ನಿಮ್ಮೊಡನೆ ನಾನಿದ್ದೆನಾಗ ಸುಮ್ಮನೆಯೆ ನಾನೇಕೆ ನುಡಿಯಲಿ ಈಗ
ನಿಮ್ಮೊಡನೆ ನಾನಿದ್ದೆನಾಗ ಪೂರ್ವದಾ ಜನುಮದಲಿ ನಿಮ್ಮೊಡನೆ ನಾನಿದ್ದೆನಾಗ
ಹೇಮದಂತಹ ಮಾತೆ ಸೀತೆಯನು ಕಂಡಾಗ
ರಾಮನಾಮವ ನುಡಿದ ಕುಶಲವರ ನೆಪವಾಗ
ವಾಮಮಾರ್ಗದಿ ನಡೆದ ರಾವಣನ ಕೊಂದಾಗ
ಚಾಮರದ ಎಸಳಾಗಿ ಅಡಗಿದ್ದೆ ನಾನಾಗ (ರಾಮಾ) || ನಿಮ್ಮೊಡನೆ||
ಕಂಸಮಾವನ ಕೊಂದು ಏಕತೆಯ ಮೆರೆದಾಗ
ಹಂಸವೇಣಿಯರಿಂಗೆ ಅಪಮಾನ ಕಳೆದಾಗ
ಹಂಸ ಕ್ಷೀರದ ನ್ಯಾಯ ದರ್ಮದೊಳು ತಂದಾಗ
ಹಂಸಗತಿಯಲಿ ನಲಿದ ನವಿಲು ಗರಿ ನಾನಾಗ ||ನಿಮ್ಮೊಡನೆ||
ವ್ಯಾಸಮುನಿಗಳ ಕುಟಿರದಲಿ ನೆರಳು ನಾನಾಗಿ
ಧೋಷರಹಿತರ ಪಾದ ಧೂಳಂತೆ ಶಿರಬಾಗಿ
ದೂಷಣೆಯ ನುಂಗಿದೆನು ಜೇನಂತೆ ಸವಿಯಾಗಿ
ವೇಷ ಧರಿಸಿದೆನಂದು ನಿಮ್ಮೆದೆಯ ಮಗುವಾಗಿ||ನಿಮ್ಮೊಡನೆ||
ಸಾಲ್ಮರದ ನೆರಳಲ್ಲಿ ಜಕ್ಕವಕ್ಕಿಯ ರಾಗ
ಕಾಲ್ಮುಗಿದು ನಿನಗೆ ಸದ್ದಡಗಿ ಹೋದಾಗ
ವಾಲ್ಮೀಕಿ ನೀನಾಗಿ ಬೇಡನನು ಬೈದಾಗ
ಮೇಲ್ಮೈ ಮರದಲ್ಲಿ ಕುಳಿತಿದ್ದ ನೆನಪೀಗ ||ನಿಮ್ಮೊಡನೆ||
ರಾಷ್ಟ್ರಕವಿ ನೀವೆಂದು ಹೆಮ್ಮೆಯಿಂ ನುಡಿದಾಗ
ರಾಷ್ಟ್ರ ಭವನದಲಿ ನಿಂದು ಪತ್ರವನು ಪಡೆವಾಗ
ರಾಷ್ಟ್ರದೆಲ್ಲಡೆ ಮಂದಿ ನಿಮ್ಮ ನೆನೆದಿಹ ರಾಗ
ರಾಷ್ಟ್ರಗೀತೆಯ ಕೇಳಿ ಸೆಟೆದಂಥ ನೆನಪೀಗ || ನಿಮ್ಮೊಡನೆ||
ಮಂಕುತಿಮ್ಮನ ಕಗ್ಗ ನೀವಂದು ಬರೆದಾಗ
ಮಂಕು ಮೋರೆಯ ಹೊತ್ತು ಕುಳಿತಿದ್ದೆ ನಾನಾಗ
ಅಂಕು ಡೊಂಕಿರದಂಥ ಅಕ್ಕರವು ಮೈಮ್ಯಾಗ
ಸೋಂಕಿಹುದು ಒತ್ತು ಕಾಗದವಾಗಿ ಕುಳಿತಾಗ||ನಿಮ್ಮೊಡನೆ||
ಮಾರು ವೇಷಗಳಿಂದ ನೂರು ಜನ್ಮವ ಕಳೆದು
ಯಾರ್ಯಾರ ಸಂಘದಲಿ ಭಾರವಾಗದೆ ಬೆಳೆದು
ಸಾರ ತುಂಬಿರುವಂಥ ನರಜನುಮವನು ತಳೆದು
ಬೇರು ಎಲ್ಲಿದೆಯೆಂಬ ದಾರಿಯನು ನಾ ಸೆಳೆದು||ನಿಮ್ಮೊಡನೆ||
ನಿಮ್ಮೊಡನೆ ನಾನಿರುವೆನೀಗ ನಿಮ್ಮೊಳಗೆ ನಾನಾಗಿ
ನಮ್ಮೊಳಗೆ ನೀವಾಗಿ ಎಲ್ಲರೊಳಗೊಂದಾಗಿ
ನಮ್ಮಾತ್ಮ ನಿಮ್ಮಾತ್ಮ ಪರಮಾತ್ಮನಿಗೆ ಬಾಗಿ
ಸುಮ್ಮನೆಯೆ ನಿಂತಿರುವೆನೀಗ ಮಾನವನಾಗಿ ||ನಿಮ್ಮೊಡನೆ||
- ವೈಲೇಶ.ಪಿ.ಎಸ್. ಕೊಡಗು
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


