಿ ಏಕತೆಯ ಜೀವನ ಪ್ರೀತಿಯ ಕ್ಷಣಗಳು ಈ ಶೀಗಿ ಹುಣ್ಣಿಮೆ.
-ಸಾಕ್ಷಿ ಶ್ರೀಕಾಂತ ತಿಕೋಟಿಕರ, ಕೊಪ್ಪಳ
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ